ETV Bharat / state

ನೂತನ ಆವಿಷ್ಕಾರ, ಸಂಶೋಧನೆ, ಪ್ರತಿಭಾವಂತರ ಕಾಯಕ ಭೂಮಿ ಕರ್ನಾಟಕ: ಡಿಸಿಎಂ

ಬೆಂಗಳೂರಿನಲ್ಲಿ ಮೂರು ದಿನಗಳ ಜಿಎಎಫ್​ಎಕ್ಸ್ ಸಮ್ಮಿಟ್ ನಡೆಯುತ್ತಿದೆ.

dcm-d-k-shivakumar-talks-in-bengaluru-gafx-summit
ಡಿ.ಕೆ.ಶಿವಕುಮಾರ್ (ETV Bharat)
author img

By ETV Bharat Karnataka Team

Published : February 27, 2026 at 8:01 PM IST

2 Min Read
Choose ETV Bharat

ಬೆಂಗಳೂರು: ಕರ್ನಾಟಕ ರಾಜ್ಯ ಸಂಶೋಧನೆ, ನೂತನ ಆವಿಷ್ಕಾರ, ಉದ್ಯೋಗಗಳು ಹಾಗೂ ಪ್ರತಿಭಾವಂತರಿಗೆ ಕಾಯಕ ಭೂಮಿಯಾಗಿದೆ. ಕರ್ನಾಟಕವು 875ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿದೆ. ಡಿಜಿಟಲ್ ಮಾಧ್ಯಮ ಕಂಪನಿಗಳಿಗೆ ನೆಲೆಯಾಗಿ ನಮ್ಮ ರಾಜ್ಯ ರೂಪುಗೊಂಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.

ಲಲಿತ್ ಅಶೋಕದಲ್ಲಿ ಶುಕ್ರವಾರ ನಡೆದ ಬೆಂಗಳೂರು ಜಿಎಎಫ್​ಎಕ್ಸ್ ಸಮ್ಮಿಟ್​ನಲ್ಲಿ ಶಿವಕುಮಾರ್ ಅವರು ಮಾತನಾಡಿದರು.

ಆರೆಂಜ್ ಎಕಾನಮಿ ಬಗ್ಗೆ ಪ್ರಧಾನ ಮಂತ್ರಿಯವರು ಈಗ ಮಾತನಾಡಿದ್ದಾರೆ‌‌. ಆದರೆ ಇದರ ಬಗ್ಗೆ ನಾವು 2016ರಲ್ಲಿಯೇ ನೀತಿ ರೂಪಿಸಿದ್ದೆವು.‌ ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ ಎಂದು ಹೇಳಿದರು.

ಪ್ರತಿವರ್ಷ 1.50 ಲಕ್ಷ ಯುವ ಹಾಗೂ ಪ್ರತಿಭಾವಂತ ಐಟಿ ಉದ್ಯೋಗಿಗಳು ಕರ್ನಾಟಕದಿಂದ ಹೊರಹೊಮ್ಮುತ್ತಿದ್ದಾರೆ. ಇಡೀ ಜಗತ್ತೇ ನಮ್ಮ‌ ಕಡೆ ನೋಡುತ್ತಿದೆ. ನಮ್ಮ ರಾಜ್ಯವು ಈಗಾಗಲೇ ಏಷ್ಯಾದ ಅತ್ಯಂತ ಬಲಿಷ್ಠ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ರಾಜ್ಯವಾಗಿದೆ ಎಂದು ಹೇಳಿದರು.

DCM d k shivakumar talks in Bengaluru GAFX Summit
ಜಿಎಎಫ್​ಎಕ್ಸ್ ಸಮ್ಮಿಟ್ (ETV Bharat)

50 ಸಾವಿರ ವಿದ್ಯಾರ್ಥಿಗಳಿಗೆ ಎವಿಜಿಸಿ - ಎಕ್ಸ್ ಆರ್ ತರಬೇತಿ ಗುರಿ: ಕರ್ನಾಟಕ ಚಲನಚಿತ್ರ ಉದ್ದಿಮೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಈಗಾಗಲೇ ನಮ್ಮ ಚಲನಚಿತ್ರಗಳು ಹಾಲಿವುಡ್ ಚಿತ್ರಗಳಿಗೆ ಪ್ರತಿಸ್ಪರ್ಧಿಯಾಗಿವೆ. ಎವಿಜಿಸಿ-ಎಕ್ಸ್ ಆರ್ ವಿಭಾಗದಲ್ಲಿ 2028ರ ವೇಳೆಗೆ ಸುಮಾರು 50,000 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಸುಮಾರು 70% ಉದ್ಯೋಗಿಗಳು ಸೃಜನಶೀಲ ವೃತ್ತಿಪರರಾಗಿದ್ದಾರೆ. ಈ ಮೂಲಕ, 2028ರ ವೇಳೆಗೆ 30,000ಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು.

ಭವಿಷ್ಯವನ್ನು ಗುರಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ 6.50 ಲಕ್ಷ ಉದ್ಯೋಗಿಗಳಿಗೆ 2023-2024ರಲ್ಲಿ ಎಐ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗಿದೆ. 2022ಕ್ಕೆ ಹೋಲಿಸಿ‌ ನೋಡಿದರೆ 2023ರಲ್ಲಿ ಎಐ ಸಂಬಂಧಿತ ತರಬೇತಿ, ಚಟುವಟಿಗಳು ಶೇ.9ರಷ್ಟು ಹೆಚ್ಚಳವಾಗಿದೆ. ಈ ಏರಿಕೆಯಿಂದ ಭವಿಷ್ಯದ ತಂತ್ರಜ್ಞಾನ ಬೆಳವಣಿಗೆಯಲ್ಲಿ ಕರ್ನಾಟಕ ಅತ್ಯಂತ ಮುಂದುವರೆದ ಸ್ಥಾನದಲ್ಲಿ ಇರಲಿದೆ ಎಂದು ಹೇಳಿದರು.

AVGC-XR ವಲಯ - ಅನಿಮೇಷನ್, ವಿಶ್ಯುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್​ಟೆಂಡ್ ರಿಯಾಲಿಟಿ - ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಲ್ಲಿ ಒಂದಾಗಿದೆ. ದೇಶಾದ್ಯಂತ 20 ಸಾವಿರ ಕೋಟಿಯಷ್ಟು ವಹಿವಾಟನ್ನು ಈ ವಿಭಾಗ ಮಾಡುತ್ತಿದೆ ಜಿಎಎಫ್​ಎಕ್ಸ್ ಕ್ಷೇತ್ರ ವಾರ್ಷಿಕವಾಗಿ 25–30%ರಷ್ಟು ಬೆಳೆಯುತ್ತಿದ್ದು, ಮುಂಬರುವ ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು.

42 ದೇಶಗಳ ಪ್ರತಿನಿಧಿಗಳನ್ನು ಈ ಕುರಿತಾಗಿ ಚರ್ಚೆ ನಡೆಸಲು ನಾವು ಆಹ್ವಾನಿಸಿದ್ದೇವೆ. ಏಕೆಂದರೆ ನಮ್ಮ ಕರ್ನಾಟಕ ಈ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಮುಖ್ಯಮಂತ್ರಿಯವರು ದಿಕ್ಸೂಚಿ ಭಾಷಣದಲ್ಲಿ ಯುವ ಉದ್ಯಮಿಗಳ ಬೆಂಬಲವಾಗಿ ಮಾತನಾಡಿದ್ದಾರೆ. ನಾನು ಬೆಂಗಳೂರು ನಗರದ ಉಸ್ತುವಾರಿ ವಹಿಸಿರುವವನಾಗಿ ಈ ನಗರದ ಎಲ್ಲಾ ಜನರಿಗೂ ಪೂರಕವಾಗಿರಬೇಕು ಎನ್ನುವ ರೀತಿಯಲ್ಲಿ ರೂಪಿಸಲು ಅನೇಕ ಯೋಜನೆಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಕೃಷಿ ಪಂಪ್ ಸೆಟ್​​ಗಳಿಗೆ ಹಗಲಿನ ವೇಳೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಬದ್ದ: ಸಚಿವ ಕೆ.ಜೆ.ಜಾರ್ಜ್