ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ ಡಿಸಿ ಆದೇಶ
ನೆಲಮಂಗಲ ನಗರಸಭೆಯ 7 ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಎಬಿ ಬಸವರಾಜು ಆದೇಶ ಹೊರಡಿಸಿದ್ದಾರೆ.

Published : February 26, 2026 at 1:51 PM IST
ದೇವನಹಳ್ಳಿ: ಕರ್ನಾಟಕ ಸ್ಥಳೀಯ ಸಂಸ್ಥೆಗಳ (ಪಕ್ಷಾಂತರ ನಿಷೇಧ) ಅಧಿನಿಯಮ 4 (2)(|||) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ಆದೇಶಿಸಿದ್ದಾರೆ.
ದಿನಾಂಕ 13.2.2025 ರಂದು ನೆಲಮಂಗಲ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಪ್ರತಿಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದರಿಂದ ಪಕ್ಷವು ಮನ್ನಿಸದ ಕಾರಣ ಅನರ್ಹಗೊಳಿಸಲಾಗಿದೆ.
ಅನರ್ಹರಾದವರು: ಆನಂದ್ ಜಿ, ಪದ್ಮನಾಭ ಪ್ರಸನ್ನ, ದಕ್ಷಾಯಣಿ ರವಿಕುಮಾರ್, ನರಸಿಂಹಮೂರ್ತಿ, ಭಾರತಿಬಾಯಿ, ಶಾರದಾ ಉಮೇಶ್, ಲತಾ ಹೆಮಂತಕುಮಾರ್ ಅನರ್ಹಗೊಂಡ ನಗರಸಭೆ ಸದಸ್ಯರು.
ಪ್ರಸ್ತಾವಣೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಸ್ಥಳೀಯ ಸಂಸ್ಥೆಗಳ (ಪಕ್ಷಾಂತರ ನಿಶೇಧ) ಅಧಿನಿಯಮ 1987ರ ಸೆಕ್ಷನ್ 4 (2)(|||) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 1ರಿಂದ 7ನೇ ಎದುರುದಾರರುಗಳನ್ನು ನೆಲಮಂಲ ನಗರಸಭಾ ಸದಸ್ಯ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತರೆ ಆದೇಶಿಸಿರುತ್ತೇನೆ ಎಂದು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ತಿಳಿಸಿದ್ದಾರೆ.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ 2025ರ ಫೆಬ್ರುವರಿ 13ರಂದು ನಡೆದ ಚುನಾವಣೆಯಲ್ಲಿ, ಜೆಡಿಎಸ್ ಚಿಹ್ನೆ ಅಡಿ ಸದಸ್ಯರಾಗಿ ಆಯ್ಕೆಯಾಗಿದ್ದ ಸದಸ್ಯರು ಪಕ್ಷವು ಜಾರಿಗೊಳಿಸಿದ್ದ ವಿಪ್ ಉಲ್ಲಂಘಿಸಿದ್ದರು. ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸದೇ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಚುನಾವಣಾ ಅಕ್ರಮ ಎಸಗಿರುತ್ತಾರೆ ಎಂದು ಆರೋಪಿಸಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಅವರು 2025ರ ಮಾರ್ಚ್ 3ರಂದು ಪಕ್ಷಾಂತರ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿ ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ:
ಆಸ್ತಿ ಘೋಷಣಾ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯ ಎಲ್ಲಾ 35 ಪಾಲಿಕೆ ಸದಸ್ಯರನ್ನು ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದ ಘಟನೆ ನಡೆದಿತ್ತು. ವಿಜಯಪುರ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಅಕ್ಟೋಬರ್ 2022ರಲ್ಲಿ 35 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. 35 ವಾರ್ಡ್‌ಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 10, ಎಐಎಂಐಎಂ 2, ಜೆಡಿಎಸ್-1, ಪಕ್ಷೇತರ-5 ಸದಸ್ಯರು ಆಯ್ಕೆಯಾಗಿದ್ದರು. ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಗೆದ್ದು ಬಂದರೂ ಅಧಿಕಾರ ಭಾಗ್ಯ ಮೊದಲ ಅವಧಿಗೆ ಸಿಗಲಿಲ್ಲ.
ಇದಕ್ಕೂ ಮುನ್ನ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ನ ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿತರಿಗೆ ಮತಹಾಕಿರುವುದು ಖಾತರಿಯಾಗಿದ್ದರಿಂದ ಜಿಲ್ಲಾಧಿಕಾರಿಗಳ ನ್ಯಾಯಾಲಯ 6 ಕಾಂಗ್ರೆಸ್ ಸದಸ್ಯರ ಸದಸ್ಯತ್ವವನ್ನ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. 2024ರ ಸೆ. 12 ರಂದು ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

