23 ಕೋಟಿ ಕರ ವಸೂಲಿ ಮಾಡಿದ ದಾವಣಗೆರೆ ಜಿಲ್ಲಾ ಪಂಚಾಯಿತಿ: ರಾಜ್ಯದ ಟಾಪ್ 5 ಜಿಲ್ಲೆಗಳಲ್ಲಿ ದಾವಣಗೆರೆಗೂ ಸ್ಥಾನ
ದಾವಣಗೆರೆ ಗ್ರಾಮ ಪಂಚಾಯಿತಿಗಳಿಂದ ಒಟ್ಟು 23 ಕೋಟಿ ರೂಪಾಯಿ ಕರ ಸಂಗ್ರಹ ಮಾಡಲಾಗಿದ್ದು, ತೆರಿಗೆ ವಸೂಲಿ ಮಾಡಿದ ರಾಜ್ಯದ ಅಗ್ರ ಐದು ಜಿಲ್ಲೆಗಳಲ್ಲಿ ದಾವಣಗೆರೆ ಸ್ಥಾನ ಪಡೆದಿದೆ.

Published : February 28, 2026 at 1:33 PM IST
ದಾವಣಗೆರೆ: ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕರವನ್ನು ವಸೂಲಿ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಫೀಲ್ಡ್ಗೆ ಇಳಿದಿದ್ದು, ಒಂದೇ ವಾರದಲ್ಲಿ 6 ಕೋಟಿ ಕರ ವಸೂಲಿ ಮಾಡಿದ್ದಾರೆ. ಮತ್ತೊಂದೆಡೆ 23 ಕೋಟಿ ಬಾಕಿ ಕರ ವಸೂಲಿ ಮಾಡಿರುವುದು ಜಿಲ್ಲೆಯ ಹೆಗ್ಗಳಿಕೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಾಧವ ಗಿತ್ತೆ ವಿಠಲ್ ರಾವ್ ತಿಳಿಸಿದ್ದಾರೆ. ಜಾಗೃತಿ ಅಭಿಯಾನದ ಮೂಲಕ ಅಧಿಕಾರಿಗಳು ಕರ ವಸೂಲಿ ಮಾಡ್ತಿದ್ದಾರೆ. ಕರ ವಸೂಲಿ ಮಾಡಿದ ರಾಜ್ಯದ ಅಗ್ರ ಐದು ಜಿಲ್ಲೆಗಳಲ್ಲಿ ದಾವಣಗೆರೆ ಸ್ಥಾನ ಪಡೆದಿದೆ.
ಶೇ.70ರಷ್ಟು ಕರ ವಸೂಲಿ, ಉಳಿದಿದೆ ಬಾಕಿ: ಗ್ರಾಮ ಪಂಚಾಯಿತಿಗಳು ತೆರಿಗೆ ಬಾಕಿಯಿಂದಾಗಿ ಸೊರಗಿವೆ. ಗ್ರಾಪಂಗಳಿಂದ ಒಟ್ಟು 23 ಕೋಟಿ ರೂ. ಅಂದರೆ ಶೇ.70ರಷ್ಟು ಕರ ಸಂಗ್ರಹ ಮಾಡಲಾಗಿದ್ದು, ಶೇ.30 ರಷ್ಟು ತೆರಿಗೆ ವಸೂಲಿ ಬಾಕಿ ಇದೆ. ಅದನ್ನು ಮಾರ್ಚ್ ತಿಂಗಳಾಂತ್ಯದೊಳಗೆ ಉಳಿದ ಶೇ.30 ರಷ್ಟು ಕರ ವಸೂಲಿ ಮಾಡ್ತೇವೆ ಎಂದು ಸಿಇಒ ಹೇಳಿದ್ದಾರೆ. ಗ್ರಾಪಂ ಕಚೇರಿಗೆ ತೆರಳಿ ತೆರಿಗೆ ಕಟ್ಟುವವರ ಪ್ರಮಾಣ ಶೇ.10ಕ್ಕೂ ಕಡಿಮೆಯಾಗಿದೆ. ಉಳಿದ ಶೇ.90 ಜನರಿಂದ ಆಸ್ತಿ ತೆರಿಗೆ, ನೀರಿನ ಶುಲ್ಕ ಸಂಗ್ರಹಿಸಲು ಗ್ರಾಪಂ ಸಿಬ್ಬಂದಿ ಮನೆ ಬಾಗಿಲಿಗೆ ಹೋದಾಗ ನೂರೊಂದು ಕಾರಣ ಹೇಳುವುದರಿಂದ ತೆರಿಗೆ ಸಂಗ್ರಹಕ್ಕೆ ಹಿನ್ನಡೆಯಾಗಿದೆ. ಇನ್ನು ಮಾರ್ಚ್ ತಿಂಗಳಲ್ಲಿ ಶೇ.5ರಷ್ಟು ರಿಯಾಯಿತಿ ನೀಡುವುದರಿಂದ ಜನ ಕರ ಕಟ್ಟುತ್ತಾರೆಂದು ಗ್ರಾಪಂ ಸಿಬ್ಬಂದಿಗಳ ನಿರೀಕ್ಷೆಯಾಗಿದೆ.
ಕರ ವಸೂಲಿಗಿರುವ ತೊಡಕುಗಳೇನು?: ಕರ ವಸೂಲು ಮಾಡಲು ಗ್ರಾಪಂ ಸಿಬ್ಬಂದಿ ಮನೆ ಮನೆಗೆ ಅಲೆಯುತ್ತಿದ್ದಾರೆ. ಅದರೂ ಕರ ಮಾತ್ರ ವಸೂಲಿ ಆಗ್ತಿಲ್ಲ. ಕ್ರಮಬದ್ಧವಲ್ಲದ ಆಸ್ತಿಗೆ ಕಂದಾಯ ಸ್ವೀಕರಿಸದೇ ಇರುವುದು, ಕೃಷಿ ಉತ್ಪನ್ನ ಬೆಲೆ ಕುಸಿತದಿಂದ ರೈತರು ಬೆಳೆ ಮಾರದೇ ಇರುವುದು. ಕುಟುಂಬದ ಆಸ್ತಿ ಪಾಲು-ವಿಭಾಗ ಆಗದೇ ಇರುವುದು. ತೆರಿಗೆ ಪಾವತಿಸಬೇಕೆಂಬ ಬಗ್ಗೆ ಗ್ರಾಮಸ್ಥರಲ್ಲಿ ಅರಿವಿನ ಕೊರತೆ. ಬಹುತೇಕ ಆಸ್ತಿಗಳು ಮೃತರ ಹೆಸರಲ್ಲಿರುವುದು ಕರ ವಸೂಲಿಗೆ ಪ್ರಮುಖ ತೊಡಕುಗಳಾಗಿವೆ.

ರಾಜ್ಯದ ಅಗ್ರ ಐದು ಜಿಲ್ಲೆಗಳ ಪೈಕಿ ದಾವಣಗೆರೆಗೆ ಸ್ಥಾನ: ಸಿಇಒ ಗಿತ್ತೆ ಮಾಧವ ವಿಠಲ ರಾವ್ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಬೆಳಗಿನ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ ಹಾಕಿಕೊಂಡು ಗ್ರಾಪಂಗಳು ಹಾಗೂ 400 ಗ್ರಾಮಗಳಿಗೆ ಭೇಟಿ ಕೊಟ್ಟಿದ್ದು, ಕರ ವಸೂಲಿ ಬಗ್ಗೆ ಗಮನಿಸಿದ್ದೇವೆ. ಜಿಲ್ಲಾ ಪಂಚಾಯಿತಿಯಿಂದ ಪ್ರತಿ ತಿಂಗಳ ಕರ ವಸೂಲಿ ಅಭಿಯಾನ ಮಾಡಿ ಕರ ವಸೂಲಿ ಮಾಡಿದ್ದೇವೆ. ಜಿಲ್ಲೆಯಿಂದ 23 ಕೋಟಿ ಕರ ವಸೂಲಿ ಮಾಡಲಾಗಿದ್ದು, ಶೇ.70ರಷ್ಟು ಕರ ವಸೂಲಿ ಆಗಿದೆ. ಇನ್ನೊಂದು ವಾರ ಕಳೆದರೆ ಶೇ.75-80ರಷ್ಟು ಈ ಕರ ವಸೂಲಿ ದಾಟಲಿದೆ ಎಂದು ಹೇಳಿದರು.

ಮಾರ್ಚ್ ತಿಂಗಳೊಳಗೆ ಶೇ.100ರಷ್ಟು ಕರ ವಸೂಲಿ ಮಾಡುವ ಗುರಿ ಹೊಂದಲಾಗಿದೆ. ಹಿಂದಿನ ಕರ ವಸೂಲಿ ಮಾಡುವುದು ತಲೆಬಿಸಿಯಾಗಿತ್ತು. ಮಾರ್ಚ್ ತಿಂಗಳಲ್ಲಿ ಶೇ.5ರಷ್ಟು ರಿಯಾಯಿತಿ ಕೊಡುವುದರಿಂದ ಜನ ಕರ ಕಟ್ಟುವ ನಿರೀಕ್ಷೆಯಿದೆ. ಶೇಕಾಡವಾರು ನೋಡಿದರೆ ರಾಜ್ಯದ ಟಾಪ್ ಐದು ಜಿಲ್ಲೆಗಳಲ್ಲಿ ದಾವಣಗೆರೆ ಜಿಲ್ಲೆಯೂ ಸ್ಥಾನ ಪಡೆದಿದೆ. ಕೆಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಮಾತ್ರ ಕರ ವಸೂಲಿ ಬಾಕಿ ಇದೆ. ಎರಡು ವಾರದಲ್ಲಿ 6 ಕೋಟಿ ಕರ ವಸೂಲಿ ಮಾಡಿದ್ದೇವೆ. ಕರ ವಸೂಲಿಯಲ್ಲಿ ಕರೆಂಟ್ ಡಿಮಾಂಡ್, ಟೋಟಲ್ ಡಿಮಾಂಡ್ ಎಂಬ ಎರಡು ವಿಧ ಇವೆ. ದಾವಣಗೆರೆ ಜಿಲ್ಲೆಯಲ್ಲಿ ಟೋಟಲ್ ಡಿಮಾಂಡ್ ಶೇ.32ರಷ್ಟು ಕರ ವಸೂಲಿ ಆಗಿದೆ. ಇನ್ನು ಕರೆಂಟ್ ಡಿಮಾಂಡ್ ಕರ ವಸೂಲಿಯಲ್ಲಿ ಶೇ.70ರಷ್ಟು ಆಗಿದ್ದು, ಶೇ.100ರಷ್ಟು ಕರ ವಸೂಲಿ ಮಾಡಿಕೊಂಡು ಟೋಟಲ್ ಡಿಮಾಂಡ್ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತೇವೆ. ಕರ ವಸೂಲಿ ಬಾಕಿ ಇದೆ, ವಸೂಲಿ ಮಾಡ್ತೇವೆ ಎಂದರು.
ಇವುಗಳನ್ನೂ ಓದಿ:

