ETV Bharat / state

ದಾವಣಗೆರೆ: ಬಾಲಕಿಗೆ ಲೈಂಗಿಕ ಕಿರುಕುಳ; ಇಬ್ಬರು ಆಟೋ ಚಾಲಕರ ಬಂಧನ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಇಬ್ಬರು ಆಟೋ‌ ಚಾಲಕರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

police-arrested-two-auto-drivers-on-charges-of-sexually-harassing-a-girl
ಮಹಿಳಾ ಪೊಲೀಸ್ ಠಾಣೆ, ದಾವಣಗೆರೆ (ETV Bharat)
author img

By ETV Bharat Karnataka Team

Published : October 15, 2025 at 9:13 PM IST

2 Min Read
Choose ETV Bharat

ದಾವಣಗೆರೆ: ಆಟೋ‌ ಚಾಲಕರಿಬ್ಬರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದ ಆರ್​ಎಂಸಿ ಯಾರ್ಡ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಗುರುವಾರ (ಅ.9) ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯ ನಗರದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣಕ್ಕೆ ಬಾಲಕಿ ಹಾಗೂ ಬಾಲಕ ಒಟ್ಟಿಗೆ ಬಂದಿದ್ದರು. ಬಳಿಕ ಅಪ್ರಾಪ್ತರಿಬ್ಬರೂ ತಮ್ಮ ಮನೆಗೆ ತೆರಳಲು ಬಾಡಿಗೆ ಮಾತನಾಡಿಕೊಂಡು ಆಟೋ ಹತ್ತಿದ್ದರು. ಆದರೆ ಚಾಲಕಬ್ಬರು ಮನೆಯ ವಿಳಾಸಕ್ಕೆ ತೆರಳದೆ, ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಬಳಿಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂದರ್ಭದಲ್ಲಿ ಆರೋಪಿಗಳು ಬಾಲಕಿಯ ಬಳಿ ಇದ್ದ ಮೊಬೈಲ್ ಹಾಗೂ ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಸಂತ್ರಸ್ತ ಬಾಲಕಿ ಕೂಡಲೇ ಆರ್​​ಎಂಸಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ. ಮಹಿಳಾ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆಟೋ ಚಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ದಾವಣಗೆರೆ ಎಸ್​ಪಿ ಉಮಾಪ್ರಶಾಂತ್, "ಬಾಲಕಿ ಹಾಗೂ ಬಾಲಕ ಇಬ್ಬರೂ ಪ್ರೇಮಿಗಳಾಗಿದ್ದು, ದಾವಣಗೆರೆಗೆ ಬಂದು ಬಸ್ ಇಳಿದಿದ್ದರು. ನಂತರ ಆಟೋದಲ್ಲಿ ಪ್ರಯಾಣಿಸಿದ್ದಾರೆ. ಆದರೆ ಚಾಲಕರು ಹೇಳಿದ ವಿಳಾಸಕ್ಕೆ ತೆರಳುವ ಬದಲು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬಾಲಕಿಗೆ ಒತ್ತಾಯಿಸಿದ್ದಾರೆ. ಆದರೆ ಲೈಂಗಿಕ ಕ್ರಿಯೆಗೆ ಅಪ್ರಾಪ್ತೆ ನಿರಾಕರಿಸಿದ್ದು, ಆಕೆಯ ಬಳಿಯಿದ್ದ ಹಣ, ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ಕೂಡ ದಾಖಲಿಸಿಕೊಂಡು, ಇಬ್ಬರೂ ಆರೋಪಿತ ಆಟೋ ಚಾಲಕರನ್ನು ಬಂಧಿಸಿದ್ದೇವೆ. ಇದು ಗುರುವಾರ ನಡೆದಿರುವ ಘಟನೆ. ಮುಂದಿನ ಕ್ರಮ ಕೈಗೊಳ್ಳಲಾಗಿದೆ" ಎಂದರು.

ಪ್ರತ್ಯೇಕ ಘಟನೆ, ಬಾಲಕಿಯ ಅತ್ಯಾಚಾರ, ಕೊಲೆ: ದಸರಾ ಸಂದರ್ಭದಲ್ಲಿ ಬೀದಿ ಬದಿಯಲ್ಲಿ ಬಲೂನು, ಇತರ ವಸ್ತುಗಳನ್ನು ಮಾರಲು ಬಂದಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೊಳ್ಳೆಗಾಲದಲ್ಲಿ ಆರೋಪಿಯನ್ನು ಬಂಧಿಸಿದ್ದರು. ಬಾಲಕಿಯ ಪೋಷಕರು ನೀಡಿದ್ದ ದೂರಿನ ಮೇರೆಗೆ ನಜರ್​ಬಾದ್​ ಪೊಲೀಸ್​ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ದಸರಾ ಸಂದರ್ಭದಲ್ಲಿ ಬಲೂನು ಮಾರಲು 500ಕ್ಕೂ ಹೆಚ್ಚು ಜನರಿದ್ದ ಸುಮಾರು 50 ಕುಟುಂಬಗಳು ಕಲಬುರಗಿ ಜಿಲ್ಲೆಯಿಂದ ಮೈಸೂರಿಗೆ ಬಂದಿದ್ದವು. ಹೀಗೆ ಬಂದವರು ದಸರಾ ವಸ್ತು ಪ್ರದರ್ಶನದ ಪಕ್ಕದ ಕುಸ್ತಿ ಅಖಾಡದ ಮುಂಭಾಗದಲ್ಲಿರುವ ಇಟ್ಟಿಗೆ ಗೂಡಿನ ಮೈದಾನದಲ್ಲಿ ಶೆಡ್ ಹಾಕಿಕೊಂಡು ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ರಾತ್ರಿ ಮನೆಯವರೊಂದಿಗಿದ್ದ ಬಾಲಕಿಯನ್ನು ಎತ್ತಿಕೊಂಡು ಹೋದ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು. ಬೆಳಗಿನ ಜಾವ ಬಾಲಕಿಗೆ ಕುಟುಂಬದವರು ಹುಡುಕಾಟ ನಡೆಸಿದ್ದರು. ಬಳಿಕ, ಶೆಡ್ ಪಕ್ಕ ಬಾಲಕಿಯ ಶವ ಪತ್ತೆಯಾಗಿತ್ತು.

ಇದನ್ನೂ ಓದಿ: 6 ತಿಂಗಳ ಹಿಂದೆ ನಡೆದ ವೈದ್ಯೆಯ ಸಾವಿನ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್​: ಅರಿವಳಿಕೆ ನೀಡಿ ಕೊಂದ ಆರೋಪದಲ್ಲಿ ವೈದ್ಯ ಪತಿ ಬಂಧನ