ದಾವಣಗೆರೆಗೆ ಬೇಕಾಗಿದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜವಳಿ ಪಾರ್ಕ್, ವಿಮಾನ ನಿಲ್ಧಾಣ; ಜನರ ಬೇಡಿಕೆಗಳನ್ನು ಈಡೇರಿಸುತ್ತಾರಾ ಸಿಎಂ?
ದಾವಣಗೆರೆ ರೈತರು ಈ ಬಾರಿ ನಮ್ಮ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ ಈಡೇರಿಸಲಿದ್ದಾರೆ ಎಂದು ಕಾದು ಕುಳಿತಿದ್ದಾರೆ.

Published : February 24, 2026 at 5:17 PM IST
ವರದಿ : ನೂರುಲ್ಲಾ ಡಿ
ದಾವಣಗೆರೆ: ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಸಿಎಂ ಲೆಕ್ಕಾಚಾರದ ಮೇಲೆ ಬೆಣ್ಣೆನಗರಿ ಮಂದಿಯ ನಿರೀಕ್ಷೆ ಬೆಟ್ಟದಷ್ಟಿದೆ. ಪ್ರತಿ ಬಜೆಟ್ನಲ್ಲಿಯೂ ದಾವಣಗೆರೆ ಜನರಿಗೆ ನಿರಾಸೆ ಮೂಡಿಸಿಕೊಂಡು ಬರಲಾಗಿದೆ. ಈ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಬಂಪರ್ ಸಿಗಲಿದೆಯಾ? ಎಂದು ರೈತರು ಕಾದು ಕುಳಿತಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜವಳಿ ಪಾರ್ಕ್, ವಿಮಾನ ನಿಲ್ಧಾಣ, ಸರ್ಕಾರಿ ಮೆಡಿಕಲ್ ಕಾಲೇಜು, ಭದ್ರಾ ನಾಲೆಗಳ ಆಧುನೀಕರಣ ಮಾಡಲು ಐದು ನೂರು ಕೋಟಿ ರೂ. ಮೀಸಲಿಡಬೇಕು ಎಂಬ ಕೂಗು ಕೇಳಿ ಬಂದಿದೆ. ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರಿಗೆ ಕನಿಷ್ಠ ವೇತನ ಘೋಷಣೆ ಮಾಡ್ಬೇಕಿದೆ. ಬಿಸಿಯೂಟ ತಯಾರಕರಿಗೂ ಕಡಿಮೆ ಸಂಬಳ ಇದೆ. ಇವರಿಗೆ ಸಂಬಳ ಏರಿಕೆ ಮಾಡ್ಬೇಕಾಗಿದೆ ಎಂಬ ಒಕ್ಕೊರಲಿನ ಬೇಡಿಕೆಗಳು ಕೇಳಿಬಂದಿವೆ.
ಈ ಕುರಿತು ರೈತ ಮುಖಂಡ ಕೊಳೇನಹಳ್ಳಿ ಸತೀಶ್ ಅವರು ಮಾತನಾಡಿ, 'ನಮ್ಮ ದಾವಣಗೆರೆ ಜಿಲ್ಲೆಗೆ ಈ ಬಾರಿಯ ಬಜೆಟ್ ನಲ್ಲಿ ಭಾರಿ ನಿರೀಕ್ಷೆ ಇದೆ. ಆರೋಗ್ಯ ದೃಷ್ಟಿಯಿಂದ ಜನ ಸಮಸ್ಯೆ ಅನುಭವಿಸುವಂತೆ ಆಗಿದೆ. ಜಿಲ್ಲಾಸ್ಪತ್ರೆ ಸರಿ ಇಲ್ಲದ ಕಾರಣ ಪ್ರತಿನಿತ್ಯ ಇಲ್ಲಿಂದ 500 ಜನ ಮಂಗಳೂರು ಮೂಲದ ಯನೆಪೋಯ ಆಸ್ಪತ್ರೆಗೆ ಪ್ರಯಾಣ ಮಾಡುವ ಪರಿಸ್ಥಿತಿ ಇದೆ. ಆದ್ದರಿಂದ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗ್ಬೇಕು, ಇಲ್ಲಿನ ಖಾಸಗಿ ಆಸ್ಪತ್ರೆಗಳು ಹಣ ಮಾಡಲು ನಿಂತಿವೆ. ಸರ್ಕಾರಿ ಮೆಡಿಕಲ್ ಕಾಲೇಜು ಬೇಕಾಗಿದೆ. ಖಾಸಗಿ ಮೆಡಿಕಲ್ ಕಾಲೇಜುಗಳ ಹಾವಳಿ ಹೆಚ್ಚಾಗಿದೆ. ಇಲ್ಲಿ ಭದ್ರಾ ಅಚ್ಚು ಕಟ್ಟು ಪ್ರದೇಶ ಹೆಚ್ಚಿದೆ. ನಾಲೆಗಳ ಆಧುನಿಕರಣ ಮಾಡಲು ₹500 ಕೋಟಿ ಮೀಸಲಿಡಬೇಕು. ಈ ಹಿಂದೆ ಬಿಎಸ್ವೈ ಸಿಎಂ ಆಗಿದ್ದಾಗ 100 ಕೋಟಿ ಮೀಸಲಿಟ್ಟಿದ್ದರು' ಎಂದಿದ್ದಾರೆ.
'ಇಲ್ಲಿ ವಿಮಾನ ನಿಲ್ದಾಣ ಆಗ್ಬೇಂಬುದು ಜನರ ಒಕ್ಕೊರಲ ಆಸೆ. ಇಲ್ಲಿ ವ್ಯಾಪಾರ-ವಹಿವಾಟು ಅಭಿವೃದ್ಧಿಗೆ ಅನುಕೂಲ ಆಗಲು ವಿಮಾನ ನಿಲ್ದಾಣ ಆಗ್ಬೇಕು. ದಾವಣಗೆರೆ ಮೆಕ್ಕೆಜೋಳದ ಕಣಜ ಎಂದು ಕರೆಯಲಾಗುತ್ತದೆ. ಇಲ್ಲಿ ಮೆಕ್ಕೆಜೋಳ ಸಂಸ್ಕರಣ ಘಟಕ ಮಾಡ್ಬೇಕು. ಇದರಿಂದ ರೈತರಿಗೆ ಅನುಕೂಲ ಆಗಲಿದೆ. ಇನ್ನು ಜಿಲ್ಲೆಗೆ ಕೈಗಾರಿಕೆಗಳ ಅವಶ್ಯಕತೆ ಇದೆ. ಕೈಗಾರಿಕಾ ಕಾರಿಡಾರ್ ಮಾಡಬೇಕೆಂಬ ಬೇಡಿಕೆ ಇದೆ. ಈ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡ್ತಿದೆ. ಪ್ರತಿ ಬಾರಿ ಬಜೆಟ್ ನಲ್ಲಿ ದಾವಣಗೆರೆಗೆ ಏನೂ ಘೋಷಣೆ ಆಗ್ತಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸರ್ಕಾರ ಘೋಷಣೆ ಮಾಡಿತು. ಅದು ಜಾರಿಯಾಗಲಿಲ್ಲ' ಎಂದು ತಿಳಿಸಿದ್ದಾರೆ.
ಕಾರ್ಮಿಕ ಮುಖಂಡ ವಾಸು ಆವರಗೆರೆ ಮಾತನಾಡಿ, ' ಜಿಲ್ಲೆಯಲ್ಲಿ ದುಡಿಯುವ ಕೈಗಳಿಗೆ ಕೈಗಾರಿಕೆ ಅವಶ್ಯಕತೆ ಇದೆ. ಕನಿಷ್ಠ 10 ಸಾವಿರ ಜನ ಕೆಲಸ ಮಾಡುವ ಜವಳಿ ಪಾರ್ಕ್ ಬೇಕಾಗಿದೆ. ಜವಳಿ ಪಾರ್ಕ್ ಬೇರೆ ಜಿಲ್ಲೆಗೆ ಹೋಗಿದ್ದು ನಮ್ಮ ದುರಂತ. ಇಲ್ಲಿ ಮೆಡಿಕಲ್ ಕಾಲೇಜು ಅವಶ್ಯಕತೆ ಇದೆ. ವಿಮಾನ ನಿಲ್ದಾಣ ಮಾಡಲು ಬಿಜೆಪಿಯವರು ಜಮೀನು ನೋಡಿದ್ದರು, ಅದು ಕೂಡ ಆಗಿಲ್ಲ. ದಾವಣಗೆರೆ ಮಧ್ಯ ಕರ್ನಾಟಕದ ಜಿಲ್ಲೆ ಆಗಿರುವುದರಿಂದ ಇಲ್ಲಿ ವಿಮಾನ ನಿಲ್ದಾಣ ಇಲ್ಲದಿದ್ದರೆ ಅಭಾಸ ಆಗಲಿದೆ. ರಾಜಧಾನಿ ಮಾಡಬೇಕೆಂದುಕೊಂಡ ಜಿಲ್ಲೆಗೆ ವಿಮಾನ ನಿಲ್ದಾಣ ಬೇಕಾಗಿದೆ' ಎಂದಿದ್ದಾರೆ.
'ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರಿಗೆ ಕನಿಷ್ಠ ವೇತನ ಘೋಷಣೆ ಮಾಡ್ಬೇಕಿದೆ. ಬಿಸಿಯೂಟ ತಯಾರಕರಿಗೂ ಕಡಿಮೆ ಸಂಬಳ ಇದೆ. ಇವರಿಗೆ ಸಂಬಳ ಏರಿಕೆ ಮಾಡ್ಬೇಕಾಗಿದೆ. ಸರ್ಕಾರ ಇಎಸ್ಐ, ಪಿಎಫ್ ಭದ್ರತೆ ಒದಗಿಸಬೇಕಾಗಿದೆ. ಕಟ್ಟಡ ಕಾರ್ಮಿಕರಿಗೆ ಕಾನೂನು ಭದ್ರತೆ ಕೊಡ್ಬೇಕು, ನಿಗಮ ಮಂಡಳಿ ಮಾಡಿದ್ದು, ಅಲ್ಲಿರುವ ಹಣ ಸೋರಿಕೆಯಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಒಳ್ಳೆ ಯೋಜನೆ ತರಲಾಗಿದೆ. ಅದು ಜಾರಿಯಾಗಬೇಕು. ಅಭಿವೃದ್ಧಿ ಮಾಡ್ಬೇಕು. ಕಟ್ಟಡ ಕಾರ್ಮಿಕರಿಗೆ ಪೆನ್ಷನ್ 3 ಸಾವಿರ ಇದೆ. 6 ಸಾವಿರಕ್ಕೆ ಏರಿಕೆ ಮಾಡ್ಬೇಕು. ಇನ್ನು, ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಕೊಡಕ್ಕೆ ಆಗ್ತಿಲ್ಲ. ಇವರಿಗೂ ಕನಿಷ್ಠ ವೇತನ ನೀಡ್ಬೇಕು' ಎಂದು ಒತ್ತಾಯಿಸಿದ್ದಾರೆ.
ಸರ್ಕಾರಿ ನೌಕರಿ ಘೋಷಣೆ ಮಾಡಬೇಕು : 'ರೈತರಿಗೆ ಇಲ್ಲಿಯ ತನಕ ಯಾವುದೇ ಅನುಕೂಲ ಆಗಿಲ್ಲ. ರೈತರೊಂದಿಗೆ ಚರ್ಚೆ ಮಾಡಿ ಈ ಹಿಂದೆ ಬಜೆಟ್ ಮಂಡನೆ ಮಾಡಿದ್ದರು. ಈ ಬಾರಿಯೂ ರೈತರನ್ನು ಕರೆದು ಚರ್ಚೆ ಮಾಡ್ಬೇಕು. ರೈತರ ಮಕ್ಕಳಿಗೆ ಮದುವೆಯಾದ್ರೆ ನೌಕರಿ ಮೀಸಲಿಡುತ್ತೇವೆ ಎಂದು ಸರ್ಕಾರ ಹೇಳಿದೆ. ಅದು ಆಗಲಿಲ್ಲದ ಮಾತುಗಳು. 60 ವರ್ಷಗಳ ಮೇಲ್ಪಟ್ಟ ರೈತರಿಗೆ ಒಂದು ಭಾಗ್ಯ ಕೊಡಲಿ, ದೇಶಕ್ಕೋಸ್ಕರ ದುಡಿಯುವ ನಮ್ಮ ಮಕ್ಕಳನ್ನು ಮದುವೆಯಾದರೆ ಸರ್ಕಾರಿ ನೌಕರಿ ಕೊಡ್ತೇವೆ ಎಂದು ಹೇಳಿ ಸರ್ಕಾರ ಘೋಷಣೆ ಮಾಡ್ಬೇಕು, ಬಾಯಿ ಮಾತಲ್ಲಿ ಹೇಳಿದ್ರೆ ಸಾಲದು. ವಿದ್ಯುತ್, ನೀರು, ಕೊಡ್ಬೇಕು, ಟಿಸಿಗೆ ಎರಡು ಲಕ್ಷ ಖರ್ಚು ಮಾಡ್ಬೇಕು. ಆ ಎರಡು ಲಕ್ಷ ಲಾಭ ಗಳಿಸಲು ಆಗಲ್ಲ, ಟಿಸಿ ಉಚಿತ ಕೊಡಲಿ ನೋಡೋಣ. ಈ ಹಿಂದಿನ ಸರ್ಕಾರಗಳು ವರ್ಷಕ್ಕೆ ನಾಲ್ಕು ಸಾವಿರ ಕೊಡ್ತಿದ್ದರು. ರೈತರ ಮಕ್ಕಳ ಭವಿಷ್ಯ ನಿಧಿ ಮಾಡಿದ್ದರು. ಎಲ್ಲವನ್ನು ಈ ಸರ್ಕಾರದಲ್ಲಿ ರದ್ದು ಮಾಡಿದ್ದಾರೆ. ದುಡಿಯುವ ನಮ್ಮನ್ನು ಪರಿಗಣಿಸಬೇಕು, ಮೆಕ್ಕೆಜೋಳ ಸಂಸ್ಕರಣಾ ಘಟಕ ಅವಶ್ಯಕತೆ ಇದೆ, ಅದನ್ನು ಮಾಡಿಲ್ಲ. ಭದಗರಾ ನಾಲೆಗಳಿಗೆ ಕೊನೆ ಭಾಗಕ್ಕೆ ನೀರು ಹರಿಯುತ್ತಿಲ್ಲ. ನಮ್ಮ ಬೇಡಿಕೆಗಳನ್ನು ಸರ್ಕಾರ ಈ ಬಜೆಟ್ನಲ್ಲಿ ಈಡೇರಿಸುತ್ತೆ ಎಂದು ಕಾದು ಕುಳಿತಿದ್ದೇವೆ' ಎಂದು ರೈತ ಆಂಜೀನಪ್ಪ ಪೂಜಾರ್ ಹೇಳಿದ್ದಾರೆ.
ಇದನ್ನೂ ಓದಿ : ಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚು ಪ್ರಯೋಜನಕಾರಿಯಾಗುವಂತೆ ಬಜೆಟ್ ಮಂಡಿಸಿ: ಸಿಎಂಗೆ ರಾಜ್ಯಪಾಲರ ಮನವಿ

