ಎಲ್ಲೆಂದರಲ್ಲಿ ಕಸ ಎಸೆಯೋ ಅಭ್ಯಾಸ ಬೆಳೆಸಿಕೊಂಡಿದ್ದೀರಾ? ಹಾಗಿದ್ದರೆ ನೀವು ಈ ಸಮಸ್ಯೆ ಎದುರಿಸುತ್ತೀರಿ ಎಚ್ಚರಿಕೆ!
ಸಾಕಷ್ಟು ಜನಜಾಗೃತಿ ಬಳಿಕವೂ ಕೆಲವರು ಎಲ್ಲೆಂದರಲ್ಲಿ ಕಸ ಎಸೆದು ಹೋಗುವ ಅಭ್ಯಾಸ ಮುಂದುವರಿಸಿದ್ದರಿಂದ ದಾವಣಗೆರೆ ಪಾಲಿಕೆಯು ಕೆಲವು ಕಠಿಣ ಕ್ರಮಕ್ಕೆ ಮುಂದಾಗಿದೆ. ಏನೇನು ಎನ್ನುವ ಬಗ್ಗೆ ನೂರುಲ್ಲಾ ಡಿ ಅವರು ನೀಡಿದ ವರದಿ ಇಲ್ಲಿದೆ.

Published : July 9, 2026 at 1:29 PM IST
ದಾವಣಗೆರೆ: ನೀವು ಎಲ್ಲೆಂದರಲ್ಲಿ ಕಸ ಎಸೆಯೋ ಅಭ್ಯಾಸ ಬೆಳೆಸಿಕೊಂಡಿದ್ದೀರಾ? ಕಸ ಎಸೆದದ್ದೇ ಆದಲ್ಲಿ ದಂಡದ ಜೊತೆ ಜೊತೆಗೆ ನಿಮ್ಮ ಮನೆ ಮುಂದೆ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಕಸದ ರಾಶಿಯನ್ನು ಸುರಿಯಲಿದ್ದಾರೆ. ಅಲ್ಲದೇ, ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿದ ವ್ಯಕ್ತಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ಕೂಡ ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಸಾಕಷ್ಟು ಜನಜಾಗೃತಿ ಬಳಿಕವೂ ಕೆಲವರು ಎಲ್ಲೆಂದರಲ್ಲಿ ಕಸ ಎಸೆದು ಹೋಗುವ ಅಭ್ಯಾಸ ಮುಂದುವರೆಸಿದ್ದಾರೆ. ಇಂತಹ ಪ್ರಕರಣಗಳ ಕಡಿವಾಣಕ್ಕೆ ಮುಂದಾಗಿರುವ ಪಾಲಿಕೆಯು, ಇಂತಹ ಕೆಲವು ಕಠಿಣ ಕ್ರಮಕ್ಕೆ ಮುಂದಾಗಿದೆ.
ಒಂದೆಡೆ ಕಸಮುಕ್ತ ನಗರವನ್ನಾಗಿಸಲು ಶ್ರಮಿಸುತ್ತಿದ್ದರೆ, ಮತ್ತೊಂದೆಡೆ ಕೆಲವರು ಮನೆ ಮುಂದೆ ಕಸದ ವಾಹನ ಬಂದರೂ ಕಸ ಹಾಕದೆ, ಹಾದಿ ಬೀದಿಯಲ್ಲಿ ಎಸೆಯುತ್ತಿದ್ದಾರೆ. ಅಂತವರ ಮೇಲೆ ನಿಗಾ ಇಡಲು ಕೆಲವು ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಸ ಎಸೆಯುವ ಬ್ಲಾಕ್ ಸ್ಪಾಟ್ ಗುರುತಿಸಿದ ಪಾಲಿಕೆ: ನಗರದಲ್ಲಿ ಪಾಲಿಕೆ ಕಸ ಎಸೆಯುವ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿದೆ. ಖಾಲಿ ನಿವೇಶನ, ರಸ್ತೆ ಬದಿ, ಚರಂಡಿ ಹೀಗೆ.. ನಾನಾ ಕಡೆ ಕಸ ಸುರಿಯುತ್ತಿರುವುದ್ದನ್ನು ಗುರುತಿಸಿದೆ. ಕಸದ ಗಾಡಿ ಮನೆಯ ಮುಂದೆ ಬಂದರೂ ಕಸವನ್ನು ಹಾಕದೇ ಕೆಲವರು ಖಾಲಿ ನಿವೇಶನದಲ್ಲಿ ಕಸ ಎಸೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಜಿಎಂ ಗಂಗಾಧರ್ ಸ್ವಾಮಿ ಬೇಸರ ಹೊರಹಾಕಿದ್ದಾರೆ.
ಈಗಾಗಲೇ ಕಸ ಎಸೆಯುವ ಬ್ಲಾಕ್ ಸ್ಪಾಟ್ ಮೇಲೆ ಪಾಲಿಕೆಯ ಪೌರ ಕಾರ್ಮಿಕರು ಕಣ್ಣಿಟ್ಟಿದ್ದಾರೆ. ಹಳೆ ದಾವಣಗೆರೆ ಭಾಗದಲ್ಲಿ ಈ ಕಸದ ಸಮಸ್ಯೆ ವಿಪರೀತವಾಗಿದೆ. ಆ ಭಾಗದಲ್ಲಿ ಸ್ಲಂಗಳೇ ಹೆಚ್ಚಿದ್ದು, ಎಲ್ಲಿ ನೋಡಿದರಲ್ಲಿ ಕಸ ಕಾಣಸಿಗುತ್ತದೆ. ಎಷ್ಟೇ ಸ್ವಚ್ಛಗೊಳಿಸಿದರೂ ಮತ್ತೆ ಮತ್ತೆ ಕಸವನ್ನು ರಸ್ತೆ ಬದಿ ಹಾಕುತ್ತಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಬಂದಿದೆ. ಕಸ ಸುರಿದವರ ಮನೆ ನಿವೇಶನಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಲು ಸಹ ಚಿಂತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಜಿ ಎಂ ಗಂಗಾಧರ್ ಸ್ವಾಮಿ ಎಚ್ಚರಿಕೆಯ ಜೊತೆಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಡಂಪಿಂಗ್ ಯಾರ್ಡ್ನಲ್ಲಿ ಟನ್ಗಟ್ಟಲೇ ಕಸ: ಪಾಲಿಕೆಗೆ ಕಸದ ಸಮಸ್ಯೆ ಹಾಗೂ ಕಸ ವಿಂಗಡಣೆ ತಲೆಬಿಸಿಯಾಗಿದೆ. ಜನ ಕೊಡುವ ಹಸಿ ಮತ್ತು ಒಣ ಕಸವನ್ನು ವಿಂಗಡಣೆ ಮಾಡುವುದೇ ಸವಾಲಾಗಿದೆ. ನಗರದ ಕಸವನ್ನು ತಾಲೂಕಿನ ಅವರಗೋಳ ಬಳಿಯ ಡಂಪಿಂಗ್ ಯಾರ್ಡ್ನಲ್ಲಿ ಸುರಿಯಲಾಗುತ್ತಿದೆ. ಟನ್ಗಟ್ಟಲೆ ಕಸ ಯಾರ್ಡ್ನಲ್ಲಿ ಬಿದ್ದಿದ್ದು, ಅದನ್ನು ಕರಗಿಸುವುದೇ ಸವಾಲಿನ ಕೆಲಸವಾಗಿದೆ. ಅಲ್ಪ-ಸ್ವಲ್ಪ ಕಸವನ್ನು ಕರಗಿಸಲಾಗುತ್ತದೆ. ಉಳಿದ ಕಸವನ್ನು ಕಾಂಪೋಸ್ಟ್ ಗೊಬ್ಬರ ಮಾಡಲಾಗುತ್ತಿದ್ದು, ತಕ್ಕ ಮಟ್ಟಿಗೆ ಕಸದ ತಲೆನೋವು ಕಡಿಮೆಯಾಗಿದೆ. ಆದರೆ, ಈಗ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವುದೇ ದೊಡ್ಡ ತಲೆಬಿಸಿಯಾಗಿದೆ ಎನ್ನುತ್ತಾರೆ ಮಹಾನಗರಪಾಲಿಕೆ ಅಧಿಕಾರಿಗಳು.
ಕಸ ಸುರಿದರೆ ದಂಡ ಸಹಿತ ಮನೆ ಮುಂದೆ ಬೀಳಲಿದೆ ಕಸ!: ನಗರದಲ್ಲಿ ಕೆಲವು ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ)ಗಳನ್ನು ಗುರುತಿಸಿದ್ದೇವೆ. ಆ ಸ್ಥಳಗಳ ಜಿಪಿಎಸ್ ಲೊಕೇಶನ್ ಅನ್ನು ವೆಬ್ಸೈಟ್ಗೆ ಹಾಕುತ್ತೇವೆ. ಪ್ರತಿಯೊಂದು ಕಸ ಸುರಿಯುವ ಸ್ಥಳಗಳನ್ನು ಹಗಲು-ರಾತ್ರಿ ಒಂದು ತಿಂಗಳ ಕಾಲ ಕಾಯುತ್ತೇವೆ. ಯಾರು ಗುರುತಿಸಿದ ಸ್ಥಳದ ಬದಲಾಗಿ ಎಲ್ಲೆಂದರಲ್ಲಿ ಕಸ ಸುರಿಯುವವರು ಸಿಗುತ್ತಾರೋ ಅವರಿಗೆ ಮೊದಲಿಗೆ ತಿಳಿ ಹೇಳುತ್ತೇವೆ. ಪುನಃ ಅದೇ ತಪ್ಪು ಮಾಡಿದರೆ ದಂಡ ಹಾಕುತ್ತೇವೆ. ಅಲ್ಲದೇ ಕಸ ಸುರಿದವವರ ಮನೆ ಮುಂದೆಯೇ ಕಸ ಸುರಿಯುವುದರ ಜೊತೆಗೆ ಅವರ ಫೋಟೋ ಹಾಗೂ ವಿಡಿಯೋವನ್ನು ಜಾಲತಾಣದಲ್ಲಿ ಹಾಕುತ್ತೇವೆ. ಇದಲ್ಲದೇ ಕಸ ಸುರಿದವವರ ಮನೆ ನಿವೇಶನಗಳಿದ್ದರೆ ಅವುಗಳ ಮೇಲೆ ಪಾಲಿಕೆಯಿಂದ ಎರಡು ಪಟ್ಟು ತೆರಿಗೆ ಹಾಕುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ. ಈ ಮೂಲಕ ದಾವಣಗೆರೆಯ ಸೌಂದರ್ಯವನ್ನು ಹಾಳುಗೆಡುವವರಿಗೆ ಬುದ್ಧಿ ಕಲಿಸಬೇಕಿದೆ. ಹಾಗಾಗಿ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದಾವಣಗೆರೆಯನ್ನು ಇಡೀ ರಾಜ್ಯ, ದೇಶ ತಿರುಗಿ ನೋಡುವಂತೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಹಾಗಾಗಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯಬೇಡಿ. ಪೌರಕಾರ್ಮಿಕರು ಮನೆ ಮನೆಗೆ ಬಂದಾಗ ನಾಲ್ಕು ರೀತಿಯ ಕಸ ವಿಂಗಡಣೆ ಮಾಡಿ ಕೊಡಿ. ಇದು ನೀವು ಮಾಡುವ ದೊಡ್ಡ ಉಪಕಾರ ಎನ್ನುತ್ತಾರೆ ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ.

ಪಾಲಿಕೆ ಕೆಲಸಕ್ಕೆ ಸಹಕರಿಸಬೇಕು: ಹೋರಾಟಗಾರ ವಾಸು ಆವರಗೆರೆ ಮಾತನಾಡಿ "ದಾವಣಗೆರೆ ಜಿಲ್ಲಾಡಳಿತ ಕಸದ ಬಗ್ಗೆ ಮುತುವರ್ಜಿ ವಹಿಸುತ್ತಿದೆ. ಸಾರ್ವಜನಿಕರು ಕಸವನ್ನು ಗಾಡಿಗೆ ಕೊಡದೇ ರಾತ್ರಿ ಹೊತ್ತು ರಸ್ತೆ ಬದಿ, ಖಾಲಿ ನಿವೇಶನದಲ್ಲಿ ಸುರಿದು ಹೋಗುತ್ತಿದ್ದಾರೆ. ಕಸವನ್ನು ಹಾಕಿ ನಾವೇ ನಮ್ಮ ನಗರದ ಅಂದವನ್ನು ಕಳೆಯುತ್ತಿದ್ದೇವೆ. ಯಾರು ಕಸ ಸುರಿದಿರುತ್ತಿದ್ದಾರೋ ಅಂತವರ ಮನೆ ಮುಂದೆ ಕಸ ಸುರಿಯಲು ಪಾಲಿಕೆ ನಿರ್ಧಾರ ಮಾಡಿದೆ. ಸ್ಮಾರ್ಟ್ ಸಿಟಿ ದಾವಣಗೆರೆಯನ್ನು ಮಾಡಬೇಕಿದೆ. ಇದೊಂದು ಒಳ್ಳೆ ನಿರ್ಧಾರವಾಗಿದೆ. ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು ಸ್ವಚ್ಛತೆಗೆ ಹಾಗೂ ನಮ್ಮ ಆರೋಗ್ಯಕ್ಕಾಗಿ ಹೆಚ್ಚು ಶ್ರಮ ವಹಿಸುತ್ತಿದ್ದಾರೆ. ಇದೊಂದು ಸ್ವಾಗತರ್ಹ ನಿರ್ಧಾರ. ನಾವು ಪ್ರಜ್ಞಾವಂತರಾಗಿ ಕಸ ಸುರಿಯಬಾರದು. ಪಾಲಿಕೆ ಸಿಬ್ಬಂದಿಗೆ ಸಹಕರಿಸಬೇಕು. ಈ ಮೊದಲು ದಾವಣಗೆರೆ ಸ್ವಚ್ಛ ನಗರಿ ಅಂತ ಪ್ರಶಸ್ತಿ ಪಡೆದಿತ್ತು. ಇನ್ನೂ ಹೆಚ್ಚು ಪ್ರಶಸ್ತಿಗಳನ್ನು ನಮ್ಮ ಪಾಲಿಕೆ ಮುಡಿಗೇರಿಸಿಕೊಳ್ಳುವಂತೆ ನಾವು ಮಾಡಬೇಕಿದೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಒಣ ಕಸವೀಗ ಹಸಿರು ಇದ್ದಿಲು: ಹುಬ್ಬಳ್ಳಿಯಲ್ಲಿ ದಕ್ಷಿಣ ಭಾರತದಲ್ಲೇ ಪ್ರಥಮ ಚಾರ್ಕೋಲ್ ಉತ್ಪಾದನಾ ಘಟಕ

