ETV Bharat / state

ದಾವಣಗೆರೆ ಮಹಾನಗರ ಪಾಲಿಕೆಯ ಇ – ಆಸ್ತಿ ತಂತ್ರಾಂಶ ಹ್ಯಾಕ್‌ ಮಾಡಿ ಐದು ಸ್ವತ್ತುಗಳಿಗೆ ಅನುಮೋದನೆ: ದೂರು ದಾಖಲು

ಇ – ಸ್ವತ್ತು ತಂತ್ರಾಂಶವನ್ನು ಹ್ಯಾಕ್‌ ಮಾಡಿ ಅಧಿಕಾರಿಗಳಿಗೆ ಗೊತ್ತಾಗದಂತೆ ಐದು ಸ್ವತ್ತುಗಳಿಗೆ ಅನುಮೋದನೆ ನೀಡಿರುವ ಘಟನೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ವಲಯ ಕಚೇರಿಯಲ್ಲಿ ನಡೆದಿದೆ.

E SWATTU SOFTWARE HACKED
ದಾವಣಗೆರೆ ಮಹಾನಗರ ಪಾಲಿಕೆ (ETV Bharat)
author img

By ETV Bharat Karnataka Team

Published : January 9, 2026 at 8:32 PM IST

2 Min Read
Choose ETV Bharat

ದಾವಣಗೆರೆ: ಮಹಾನಗರ ಪಾಲಿಕೆಯ ಇ – ಸ್ವತ್ತು ತಂತ್ರಾಂಶವನ್ನು ಹ್ಯಾಕ್‌ ಮಾಡಿ ಅಧಿಕಾರಿಗಳಿಗೆ ಗೊತ್ತಾಗದಂತೆ ಐದು ಸ್ವತ್ತುಗಳಿಗೆ ಅನುಮೋದನೆ ನೀಡಲಾಗಿದೆ. ಘಟನೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ವಲಯ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ವಲಯ ಕಚೇರಿಯ ಆಯುಕ್ತರಾದ ಕೆ. ನಾಗರಾಜ್ ಅವರು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

2025ರ ಜೂನ್ 12ರಿಂದ ನವೆಂಬರ್ 27ರ ಅವಧಿಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ವಲಯ ಕಚೇರಿಯ ಆಯುಕ್ತರು ದೂರಿನಲ್ಲಿ ತಿಳಿಸಿದ್ದಾರೆ. ವಲಯ ಕಚೇರಿಯ ಅಧಿಕಾರಿಗಳ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ ಬಳಸಿ ಈ ಕೃತ್ಯ ಎಸಗಲಾಗಿದೆ.‌ ಈ ಘಟನೆ 6 ತಿಂಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಮಹಾನಗರ ಪಾಲಿಕೆಯ ಇ–ಸ್ವತ್ತು ತಂತ್ರಾಂಶದಲ್ಲಿ ಅಧಿಕಾರಿಗಳ ಗಮನಕ್ಕೆ ಬಾರದೇ ಇ–ಸ್ವತ್ತು ಅನುಮೋದನೆ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ಹ್ಯಾಕ್ ಆಗಿರುವುದು ತಿಳಿದುಬಂದಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್‌ಗಳು ಬರಲಿದ್ದು, ಮೂರು ವಲಯ ಕಚೇರಿಗಳಲ್ಲಿ ಇ–ಸ್ವತ್ತು ನಿರ್ವಹಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಆಸ್ತಿಗಳಿಗೆ ಹೊಸ ಖಾತೆ, ವರ್ಗಾವಣೆಯಂತ ಪ್ರಕ್ರಿಯೆಗಳು ವಲಯ ಆಯುಕ್ತರ ಲಾಗಿನ್ ಮೂಲಕ ಅನುಮೋದನೆ ಪಡೆಯುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಅರಿತವರು ಅಧಿಕಾರಿಗಳ ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ ದುರ್ಬಳಕೆ ಮಾಡಿಕೊಂಡು ಕೃತ್ಯ ಎಸಗಿದ್ದಾರೆ. ನಿಟುವಳ್ಳಿ, ಶಿವಕುಮಾರಸ್ವಾಮಿ ಬಡಾವಣೆ ಹಾಗೂ ದೊಡ್ಡಬೂದಿಹಾಳ್‌ ವ್ಯಾಪ್ತಿಯ 5 ಆಸ್ತಿಗಳನ್ನು ಬೇರೆ ಬೇರೆ ವಲಯ ಕಚೇರಿಗಳಲ್ಲಿ ಅನುಮೋದನೆ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸದ್ಯ ಈ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇವುಗಳನ್ನೂ ಓದಿ:

ಉಪ್ಪಿನ ಮೂಟೆಗಳ ಸರಣಿ ಕಳ್ಳತನ: ಕಳ್ಳರ ಗ್ಯಾಂಗೊಂದು ಹೋಲ್‌ಸೇಲ್​ ಕಿರಾಣಿ ಅಂಗಡಿ ಎದುರು ಇರಿಸಿದ್ದ ಉಪ್ಪಿನ ಚೀಲಗಳನ್ನು ಕದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಇತ್ತೀಚಿಗೆ ನಡೆದಿತ್ತು. ಹರಿಹರದ ಕೆ.ಆರ್. ನಗರ ಸೇರಿ ವಿವಿಧ ಕಿರಾಣಿ ಅಂಗಡಿಗಳ ಎದುರು ಇಟ್ಟಿದ್ದ ಉಪ್ಪಿನ ಚೀಲಗಳನ್ನು ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ಕಳ್ಳರು ಕಳ್ಳತನ ಮಾಡಿದ್ದರು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಾಗಿದ್ದು ಹರಿಹರ ನಗರ ಠಾಣೆಯ ಪೊಲೀಸರು​​ ಉಪ್ಪು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ. ಘಟನೆಯಿಂದ ಉಳಿದ ಬೇರೆ ಕಿರಾಣಿ ಅಂಗಡಿಯ ಮಾಲೀಕರು ಉಪ್ಪನ್ನು ಹೊರಗಿರಿಸಲು ಹಿಂದೇಟು ಹಾಕುತ್ತಿದ್ದರು.