ದಾವಣಗೆರೆ ರೈತರು ಹೋರಾಡಿ ಭದ್ರಾ ನೀರು ಪಡೆಯುವ ಪರಿಸ್ಥಿತಿ: ಯಾವ ವರ್ಷ, ಎಷ್ಟು ನೀರು ಹರಿಸಲಾಗಿದೆ?
ಭದ್ರಾ ನೀರಿಗಾಗಿ ದಾವಣಗೆರೆ ರೈತರು ಕಾಯುತ್ತಿದ್ದರೆ, ಇತ್ತ ಶಿವಮೊಗ್ಗದ ರೈತರು ಈಗ ಬೇಡ, ಬೇಸಿಗೆಗೆ ನೀರು ಕೊಡಿ ಎನ್ನುತ್ತಿದ್ದಾರೆ. ಈ ಬಗ್ಗೆ ಈಟಿವಿ ಭಾರತದ ನೂರುಲ್ಲಾ ಡಿ ಅವರ ವರದಿ.

Published : August 28, 2026 at 3:07 PM IST
ದಾವಣಗೆರೆ: ಭದ್ರಾ ಜಲಾಶಯ ಶಿವಮೊಗ್ಗ-ದಾವಣಗೆರೆ ಜಿಲ್ಲೆಗಳ ಜೀವನಾಡಿ. ಎರಡೂ ಜಿಲ್ಲೆಯ ರೈತರ ಉಸಿರು. ಆದರೆ ಅದೇ ನೀರಿಗಾಗಿ ದಾವಣಗೆರೆ ರೈತರು ಹೋರಾಟ ಮಾಡುವಂತಾಗಿದೆ. ಭತ್ತದ ಬೆಳೆಗಾಗಿ ರೈತರು ನೀರಿಗಾಗಿ ಕಾದು ಕೂತಿದ್ದಾರೆ. ಇತ್ತ ಶಿವಮೊಗ್ಗ ಜಿಲ್ಲೆಯ ರೈತರು ಬೇಸಿಗೆಗೆ ನೀರು ಕೊಡಿ, ಈಗ ಬೇಡ ಎನ್ನುತ್ತಿದ್ದಾರೆ.
ಐಸಿಸಿ ಸಭೆ ನಡೆದಿದ್ದರೂ ಕೂಡ ಕಾಲುವೆಗಳಿಗೆ ನೀರು ಹರಿದಿಲ್ಲ. ಮತ್ತೊಂದೆಡೆ, ದಾವಣಗೆರೆಯ ಕೆಲವು ಅಡಿಕೆ ಬೆಳೆಗಾರರು ಕೂಡ ಬೇಸಿಗೆಗೆ ನೀರು ಕೊಡಿ ಎನ್ನುತ್ತಿರುವುದು ಭತ್ತ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ನೀರಿಗಾಗಿ ರೈತರು ದಾವಣಗೆರೆ ಬಂದ್ ಕರೆದಿದ್ದರು. ಹೆದ್ದಾರಿ ತಡೆ ಮಾಡಿದ್ದರು.
ಸಾಮಾನ್ಯವಾಗಿ ಮುಂಗಾರು ಹಂಗಾಮು ಬೆಳೆಗೆ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಜಲಾಶಯದಿಂದ ನೀರು ಹರಿಸಲಾಗುತ್ತದೆ. ಇದಲ್ಲದೆ ಬೇಸಿಗೆ ಹಂಗಾಮು ಬೆಳೆಗೆ ಜನವರಿ ತಿಂಗಳಲ್ಲಿ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡಲಾಗುತ್ತದೆ. ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಈ ನೀರು ಲಭ್ಯವಾಗುತ್ತದೆ.
ಅತಿ ಹೆಚ್ಚಾಗಿ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ರೈತರು ಅಡಿಕೆ ಮತ್ತು ಭತ್ತ ಬೆಳೆಯುತ್ತಾ ಬಂದಿದ್ದಾರೆ. ಕಾಲುವೆಗಳಿಗೆ ನೀರು ಬಿಟ್ಟರೆ ಲಕ್ಷಾಂತರ ರೈತರಿಗೆ ಕೆಲಸ ದೊರೆಯಲಿದೆ. ಅಲ್ಲದೆ ಭತ್ತ ನಾಟಿ ಮಾಡುವವರಿಗೆ, ಟ್ರ್ಯಾಕ್ಟರ್ ಚಾಲಕರಿಗೆ ಉದ್ಯೋಗ ಸಿಗಲಿದೆ. ಭತ್ತ ಬೆಳೆಯದೇ ಇದ್ದರೆ ಅಕ್ಕಿಯ ದರ ಗಗನಕ್ಕೇರುತ್ತದೆ.
ಯಾವ ವರ್ಷ ಎಷ್ಟು ನೀರು ಹರಿಸಲಾಗಿದೆ?:
- 1994ರಲ್ಲಿ ಜಲಾಶಯದಲ್ಲಿ 184 ಅಡಿ ನೀರು ಶೇಖರಣೆ ಆಗಿತ್ತು. ಅಂದು ಬೇಸಿಗೆ ಬೆಳೆಗೆಂದು ಒಟ್ಟು 154 ದಿನಗಳ ಕಾಲ ಒಟ್ಟು 37.45 ಟಿಎಂಸಿ ನೀರು ಹರಿಸಲಾಗಿತ್ತು.
- ಇದೇ ವರ್ಷದಲ್ಲಿ ಮುಂಗಾರು ಬೆಳೆಗೆ 165 ದಿನಗಳ ಕಾಲ ಒಟ್ಟು 35.55 ಟಿಎಂಸಿ ನೀರು ಕಾಲುವೆಗಳಿಗೆ ಹರಿಸಲಾಗಿತ್ತು.
- 2002 ರಲ್ಲಿ 104 ಅಡಿ ಮಾತ್ರ ಅತಿ ಕಡಿಮೆ ನೀರು ಶೇಖರಣೆ ಆಗಿತ್ತು. 145 ದಿನಗಳ ಕಾಲ ಬೇಸಿಗೆ ಬೆಳೆಗೆಂದು 17.29 ಟಿಎಂಸಿ ನೀರು ಬಿಡಲಾಗಿತ್ತು. ಮುಂಗಾರು ಹಂಗಾಮಿನ ಬೆಳೆಗೆ 98ಗಳ ಕಾಲ 25 ಟಿಎಂಸಿ ನೀರು ಹರಿಸಲಾಗಿದೆ.
- 2014 ರಲ್ಲಿ ಡ್ಯಾಂನಲ್ಲಿ 184 ಅಡಿ ನೀರು ಶೇಖರಣೆ ಆಗಿತ್ತು. ಒಟ್ಟು 38.29 ಟಿಎಂಸಿ ನೀರು ಹರಿಸಲಾಗಿತ್ತು.
- ಕಳೆದ ಮೂರ್ನಾಲ್ಕು ವರ್ಷಗಳ ಅಂಕಿ ಅಂಶಗಳನ್ನು ನೋಡುವುದಾದರೆ 2023ರಲ್ಲಿ ಬೇಸಿಗೆ ಬೆಳಗೆ ಒಟ್ಟು 34 ಟಿಎಂಸಿ ನೀರು ಹರಿಸಲಾಗಿದೆ. ಅಂದು ಜಲಾಶಯದಲ್ಲಿ 134-144 ಅಡಿ ನೀರಿತ್ತು. ಮುಂಗಾರು ಬೆಳೆಗೆ 20.40 ಟಿಎಂಸಿ ನೀರು ಹರಿಸಲಾಗಿದೆ. ಅಂದು ಜಲಾಶಯದಲ್ಲಿ 150.8 ಅಡಿ ನೀರಿತ್ತು.
- 2024 ರಲ್ಲಿ ಬೇಸಿಗೆ ಬೆಳೆಗೆ 114 ದಿನಗಳ ಕಾಲ 15.90 ಟಿಎಂಸಿ ನೀರು ಕೊಡಲಾಗಿತ್ತು. ಅಂದು 114 ಅಡಿ ಮಾತ್ರ ನೀರು ಜಲಾಶಯದಲ್ಲಿ ಇತ್ತು. ಮುಂಗಾರು ಬೆಳೆಗೆ 124 ದಿನಗಳ ಕಾಲ 32.69 ಟಿಎಂಸಿ ನೀರು ಹರಿಸಲಾಗಿತ್ತು.
- 2025ರಲ್ಲಿ 184 ಅಡಿ ನೀರು ಶೇಖರಣೆಯಾಗಿತ್ತು. 134 ದಿನಗಳ ಕಾಲ 33.376 ಟಿಎಂಸಿ ನೀರು ಹರಿಸಲಾಗಿತ್ತು. ಮುಂಗಾರು ಬೆಳೆಗೆ 179 ಅಡಿ ನೀರಿತ್ತು, 115 ದಿನಗಳ ಕಾಲ 29.644 ಟಿಎಂಸಿ ನೀರು ಕೊಡಲಾಗಿತ್ತು.
ಅಕ್ರಮ ಪಂಪ್ ಸೆಟ್ಗಳ ಹಾವಳಿಗೆ ಕಡಿವಾಣ ಹಾಕಲು ಮನವಿ: ಕಾಲುವೆಗಳಿಗೆ ನೀರು ಹರಿಸಿದ ತಕ್ಷಣ ಕೆಲ ಕಾಲುವೆ ಭಾಗದ ರೈತರು ಪಂಪ್ ಸೆಟ್ ಇಟ್ಟು ನೀರು ಹಾಯಿಸುತ್ತಿರುವುದು ದಾವಣಗೆರೆ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಬಲದಂಡೆ ಹಾಗು ಎಡದಂಡೆ ಕಾಲುವೆಗಳಲ್ಲಿ ಬರೋಬ್ಬರಿ 40-50 ಸಾವಿರ ಅಕ್ರಮ ಪಂಪ್ ಸೆಟ್ಗಳಿದ್ದರಿಂದ ಕೊನೆಭಾಗಕ್ಕೆ ನೀರು ತಲುಪದೇ ಇರುವುದಕ್ಕೆ ಪ್ರಮುಖ ಕಾರಣವಾಗಿದೆ. ತಕ್ಷಣ ಪಂಪ್ಸೆಟ್ಗಳನ್ನು ಬಿಡದೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ಅಕ್ರಮ ಪಂಪ್ಸೆಟ್ ಹಾಕದೇ ಇದ್ದರೆ ದಾವಣಗೆರೆಯ ಕೊನೆ ಭಾಗದ ಜನರಿಗೆ ನೀರು ಸಿಗುತ್ತದೆ ಎಂದು ರೈತರು ಹೇಳುತ್ತಾರೆ.
ರೈತ ಮುಖಂಡ ನಾಗೇಶ್ವರ್ ರಾವ್ ಅವರು ಮಾತನಾಡಿ, "ಡ್ಯಾಂನಲ್ಲಿ 176 ಅಡಿ ನೀರಿದ್ದರೂ ನೀರು ಬಿಡದ ಪರಿಸ್ಥಿತಿ ಇದೆ. 165 ಅಡಿ ಇದ್ದಾಗಲೇ ನೀರು ಬಿಡಿಸಿಕೊಂಡು ಎರಡು ಬೆಳೆ ಬೆಳೆದಿದ್ದೇವೆ. ಮಳೆ ಸುರಿಯುತ್ತಿದ್ದು, 3 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇರಲಿದೆ. ಆದರೆ ನೀರು ಬಿಡುವಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಎರಡು ಬಣದ ರೈತರ ಒಟ್ಟಾಗಿ ಬನ್ನಿ ನೀರು ಕೊಡೋಣ ಎಂದು ಈ ರಾಜಕಾರಣಿಗಳು ಹೇಳುತ್ತಿದ್ದಾರೆ. ನಮ್ಮನ್ನು ಎದುರು ಹಾಕಿಕೊಂಡವರು ಯಾರೂ ಉಳಿದಿಲ್ಲ. ಎಲ್ಲರ ಇತಿಹಾಸ ನಮ್ಮ ಬಳಿ ಇದೆ. ಈ ಸರ್ಕಾರಗಳು ಬಂದಾಗ ನಮಗೆ ತೊಂದರೆ ಕಟ್ಟಿಟ್ಟ ಬುತ್ತಿ. ಈ ಹಿಂದೆ ನೀರು ಸುಮ್ಮನೆ ಬಿಡುವವರು, ಇದೀಗ ಸಮಸ್ಯೆ ಮಾಡುತ್ತಿದ್ದಾರೆ. 40 ಸಾವಿರಕ್ಕೂ ಹೆಚ್ಚು ಅಕ್ರಮ ಪಂಪ್ ಸೆಟ್ಗಳಿಂದ ನಮಗೆ ಹೊಡೆತ ಬಿದ್ದಿದೆ. ರಾಜಕಾರಣಿಗಳು ಕಿಮೀಗಟ್ಟಲೆ ಪೈಪ್ ಲೈನ್ ಮಾಡಿ ನೀರು ಕೊಂಡೊಯ್ದಿರುವ ಉದಾಹರಣೆಗಳಿವೆ. ಅಂದು ನಮಗೆ 2,250 ಕ್ಯೂಸೆಕ್ ನೀರು ಹರಿಸಿದರೆ ನಮಗೆ ನೀರು ಬರುತ್ತಿತ್ತು" ಎಂದರು.
ನೀರು ಹರಿಸಿ ಇಲ್ಲವಾದಲ್ಲಿ ರೈತರಿಗೆ ಪರಿಹಾರ ಕೊಡಿ: ರೈತ ಹೆಚ್.ಎನ್.ಗುರುನಾಥ್ ಅವರು ಮಾತನಾಡಿ, "ನಾವು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು. ಡ್ಯಾಂನಲ್ಲಿ ನೀರು ಇಲ್ಲದೆ ಇದ್ದಿದ್ದರೆ ನಾವು ನೀರು ಕೇಳುತ್ತಿರಲಿಲ್ಲ. 2003, 2016ರಲ್ಲಿ 138 ಅಡಿ ನೀರಿದ್ದರೂ ಕೂಡ ನಮಗೆ 100 ದಿನಗಳ ಕಾಲ ನೀರು ಕೊಟ್ಟಿದ್ದರು. ಇದೀಗ 176 ಅಡಿ ಇನ್ನು 04 ಅಡಿ ಜಲಾಶಯಕ್ಕೆ ನೀರು ಬಂದರೆ ಹೆಚ್ಚು ಕಡಿಮೆ ಎರಡು ಬೆಳೆಗಳಿಗೆ ನೀರು ಕೊಡಬಹುದು. ಶೇ50ರಷ್ಟು ಜನ ರೈತರು ಭತ್ತದ ಬೀಜ ಚೆಲ್ಲಿದ್ದಾರೆ. 50% ನಾಟಿ ಮಾಡಿ ನೀಡಿ ನೀರಿಗಾಗಿ ಕಾದು ಕೂತಿದ್ದಾರೆ. ನೀರು ಹರಿಸಿದರೆ ಸಾಕಷ್ಟು ರೈತರು ಬದುಕಲಿದ್ದು, ಐವತ್ತು ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. ನೀರು ಕೊಡದೆ ಇದ್ದರೆ ಯಾರು ಬೀಜ ಚೆಲ್ಲಿದ್ದಾರೆ ಅಂತಹ ರೈತರಿಗೆ ಪರಿಹಾರ ಕೊಡಲಿ" ಎಂದು ಆಗ್ರಹಿಸಿದರು.
1980ರಿಂದಲೂ ಅದೇ ಸಮಸ್ಯೆ, ನೀರು ಕೊಡಿ ಇಲ್ಲ ವಿಷ ಕೊಡಿ: ರೈತ ಗಣೇಶಪ್ಪ ಅವರು ಮಾತನಾಡಿ, "2016ರಲ್ಲಿ 160 ಅಡಿ ನೀರಿದ್ರೂ ನೀರು ಹರಿಸಲಾಗಿತ್ತು. ಇದೀಗ 175 ಅಡಿ ನೀರಿದ್ರೂ ಕೂಡ ರೈತರ ಹಿತ ಕಾಯದೆ ನೀರು ಬಿಟ್ಟಿಲ್ಲ. ಈ ಕಾಂಗ್ರೆಸ್ ಸರ್ಕಾರ ಬಂದರೆ ನೀರಿಗಾಗಿ ಹೋರಾಟ ಮಾಡುವುದು ತಪ್ಪಿಲ್ಲ. 1980 ರಿಂದಲೂ ಅದೇ ರೀತಿ ಸಮಸ್ಯೆ ಎದುರಿಸುತ್ತಿದ್ದೇವೆ. ಅಡಿಕೆ ಹಾಗು ಬೇಸಿಗೆ ಕೊಟ್ಟರೂ ಡ್ಯಾಂನಲ್ಲಿ ನೀರು ಉಳಿಯಲಿದೆ. ಐಸಿಸಿ ಸಭೆಯಾದರೂ ಯಾವುದೇ ನಿರ್ಣಯ ಕೈಗೊಂಡಿಲ್ಲ. ಒಂದು ವಾರ ಕಳೆದರೂ ನೀರು ಕೊಟ್ಟಿಲ್ಲ, ಇತ್ತ ಸಮಯ ಕೈ ಮೀರಿ ಹೋಗುತ್ತಿದೆ. ಕೂಡಲೇ ಜಲಾಶಯದ ಗೇಟ್ ಎತ್ತಿ ನೀರು ಹರಿಸಬೇಕು" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ರಾಜ್ಯದ 101 ತಾಲೂಕುಗಳು ಬರಪೀಡಿತ: ಸರ್ಕಾರ ಘೋಷಣೆ

