ETV Bharat / state

ದಾವಣಗೆರೆ ಅಧಿದೇವತೆ ದುರ್ಗಾಂಬಿಕಾ ದೇವಿ ಜಾತ್ರೆ: ಹಬ್ಬಕ್ಕೆ ಹರಿದು ಬಂದ ಜನಸಾಗರ, ಇಲ್ಲಿ ಮುಸ್ಲಿಮರಿಗೂ ವ್ಯಾಪಾರಕ್ಕೆ ಮುಕ್ತ ಅವಕಾಶ

ಅಧಿಕೃತವಾಗಿ ಜಾತ್ರೆಗೆ ಚಾಲನೆ ಸಿಕ್ಕಿದ್ದು, ಈ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.

DURGAMBIKA DEVI FAIR
ದಾವಣಗೆರೆ ಅಧಿದೇವತೆ ದುರ್ಗಾಂಬಿಕಾ ದೇವಿ ಜಾತ್ರೆ (ETV Bharat)
author img

By ETV Bharat Karnataka Team

Published : February 25, 2026 at 7:23 PM IST

4 Min Read
Choose ETV Bharat

ವಿಶೇಷ ವರದಿ: ನೂರುಲ್ಲಾ ಡಿ.

ದಾವಣಗೆರೆ: ಮಧ್ಯ ಕರ್ನಾಟಕದ ಬೆಣ್ಣೆ ನಗರಿ ದಾವಣಗೆರೆಯ ಅಧಿದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಆರಂಭವಾಗಿದೆ. ಈ ಜಾತ್ರೆಯಲ್ಲಿ ಎಲ್ಲಿ ನೋಡಿದ್ರು ದುಗ್ಗಮ್ಮನ ಆರಾಧನೆ. ಬೇವಿನ ಸೊಪ್ಪಿನ ಉಡುಗೆ ತೊಟ್ಟು ಭಕ್ತರು ಹರಕೆ ತೀರಿಸುವುದು ಪ್ರತೀತಿ. ಎರಡು ವರ್ಷಕ್ಕೊಮ್ಮೆ ನಡೆಯುವ ದುಗ್ಗಮ್ಮನ ಅದ್ದೂರಿ ಜಾತ್ರೆಯಲ್ಲಿ ವ್ಯಾಪಾರಕ್ಕೆ ಮುಸ್ಲಿಂರಿಗೂ ಮುಕ್ತ ಅವಕಾಶ ಕಲ್ಪಿಸಿರುವುದು ವಿಶೇಷ. ಅಲ್ಲದೆ ಈ ಜಾತ್ರೆಯು ಇಡೀ ನಗರದ ಸಾಂಸ್ಕೃತಿಕ ಹಬ್ಬ ಹಾಗೂ ಭಾವೈಕ್ಯತೆಯ ಸಂಕೇತವಾಗಿದೆ.

ಈಗಾಗಲೇ ಅಧಿಕೃತವಾಗಿ ಜಾತ್ರೆಗೆ ಚಾಲನೆ ಸಿಕ್ಕಿದ್ದು, ಮಹಾತಾಯಿಯ ಜಾತ್ರಾ ಮಹೋತ್ಸವಕ್ಕೆ ರಾಜ್ಯಾದ್ಯಂತದಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.

ದುರ್ಗಾಂಬಿಕಾ ದೇವಿ ಜಾತ್ರೆ (ETV Bharat)

ಉರುಳು ಸೇವೆ ಮತ್ತು ದೀಡ್ ನಮಸ್ಕಾರ ಹರಕೆ: ದುರ್ಗಾಂಬಿಕಾ ದೇವಿಯ ಜಾತ್ರೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ದೇವಿಗೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತಿದೆ. ಸಾವಿರಾರು ಭಕ್ತರು ಬೇವಿನ ಉಡುಗೆ ತೊಟ್ಟು, ಉರುಳು ಸೇವೆ ಮತ್ತು ದೀಡ್ ನಮಸ್ಕಾರ ಮಾಡುವ ಮೂಲಕ ತಮ್ಮ ಹರಕೆ ತೀರಿಸುತ್ತಿದ್ದಾರೆ. ಬುಧವಾರ (ಫೆ. 25) ಮುಂಜಾನೆ ನಗರದ ಸೀಮೆಯ ಸುತ್ತಲೂ ಚರಗ ಚೆಲ್ಲುವ ಕಾರ್ಯಕ್ರಮ ನಡೆಯುತ್ತದೆ. ಇದು ಭೂತಾಯಿಗೆ ಸಲ್ಲಿಸುವ ಗೌರವ ಮತ್ತು ಊರಿಗೆ ಒಳಿತಾಗಲಿ ಎಂಬ ಪ್ರಾರ್ಥನೆಯಾಗಿದೆ.

ಮನೆಗೊಂದು ಕುರಿ ತಂದು ನೆಂಟರನ್ನು ಕರೆದು ಬಾಡೂಟ ಹಾಕುವುದು ಹಬ್ಬದ ಪ್ರಮುಖ ಆಚರಣೆಯಾಗಿದೆ. ಜಾತ್ರೆಯ ಎರಡನೇ ದಿನದಂದು ನಗರದ ಪ್ರತಿಯೊಂದು ಮನೆಯಲ್ಲೂ ಮಾಂಸದ ಅಡುಗೆಯ ಘಮಲು ಹರಡಿರುತ್ತದೆ. ಜಾತಿ-ಮತದ ಭೇದವಿಲ್ಲದೆ ಸ್ನೇಹಿತರನ್ನು, ಸಂಬಂಧಿಕರನ್ನು ಮನೆಗೆ ಕರೆದು ಬಾಡೂಟ ಬಡಿಸುವುದು ಇಲ್ಲಿನ ವಿಶೇಷ ಸಂಪ್ರದಾಯ. ಈ ದಿನ ದಾವಣಗೆರೆಗೆ ಬರುವ ಅತಿಥಿಗಳ ಸಂಖ್ಯೆ ಲಕ್ಷಕ್ಕೂ ಅಧಿಕವಿರುತ್ತದೆ.‌

ಆಕರ್ಷಣೀಯ ದೇವಿಯ ಭವ್ಯ ಮಂಟಪ: ಜಾತ್ರೆಯ ಅಂಗವಾಗಿ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ, ಭವ್ಯವಾದ ಮಂಟಪಗಳ ನಿರ್ಮಾಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟಿವೆ. ಟಗರು ಕಾಳಗ, ಕುಸ್ತಿ ಪಂದ್ಯಾವಳಿಗಳು ಜನರನ್ನು ರಂಜಿಸುತ್ತವೆ. ಈ ಜಾತ್ರೆಯು ವ್ಯಾಪಾರ-ವಹಿವಾಟಿಗೂ ದೊಡ್ಡ ವೇದಿಕೆಯಾಗಿದ್ದು, ಆರ್ಥಿಕವಾಗಿಯೂ ನಗರಕ್ಕೆ ಚೈತನ್ಯ ನೀಡುತ್ತಿದೆ. ವಾರಪೂರ್ತಿ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಅದರಲ್ಲಿ ಪ್ರಮುಖವಾಗಿ ಎರಡು ದಿನ ದೇವಿ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದಾವಣಗೆರೆ ದುಗ್ಗಮ್ಮ ದೇವಿ ದರ್ಶನಕ್ಕೆ ಕಿಲೋ‌ಮೀಟರ್ ಗಟ್ಟಲೇ ಕ್ಯೂ ನಿಂತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ವಿಐಪಿ ಮತ್ತು ನೇರ ದರ್ಶನ ಗೇಟ್ ಬಳಿ ನೂಕುನುಗ್ಗಲು ಆರಂಭವಾಗಿದೆ. ದುಗ್ಗಮ್ಮ ದೇವಿ ದರ್ಶನಕ್ಕೆ ಕಾದು ನಿಂತ ಸಾವಿರಾರು ಜನರನ್ನು ಸಂಭಾಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ದುಗ್ಗಮ್ಮನ ಸನ್ನಿಧಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೂ ಮುಕ್ತ ಅವಕಾಶ: ದಾವಣಗೆರೆ ದುಗ್ಗಮ್ಮನ ಜಾತ್ರೆಯು ಮನುಷ್ಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಭಕ್ತಿಯನ್ನು ಬೆಸೆಯುವ ಶಕ್ತಿಯಾಗಿದೆ. ಆಧುನಿಕತೆಯ ನಡುವೆಯೂ ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳನ್ನು ಉಳಿಸಿಕೊಂಡು ಬರುತ್ತಿರುವುದು ಹಾಗೂ "ದುಗ್ಗಮ್ಮನ ಕೃಪೆ ಇದ್ದರೆ ನಗರಕ್ಕೆ ಯಾವುದೇ ವಿಘ್ನ ಬರುವುದಿಲ್ಲ" ಎಂಬ ಗಾಢ ನಂಬಿಕೆ ಇಂದಿಗೂ ಜನರ ಮನಸ್ಸಿನಲ್ಲಿ ಜೀವಂತವಾಗಿದೆ. ವಿಶೇಷ ಎಂದರೆ ಈ ಜಾತ್ರೆಯಲ್ಲಿ ಮುಸ್ಲಿಂ‌ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಮುಕ್ತ‌ ಅವಕಾಶವನ್ನು ದೇವಸ್ಥಾನದ ಕಮಿಟಿಯುವರು ಕಲ್ಪಿಸಿದ್ದಾರೆ. ಮುಸ್ಲಿಂ ವ್ಯಾಪಾರಿಗಳು ಬಳೆ ಅಂಗಡಿ, ಆಟಿಕೆ ವಸ್ತುಗಳು, ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡ್ತಿರುವುದು ಕಂಡುಬಂತು. ಇನ್ನು ಹಿಂದೂಗಳು ಕೂಡ ಪರಸ್ಪರ ಸಹಕಾರದಿಂದ ವ್ಯಾಪಾರ ವ್ಯವಹಾರ ಮಾಡುತ್ತಿರುವುದು ಹಿಂದೂ - ಮುಸ್ಲಿಂರ ನಡುವೆ ಭಾವನಾತ್ಮಕ ಸಂದೇಶ ಸಾರುವಂತಿದೆ.

ಬಿಗ್ ಬಾಸ್ 12ರ ಸ್ಪರ್ಧಿ ಕರಿಬಸಪ್ಪ ಡ್ಯಾನ್ಸ್​ (ETV Bharat)

ಭಕ್ತರ ಹರಕೆ ಈಡೇರಿಸುವ ದುರ್ಗಾಂಬಿಕ ದೇವಿ: ಭಕ್ತ ರಾಜೇಶ್ ಪ್ರತಿಕ್ರಿಯಿಸಿ "ಬಹಳ ವಿಜೃಂಭಣೆ ಜಾತ್ರೆ ಆಚರಣೆ ಮಾಡಲಾಗುತ್ತದೆ. ಮೊದಲ ದಿನ ಸಿಹಿ ಮಾಡಿದ್ರೇ, ಎರಡನೇ ದಿನಕ್ಕೆ ಬಾಡೂಟ. ಹರಕೆ ಕಟ್ಟಿಕೊಂಡು ಬೇವಿನ ಉಡುಗೆ ತೊಟ್ಟು ದೀಡ್ ನಮಸ್ಕಾರ ಮಾಡುವುದು ವಿಶೇಷ. ಅಲ್ಲದೆ ಉರುಳು ಸೇವೆ ಮಾಡ್ತಾರೆ. ಏನ್ ಅಂದುಕೊಂಡ್ರು ದೇವಿ ಈಡೇರಿಸುತ್ತಾಳೆ. ಶಕ್ತಿಶಾಲಿ ದೇವಿ ಇದು. ಹರಕೆಗಳು ಈಡೇರಿರುವ ಉದಾಹರಣೆಗಳಿವೆ. ಮಕ್ಕಳು ಆಗದೆ ಇರುವುದು, ಆರ್ಥಿಕ ಸಮಸ್ಯೆ, ಕೆಲಸದ ಸಮಸ್ಯೆ, ಕೌಟುಂಬಿಕ ಕಲಹ, ಕಷ್ಟ ಪ್ರತಿಯೊಂದನ್ನು ಹರಕೆ ಕಟ್ಟಿಕೊಂಡರೆ ಬಗೆಹರಿಸುವ ಶಕ್ತಿ ದೇವಿಗಿದೆ'' ಎಂದು ಹೇಳಿದರು.

ರಾಮ್ ಪ್ರಸಾದ್ ಎಂಬುವರು ಮಾತನಾಡಿ "ದುರ್ಗಾಂಬಿಕ ದೇವಿ ಬಳಿ ನಿಜವಾದ ಶಕ್ತಿ, ನಾವು ಬೆಂಗಳೂರಿನಿಂದ ಬಂದು ಹರಕೆ ಕಟ್ಟಿಕೊಂಡಿದ್ದೆವು, ಅದು ಈಡೇರಿದೆ. ಭಕ್ತಿಯಿಂದ ಪೂಜೆ ಸಲ್ಲಿಸುತ್ತೇವೆ. ದಾವಣಗೆರೆ ಜಿಲ್ಲೆ ಅಲ್ಲದೆ ರಾಜ್ಯದ ವಿವಿಧ ಕಡೆಗಳಿಂದ ಭಕ್ತರು ಹರಕೆ ತೀರಿಸಲು ಆಗಮಿಸುತ್ತಾರೆ. ಉದ್ಯೋಗದಲ್ಲಿ ಉನ್ನತಿಯಾಗಬೇಕು, ವಿದ್ಯಾಭ್ಯಾಸದಲ್ಲಿ ಮಕ್ಕಳು ಮುಂದೆ ಬರಲಿ ಎಂದು ಹರಕೆ ಕಟ್ಟಿಕೊಂಡಿದ್ದೆವು, ಅದು ಎಲ್ಲಾ ಈಡೇರಿದೆ. ಇಲ್ಲಿ ಭಕ್ತರ ನಂಬಿಕೆ ದಿನೇ ದಿನೆ ಹೆಚ್ಚಾಗುತ್ತದೆ. ಹೈದರಾಬಾದ್, ಚೆನ್ನೈ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಎಷ್ಟೇ ಕೆಲಸ ಇದ್ದರು ಹಬ್ಬಕ್ಕೆ ದಾವಣಗೆರೆಗೆ ಬಂದೇ ಬರುತ್ತೇವೆ" ಎಂದು ಸಂತಸ ವ್ಯಕ್ತಪಡಿಸಿದರು.‌

ಜಾತ್ರೆಯಲ್ಲಿ ಕಿಡಿಗೇಡಿ ಯುವಕನ ಅಟ್ಟಹಾಸ-ಸಿಕ್ಕಸಿಕ್ಕವರ ಮೇಲೆ ಹಲ್ಲೆ: ಎಸ್ಪಿ ಹೇಳಿದ್ದೇನು? ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಕಿಡಿಗೇಡಿ ಯುವಕ ಅಟ್ಟಹಾಸ ಮೆರೆದಿದ್ದಾನೆ. ಯುವಕನೋರ್ವ ಸಿಕ್ಕಸಿಕ್ಕವರ ಮೇಲೆ ಹಲ್ಲೆ ಮಾಡಿದ್ದಾನೆ. ದುಗ್ಗಮ್ಮ ದೇವಿಗೆ ಬಲಿ ಕೊಟ್ಟ ಪ್ರಾಣಿಗಳ ಕಾಲುಗಳಿಂದ ಜನರ ಮೇಲೆ ಹಲ್ಲೆ ಮಾಡಿದ್ದಾನೆ.

ಯುವಕನ ಹಲ್ಲೆಯಿಂದ ತಪ್ಪಿಸಿಕೊಂಡು ಜನ ಕಾಲ್ಕಿತ್ತಿದ್ದಾರೆ. ಇನ್ನೊಂದು ಕಡೆ ತ್ರಿಶೂಲ್ ಟಾಕೀಸ್ ಬಳಿ ಕೆಲ ಕಿಡಿಹೇಡಿಗಳು ಪೆಟ್ಟಿಗೆ ಅಂಗಡಿಗಳಿಗೆ ಹಾನಿ ಮಾಡಿರುವ ಘಟನೆ ನಡೆದಿದೆ. ಹಬ್ಬದ ವೇಳೆ ಈ ರೀತಿ ಘಟನೆ ನಡೆದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಎಸ್ಪಿ ಶೇಖರ್ ಹೆಚ್. ತೆಕ್ಕಣ್ಣನವರ್ ಪ್ರತಿಕ್ರಿಯಿಸಿ "ವಿಷಯ ನಮ್ಮ ಗಮನಕ್ಕೆ ಬಂದಿದೆ. ಅ ಭಾಗದಲ್ಲಿ ರಾತ್ರಿ ರೌಂಡ್ಸ್ ಹಾಕಿದ್ದೇವೆ. ಹಬ್ಬ ಇರುವ ಕಾರಣ ಯುವಕರು ಈ ರೀತಿ ಮಾಡಿದ್ದಾರೆ. ಗಸ್ತಿನಲ್ಲಿದ್ದ ಸಿಬ್ಬಂದಿ ನನ್ನ ಗಮನಕ್ಕೆ ತಂದಿದ್ದಾರೆ. ಕಾನೂನು ರೀತಿ ಕ್ರಮಕೈಗೊಳ್ಳುತ್ತೇವೆ" ಎಂದು ಹೇಳಿದ್ರು.

ಬಿಗ್ ಬಾಸ್ 12ರ ಸ್ಪರ್ಧಿ ಕರಿಬಸಪ್ಪ ಡ್ಯಾನ್ಸ್​: ದುಗ್ಗಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಕರಿಬಸಪ್ಪ ಅವರು ಕುಟುಂಬಸ್ಥರ ಜೊತೆ ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು.‌ ಬಿಗ್ ಬಾಸ್ 12ರ ಸ್ಪರ್ಧಿ ದಾವಣಗೆರೆಯ ಬಾಡಿ ಬಿಲ್ಡರ್ ಕರಿಬಸಪ್ಪ ಅವರು ಗಾಂಧಿ ನಗರದಿಂದ ದುಗ್ಗಮ್ಮನ ದೇವಸ್ಥಾನದವರೆಗೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಜಾತ್ರೆಯಲ್ಲಿ ಕಿಡಿಗೇಡಿ ಯುವಕನ ಅಟ್ಟಹಾಸ (ETV Bharat)

ಮಾಜಿ ಶಾಸಕನಿಂದ ಉರುಳುಸೇವೆ: ದುಗ್ಗಮ್ಮ ದೇವಿ ಜಾತ್ರೆಯಲ್ಲಿ ಜಗಳೂರಿನ ಮಾಜಿ ಶಾಸಕ ಎಸ್ ವಿ.ರಾಮಚಂದ್ರಪ್ಪ ಹಾಗೂ ಪುತ್ರ ಉರುಳು ಸೇವೆ ಮಾಡಿ ದೇವಿಯ ದರ್ಶನ ಪಡೆದು ಪುನೀತರಾದರು.‌ ಶಾಸಕ ಪ್ರತಿಬಾರಿಯೂ ಉರುಳು ಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ‌ಪುತ್ರ ಅಜಯೇಂದ್ರ ಸಿಂಹ ತಂದೆಯ ಉರುಳು ಸೇವೆಗೆ ಸಾಥ್ ನೀಡಿದರು.‌

ಇದನ್ನೂ ಓದಿ: ಶಿವಮೊಗ್ಗ: ಮಾರಿಕಾಂಬಾ ಜಾತ್ರೆಗೆ ಅದ್ಧೂರಿ ಚಾಲನೆ; ದೇವಿಯ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ- ವಿಡಿಯೋ