ETV Bharat / state

ಗುಟ್ಕಾ ನಿಷೇಧ, ಭದ್ರಾ ಮೇಲ್ದಂಡೆಗೆ ನೀರು ಬಿಡುಗಡೆ ಆದೇಶ ವಿರೋಧಿಸಿ ದಾವಣಗೆರೆ ಬಂದ್

ಗುಟ್ಕಾ ನಿಷೇದ ಹಾಗೂ ಭದ್ರಾ ಮೇಲ್ದಂಡೆಗೆ ನೀರು ಬಿಡುಗಡೆ ಆದೇಶ ವಿರೋಧಿಸಿ ದಾವಣಗೆರೆ ಬಂದ್​ಗೆ ಕರೆ ನೀಡಲಾಗಿದೆ.

Davanagere bandh to protest against gutka ban, water release order to upper Bhadra banks
ದಾವಣಗೆರೆ ನಗರದಲ್ಲಿ ನಡೆದ ಪ್ರತಿಭಟನೆ (ETV Bharata)
author img

By ETV Bharat Karnataka Team

Published : September 1, 2026 at 11:28 AM IST

2 Min Read
Choose ETV Bharat

ದಾವಣಗೆರೆ: ತಂಬಾಕು ಮತ್ತು ನಿಕೋಟಿನ್‌ ಅಂಶ ಹೊಂದಿರುವ ಗುಟ್ಕಾ ನಿಷೇಧ ಹಾಗೂ ಭದ್ರಾ ಮೇಲ್ದಂಡೆಗೆ ನೀರು ಬಿಡುಗಡೆ ಮಾಡಲು ಹೊರಡಿಸಿರುವ ಆದೇಶ ವಿರೋಧಿಸಿ ಅಡಿಕೆ ಬೆಳೆಗಾರರ ಒಕ್ಕೂಟವು ಇಂದು ದಾವಣಗೆರೆ ಬಂದ್​ಗೆ ಕರೆ ನೀಡಿದೆ.

ಈಗಾಗಲೇ ಬಂದ್ ಆರಂಭವಾಗಿದ್ದು, ರೈತರು, ಅಡಿಕೆ ಬೆಳೆಗಾರರು ನಗರದ ಅರುಣ್​ ಸರ್ಕಲ್, ವಿದ್ಯಾರ್ಥಿ ಭವನ್, ರೇಣುಕಾ‌ ಮಂದಿರ ಸೇರಿದಂತೆ ಹಲವು ಕಡೆಗಳಲ್ಲಿ ಟೈರ್​ಗೆ ಬೆಂಕಿ ಹಚ್ಚುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಗುಟ್ಕಾ ನಿಷೇಧ, ಭದ್ರಾ ಮೇಲ್ದಂಡೆಗೆ ನೀರು ಬಿಡುಗಡೆ ಆದೇಶ ವಿರೋಧಿಸಿ ದಾವಣಗೆರೆ ಬಂದ್ (ETV Bharat)

ಮಂಗಳವಾರ ಬೆಳಗ್ಗೆ ರಸ್ತೆಗಿಳಿದ ನೂರಾರು ರೈತರು, ಪ್ರತಿಭಟನೆ ನಡೆಸಿ ಗುಟ್ಕಾ ನಿಷೇಧ ಹಾಗೂ ಭದ್ರಾ ಮೇಲ್ದಂಡೆಗೆ ಮೂರು ಟಿಎಂಸಿ ನೀರು ಬಿಡುವ ಆದೇಶಗಳನ್ನು ಹಿಂಪಡೆಯುವಂತೆ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.‌

ದಾವಣಗೆರೆ ಬಂದ್​ಗೆ ಕರೆ ಕೊಟ್ಟ ಅಡಿಕೆ ಬೆಳೆಗಾರರ ಒಕ್ಕೂಟದ ಜೊತೆ ಬಿಜೆಪಿ ರೈತ ಮೋರ್ಚಾ ಬೆನ್ನೆಲುಬಾಗಿ ನಿಂತಿದೆ. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ದಾವಣಗೆರೆ ಬಂದ್ ನಡೆಯುತ್ತಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರೆಯಬೇಕಿದ್ದ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಜಯದೇವ ಸರ್ಕಲ್‌ನಲ್ಲಿ ಆಕ್ರೋಶ: ದಾವಣಗೆರೆಯ ಜಯದೇವ ಸರ್ಕಲ್‌ನಲ್ಲಿ ಜಮಾಯಿಸಿದ ಅಡಿಕೆ ಬೆಳೆಗಾರರು, ಟೈರ್​ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.‌‌

ಬೆಂಕಿ ಹಚ್ಚಿದ ಟೈರ್ ಅನ್ನು ಕಿತ್ತುಕೊಳ್ಳಲು ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಿದ್ದಾಜಿದ್ದಿಗೆ ಕಾರಣವಾಯಿತು. ಕೊನೆಗೆ ಪೊಲೀಸರು ಬೆಂಕಿ ನಂದಿಸಿದರು. ಪ್ರತಿಭಟನಾನಿರತ ರೈತರು ಸಾರಿಗೆ ಬಸ್​ಗಳನ್ನು ತಡೆದು ಬಂದ್​ಗೆ ಸಹಕಾರ ನೀಡುವಂತೆ ಒತ್ತಾಯಿಸಿದರು. ಅಂಗಡಿಗಳಿಗೆ ತೆರಳಿ ಬಾಗಿಲು ತೆರೆಯದಂತೆ ಮನವಿ ಮಾಡಲಾಯಿತು. ವಾಣಿ ರೈಸ್​ ಮಿಲ್ ಬಳಿ ಬಸ್​ಗಳು ರಸ್ತೆಗಿಳಿಯದಂತೆ ಪ್ರತಿಭಟನಕಾರರು ಚಾಲಕರಿಗೆ ಎಚ್ಚರಿಕೆ ನೀಡುತ್ತಿದ್ದುದನ್ನು ನೋಡಿದ ಪೊಲೀಸರು, ಮಧ್ಯಪ್ರವೇಶಿಸಿ ಬಲವಂತವಾಗಿ ಬಂದ್ ಮಾಡದಂತೆ ಮನವಿ ಮಾಡಿದರು. ಈ ವೇಳೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಚನ್ನಗಿರಿ-ದಾವಣಗೆರೆ ಮಧ್ಯೆ ಸಂಚರಿಸುವ ಸಾರಿಗೆ ಬಸ್ ಅನ್ನು ಕೆಲಕಾಲ ತಡೆದು ನಿಲ್ಲಿಸಿದ್ದಕ್ಕೆ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಬಸ್ ಪುನಃ ರಸ್ತೆಗಿಳಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದು, ಪೊಲೀಸರು ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಇದನ್ನೂ ಓದಿ: ಗುಟ್ಕಾ, ಪಾನ್ ಮಸಾಲಾ ನಿಷೇಧ: ಅಡಿಕೆ ಧಾರಣೆಯಲ್ಲಿ ಕುಸಿತ, ಖರೀದಿಗೆ ಬಾರದ ವ್ಯಾಪಾರಿಗಳು, ಬೆಳೆಗಾರರಲ್ಲಿ ಹೆಚ್ಚಾದ ಆತಂಕ