ಮರ ಕಡಿದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ: ಕೊಲೆಯಲ್ಲಿ ಅಂತ್ಯ
ಜಗಳದ ವೇಳೆ ಕಲ್ಲು ತೂರಾಟದಲ್ಲಿ ಲಂಕೇಶ್ ಎಂಬುವರ ಎದೆಗೆ ಕಲ್ಲು ಬಲವಾಗಿ ತಾಗಿದ್ದರಿಂದ ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ.

Published : June 4, 2026 at 10:35 AM IST
ದಾವಣಗೆರೆ: ಮರ ಕಡಿಯುವ ವಿಚಾರಕ್ಕೆ ಸಂಬಂಧಿಕರ ನಡುವೆ ಜಗಳ ಆಗಿ ಅದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ದೀಟೂರು ಗ್ರಾಮದಲ್ಲಿ ನಡೆದಿದೆ. ದೀಟೂರು ಗ್ರಾಮದ ಲಂಕೇಶ್ ಕೆ. ಬಿ. (40) ಕೊಲೆಯಾದ ವ್ಯಕ್ತಿ.
ಮೃತ ಲಂಕೇಶ್ ಹಾಗು ಮಾವ ಹನುಮಂತಪ್ಪ ಇಬ್ಬರ ನಡುವೆ ಹಳೇ ದ್ವೇಷವಿತ್ತು. ಲಂಕೇಶ್ ಮನೆ ಮುಂದೆ ಬೆಳೆದಿದ್ದ ಜಾಲಿ ಮರವನ್ನು ಮಾವ ಹನುಮಂತಪ್ಪ ಕಡೆದಿದ್ದನು. ಇದರಿಂದ ಲಂಕೇಶ್ ಹಾಗೂ ಹನುಮಂತಪ್ಪ ಕುಟುಂಬಗಳ ನಡುವೆ ಜಗಳ ಆಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರು. ಕಲ್ಲು ತೂರಾಟದಲ್ಲಿ ಲಂಕೇಶ್ ಅವರ ಎದೆಗೆ ಕಲ್ಲು ಬಲವಾಗಿ ತಾಗಿತ್ತು. ಇದರಿಂದ ಲಂಕೇಶ್ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯುವ ದಾರಿಮಧ್ಯೆ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಈ ಸಂಬಂಧ ಹನುಮಂತಪ್ಪ, ಆತನ ಮಗ ಪ್ರಕಾಶ್ ಸೇರಿದಂತೆ ನಾಲ್ಕು ಜನರ ಮೇಲೆ ಲಂಕೇಶ್ ಕುಟುಂಬಸ್ಥರು ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಹನುಮಂತಪ್ಪ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ದೀಟೂರು ಗ್ರಾಮಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿ ಪರಿಶೀಲನೆ ನಡೆಸಿದರು.
ಹರಿಹರ ಗ್ರಾಮಾಂತರ ಠಾಣೆಯ ಸಿಪಿಐ ಸುರೇಶ್ ಸಗರಿ ಅವರು ಮಾತನಾಡಿ, "ಕಳೆದ ದಿನ ಮರ ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ದೀಟೂರು ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ಆಗಿದೆ ಈ ಜಗಳದಲ್ಲಿ ದೀಟೂರು ಗ್ರಾಮದ ಲಂಕೇಶ್ ಕೆಬಿ (40) ಕೊಲೆಯಾಗಿದೆ. ಇದರ ಸಂಬಂಧ ನಾಲ್ವರನ್ನು ಬಂಧಿಸಿದ್ದೇವೆ. ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ" ಎಂದು ಮಾಹಿತಿ ತಿಳಿಸಿದರು.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳ; ನಿದ್ದೆಯಲ್ಲಿದ್ದವನ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ

