ಗದಗ: ಕಳಚಿಬಿದ್ದ ಡ್ಯಾನ್ಸಿಂಗ್ ಫ್ಲೈ ಜೋಕಾಲಿ ತೊಟ್ಟಿಲು; 8 ಜನರಿಗೆ ಗಾಯ, ಇಬ್ಬರು ಗಂಭೀರ
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಶಹರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published : May 4, 2026 at 7:10 AM IST
ಗದಗ: ಗದುಗಿನ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಭಾನುವಾರ ಜಾತ್ರೆಯ ಅತಿ ದೊಡ್ಡ ಆಕರ್ಷಣೆಯಾಗಿದ್ದ ಡ್ಯಾನ್ಸಿಂಗ್ ಫ್ಲೋರ್ ಮನರಂಜನಾ ಯಂತ್ರವು ಚಾಲನೆಯಲ್ಲಿರುವಾಗಲೇ ತಾಂತ್ರಿಕ ದೋಷದಿಂದ ಮುರಿದು ಬಿದ್ದಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ತಕ್ಷಣವೇ ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ರಾತ್ರಿ ಸುಮಾರು 8.30ರ ಸುಮಾರಿಗೆ ಈ ಘಟನೆ ನಡೆದಿದೆ. ಯಂತ್ರವು ವೇಗವಾಗಿ ತಿರುಗುತ್ತಿದ್ದಾಗ ಅದರ ಕಬ್ಬಿಣದ ಸಲಾಕೆಗಳು ಹಾಗೂ ಪಾರ್ಶ್ವದ ಭಾಗಗಳು ಇದ್ದಕ್ಕಿದ್ದಂತೆ ಮುರಿದಿವೆ. ಪರಿಣಾಮವಾಗಿ ಯಂತ್ರದಲ್ಲಿದ್ದವರು ಒಬ್ಬರ ಮೇಲೊಬ್ಬರು ಬಿದ್ದಿದ್ದು, ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಗಾಯಾಳುಗಳಲ್ಲಿ 6 ವರ್ಷದ ಮಗು ಸೇರಿ ಮಹಿಳೆಯರು ಮತ್ತು ವಯಸ್ಕರು ಇದ್ದಾರೆ.
"ನಮ್ಮವರ ಕಣ್ಣೆದುರೇ ತೊಟ್ಟಿಲು ಕಳಚಿ ಬಿತ್ತು. ಜನರು ಕಿರುಚುತ್ತಾ ನೆಲಕ್ಕೆ ಬಿದ್ದ ದೃಶ್ಯ ಮರೆಯಲಾಗದು. ಮಕ್ಕಳು, ಮಹಿಳೆಯರು ಕಿರುಚುತ್ತಾ ನೆಲಕ್ಕೆ ಬಿದ್ದ ದೃಶ್ಯ ತುಂಬಾ ಭಯಾನಕವಾಗಿತ್ತು. ಕೆಲವರು ರಕ್ತದ ಗಾಯಗಳೊಂದಿಗೆ ನರಳುತ್ತಿದ್ದರು. ಅವರನ್ನು ಎತ್ತಿಕೊಂಡು ಆಸ್ಪತ್ರೆಗೆ ತರಬೇಕಾಯಿತು" ಎಂದು ಪ್ರತ್ಯಕ್ಷದರ್ಶಿಗಳು ಕಣ್ಣೀರು ಹಾಕಿದರು. ಅಲ್ಲದೇ ಈ ಘಟನೆಗೆ ತೋಂಟದಾರ್ಯ ಮಠದ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
ಜಾತ್ರೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಷ್ಟೇ ಅಲ್ಲದೆ ರಾತ್ರಿಯೇ ಮಠದ ಆವರಣದಲ್ಲಿ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೋಂಟದಾರ್ಯ ಮಠದ ಧನದಾಹಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು. ತಿಂಗಳುಗಳ ಕಾಲ ಜಾತ್ರೆ ನಡೆಸುವ ಅಗತ್ಯ ಹಾಗೂ ಸರಕಾರಿ ಜಾಗದ ದುರ್ಬಳಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂ ಸಂಘಟನೆಯ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಯಾವುದೇ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳದೆ ಇಂತಹ ಆಟೋಟಗಳಿಗೆ ಪರವಾನಗಿ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗದಗ ನಗರ ಪೊಲೀಸ್ ಠಾಣೆಯಲ್ಲಿ ಜಾತ್ರಾ ಸಮಿತಿ, ಮ್ಯಾನೇಜರ್ ಹಾಗೂ ಡ್ಯಾನ್ಸಿಂಗ್ ಫ್ಲೋ ಮಾಲೀಕರು ಸೇರಿದಂತೆ 7 ಜನರ ವಿರುದ್ದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದೆಹಲಿ: ನಾಲ್ಕಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ; 9 ಮಂದಿ ಸಾವು, ಹಲವರಿಗೆ ಗಾಯ
ಕಾಂಪೌಂಡ್ ಗೋಡೆ ಕುಸಿದು 7 ಸಾವು: ಇತ್ತೀಚೆಗೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಬೌರಿಂಗ್ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು 7 ಜನ ಮೃತಪಟ್ಟ ದಾರುಣ ಘಟನೆ ನಡೆದಿತ್ತು.
ತುರ್ತು ಚಿಕಿತ್ಸಾ ವಿಭಾಗದ ಪಕ್ಕದಲ್ಲಿದ್ದ ಗೋಡೆ ಕುಸಿದ ಪರಿಣಾಮ ಪಕ್ಕದ ರಸ್ತೆಯಲ್ಲಿದ್ದ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದವರು ಹಾಗೂ ಪಾದಚಾರಿಗಳಲ್ಲಿ ಬಾಲಕಿ ಸಹಿತ 7 ಜನ ಮೃತಪಟ್ಟಿದ್ದರು ಕಾಂಪೌಂಡ್ ಗೋಡೆ ಕುಸಿದಿದ್ದರಿಂದ 10ಕ್ಕೂ ಅಧಿಕ ಮಂದಿ ಸಿಲುಕಿದ್ದು, ತಕ್ಷಣ ಅಲ್ಲಿದ್ದ ಸಾರ್ವಜನಿಕರು ಕಾರ್ಯಾಚರಣೆ ನಡೆಸಿ ಕೆಲವರನ್ನು ರಕ್ಷಿಸಿದ್ದರು.
ಆಸ್ಪತ್ರೆ ಕಾಂಪೌಂಡ್ ಗೋಡೆಯನ್ನು ಹೊಸತಾಗಿ ನಿರ್ಮಾಣ ಮಾಡಲಾಗುತ್ತಿತ್ತು. ಹಳೆಯ ಗೋಡೆಗೆ ಹೊಂದಿಕೊಂಡಂತೆ ದೊಡ್ಡ ಟಾರ್ಪಲ್ ಹಾಕಿ ಕೆಲವರು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದರು. ಸಂಜೆ ವೇಳೆ ಆರಂಭವಾದ ಮಳೆಗೆ ನೆನೆದ ಹಳೆಯ ಗೋಡೆ ಏಕಾಏಕಿ ಕುಸಿದಿದೆ ಎಂದು ಕೆಲ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರು.
ಘಟನೆ ಬೆನ್ನಲ್ಲೇ, ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಂದ ಮಾಹಿತಿ ಪಡೆದಿರುವ ಅವರು ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

