ETV Bharat / state

ದಲಿತ, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ: ಗೋವಿಂದ ಕಾರಜೋಳ

ಸಂಸದ ಗೋವಿಂದ ಕಾರಜೋಳ ಅವರು ಮರ್ಯಾದೆ ಗೇಡು ಹತ್ಯೆಯ ಕುರಿತು ಮಾತನಾಡಿದ್ದಾರೆ.

Govind karjol
ಸಂಸದ ಗೋವಿಂದ ಕಾರಜೋಳ, ಛಲವಾದಿ ನಾರಾಯಣ ಸ್ವಾಮಿ (ETV Bharat)
author img

By ETV Bharat Karnataka Team

Published : January 3, 2026 at 7:18 PM IST

2 Min Read
Choose ETV Bharat

ಹುಬ್ಬಳ್ಳಿ : ಉತ್ತರ ಕರ್ನಾಟಕದ ಸಾರ್ವಜನಿಕ ಸಾಕ್ಷಿ ಪ್ರಜ್ಞೆ ಸತ್ತುಹೋಗಿದೆ. ಬಸವತತ್ವ ಕೇವಲ ಭಾಷಣಕ್ಕೆ ಸೀಮಿತ ಆಯ್ತು ಅನ್ನೋ ಅಳಕು ಕಾಡ್ತಾ ಇದೆ ಎಂದು ಸಂಸದ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.

ಮರ್ಯಾದೆ ಗೇಡು ಹತ್ಯೆ ಹಿನ್ನೆಲೆಯಲ್ಲಿ ಇನಾಂ ವೀರಾಪುರಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 'ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಯ್ತು. ದಲಿತ, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ. ಅವರಿಗೆ ಊರಲ್ಲಿ ಇರಬಾರದು ಅಂತ ಕಂಡೀಷನ್ ಹಾಕಿದ್ರಂತೆ. ಜಿಲ್ಲಾಡಳಿತದ ದಿವ್ಯ ನಿರ್ಲಕ್ಷವೇ ಇದಕ್ಕೆ ಕಾರಣ. ದಲಿತರ ಅನುದಾನವನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿದೆ. ಬೆಂಗಳೂರಲ್ಲಿ ನಾವು ಗಲಾಟೆ ಮಾಡಿದ ಮೇಲೆ ಗೃಹ ಮಂತ್ರಿ, ಸಮಾಜ ಕಲ್ಯಾಣ ಇಲಾಖೆ ಮಂತ್ರಿ ಹುಬ್ಬಳ್ಳಿಗೆ ಬರ್ತಾರೆ. ಈ ವರ್ಗಕ್ಕೆ ಸೇರಿದವರಿರೋದ್ರಿಂದ 24 ಗಂಟೆ ಒಳಗೆ ಬಂದು ಕ್ರಮ ಕೈಗೊಳ್ಳಬೇಕಿತ್ತು. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ' ಎಂದರು.

ಮರ್ಯಾದೆ ಗೇಡು ಹತ್ಯೆಯ ಕುರಿತು ಸಂಸದ ಗೋವಿಂದ ಕಾರಜೋಳ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ (ETV Bharat)

ಇದು ಮನುಕುಲ ತಲೆ ತಗ್ಗಿಸುವ ಘಟನೆ. ಉತ್ತರ ಕರ್ನಾಟಕದ‌ ಸಾವಿರಾರು ವರ್ಷಗಳ ಹೋರಾಟಕ್ಕೆ ಸೋಲಾಗಿದೆ. ಬಸವಣ್ಣನ ನಾಡಿನಲ್ಲಿ ಇಂತಹ ಘಟನೆ ನಡೆದಿದೆ. ನಾವು ತಲೆ ಎತ್ತಿ ತಿರುಗಲು ಆಗದಂತೆ ಮಾಡಿದೆ. ರಾಜ್ಯ ಸರ್ಕಾರ‌ದ ವೈಫಲ್ಯದಿಂದ ಮಾನ್ಯ ಪಾಟೀಲ್ ಹತ್ಯೆ ಆಗಿದೆ. ಗ್ರಾಮದಲ್ಲಿ ಆ ಕುಟುಂಬಕ್ಕೆ ಜೀವ ಭಯ ಇದ್ದರೂ ಆ ಕುಟುಂಬಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿಲ್ಲ. ಸೋ ಕಾಲ್ಡ್ ಪ್ರಗತಿಪರರು, ತಮ್ಮನ್ನೇ ತಾವು ಅಹಿಂದ ನಾಯಕರು ಎಂದು ಕರೆದುಕೊಳ್ಳುವರು ಈ ಹತ್ಯೆಯನ್ನು ಖಂಡನೆ ಮಾಡಿಲ್ಲ. ರಾಜ್ಯ ಸರ್ಕಾರ ದಲಿತ ವಿರೋಧಿ ಸರ್ಕಾರ. ವಿವೇಕಾನಂದ ಕುಟುಂಬಕ್ಕೆ ಗಂಡಾಂತರ ಇದೆ. ಹೀಗಾಗಿ ಈ ಕೂಡಲೇ ಆ ಕುಟುಂಬವನ್ನು ಹುಬ್ಬಳ್ಳಿಗೆ ಸ್ಥಳಾಂತರ ಮಾಡಬೇಕು. ಮಾನ್ಯ ಪತಿ ವಿವೇಕಾನಂದನಿಗೆ ಸರ್ಕಾರಿ ನೌಕರಿ ನೀಡಬೇಕು' ಎಂದು ಆಗ್ರಹಿಸಿದರು.

ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, 'ಜಾತಿ ಪದ್ಧತಿ ಅಳಸಿ ಹೋಗುತ್ತಿದೆ ಎಂದು ನಾವು ಭಾವಿಸಿದ್ದೆವು. ಆದ್ರೆ ಧಾರವಾಡ ಜಿಲ್ಲೆಯಲ್ಲಿ ನಡೆದ ಘಟನೆ ಮಾನವ ಕುಲಕ್ಕೆ ಅಪಚಾರ. ಮಾನ್ಯ ತಂದೆ ರಾಕ್ಷಸ ಕೃತ್ಯ ಮಾಡಿದ್ದಾರೆ.
ಸ್ವಂತ ನಿಮ್ಮ ಮಗಳನ್ನು, ಗರ್ಭಿಣಿಯನ್ನು ಹೇಗೆ ಹತ್ಯೆ ಮಾಡಿದಿರಿ.? ನಿಮ್ಮ ಮಗಳನ್ನು ನೀವು ಹುಟ್ಟಿಸಬಾರದಿತ್ತು. ನಿಮ್ಮ ಮನಸ್ಥಿತಿ ಅಷ್ಟು ಕೆಟ್ಟದಾಗಿದ್ರೆ ನೀವೇ ದೇಹ ತ್ಯಾಗ ಮಾಡಬೇಕಿತ್ತು' ಎಂದರು.

'ಈ ಕೃತ್ಯಕ್ಕೆ ಕಠಿಣ ಶಿಕ್ಷೆ ಆಗಬೇಕು. ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಇದೆ. ಕಾನೂನು ತಂದು ಮನೆಯಲ್ಲಿ ಕುಳಿತರೆ ಆಗಲ್ಲ. ಈ ಪ್ರಕರಣದಲ್ಲಿ ಸರ್ಕಾರ ಕಠಿಣವಾಗಿ ನಡೆದುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎನ್ನುವುದಕ್ಕೆ ಇಂತಹ ಪ್ರಕರಣಗಳು ನಿಮ್ಮ ಮುಖಕ್ಕೆ ಹಿಡಿದ ಕೈಗನ್ನಡಿ. ನಿಮ್ಮ ಅಧಿಕಾರಕ್ಕೆ ರಾಜ್ಯದ ಜನತೆ ಸಂಪೂರ್ಣ ರೋಸಿ ಹೋಗಿದ್ದಾರೆ. ದಯವಿಟ್ಟು ನೀವು ಅಧಿಕಾರ ತ್ಯಾಗ ಮಾಡಿ. ಕಾನೂನು ಬಾಹಿರ ಚಟುವಟಿಕೆಗಳನ್ನೇ ಕಾಂಗ್ರೆಸ್ ನಾಯಕರು ಅಭಿವೃದ್ಧಿ ಅಂದುಕೊಂಡಿದ್ದಾರೆ. ಮಹಾರಾಷ್ಟ್ರದಿಂದ ಪೊಲೀಸರು ಬಂದು ಡ್ರಗ್ ಫ್ಯಾಕ್ಟರಿ ರೈಡ್ ಮಾಡಿದ್ದಾರೆ' ಎಂದು ಹೇಳಿದ್ದಾರೆ.

'ಜಿ. ಪರಮೇಶ್ವರ್ ಅವರ ಸೌಮ್ಯ ಸ್ವಭಾವಕ್ಕೆ ಗೃಹ ಖಾತೆ ಸರಿಯಲ್ಲ. ಹೀಗಾಗಿ ಗೃಹ ಖಾತೆಯನ್ನು ವಾಪಸ್​ ಪಡೆದುಕೊಳ್ಳಬೇಕು. ಇಲ್ಲವೇ ಪರಮೇಶ್ವರ್ ಅವರೇ ರಾಜೀನಾಮೆ ನೀಡಬೇಕು. ಆ ಖಾತೆಯಲ್ಲಿ ಇರಲು ಅವರಿಗೆ ಯೋಗ್ಯತೆ ಇಲ್ಲ. ಕಾಂಗ್ರೆಸ್ ನಾಯಕರಿಗೆ ತಲೆ‌ ಇಲ್ಲ, ಹೃದಯ ಅಂತೂ ಮೊದಲೇ ಇಲ್ಲ. ಮಾನ್ಯ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಲೋಪದೋಷಗಳಿವೆ. ಈ ಕೂಡಲೇ ವಿವೇಕಾನಂದ ಮತ್ತು ಉಳಿದ ಐದು ದಲಿತ ಕುಟುಂಬಗಳನ್ನು ಸ್ಥಳಾಂತರ ಮಾಡಬೇಕು' ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಹುಬ್ಬಳ್ಳಿ ಮಾನ್ಯ ಹತ್ಯೆ ಪ್ರಕರಣ: ಕರ್ತವ್ಯಲೋಪ ಆರೋಪದಲ್ಲಿ ಬೆಳಗಲಿ ಗ್ರಾಪಂ ಪಿಡಿಒ ಅಮಾನತು