ಸುಳ್ಯ ತಾಲೂಕಿನಲ್ಲಿ ಕಾಡಾನೆಗಳ ಉಪಟಳ; ಸಂಜೆಯಾಗುತ್ತಲೇ ಅಜ್ಜಾವರ ಭಾಗದ ಗ್ರಾಮಸ್ಥರಿಗೆ ಗಜ ದಿಗ್ಬಂಧನ
ಸುಳ್ಯದ ಅಜ್ಜಾವರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 3 ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಜನರಲ್ಲಿ ಹೆಚ್ಚಿನ ಆತಂಕ ನಿರ್ಮಾಣವಾಗಿದೆ.


Published : January 5, 2026 at 5:07 PM IST
ವರದಿ: ಪ್ರಕಾಶ್.ಜಿ, ಕೋಡಿಂಬಾಳ
ಸುಳ್ಯ (ದಕ್ಷಿಣ ಕನ್ನಡ): ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇದಿನಡ್ಕ, ಪಡ್ಡಂಬೈಲು, ಕರ್ಲಪ್ಪಾಡಿ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗುವಂತೆ ಆಗಿದೆ. ಒಂದು ಕಡೆ ಕಾಡಾನೆಗಳಿಂದ ಬೆಳೆ ನಾಶದ ಭೀತಿ, ಜೊತೆಗೆ ಜನರಿಗೆ ಪ್ರಾಣಾಪಾಯದ ಭೀತಿಯಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಳ್ಯದ ಅಜ್ಜಾವರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಕಾಟ ಹೆಚ್ಚಿದೆ. ಕಾಡಾನೆ ಮರಿ ಸೇರಿದಂತೆ ಮೂರು ಆನೆಗಳ ಹಿಂಡು ಜನವಸತಿ ಪ್ರದೇಶದ ಸಮೀಪ ಬೀಡು ಬಿಟ್ಟಿದ್ದು, ಹೆಚ್ಚಿನ ಆತಂಕ ನಿರ್ಮಾಣವಾಗಿದೆ.
ಈ ಆನೆಗಳು ಹಗಲು ರಾತ್ರಿ ಎನ್ನದೇ ನಿರ್ಭೀತವಾಗಿ ಗ್ರಾಮದಂಚಿನಲ್ಲಿ ಸಂಚರಿಸುತ್ತಿದ್ದು, ಇದರಿಂದ ರಸ್ತೆಯಲ್ಲಿ ಸಂಚಾರ ಸಮಸ್ಯೆ ಜೊತೆಗೆ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷಿ ಬೆಳೆಗೆ ಹಾನಿ: ಈ ಆನೆಗಳ ಉಪಟಳದಿಂದ ಮೇದಿನಡ್ಕ ಭಾಗದಲ್ಲಿ ಬಾಳೆ, ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳಿಗೆ ಭಾರಿ ಹಾನಿ ಉಂಟಾಗಿದ್ದು, ಪಡ್ಡಂಬೈಲು ಹಾಗೂ ಕರ್ಲಪ್ಪಾಡಿ ಭಾಗದಲ್ಲೂ ವ್ಯಾಪಕ ಕೃಷಿ ನಾಶ ಸಂಭವಿಸಿದೆ. ಅಜ್ಜಾವರ ಗ್ರಾಮ ಪಂಚಾಯತ್ ಸಮೀಪದ ತೋಟಗಳಿಗೂ ಆನೆಗಳು ದಾಳಿ ನಡೆಸಿವೆ. ತೋಟಗಳಿಗೆ ನೀರು ಹಾಯಿಸಲು ಸಹ ಜನರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಕೆಲಸ ಮುಗಿಸಿ ಮನೆಗೆ ಮರಳುವವರ ಪಾಡದಂತೂ ಹೇಳತೀರದಾಗಿದೆ. ಕೃಷಿ ಬೆಳೆ ಉಳಿಸುವ ಜೊತೆಗೆ ಪ್ರಾಣವನ್ನು ಉಳಿಸಿಕೊಳ್ಳುವ ಸಂದಿಗ್ದತೆ ಎದುರಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಜಾನುವಾರುಗಳ ಮೇಲೆ ದಾಳಿ: ಈ ಆನೆಗಳು ಜಾನುವಾರುಗಳ ಮೇಲೆ ಕೂಡ ದಾಳಿ ಮಾಡುತ್ತಿದ್ದು, ಭಸ್ಮಡ್ಕ ಗಾಡಿ ಕಡವು ಹೊಳೆ ಕೆರೆಯ ಬಳಿ ಆನೆ ದಾಳಿಗೆ ಒಂದು ಹೋರಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಈ ಘಟನೆ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ತಕ್ಷಣ ಅನೆ ಸೆರೆ ಹಿಡಿಯುವಂತೆ ಹಳ್ಳಿಗರ ಆಗ್ರಹ; ಕಾಡಾನೆಗಳು ಇಲ್ಲಿಯೇ ಬಿಡುಬಿಟ್ಟಿದ್ದು, ಇದರಿಂದ ಜನರು ನಿರ್ಭೀತಿಯಿಂದ ಓಡಾಡುವುದು ಕಷ್ಟವಾಗಿದೆ. ಕಾಡಾನೆಗಳನ್ನು ಕೂಡಲೇ ಕಾಡಿಗೆ ಅಟ್ಟುವಂತೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ತಕ್ಷಣ ಕಾರ್ಯಾಚರಣೆ ಆರಂಭಿಸಬೇಕು ಎಂಬ ಬೇಡಿಕೆ ಜೋರಾಗಿದೆ.

ಜನಪ್ರತಿನಿಧಿಗಳ ಆತಂಕ: ಈ ಕುರಿತು ಈಟಿವಿ ಭಾರತದ ಜೊತೆಗೆ ಮಾತನಾಡಿದ ಅಜ್ಜಾವರ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪ್ರಸಾದ್ ರೈ ಮೇನಾಲ, ನಮ್ಮ ಭಾಗದಲ್ಲಿ ನಿರಂತರವಾಗಿ ಆನೆ ದಾಳಿಗಳು ನಡೆಯುತ್ತಿವೆ. ನಾನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯನಾಗಿರುವ ಕಾರಣ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಇದುವರೆಗೆ ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಇದೀಗ ಆನೆ ಹಾವಳಿಯು ಮಿತಿಮೀರಿದ್ದು, ಜಿಲ್ಲಾಡಳಿತವು ಕೋವಿ ಪರವಾನಗಿ ನವೀಕರಣಕ್ಕೆ ಹಲವು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದಿರುವುದರಿಂದ ಆತಂಕ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಬದುಕು ದುಸ್ತರವಾಗುವ ಲಕ್ಷಣಗಳು ಗೋಚರಿಸುತ್ತಿವೆ,” ಎಂದು ಬೇಸರ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಕಾಡಾನೆಗಳ ಹಾವಳಿ ಅಜ್ಜಾವರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಬದುಕನ್ನೇ ಅಸ್ತವ್ಯಸ್ತಗೊಳಿಸಿದ್ದು, ತಕ್ಷಣದ ಪರಿಣಾಮಕಾರಿ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ. ಮತ್ತೊಂದು ಕಡೆ ಕಡಬ ತಾಲೂಕಿನಲ್ಲೂ ಇದೇ ರೀತಿಯ ಕಾಡಾನೆಗಳ ದಾಂಧಲೆ ಸನ್ನಿವೇಶಗಳು ಮುಂದುವರೆದಿವೆ. ಈ ಹಿಂದೆ ಪ್ರಾಣಹಾನಿಯಂತಹ ಘಟನೆಗಳೂ ನಡೆದಿದ್ದವು.
ಇವುಗಳನ್ನೂ ಓದಿ:
ಆನೆ ಧಾಮಕ್ಕೆ ಕೇಂದ್ರದ ಸಮ್ಮತಿ ಸಿಗದಿದ್ದರೆ ಪರ್ಯಾಯ ಕ್ರಮ: ಸಚಿವ ಈಶ್ವರ ಖಂಡ್ರೆ
ಚಾಮರಾಜನಗರ: ಕಾಡಾನೆಗಳ ದಾಳಿಗೆ ಬಾಳೆ ಕಟಾವು ಮಾಡಲು ಬಂದ ಕೂಲಿ ಕಾರ್ಮಿಕ ಬಲಿ

