ದಕ್ಷಿಣ ಕನ್ನಡ: ಓಮನ್‌ನಲ್ಲಿ ಸೋಮೇಶ್ವರದ ಯುವಕ ಆತ್ಮಹತ್ಯೆ
ಓಮನ್‌ನಲ್ಲಿ ಸೋಮೇಶ್ವರದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮ ವೈಫಲ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.

Published : March 3, 2026 at 12:53 PM IST
ಉಳ್ಳಾಲ (ದಕ್ಷಿಣ ಕನ್ನಡ): ವಿದೇಶದಲ್ಲಿ ಉದ್ಯೋಗದಲ್ಲಿದ್ದ ಸೋಮೇಶ್ವರದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಮೇಶ್ವರ ನಿವಾಸಿಗಳಾದ ಚಂದ್ರ ಮತ್ತು ದೀಪಾ ದಂಪತಿಯ ಪುತ್ರ ಪುನೀತ್ ಪೂಜಾರಿ (32) ಮೃತ ಯುವಕ.
ಪುನೀತ್ ಪೂಜಾರಿ ಕಳೆದ ಒಂದೂವರೆ ವರ್ಷಗಳಿಂದ ಓಮನ್ ದೇಶದಲ್ಲಿ ಲಿಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದು ವಾಪಸ್ ಕೆಲಸಕ್ಕೆ ಹಿಂತಿರುಗಿದ್ದರು.
ಇಸ್ರೇಲ್ ಅಮೆರಿಕ ಮತ್ತು ಇರಾನ್ ಯುದ್ಧದಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ ಓಮನ್ ದೇಶದ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳಲು ಸಮಯ ಬೇಕಾಗುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ತಂದೆ - ತಾಯಿ, ಸಹೋದರ ಹಾಗೂ ಸಹೋದರಿಯನ್ನು ಯುವಕ ಪುನೀತ್ ಅಗಲಿದ್ದಾರೆ.
ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ? ಮಾಹಿತಿಯ ಪ್ರಕಾರ, ಪುನೀತ್ ಕಳೆದ ನಾಲ್ಕು ವರ್ಷಗಳಿಂದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಯುವತಿ ಫೋನ್ ಕರೆಗಳನ್ನು ಸ್ವೀಕರಿಸದೇ, ಸಂದೇಶಗಳಿಗೆ ಪ್ರತಿಕ್ರಿಯೆ ನೀಡದೇ ಇದ್ದ ಹಿನ್ನೆಲೆಯಲ್ಲಿ ಪುನೀತ್ ಮನನೊಂದಿದ್ದರು ಎನ್ನಲಾಗಿದೆ. ಈ ವಿಷಯವನ್ನು ತಮ್ಮ ಗೆಳೆಯರ ಬಳಿಯೂ ಪುನೀತ್ ಹಂಚಿಕೊಂಡಿದ್ದರು. ಪ್ರೀತಿ ದೂರವಾದ ನೋವಿನಲ್ಲಿ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ನಡೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಓಮನ್ ಮೇಲೆ ಇರಾನ್ ದಾಳಿ: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿ, ಇರಾನ್ ಸುಪ್ರೀಂ ನಾಯಕ ಖಮೇನಿ ಸೇರಿದಂತೆ ಪ್ರಮುಖ ನಾಯಕರನ್ನು ಹತ್ಯೆ ಮಾಡಿದೆ. ಇದಕ್ಕೆ ಪ್ರತೀಕಾರವಾಗಿ ಇರಾನ್ ಕೂಡ ಗಲ್ಫ್ ದೇಶಗಳಲ್ಲಿನ ಇಸ್ರೇಲ್ ಮತ್ತು ಅಮೆರಿಕನ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ನಡೆಸಿದೆ.
ಓಮನ್‌ನ ಮುಸಂದಮ್ ಪರ್ಯಾಯ ದ್ವೀಪದ ಬಳಿ ತೈಲ ಟ್ಯಾಂಕರ್ ಮೇಲೆ ಇರಾನ್ ಸೇನೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಓಮನ್ ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದರು. ಯುದ್ಧ ಪರಿಸ್ಥಿತಿಯಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಉಂಟಾಗಿದೆ.
ಆತ್ಮಹತ್ಯೆ ಪರಿಹಾರವಲ್ಲ: ನಿಮಗೆ ಆತ್ಮಹತ್ಯಾ ಆಲೋಚನೆಗಳು ಬರುತ್ತಿದ್ದರೆ ಅಥವಾ ನೀವು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದರೆ, ಇಲ್ಲವೇ ನಿಮಗೆ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ಸಲಹೆ ನೀಡಲು ಯಾವಾಗಲೂ, ಯಾರಾದರೂ ಇದ್ದೇ ಇರುತ್ತಾರೆ. ಸ್ನೇಹ ಫೌಂಡೇಶನ್ - 04424640050 (24x7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ ಐಕಾಲ್ ನಂಬರ್ 9152987821 (ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿದೆ)ಗೆ ಕರೆ ಮಾಡಬಹುದು.
ಇದನ್ನೂ ಓದಿ: ಜೀವನಾಂಶ ಕೇಳಿದ ಪತ್ನಿಯನ್ನು ಸುಪಾರಿ ಕೊಟ್ಟು, ವಾಹನ ಹರಿಸಿ ಕೊಂದ ಪತಿ! ಬಸ್ ಡ್ಯಾಶ್ ಬೋರ್ಡ್ ಕ್ಯಾಮೆರಾದಿಂದ ಸಂಚು ಬಯಲು

