ಬೆಂಗಳೂರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ಅವಘಡ: ಬಿಹಾರ ಮೂಲದ ಐವರಿಗೆ ಗಂಭೀರ ಗಾಯ
ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿ, ಬಿಹಾರದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Published : January 10, 2026 at 11:19 AM IST
|Updated : January 10, 2026 at 1:51 PM IST
ಬೆಂಗಳೂರು: ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೀಣ್ಯ ಠಾಣೆ ವ್ಯಾಪ್ತಿಯ ಚೊಕ್ಕಸಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ಅವಘಡ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಿಹಾರ ಮೂಲದ ಅಂಶುರಾಜ್ ಕುಮಾರ್ (18), ಹುಸೇನ್ ಖಾನ್ (21), ರೋಹಿತ್ ಚೌದರಿ (20), ಆರಬೇಗ್ ಆಲಂ (26) ಹಾಗೂ ಮುಜಾಫರ್ ಹುಸೇನ್ (19) ಎಂಬ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಟೀ ಕಾಯಿಸಲು ಲೈಟರ್ ಹೊತ್ತಿಸಿದಾಗ ಅವಘಡ: ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಐವರೂ ಚೊಕ್ಕಸಂದ್ರದಲ್ಲಿ ಒಂದೇ ರೂಮ್‌ನಲ್ಲಿ ವಾಸವಿದ್ದರು. ರೂಮ್‌ನಲ್ಲಿದ್ದ ಸಿಲಿಂಡರ್‌ನಿಂದ ಅಡುಗೆ ಅನಿಲ ಸೋರಿಕೆ ಆಗಿರುವುದನ್ನು ಅರಿಯದೆ ಶುಕ್ರವಾರ ಬೆಳಿಗ್ಗೆ ಟೀ ಕಾಯಿಸಲು ಲೈಟರ್ ಹೊತ್ತಿಸಿದಾಗ ಅಗ್ನಿ ಅವಘಡ ಸಂಭವಿಸಿದೆ. ಗಾಯಾಳುಗಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಪ್ರಕರಣ: ಪಿ.ಜಿಯೊಂದರ ಅಡುಗೆ ಕೋಣೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಟೆಕ್ಕಿಯೊಬ್ಬ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಡಿಸೆಂಬರ್ 29ರಂದು ಸಂಜೆ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿತ್ತು. ಬ್ರೂಕ್‌ಫೀಲ್ಡ್ ರಸ್ತೆಯಲ್ಲಿರುವ ಸೆವೆನ್ ಹಿಲ್ಸ್ ಶ್ರೀ ಸಾಯಿ ಕೋ-ಲಿವಿಂಗ್ ಪಿ.ಜಿಯಲ್ಲಿ ಸಂಭವಿಸಿದ ಅವಘಡದಲ್ಲಿ ಬಳ್ಳಾರಿ ಮೂಲದ ಅರವಿಂದ್ (23) ಎಂಬಾತ ಮೃತಪಟ್ಟಿದ್ದ. ಇವರು ಕ್ಯಾಪ್‌ಜೆಮಿನಿ ಕಂಪನಿಯಲ್ಲಿ ಸೀನಿಯರ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ವೆಂಕಟೇಶ್, ವಿಶಾಲ್ ವರ್ಮಾ, ಸಿ.ವಿ.ಗೋಯಲ್ ಎಂಬ ಮಹಿಳೆ ಗಾಯಗೊಂಡಿದ್ದರು.
ಸ್ಫೋಟದ ತೀವ್ರತೆಗೆ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದವು. ಅವಘಡದ ಸಂದರ್ಭದಲ್ಲಿ ಪಿ.ಜಿಯಲ್ಲಿ 52 ಮಂದಿ ವಾಸವಾಗಿದ್ದರು. ಘಟನಾ ಸ್ಥಳಕ್ಕೆ ಹೆಚ್ಎಎಲ್ ಠಾಣೆ ಪೊಲೀಸರು, ಅಗ್ನಿಶಾಮಕದಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಆಂಧ್ರಪ್ರದೇಶ ಮೂಲದ ವಿಷ್ಣು ಎಂಬುವರ ಒಡೆತನದ ಕಟ್ಟಡವನ್ನು ರೋಜಾ ಎಂಬುವವರು ಬಾಡಿಗೆಗೆ ಪಡೆದು ಪಿ.ಜಿ ನಡೆಸುತ್ತಿದ್ದರು.
ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ-ಮಗು ಸಾವು: ಗೋವಿಂದರಾಜ ನಗರ ವ್ಯಾಪ್ತಿಯ ಪಂಚಶೀಲ ನಗರದಲ್ಲಿ ಕಳೆದ ತಿಂಗಳು ಬಾತ್ ರೂಮ್‌ನಲ್ಲಿ ಗೀಸರ್ ಗ್ಯಾಸ್ ಸೋರಿಕೆಯಾಗಿ ತಾಯಿ ಮಗು ಅಸ್ವಸ್ಥಗೊಂಡು ಸಾವನ್ನಪ್ಪಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ತಾಯಿ ಚಾಂದಿನಿ (26) ಹಾಗೂ ಮಗು ಯುವಿ (4) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗೋವಿಂದರಾಜ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರಲ್ಲಿ ಬಲೂನ್ಗೆ ತುಂಬುವ ಹೀಲಿಯಂ ಸಿಲಿಂಡರ್ ಸ್ಫೋಟ: ಓರ್ವ ಸಾವು, ಐವರಿಗೆ ಗಾಯ

