ಸ್ನೇಹಿತನಿಗೆ ನೀಡಿದ ಬ್ಯಾಂಕ್ ಖಾತೆಯಲ್ಲಿ ಸೈಬರ್ ವಂಚನೆ: ಹೈದರಾಬಾದ್ನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ 6 ಸೈಬರ್ ವಂಚಕರ ಬಂಧನ
ಮಂಗಳೂರು ಸೈಬರ್ ಅಪರಾಧ ಠಾಣೆಯ ಪೊಲೀಸ್ ಹೈದರಾಬಾದ್ಗೆ ತೆರಳಿ ಸೈಬರ್ ವಂಚನೆ ತಂಡವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Published : February 28, 2026 at 1:23 PM IST
ಮಂಗಳೂರು: ಸ್ನೇಹಿತನಿಗೆ ನೀಡಿದ ಬ್ಯಾಂಕ್ ಖಾತೆಯಲ್ಲಿ ಸೈಬರ್ ವಂಚನೆ ನಡೆಸಲಾದ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರು ಸೈಬರ್ ಅಪರಾಧ ಠಾಣೆ ಪೊಲೀಸರು ಹೈದರಾಬಾದ್ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ 6 ಮಂದಿ ಸೈಬರ್ ವಂಚಕರನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಶೇಖ್ ಕರೀಮುಲ್ಲಾ @ ರಸೂಲ್ (27), ಬುಡಿದಿನ್ನೆ ವಂಶಿ @ ಗುರು (21), ಉತ್ಪಲ ಸಂತೋಷ್ ಕೃಷ್ಣ (35), ತೆಲಂಗಾಣದ ಪಂಡಿತಿ ಕ್ರಾಂತಿ ಕುಮಾರ್ (36), ಬಡೆ ಶ್ರೀನಿವಾಸ್ (38), ಮಂಗಳೂರಿನ ಇಬ್ರಾಹಿಂ (35) ಬಂಧಿತರು.
ಮಂಗಳೂರು ನಗರದ ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ಅವರಲ್ಲಿ ಸ್ನೇಹಿತ ಇಬ್ರಾಹಿಂ ಎಂಬಾತನು ಕರೆಂಟ್ ಖಾತೆಯನ್ನು ವ್ಯವಹಾರದ ಉದ್ದೇಶಕ್ಕಾಗಿ ನೀಡುವಂತೆ ಕೇಳಿಕೊಂಡಿದ್ದನು. ಅದರಂತೆ ಇಕ್ಬಾಲ್ ಅವರು ಅದಕ್ಕೆ ಒಪ್ಪಿ ತಮ್ಮ ಬ್ಯಾಂಕ್ ಖಾತೆಯ ಪಾಸ್ ಬುಕ್, ಎ.ಟಿ.ಎಂ ಕಾರ್ಡ್, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್ಟೆಲ್ ಕಂಪನಿಯ ಸಿಮ್ ಕಾರ್ಡ್ನ್ನು ಇಬ್ರಾಹಿಂಗೆ ನೀಡಿದ್ದಾರೆ.
ಈ ಖಾತೆಯನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಂಡ ಬಗ್ಗೆ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ತನಿಖೆ ಕೈಗೊಂಡು, ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಪರಿಶೀಲನೆ ನಡೆಸಿದಾಗ, ಈ ಬ್ಯಾಂಕ್ ಖಾತೆ ದುರುಪಯೋಗಪಡಿಸಿಕೊಂಡ ಸೈಬರ್ ವಂಚನಾ ತಂಡವು ಹೈದರಾಬಾದ್ನಲ್ಲಿ ಕಾರ್ಯಾಚರಿಸುತ್ತಿರುವುದು ಕಂಡುಬಂದಿತ್ತು. ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ತಂಡವು ಹೈದರಾಬಾದ್ಗೆ ತೆರಳಿ ಸೈಬರ್ ವಂಚನೆ ತಂಡವನ್ನು ಪತ್ತೆ ಮಾಡಿ, 5 ಜನ ಆರೋಪಿಗಳನ್ನು ಹೈದರಾಬಾದ್ನಲ್ಲಿ ಹಾಗೂ ಓರ್ವ ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿಗಳಿಂದ 18 ಮೊಬೈಲ್ ಫೋನ್, ಲ್ಯಾಪ್ಟಾಪ್, 12 ಬ್ಯಾಂಕ್ ಪಾಸ್ಬುಕ್, 18 ಡೆಬಿಟ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮುಖಾಂತರ ಬ್ಯಾಂಕ್ ಖಾತೆದಾರರಿಗೆ ಶೇಕಡಾ 4 ರಿಂದ 6ರಷ್ಟು ಕಮಿಷನ್ ನೀಡುವುದಾಗಿ ಆಕರ್ಷಕ ಜಾಹೀರಾತುಗಳನ್ನು ನೀಡುತ್ತಿದ್ದರು. ಇದರಿಂದ ದುರಾಸೆಗೊಳಗಾದ ವ್ಯಕ್ತಿಗಳಿಂದ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳನ್ನು ಮತ್ತು ಓಟಿಪಿ ಪಡೆದುಕೊಂಡು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸಿ, ವಂಚನೆ ನಡೆಸುತ್ತಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾದ ಈ ಪ್ರಕರಣದ ಒಂದು ಬ್ಯಾಂಕ್ ಖಾತೆಯ ಮೇಲೆ NCRP Portal ನಲ್ಲಿ ದೇಶಾದ್ಯಂತ ಸುಮಾರು 5 ದೂರುಗಳು ದಾಖಲಾಗಿವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿ ಬ್ಯಾಂಕ್ ಖಾತೆ ಪಡೆದು ಸೈಬರ್ ವಂಚಕರಿಗೆ ನೀಡಿದ ಸ್ನೇಹಿತ: ₹7 ಕೋಟಿ ಅಕ್ರಮ ಹಣ ವರ್ಗಾವಣೆ; ಆರೋಪಿ ಸೆರೆ

