CT, MRI ಸ್ಕ್ಯಾನ್ ಸೇವೆ ಸ್ಥಗಿತ: ಧಾರವಾಡ - ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಪರದಾಟ
CT ಮತ್ತು MRI ಸ್ಕ್ಯಾನ್ ಸೇವೆ ಸ್ಥಗಿತದಿಂದ ಧಾರವಾಡ ಹಾಗೂ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Published : February 20, 2026 at 6:10 PM IST
ಧಾರವಾಡ/ಹಾವೇರಿ: ರಾಜ್ಯದ ಕೆಲವು ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಕ್ಯಾನ್ ಸೆಂಟರ್ಗಳ ಸೇವೆ ಸ್ಥಗಿತವಾಗಿದ್ದರಿಂದ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಡವರಿಗಾಗಿ ಹಾಗೂ BPL ಕಾರ್ಡ್ ಹೊಂದಿರುವ ರೋಗಿಗಳಿಗಾಗಿ ಉಚಿತವಾಗಿ ನೀಡಲಾಗುತ್ತಿದ್ದ ಈ ಸೇವೆ ಕಳೆದ ಎರಡ್ಮೂರು ದಿನಗಳಿಂದ ಸ್ಥಗಿತಗೊಂಡಿದ್ದರಿಂದ ರೋಗಿಗಳು ಆಸ್ಪತ್ರೆಗಳ ಮುಂದೆ ಅಸಹಾಯಕರಾಗಿ ನಿಂತಿರುವ ದೃಶ್ಯ ಕಂಡು ಬರುತ್ತಿವೆ.
ಬಡವರ ಸಂಜೀವಿನಿ ಎಂದೇ ಹೆಸರಿಟ್ಟುಕೊಂಡಿರುವ ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿಯೂ ಸಿಟಿ ಸ್ಕ್ಯಾನ್ ಹಾಗೂ ಎಂಆರ್ಐ ಸೇರಿದಂತೆ ಎಲ್ಲ ಸೇವೆಗಳು ಬಂದ್ ಆಗಿವೆ ಎನ್ನುತ್ತಿದ್ದಾರೆ. ಕೆಲವು ಕಾರಣಗಳಿಂದ ಸ್ಕ್ಯಾನ್ ಸೆಂಟರ್ ಅನ್ನು ಬಂದ್ ಮಾಡಿದ್ದೇವೆ ಎಂದು ಅಲ್ಲಿನ ಸಿಬ್ಬಂದಿ ಕೇಂದ್ರದ ಮುಂದೆ ಬೋರ್ಡ್ ಹಾಕಿದ್ದಾರೆ. ಇವುಗಳ ಸೇವೆಯ ಸ್ಥಗಿತದಿಂದ ನೂರಾರು ರೋಗಿಗಳು ಪರದಾಡುತ್ತಿದ್ದಾರೆ. ಸ್ಕ್ಯಾನ್ ಸೆಂಟರ್ನಿಂದ ಹಲವು ರೋಗಿಗಳಿಗೆ ಅನುಕೂಲವಾಗುತ್ತಿತ್ತು ಎಂದು ಆಸ್ಪತ್ತೆಗೆ ಬಂದ ರೋಗಿಗಳ ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ CT ಮತ್ತು MRI ಸ್ಕ್ಯಾನಿಂಗ್ ಸೇವೆಯನ್ನು ಖಾಸಗಿ ಸಂಸ್ಥೆಯಾದ ಕೃಷ್ಣ ಡಯಾಗ್ನೋಸ್ಟಿಕ್ಸ್ ಲಿಮಿಟೆಡ್ ನಿರ್ವಹಿಸುತ್ತಿದ್ದು, ರಾಜ್ಯ ಆರೋಗ್ಯ ಇಲಾಖೆಯಿಂದ ₹143 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ ಎಂಬ ಕಾರಣದಿಂದ ಕೆಲವು ಜಿಲ್ಲಾ ಆಸ್ಪತ್ರೆಗಳಲ್ಲಿ ಈ ಸೇವೆ ಸ್ಥಗಿತಗೊಂಡಿದೆ. ಸಿಬ್ಬಂದಿಗಳಿಗೂ ಸಹ ಸಂಬಳ ಆಗದ ಹಿನ್ನೆಲೆ ಸ್ಥಗಿತಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
BPL ಕಾರ್ಡ್ದಾರಿಗೆ ಅತಿ ಕಡಿಮೆ ಬೆಲೆಗೆ ಸಿಟಿ ಸ್ಕ್ಯಾನ್ ಆಗುತ್ತಿತ್ತು. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಈಗ ಸ್ಕ್ಯಾನಿಂಗ್ ಸೇವೆ ಇಲ್ಲದ್ದರಿಂದ ಕಂಗಾಲಾಗಿದ್ದಾರೆ. ಅಲ್ಲಿನ ಸಿಬ್ಬಂದಿ ಕೇವಲ ತುರ್ತು ರೋಗಿಗಳಿಗೆ ಮಾತ್ರ ಸ್ಕ್ಯಾನಿಂಗ್ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಸಾಮಾನ್ಯ ರೋಗಿಗಳು ಏನು ಮಾಡಬೇಕು? ಎಂದು ಆಸ್ಪತ್ರೆ ಮುಂದೆ ಕಾಯುತ್ತಿದ್ದ ರೋಗಿಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲೆದು ಅಲೆದೂ ಸುಸ್ತಾಗಿದೆ; ಸೆಂಟರ್ ಮುಂದೆ ಕಾದು ಕಾದು ಸುಸ್ತಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಸ್ಕ್ಯಾನ್ ಸೆಂಟರ್ ಬಂದ್ ಮಾಡಲಾಗಿದೆ. ಬೇರೆ ಕಡೆ ಹೋಗಿ ಸ್ಕ್ಯಾನ್ ಮಾಡಿಸಿಕೊಳ್ಳಲು ನಮ್ಮ ಹತ್ರ ದುಡ್ಡಿಲ್ಲ. ಅತಿ ಕಡಿಮೆ ಬೆಲೆಗೆ ಸಿಟಿ ಸ್ಕ್ಯಾನ್ ಆಗುತ್ತಿತ್ತು. ಇಲ್ಲಿಯೇ ನಮಗೆ ಸ್ಕ್ಯಾನ್ ಮಾಡಿಕೊಡಿ. ಸ್ಕ್ಯಾನ್ ಆಗುವರೆಗೂ ವೈದ್ಯರು ಮುಂದಿನ ಚಿಕಿತ್ಸೆ ನೀಡುತ್ತಿಲ್ಲ. ಕಳೆದ ಎರಡ್ಮೂರು ದಿನಗಳಿಂದ ಸ್ಕ್ಯಾನ್ ಸೆಂಟರ್ಗೆ ಅಲೆದು ಅಲೆದೂ ಸುಸ್ತಾಗಿದೆ. ನಮಗೆ ಸ್ಕ್ಯಾನ್ ಮಾಡಿ ಕಳುಹಿಸಿ ನಾವು ಊರಿಗೆ ಹೋಗುತ್ತೇವೆ ಎಂದು ವೃದ್ಧ ರೋಗಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ವೃದ್ದ ರೋಗಿ ಕೃಷ್ಣ ಮಾತನಾಡಿ, ಹೊಟ್ಟೆ ನೋವು ಇರುವುದರಿಂದ ನಾನು ಶನಿವಾರವೇ ಬಂದು ಇಲ್ಲಿ ಅಡ್ಮಿಟ್ ಆಗಿರುವೆ. ವೈದ್ಯರು ಚೆಕ್ ಮಾಡಿದ ಬಳಿಕ ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಬರುವಂಂತೆ ಕಳಿಸಿದ್ದರು. ಅವರು ಹೇಳಿದಂತೆ ನಿನ್ನೆ ಸ್ಕ್ಯಾನ್ ಸೇಂಟರ್ಗೆ ಬಂದೆ. ಆದರೆ, ಬಂದ್ ಆಗಿತ್ತು. ಹೋಗಿ ಪುನಃ ಇವತ್ತು ಮತ್ತೆ ಬಂದೆ. ಇವತ್ತೂ ಸಹ ಬಂದ್ ಇರುವುದಾಗಿ ಹೇಳುತ್ತಿದ್ದಾರೆ ಎಂದು ತನ್ನ ನೋವು ತೋಡಿಕೊಂಡರು.
ಬಾಕಿ ಇದ್ದ 143 ಕೋಟಿ ಹಣ ಕೊಟ್ಟರೆ ನಾವು ಸೆಂಟರ್ ಆರಂಭ ಮಾಡುತ್ತೇವೆ. ಬಾಕಿ ಹಣ ಬರುವರೆಗೂ ನಾವು ಸ್ಕ್ಯಾನ್ ಸೆಂಟರ್ ಓಪನ್ ಮಾಡುವುದಿಲ್ಲ ಎಂದು ಜಿಲ್ಲಾಸ್ಪತ್ರೆಯಲ್ಲಿರುವ ಸ್ಕ್ಯಾನ್ ಸೆಂಟರ್ ಮ್ಯಾನೇಜರ್ ಅನ್ವರ್ ಹೇಳುತ್ತಿದ್ದಾರೆ.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿಯೂ ಸ್ಕ್ಯಾನ್ ಸೇವೆ ಸ್ಥಗಿತ: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿಯೂ ಇದೆ ಪರಿಸ್ಥಿತಿ ಇದ್ದು, ಕಳೆದ ಮೂರು ದಿನಗಳಿಂದ ಬಡರೋಗಿಗಳಿಗೆ ಸಿಟಿ ಸ್ಕ್ಯಾನ್ ಸಿಗುತ್ತಿಲ್ಲ. ತಲೆಗೆ ಬಲವಾದ ಹೊಡೆತ ಬಿದ್ದವರಿಗೆ, ತೀವ್ರವಾಗಿ ಗಾಯಗೊಂಡವರಿಗೆ ಮಾತ್ರ ಇಲ್ಲಿ ಸಿಟಿ ಸ್ಕ್ಯಾನ್ ಮಾಡಲಾಗುತ್ತಿದೆ. ಅದನ್ನು ಬಿಟ್ಟರೆ ದುಡ್ಡು ನೀಡಿದ ಕೆಲ ರೋಗಿಗಳಿಗೆ ಸಿಟಿ ಸ್ಕ್ಯಾನ್ ಮಾಡಲಾಗುತ್ತಿದೆ. ಹಾಗಾಗಿ ದೂರದೂರಿನಿಂದ ಜಿಲ್ಲಾಸ್ಪತ್ರೆಗೆ ಬರುವ ಹೊರರೋಗಿಗಳು ಪರದಾಡುವಂತಾಗಿದೆ ಎಂದು ರೋಗಿಗಳ ಸಂಬಂಧಿಕರು ಬೇಸರ ಹೊರಹಾಕಿದ್ದಾರೆ.
ವಿವಿಧ ಖಾಯಿಲೆಗಳಿಂದ ಜಿಲ್ಲಾಸ್ಪತ್ರೆಗೆ ಆಗಮಿಸುವ ಬಡರೋಗಿಗಳು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ 8 ತಾಲೂಕಾಸ್ಪತ್ರೆ ವೈದ್ಯರು ಜಿಲ್ಲಾಸ್ಪತ್ರೆಗೆ ಸ್ಕ್ಯಾನಿಂಗ್ ಬರೆದುಕೊಟ್ಟಿರುತ್ತಾರೆ. ಜಿಲ್ಲಾಸ್ಪತ್ರೆಗೆ ಆಗಮಿಸಿ ತಮ್ಮ ಖಾಯಿಲೆಗೆ ಕಾರಣವೇನೆಂದು ತಿಳಿದು ಚಿಕಿತ್ಸೆ ಪಡೆಯಲು ಬಂದರೆ ಇಲ್ಲಿ ಸ್ಕ್ಯಾನಿಂಗ್ ಬಂದಾಗಿದೆ. ಈ ರೀತಿಯಾದರೆ ನಾವು ಎಲ್ಲಿಗೆ ಹೋಗಬೇಕು ಎಂದು ಬಡರೋಗಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ನಾವು ಮೊದಲೇ ಬಡವರು. ಕಳೆದ ಕೆಲ ದಿನಗಳಿಂದ ಆರೋಗ್ಯ ಕೂಡ ಸರಿ ಇಲ್ಲ. ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ರೋಗ ಪತ್ತೆ ಹಚ್ಚಿ ಔಷಧ, ಇಂಜೆಕ್ಷನ್ ಪಡೆದು ಗುಣಮುಖರಾಗೋಣ ಎಂದು ಬಂದ್ರೆ ಇಲ್ಲಿ ಸಿಟಿ ಸ್ಕ್ಯಾನಿಂಗೇ ಬಂದಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಹೀಗಾದರೆ ನಾವು ಎಲ್ಲಿಗೆ ಹೋಗೋಣ ಎನ್ನುತ್ತಿದ್ದಾರೆ ಬಡ ರೋಗಿಗಳು.
ಬಡರೋಗಿಗಳ ಪರದಾಟ: ಜಿಲ್ಲಾಸ್ಪತ್ರೆಗೆ 8 ತಾಲೂಕುಗಳಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಹ ರೋಗಿಗಳು ಬರುತ್ತಾರೆ. ಮೆಡಿಕಲ್ ಕಾಲೇಜ್ ಆದ ಬಳಿಕ ಹೋರ ರೋಗಿಗಳ ಸಂಖ್ಯೆ ಸಹ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ 48 ಹಾದುಹೋದ ಕಾರಣ ರಸ್ತೆ ಅಪಘಾತಗಳ ಸಂಖ್ಯೆ ಸಹ ಅಧಿಕವಾಗಿವೆ. ಕೆಲವೊಂದು ತಾಲೂಕಾಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳೂ ಸಹ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ರೋಗಿಗಳನ್ನು ಇಲ್ಲಿಗೆ ಕಳಿಸಿಕೊಡುತ್ತವೆ. ಕಳೆದ ಹಲವು ವರ್ಷಗಳಿಂದ ಇಲ್ಲಿ ಬಡರೋಗಿಗಳು ಸ್ಕ್ಯಾನಿಂಗ್ ಮಾಡಿಸಿಕೊಂಡು ಆರೋಗ್ಯ ಪಡೆದಿದ್ದಾರೆ. ಆದರೆ, ಕಳೆದ ಮೂರು ದಿನಗಳಿಂದ ಹಾವೇರಿ ಜಿಲ್ಲಾಸ್ಪತ್ರೆಗೆ ಬರುವ ಬಡರೋಗಿಗಳಿಗೆ ಸಿಟಿ ಸ್ಕ್ಯಾನಿಂಗ್ ಸಮಸ್ಯೆಯಾಗಿದೆ. ಸ್ಕ್ಯಾನಿಂಗ್ ಸೆಂಟರ್ ಮುಂದೆ ಕೆಲ ಕಾರಣಗಳಿಂದ ಉಚಿತ ಸ್ಕ್ಯಾನಿಂಗ್ ಸೇವೆ ರದ್ದಾಗಿದ್ದು, ಆದಷ್ಟು ಬೇಗನೆ ಸೇವೆ ಆರಂಭಿಸುವುದಾಗಿ ನೋಟಿಸ್ ಅಂಟಿಸಲಾಗಿದೆ. ಈ ರೀತಿಯಾದರೆ ನಾವು ಯಾರಿಗೆ ಹೇಳಬೇಕು ಎಂದು ಬಡರೋಗಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಮತ್ತು ಸ್ಕ್ಯಾನಿಂಗ್ ಗುತ್ತಿಗೆ ಪಡೆದ ಕಂಪನಿಗಳ ನಡುವಿನ ತಿಕ್ಕಾಟದಿಂದ ನಮಗೆ ಸೇವೆ ಸಿಗದಂತಾಗಿದೆ ಎಂದು ಕೆಲವರು ಅಲವತ್ತುಗೊಂಡಿದ್ದಾರೆ.
ಸ್ಕ್ಯಾನಿಂಗ್ ಬಂದ್ಗೆ ಕಾರಣ: ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್ ಮಾಡಲು ರಾಜ್ಯ ಸರ್ಕಾರ ಎನ್.ಹೆಚ್.ಎಂ.ಎಲ್ ಮೂಲಕ ಕೃಷ್ಣ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಕಂಪನಿಗೆ ಗುತ್ತಿಗೆ ನೀಡಿದೆ. ಕಳೆದ ಎರಡು ವರ್ಷದಿಂದ ಕಂಪನಿಗೆ ಬರಬೇಕಿದ್ದ ಬಾಕಿ ಬಿಲ್ ಬಾಕಿ ಇದೆ. ಕಂಪನಿಗೆ ಸುಮಾರು 143 ಕೋಟಿ ಹಣವನ್ನ ರಾಜ್ಯ ಸರ್ಕಾರ ನೀಡಿಲ್ಲ. ಹಣ ಕೊಡದೇ ಇರೋದಕ್ಕೆ ಸ್ಕ್ಯಾನ್ ಸೆಂಟರ್ನ ಉಚಿತ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎನ್ನುತ್ತಾರೆ ಹಾವೇರಿ ಸಿಟಿ ಸ್ಕ್ಯಾನಿಂಗ್ ಸೆಂಟರ್ ಮ್ಯಾನೇಜರ್ ವಿನಯಕುಮಾರ್.

ನಮಗೆ ಮ್ಯಾನೇಜ್ಮೆಂಟ್ನಿಂದ ಸೂಚನೆ ಬರೋವರೆಗೆ ಸಿಟಿ ಸ್ಕ್ಯಾನ್ ಉಚಿತ ಸೇವೆ ಒದಗಿಸಲ್ಲ. ಸರ್ಕಾರ ಡಯಾಗ್ನೋಸ್ಟಿಕ್ಸ್ ಕಂಪನಿಗೆ 100 ಕೋಟಿಗೂ ಅಧಿಕ ಹಣ ಕೊಡಬೇಕು. ನಮ್ಮ ಮ್ಯಾನೇಜ್ಮೆಂಟ್ಗೆ ಎರಡು ವರ್ಷಗಳಿಂದ ಹಣ ಬಂದೇ ಇಲ್ಲ. ಪ್ರತಿ ಸ್ಕ್ಯಾನಿಗೆ 2,081 ರೂಪಾಯಿ ನಿಗದಿ ಮಾಡಿದ್ದೇವೆ. ಎಮರ್ಜನ್ಸಿ ಇದ್ದವರು ಹಣ ನೀಡಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಹುದು ಎನ್ನುತ್ತಾರೆ ವಿನಯಕುಮಾರ್.
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ಬಂದ್ ವಿಚಾರ ಆರೋಗ್ಯ ಸಚಿವರಿಗೆ ಮಾಹಿತಿ ಇದೆ. ಇದರ ಬಗ್ಗೆ ಅವರಿಗೆ ಕೇಳಬೇಕು. ಜಿಲ್ಲೆಯಲ್ಲಿ ಬಂದ್ ಆಗಿರುವ ವಿಚಾರ ನನಗೆ ಗೊತ್ತಿಲ್ಲ. ಸೆಂಟರ್ಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿಗೆ ಸಂಬಳ ಆಗದಿರುವ ಕಾರಣ ಹೀಗೆ ಆಗಿರಬಹುದು ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಆರೋಗ್ಯ ಸಚಿವರ ಪ್ರತಿಕ್ರಿಯೆ: ರಾಜ್ಯದ 13 ಆಸ್ಪತ್ರೆಗಳಲ್ಲಿ ಮಾತ್ರ ಎಮ್ಆರ್ಐ ಮತ್ತು ಸಿಟಿ ಸ್ಕ್ಯಾನ್ ಸಮಸ್ಯೆ ಆಗಿದೆ. ಹೆಚ್ಚಿನ ಆಸ್ಪತ್ರೆಗಳಿಗೆ ನಾವು ಪರ್ಯಾಯ ವ್ಯವಸ್ಥೆ ತಕ್ಷಣ ಮಾಡಿದ್ದೇವೆ. ಕೃಷ್ಣಾ ಡೈಗ್ನೋಸ್ಟಿಕ್ಸ್ ಕಂಪನಿ ವತಿಯಿಂದ ನಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಮ್ಆರ್ಐ ಮತ್ತು ಸಿಟಿ ಸ್ಕ್ಯಾನ್ಗಳು ಸ್ಥಗಿತ ವಿಚಾರದಲ್ಲಿ ವಿರೋಧ ಪಕ್ಷ ಸತ್ಯಕ್ಕೆ ದೂರವಾದ ವಿಚಾರ ಮಾತನಾಡಿದೆ. ದುಡ್ಡು ಕೊಟ್ಟಿಲ್ಲ ಎಂದು ಕಂಪನಿ ಪತ್ರ ಬರೆದಿದ್ದಕ್ಕೆ, ವಿಪಕ್ಷಗಳು ಇದನ್ನು ಬೇರೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಅವರು ಟೀಕೆ ಮಾಡುತ್ತಿದ್ದಾರೆಂದು ನಾನು ಟೀಕೆ ಮಾಡುವುದಿಲ್ಲ. ಕೆಲಸ ಮಾಡುವುದು ನಮ್ಮ ಕರ್ತವ್ಯ. ಜನರಿಗೆ ಸಮಸ್ಯೆ ಆಗಬಾರದು ಎಂಬುದು ನಮ್ಮ ಉದ್ದೇಶ. ಖಾಸಗಿ ಕಂಪನಿ ಬರೆದ ಪತ್ರಕ್ಕೆ ಇವರ ರಿಯಾಕ್ಷನ್ ನೋಡಿದರೆ ಏನನ್ನಬೇಕು ಅರ್ಥವಾಗುವುದಿಲ್ಲ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯ ಇಎಸ್ಐ ಆಸ್ಪತ್ರೆ, ಚಿಕಿತ್ಸಾಲಯಗಳಿಗೇ ಬೇಕಿದೆ 'ಚಿಕಿತ್ಸೆ'

