ಬಾಗಲಕೋಟೆ: ಮುರಿದು ಬಿದ್ದ ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್: ಭಾರಿ ಪ್ರಮಾಣದಲ್ಲಿ ನೀರು ಪೋಲು
ತಾಂತ್ರಿಕ ದೋಷದಿಂದ ಮಂಗಳವಾರ ಬಾಗಲಕೋಟೆಯ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ಮುರಿದು ಬಿದ್ದು, ಅಧಿಕ ಮಟ್ಟದಲ್ಲಿ ನೀರು ಪೋಲಾಗುತ್ತಿದೆ.

Published : January 7, 2026 at 2:36 PM IST
ಚಿಕ್ಕೋಡಿ: ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಜೀವನಾಡಿಯಂತಿರುವ ಹಿಪ್ಪರಗಿ ಬ್ಯಾರೇಜ್‌ನ ಕ್ರಸ್ಟ್ ಗೇಟ್ ಸಂಖ್ಯೆ 22 ತಾಂತ್ರಿಕ ದೋಷದಿಂದಾಗಿ ಮುರಿದುಬಿದ್ದಿದ್ದು, ಭಾರಿ ಪ್ರಮಾಣದ ನೀರು ನದಿಗೆ ಪೋಲಾಗುತ್ತಿದೆ. ಬ್ಯಾರೇಜ್ನಿಂದ ನೀರು ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿಗೆ ಕೃಷ್ಣಾ ನದಿ ಮುಖಾಂತರ ಅತಿಯಾದ ವೇಗದಲ್ಲಿ ಹರಿಯುತ್ತಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಬಳಿ ಕೃಷಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜ್ ಗೇಟ್ ತಾತ್ಕಾಲಿಕವಾಗಿ ದುರಸ್ತಿ ಆಗದಷ್ಟು ಹಾನಿಗೊಳಗಾಗಿದ್ದು, ಸಾವಿರಾರು ಕ್ಯೂಸೆಕ್ ನೀರು ಪೋಲಾಗುವ ಆತಂಕ ಎದುರಾಗಿದೆ. ಮುಂಗಾರು ಹಂಗಾಮಿನಲ್ಲಿ ನೀರಿನ ಸಂಗ್ರಹ ಮಾಡಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ಹಾಗೂ ಕೃಷಿ ಚಟುವಟಿಕೆ ಬಳಸಿಕೊಳ್ಳುವ ಸಮಯಕ್ಕೆ ಈ ಅವಘಡ ಸಂಭವಿಸಿದೆ.
ನೀರು ಕಡಿಮೆಯಾದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಬಹುದು ಎಂದು ನದಿ ತೀರದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ನೀರಾವರಿ ಇಲಾಖೆಯ ಉನ್ನತ ಅಧಿಕಾರಿ ನಾಗರಾಜ್ ಹಾಗೂ ಪ್ರವೀಣ್ ಹುಣಸಿಕಟ್ಟಿ ದೌಡಾಯಿಸಿದ್ದು, ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ. ತಾಂತ್ರಿಕ ತಂಡದ ನೆರವಿನೊಂದಿಗೆ ತುರ್ತು ಕಾರ್ಯಾಚರಣೆ ನಡೆಸಿ ನೀರು ಪೋಲಾಗುವುದನ್ನು ತಡೆಯಲು ಪ್ರಯತ್ನ ಪಡುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಿಂದ ಕಾರ್ಮಿಕರನ್ನು ಕರೆಸಿ ದುರಸ್ತಿ ಕಾರ್ಯ ಮುಂದುವರೆದಿದೆ, ಮುಳುಗು ತಜ್ಞರ ಜೊತೆಯಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಈ ಕುರಿತು ನೀರಾವರಿ ಇಲಾಖೆ ಸೂಪರಿಡೆಂಟ್ ಇಂಜಿನಿಯರ್ ನಾಗರಾಜ್ ಮಾತನಾಡಿ, "ತಾಂತ್ರಿಕ ದೋಷದಿಂದ ನಿನ್ನೆ ಗೇಟ್ ಕಟ್ಟಾಗಿದೆ. ಪ್ರತಿ ಗಂಟೆಗೆ ನಾಲ್ಕು ಸಾವಿರ ಕ್ಯೂಸೆಕ್ ನೀರು ಹರಿತಾ ಇದೆ. ಸ್ವಲ್ಪ ಮಟ್ಟಿಗೆ ಮೇಲಿಂದ ನೀರು ಪ್ಲೋ ಇದೆ. ಸದ್ಯಕ್ಕೆ 0.7 ಟಿಎಂಸಿ ನೀರು ಕೆಳಗೆ ಹರಿದಿದೆ. ಸಂಜೆ ಐದು ಗಂಟೆ ಒಳಗಾಗಿ ರಿಪೇರಿ ಕಾರ್ಯ ಮಾಡಲಾಗುವುದು" ಎಂದು ಭರವಸೆ ನೀಡಿದರು.

ಹಾಗೇ, ಅಥಣಿ ಮಾಜಿ ಶಾಸಕ ಶಹಜಾನ್ ಡೋಂಗರಗಾಂವ್ ಹಿಪ್ಪರಗಿ ಬ್ಯಾರೇಜಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು. ಆದಷ್ಟು ಬೇಗನೆ ರಿಪೇರಿ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ, "ಈ ಭಾಗಕ್ಕೆ ಇದು ಜೀವನಾಡಿಯಾಗಿದೆ. ಅಧಿಕಾರಿಗಳ ಲೋಪದಿಂದ ಈ ರೀತಿ ಗೇಟ್ ಮುರಿದಿದ್ದು, ನಮ್ಮ ದುರಾದೃಷ್ಟ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ತುರ್ತಾಗಿ ಅದನ್ನು ರಿಪೇರಿ ಮಾಡುವ ಕೆಲಸ ಮಾಡಬೇಕು. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು" ಎಂದು ಮನವಿ ಸಲ್ಲಿಸಿದರು.
"ಪ್ರತಿ ವರ್ಷ ಹಿಪ್ಪರಗಿ ಬ್ಯಾರೇಜ್ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಹಣ ಮಂಜೂರಾಗುತ್ತದೆ. ಆದರೆ, ಅಧಿಕಾರಿಗಳು ಬೇಜವಾಬ್ದಾರಿಯಿಂದ ಈಗ ರೈತರುಸಂಕಷ್ಟಕ್ಕೆ ಈಡಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಪೂರ್ಣವಾಗಿ ಇದು ತನಿಖೆಗೆ ಒಳಗಾಗಬೇಕು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಇದರ ಬಗ್ಗೆ ಪರಿಶೀಲನೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು" ಆಗ್ರಹಿಸಿದರು.
ಇದನ್ನೂ ಓದಿ: ಇಂದು ಸಿಎಂ ಸಿದ್ದರಾಮಯ್ಯ ಹಾವೇರಿಗೆ: ಮೆಡಿಕಲ್ ಕಾಲೇಜು ಉದ್ಘಾಟನೆ ಸೇರಿ ಹಲವು ಕಾರ್ಯಕ್ರಮಗಳು

