ETV Bharat / state

ಆನೆ ಕಾರಿಡಾರ್‌ಗಳಲ್ಲಿ 'ಕವರ್ಡ್ ಕಂಡಕ್ಟರ್': ಕಾಡಂಚಿನ ವಿದ್ಯುತ್ ಸುರಕ್ಷತೆಗೆ ಮೆಸ್ಕಾಂ ಮಹತ್ವದ ಹೆಜ್ಜೆ

ಸುಮಾರು ರೂ. 100 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷೆಯ ಆಧುನೀಕರಣ ಯೋಜನೆಯನ್ನು ಮೆಸ್ಕಾಂ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗುತ್ತಿದೆ.

MESCOM President K. Harish Kumar
ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ (ETV Bharat)
author img

By ETV Bharat Karnataka Team

Published : August 31, 2026 at 2:49 PM IST

2 Min Read
Choose ETV Bharat

ಮಂಗಳೂರು: ಮಲೆನಾಡು ಹಾಗೂ ಕರಾವಳಿಯ ದಟ್ಟ ಕಾನನಗಳು ಮತ್ತು ಆನೆ ಕಾರಿಡಾರ್‌ಗಳಲ್ಲಿ ವಿದ್ಯುತ್ ತಂತಿಗಳಿಗೆ ರಕ್ಷಣಾ ಕವಚ ನೀಡುವ 'ಕವರ್ಡ್ ಕಂಡಕ್ಟರ್' (ಇನ್ಸುಲೇಟೆಡ್ ವೈರ್) ಅಳವಡಿಕೆಗೆ ಮೆಸ್ಕಾಂ ಮುಂದಾಗಿದೆ.

ಕಾಡಾನೆಗಳು ಸೇರಿದಂತೆ ವನ್ಯಜೀವಿಗಳ ಜೀವ ರಕ್ಷಣೆ ಮತ್ತು ಮಳೆಗಾಲದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ನಿರಂತರವಾಗಿ ಎದುರಾಗುತ್ತಿದ್ದ ವಿದ್ಯುತ್ ವ್ಯತ್ಯಯಕ್ಕೆ ಅಂತ್ಯಹಾಡುವ ನಿಟ್ಟಿನಲ್ಲಿ, ಸುಮಾರು ರೂ. 100 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷೆಯ ಆಧುನೀಕರಣ ಯೋಜನೆಯನ್ನು ಮೆಸ್ಕಾಂ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗುತ್ತಿದೆ.

ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ (ETV Bharat)

ವನ್ಯಜೀವಿಗಳಿಗೆ ಶ್ರೀರಕ್ಷೆ, ಕಾಡಿನ ಜನರಿಗೆ ನಿರಂತರ ಬೆಳಕು: ದಟ್ಟ ಅರಣ್ಯ ಹಾಗೂ ಆನೆಗಳು ಓಡಾಡುವ ಸೂಕ್ಷ್ಮ ಪ್ರದೇಶಗಳಲ್ಲಿ ತೆರೆದ ವಿದ್ಯುತ್ ತಂತಿಗಳ ಮೇಲೆ ಸಣ್ಣದೊಂದು ಮರದ ರೆಂಬೆ ಬಿದ್ದರೂ ಸ್ಪಾರ್ಕ್ ಉಂಟಾಗಿ, ಫ್ಯೂಸ್ ಹಾರಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿತ್ತು. ವಾಹನ ಸಂಚಾರವಿಲ್ಲದ ದುರ್ಗಮ ಕಾಡಿನ ಹಾದಿಯಲ್ಲಿ ಲೈನ್‌ಮನ್‌ಗಳು ಕಾಲ್ನಡಿಗೆಯಲ್ಲೇ ಕಿಲೋಮೀಟರ್‌ಗಟ್ಟಲೆ ಸಾಗಿ, ತಂತಿ ಮುರಿದ ಸ್ಥಳ ಪತ್ತೆಹಚ್ಚಲು ದಿನಗಳೇ ಬೇಕಾಗುತ್ತಿತ್ತು. ಇತ್ತ ಕಾಡಾನೆಗಳು ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಾಣ ಕಳೆದುಕೊಳ್ಳುವ ಭೀತಿಯೂ ಇರುತ್ತಿತ್ತು. ಆದರೆ, ಇನ್ಸುಲೇಟೆಡ್ ಕವಚ ಹೊಂದಿರುವ ಕವರ್ಡ್ ಕಂಡಕ್ಟರ್‌ಗಳ ಮೇಲೆ ಮರದ ಕೊಂಬೆಗಳು ಬಿದ್ದರೂ ಸ್ಪಾರ್ಕ್ ಆಗುವುದಿಲ್ಲ ಮತ್ತು ವಿದ್ಯುತ್ ಪೂರೈಕೆಗೆ ಧಕ್ಕೆಯಾಗುವುದಿಲ್ಲ.

7 ವಿಭಾಗಗಳಲ್ಲಿ ಅನುಷ್ಠಾನ: ಮಲೆನಾಡಿಗೆ ಹೆಚ್ಚಿನ ಆದ್ಯತೆ: ದಟ್ಟ ಅರಣ್ಯ ಹೊಂದಿರುವ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ಪುತ್ತೂರು, ಶಿವಮೊಗ್ಗ, ಸಾಗರ, ಚಿಕ್ಕಮಗಳೂರು-1, ಚಿಕ್ಕಮಗಳೂರು-2, ಕೊಪ್ಪ ಹಾಗೂ ಕುಂದಾಪುರ ವಿಭಾಗಗಳ ಕಾಡು ಮತ್ತು ಆನೆ ಕಾರಿಡಾರ್‌ಗಳಲ್ಲಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಪ್ರಗತಿಯಲ್ಲಿದೆ.

ಆರಂಭಿಕ ವೆಚ್ಚ ದುಬಾರಿ, ಆದರೆ ದೀರ್ಘಕಾಲದ ಲಾಭ ಸಾಮಾನ್ಯ ವಿದ್ಯುತ್ ತಂತಿಗಳಿಗೆ ಹೋಲಿಸಿದರೆ ಕವರ್ಡ್ ಕಂಡಕ್ಟರ್ ಅಳವಡಿಕೆಗೆ ಆರಂಭಿಕ ವೆಚ್ಚ ಎರಡು ಪಟ್ಟು ಹೆಚ್ಚು. ಆದರೆ, ಕಾಡಿನೊಳಗೆ ಪದೇ ಪದೇ ದುರಸ್ತಿ ಮಾಡುವ ಖರ್ಚು, ವಿದ್ಯುತ್ ಪೋಲಾಗುವಿಕೆ ಹಾಗೂ ಸಿಬ್ಬಂದಿಯ ಮಾನವ ಶ್ರಮ ಉಳಿತಾಯವಾಗುವುದರಿಂದ ಈ ಯೋಜನೆಯ ಒಟ್ಟು ವೆಚ್ಚವು ಕೇವಲ ಒಂದೆರಡು ವರ್ಷಗಳಲ್ಲೇ ಮೆಸ್ಕಾಂಗೆ ಮರಳಿ ಸಿಗಲಿದೆ.

ಈ ಬಗ್ಗೆ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ "ಆನೆ ಕಾರಿಡಾರ್‌ಗಳು ಹಾಗೂ ದಟ್ಟ ಕಾಡುಗಳಲ್ಲಿ ಸಣ್ಣ ಗೆಲ್ಲು ಬಿದ್ದರೂ ಇಡೀ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿತ್ತು. ರಸ್ತೆಗಳಿಲ್ಲದ ಕಾಡಿನೊಳಗೆ ನಡೆದುಕೊಂಡೇ ಹೋಗಿ ಫಾಲ್ಟ್ ಪತ್ತೆಹಚ್ಚಲು ದಿನಗಳೇ ಬೇಕಾಗುತ್ತಿತ್ತು. ಇದಕ್ಕೆ ಶಾಶ್ವತ ಪರಿಹಾರವಾಗಿ ಕವರ್ಡ್ ಕಂಡಕ್ಟರ್ ಅಳವಡಿಸುತ್ತಿದ್ದೇವೆ. ಆರಂಭದಲ್ಲಿ ಇದಕ್ಕೆ ಖರ್ಚು ಹೆಚ್ಚಾದರೂ, ನಿರ್ವಹಣಾ ವೆಚ್ಚ ಹಾಗೂ ವಿದ್ಯುತ್ ನಷ್ಟ ತಗ್ಗುವುದರಿಂದ ಒಂದೆರಡು ವರ್ಷಗಳಲ್ಲೇ ಆ ಹಣ ನಮಗೆ ಮರಳಿ ಬರುತ್ತದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಸುಮಾರು ₹100 ಕೋಟಿ ವೆಚ್ಚದಲ್ಲಿ ಈ ಆಧುನೀಕರಣ ಯೋಜನೆ ಜಾರಿಯಾಗುತ್ತಿದೆ." ಎಂದು ತಿಳಿಸಿದ್ದಾರೆ.

ಮುಂಗಾರು ಮಳೆ ಮತ್ತು ಗಾಳಿಗೆ ಮೆಸ್ಕಾಂ ವ್ಯಾಪ್ತಿಯಲ್ಲಿ ಸಾವಿರಾರು ವಿದ್ಯುತ್ ಕಂಬಗಳು ಧರೆಗುರುಳಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿರುವ ನಡುವೆಯೂ, ಆನೆ ಕಾರಿಡಾರ್‌ಗಳಲ್ಲಿ ಅಳವಡಿಸುತ್ತಿರುವ ಈ ‘ಕವರ್ಡ್ ಕಂಡಕ್ಟರ್’ ತಂತ್ರಜ್ಞಾನವು ವನ್ಯಜೀವಿಗಳ ರಕ್ಷಣೆಯೊಂದಿಗೆ ಮಲೆನಾಡು - ಕರಾವಳಿಯ ಕಾಡಂಚಿನ ಬದುಕಿಗೆ ನಿರಂತರ ಬೆಳಕಿನ ಭರವಸೆ ಮೂಡಿಸಿದೆ.

ಇದನ್ನೂ ಓದಿ: ಬೆಳ್ತಂಗಡಿ: ಆನೆ ದಾಳಿಗೆ ವ್ಯಕ್ತಿ ಬಲಿ; ಮೃತರ ಕುಟುಂಬಕ್ಕೆ 5ಲಕ್ಷ ರೂ. ತುರ್ತು ಪರಿಹಾರ ವಿತರಣೆ, ₹4000 ಮಾಸಾಶನ ಘೋಷಣೆ