ETV Bharat / state

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸೆ.2ರಂದು ಮಾಫಿ ಸಾಕ್ಷಿ ಹೇಳಲು ಹಾಜರಾಗುವಂತೆ ಪ್ರದೋಷ್​ಗೆ ಕೋರ್ಟ್​ ಸಮನ್ಸ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ಸೆಪ್ಟೆಂಬರ್​ 2ರಂದು ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

court-summons-pradosh-to-appear-as-a-approver-on-september-2-in-renukaswamy-murder-case
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : August 28, 2026 at 2:47 PM IST

1 Min Read
Choose ETV Bharat

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರದೋಷ್​ ಮಾಫಿ ಸಾಕ್ಷಿಯಾಗಿ ಅಂಗೀಕರಿಸಿರುವ ನ್ಯಾಯಾಲಯ ಈ ಸಂಬಂಧ ಸೆಪ್ಟೆಂಬರ್​ 2ರಂದು ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳಲು ಸಮನ್ಸ್ ಜಾರಿ ಮಾಡಿದೆ.

ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಪ್ರದೋಷ್, ಪ್ರಕರಣದಲ್ಲಿ ತನ್ನನ್ನ ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ಅಂಗೀಕರಿಸಿತ್ತು. ಇದರಂತೆ ಸೆಪ್ಟೆಂಬರ್ 2ರಂದು ನ್ಯಾಯಾಲಯಕ್ಕೆ ಮುಂದೆ ಹಾಜರಾಗಿ ಸಾಕ್ಷಿ ನುಡಿಯಬೇಕು ಎಂದು ಜೈಲಧಿಕಾರಿಗಳ ಮೂಲಕ ಸಮನ್ಸ್ ಜಾರಿ ಮಾಡುವಂತೆ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಸೂಚಿಸಿದ್ದಾರೆ.

ಜೈಲಧಿಕಾರಿಗಳಿಗೆ ಕೋರ್ಟ್ ಸೂಚನೆ: ಮಾಫಿ ಸಾಕ್ಷಿ ಸಂಬಂಧ ಅರ್ಜಿಯಲ್ಲಿರುವ ಅಂಶಗಳ ಕುರಿತು ಸ್ಪಷ್ಟತೆ ಇದೆಯೇ ಎಂದು ಈ ಹಿಂದಿನ ವಿಚಾರಣೆಯಲ್ಲಿ ವಿವರಣೆ ಪಡೆದಿದ್ದ ನ್ಯಾಯಾಲಯ, ಪ್ರದೋಷ್ ಅವರನ್ನು ಆಗಸ್ಟ್​​​ 25ರಂದು ಮಾಫಿ ಸಾಕ್ಷಿಯಾಗಿ ಪರಿಗಣಿಸಿತ್ತು. ಜೊತೆಗೆ ಪ್ರದೋಷ್‌ಗೆ ಆದೇಶದ ಪ್ರತಿಯನ್ನು ತಲುಪಿಸಿ, ಸಹಿ ಪಡೆದುಕೊಳ್ಳುವಂತೆ ಜೈಲಧಿಕಾರಿಗಳಿಗೆ ಕೋರ್ಟ್ ಸೂಚಿಸಿತ್ತು.

ಸಿಆರ್‌ಪಿಸಿ ಸೆಕ್ಷನ್ 307ರಡಿ ಪ್ರದೋಷ್ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ್ದ ನ್ಯಾಯಾಲಯ, ಪ್ರಕರಣದ ಕುರಿತು ಸಂಪೂರ್ಣ ಸತ್ಯವನ್ನ ತಿಳಿಸಬೇಕು. ಅಲ್ಲದೇ ಪ್ರಕರಣದಲ್ಲಿ ಇತರ ಆರೋಪಿಗಳ ಪಾತ್ರ, ನಿಮ್ಮ ಬಳಿ ಇರುವ ಮಾಹಿತಿಯನ್ನ ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿತ್ತು.

ಒಂದು ವೇಳೆ ಹೇಳುವ ಅಂಶಗಳು ಸುಳ್ಳಾದರೆ ಅಥವಾ ಹೇಳಿಕೆಯಿಂದ ಹಿಂದೆ ಸರಿದರೆ ಮತ್ತೆ ನಿಮ್ಮನ್ನು ಆರೋಪಿಯನ್ನಾಗಿ ಪರಿಗಣಿಸಲಾಗುವುದು ಮತ್ತು ಸುಳ್ಳು ಸಾಕ್ಷ್ಯದ ಪ್ರಕರಣ ದಾಖಲಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿತ್ತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2024ರ ಜೂನ್ ತಿಂಗಳಿನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಪ್ರದೋಷ್ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ನೀಡಲಾದ ಜಾಮೀನನ್ನು ಸುಪ್ರೀಂ ಕೋರ್ಟ್​ ರದ್ದುಪಡಿಸಿದ ಬಳಿಕ 2025ರಿಂದಲೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಸೆಪ್ಟೆಂಬರ್​​ 2ರಂದು ಪ್ರದೋಷ್​ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಹೇಳಿಕೆ ದಾಖಲಿಸಬೇಕಿದೆ.

ಇದನ್ನೂ ಓದಿ: 'ಹೇಳಿ ಹೋಗು ಕಾರಣ' ಪುಸ್ತಕ ಅಕ್ರಮ ಮಾರಾಟ ಪ್ರಕರಣ: 'ತಾನು ಮಾರಾಟ ಮಧ್ಯವರ್ತಿ ಮಾತ್ರ'- ಅಮೆಜಾನ್‌ ಪ್ರತಿಪಾದನೆ