ETV Bharat / state

ಮದ್ಯದಲ್ಲಿ ಮಾತ್ರೆ ಬೆರೆಸಿ ಕೊಟ್ಟ, ಸಾಯದೇ ಇದ್ದಾಗ ದುಪ್ಪಟ್ಟದಿಂದ ಕುತ್ತಿಗೆ ಬಿಗಿದು ಪತ್ನಿ ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ

ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳಿಂದ ಹತ್ಯೆ ಪ್ರಕರಣ ಸಾಬೀತಾಗಿದ್ದು, ಅಪರಾಧಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

Representative picture and husband Vinay Kumar
ಸಾಂದರ್ಭಿಕ ಚಿತ್ರ ಹಾಗೂ ಅಪರಾಧಿ ವಿನಯ್ ಕುಮಾರ್ (IANS and ETV Bharat)
author img

By ETV Bharat Karnataka Team

Published : January 6, 2026 at 7:51 AM IST

2 Min Read
Choose ETV Bharat

ಬೆಂಗಳೂರು: ಮದ್ಯದಲ್ಲಿ ಮಾತ್ರೆ ಬೆರೆಸಿ ಕುಡಿಸಿದ ಬಳಿಕವೂ ಸಾಯದಿರುವುದನ್ನು ಕಂಡು ಪತ್ನಿಯನ್ನು ವೇಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದ ಪತಿಗೆ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ವಿನಯ್ ಕುಮಾರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ತನ್ನ ಪತ್ನಿ ಅಶ್ವಿನಿ ಅವರನ್ನು ಕೊಲೆಗೈದ ಆರೋಪದಡಿ ಮಹದೇವಪುರ ಪೊಲೀಸರು 2021ರಲ್ಲಿ ಈತನನ್ನು ಬಂಧಿಸಿದ್ದರು. ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂದಿನ ಇನ್​ಸ್ಪೆಕ್ಟರ್ ಹರಿಯಪ್ಪ ಹಾಗೂ ಸಹಾಯಕ ತನಿಖಾಧಿಕಾರಿ ಹೆಡ್ ಕಾನ್‌ಸ್ಟೇಬಲ್ ಆಗಿದ್ದ ಶಿವಾನಂದ ಪೂಜಾರಿ ನೇತೃತ್ವದ ತಂಡ ದೋಷಾರೋಪಪಟ್ಟಿ ಸಲ್ಲಿಸಿತ್ತು. ವಿಚಾರಣೆಯ ವೇಳೆ ವಿನಯ್ ಕುಮಾರ್ ತನ್ನ ಪತ್ನಿಯನ್ನು ಹತ್ಯೆ ಮಾಡಿರುವುದು ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳಿಂದ ರುಜುವಾತಾಗಿದೆ.

ಚಾಮರಾಜನಗರದ ಯಳಂದೂರು ತಾಲೂಕಿನ ವಿನಯ್ ಕುಮಾರ್ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದ. ಅಶ್ವಿನಿ ಹಾಸನದ ಹೊಳೆನರಸೀಪುರ ಮೂಲದವರಾಗಿದ್ದು, ಈಕೆಯ ಸ್ನೇಹಿತೆಯ ಮೂಲಕ ಇಬ್ಬರೂ ಪರಿಚಯವಾಗಿ ಬಳಿಕ ಪ್ರೇಮಕ್ಕೆ ತಿರುಗಿತ್ತು. 2018ರಲ್ಲಿ ಮದುವೆಯಾಗಿ ಮಹದೇವಪುರ ಠಾಣಾ ವ್ಯಾಪ್ತಿಯ ಎ.ನಾರಾಯಣಪುರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ವಿವಾಹವಾಗಿ ಮೂರು ವರ್ಷವಾದರೂ ಮಕ್ಕಳಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

2021ರಲ್ಲಿ ವಿನಯ್ ಕುಮಾರ್ ಖಾಸಗಿ ಬ್ಯಾಂಕ್​ನಲ್ಲಿ ಉದ್ಯೋಗಿಯಾಗಿದ್ದ ಯುವತಿಯನ್ನು ಪ್ರೀತಿಸಿದ್ದ. ವಿವಾಹ ಮಾಡಿಕೊಳ್ಳುವಂತೆ ನಿವೇದಿಸಿಕೊಂಡಿದ್ದ. ಈ ಮನವಿಯನ್ನು ನಯವಾಗಿ ಆಕೆ ನಿರಾಕರಿಸಿದ್ದಳು. ಪತ್ನಿ ಜೊತೆಗಿದ್ದರೆ ಈಕೆ ತನ್ನನ್ನು ಮದುವೆಯಾಗುವುದಿಲ್ಲ ಎಂದು ಭಾವಿಸಿದ ಅಪರಾಧಿಯು ಪತ್ನಿಯ ಹತ್ಯೆಗೆ ಸಂಚು ರೂಪಿಸಿದ್ದ. 2021ರ ಏ.16ರಂದು ರಾತ್ರಿ ಸಮೀಪದ ಬಾರ್​ಗೆ ತೆರಳಿ ಬಿಯರ್ ಖರೀದಿಸಿದ್ದ. ಬರುವಾಗ ಫಾರ್ಮಸಿಯಲ್ಲಿ 32 ರೂಪಾಯಿ ಕೊಟ್ಟು 10 ಮಾತ್ರೆಗಳನ್ನು ಕೊಂಡು ಬಂದಿದ್ದ.

ಪತ್ನಿಗೆ ತಿಳಿಯದಂತೆ ಮದ್ಯವಿರುವ ಪ್ಲಾಸ್ಟಿಕ್ ಲೋಟಕ್ಕೆ ತಂದಿದ್ದ ಮಾತ್ರೆಗಳನ್ನು ಬೆರೆಸಿ ಪತ್ನಿಗೆ ನೀಡಿದ್ದ. ಮನೆಯಲ್ಲಿ ಮಾಡಲಾಗಿದ್ದ ಚಿಕನ್ ಜೊತೆಗೆ ಇಬ್ಬರೂ ಮದ್ಯ ಸೇವಿಸಿ ಮಲಗಿದ್ದರು. ಮಾರನೇ ದಿನ ವಿನಯ್ ಬೆಳಗ್ಗೆ 5.50ಕ್ಕೆ ಎದ್ದು ಪತ್ನಿಯನ್ನು ನೋಡಿದ್ದ. ಉಸಿರಾಡುತ್ತಿರುವುದನ್ನು ಗಮನಿಸಿ 6.20ರ ಸುಮಾರಿಗೆ ದುಪ್ಪಟ್ಟದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದ. 7 ಗಂಟೆಯ ಸುಮಾರಿಗೆ ಪತ್ನಿಯ ಮನೆಯವರಿಗೆ ಕರೆ ಮಾಡಿದ ನಿಮ್ಮ ಮಗಳು ಉಸಿರಾಡುತ್ತಿಲ್ಲ. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದ. ವಿಷಯ ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಾಯ್ಬಿಟ್ಟಿದ್ದ.

ಮದ್ಯ ಹಾಗೂ ಮಾತ್ರೆ ಖರೀದಿಸಿದ್ದ ಮಳಿಗೆ ಸಿಬ್ಬಂದಿಯ ಸಾಕ್ಷಿ, ಆತ ತೆರಳಿರುವ ಸಿಸಿಟಿವಿ ದೃಶ್ಯಾವಳಿ, ಮನೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದ ಖಾಲಿಯಾಗಿರುವ ಮಾತ್ರೆ ಸ್ಟ್ರಿಪ್​ಗಳು, ಚೂರಾಗಿದ್ದ ಬಿಲ್​ಗಳನ್ನು ವಶಕ್ಕೆ ಪಡೆಯಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅಶ್ವಿನಿ ಅವರ ಸಾವು ಹತ್ಯೆ ಎಂದು ವರದಿ ಬಂದಿತ್ತು.

ಸಾಕ್ಷಿಗಳ ಹೇಳಿಕೆ ಹಾಗೂ ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಇಟ್ಟುಕೊಂಡು ಆರೋಪಿ ವಿರುದ್ಧ ಸರ್ಕಾರಿ ವಿಶೇಷ ಅಭಿಯೋಜಕಿ ಸತ್ಯವತಿ ಅವರು ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿದ್ದರು.

ಸದ್ಯ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಇದನ್ನೂ ಓದಿ: ಬಳ್ಳಾರಿ: ಜಗಳದಿಂದ ನೊಂದು ಚಿಕ್ಕಮ್ಮನ ಮನೆಗೆ ಹೋಗಿದ್ದ ಪತ್ನಿಯ ಕೊಂದ ಪತಿ