ETV Bharat / state

ಉಡುಪಿ: 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರಿಗೆ 2 ವರ್ಷ ಜೈಲು ಶಿಕ್ಷೆ, 10 ಸಾವಿರ ದಂಡ

ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರಿಗೆ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

court-sentences-10-illegal-bangladeshi-immigrants-to-2-years-in-prison-fines-them-rs-ten-thousand
ಶಿಕ್ಷೆಗೆ ಗುರಿಯಾದವರು (ETV Bharat)
author img

By ETV Bharat Karnataka Team

Published : December 10, 2025 at 6:26 PM IST

2 Min Read
Choose ETV Bharat

ಉಡುಪಿ: ಕಳೆದ ವರ್ಷ ಜಿಲ್ಲೆಯ ಮಲ್ಪೆ ವಡಭಾಂಡೇಶ್ವರ ಬಸ್‌ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದು, ಅವರಿಗೆ ನ್ಯಾಯಾಲಯ ಎರಡು ವರ್ಷಗಳ ಸಜೆ ಮತ್ತು 10,000 ರೂ. ದಂಡ ವಿಧಿಸಿ ಆದೇಶ ನೀಡಿದೆ.

ಆರೋಪಿಗಳು ಭಾರತ ದೇಶದ ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ, ಅಕ್ರಮವಾಗಿ ನಕಲಿ ಆಧಾರ್‌ ಕಾರ್ಡ್‌ ದಾಖಲೆಗಳನ್ನು ಸೃಷ್ಟಿಸಿ, ವಂಚಿಸುವ ಉದ್ದೇಶದಿಂದ ಸುಳ್ಳು ಸ್ಪಷ್ಟನೆ ನೀಡಿ, ಬಾಂಗ್ಲಾದೇಶದಿಂದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿದ್ದರು. ಅವರನ್ನು ವಶಕ್ಕೆ ಪಡೆದು ಠಾಣೆಗೆ ನೀಡಿದ ದೂರಿನಂತೆ, ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅವರ ವಿರುದ್ದ ಕಲಂ 336(2), 336(3), 340(2), 319(2), 318(4) ಜೊತೆಗೆ 3(5) BNS ಮತ್ತು 14(A) ವಿದೇಶೀಗರ ಕಾಯ್ದೆ, ಕಲಂ:34 ,42 ಆಧಾರ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಅಕ್ರಮವಾಗಿ ಉಡುಪಿಗೆ ಬಂದ ಆರೋಪಿಗಳಾದ ಹಕೀಮ್‌ ಆಲಿ, ಸುಜೋನ್‌ ಎಸ್‌.ಕೆ., ಇಸ್ಮಾಯಿಲ್‌ ಎಸ್‌.ಕೆ., ಕರೀಮ್‌ ಎಸ್‌.ಕೆ, ಸಲಾಂ ಎಸ್‌.ಕೆ, ರಾಜಿಕುಲ್‌ ಎಸ್‌.ಕೆ,ಮೊಹಮ್ಮದ್‌ ಸೋಜಿಬ್‌, ರಿಮೂಲ್‌, ಮೊಹಮ್ಮದ್‌ ಇಮಾಮ್‌ ಶೇಖ್‌ ಹಾಗೂ ಮೊಹಮ್ಮದ್‌ ಜಹಾಂಗಿರ್‌ ಆಲಂ ವಿರುದ್ದ ಪೊಲೀಸರು ಉಡುಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಡಿಸೆಂಬರ್ 08ರಂದು 10 ಮಂದಿ ಆರೋಪಿಗಳಿಗೆ 2 ವರ್ಷಗಳ ಕಾಲ ಸಜೆ ಮತ್ತು ತಲಾ 10,000 ರೂ. ದಂಡ ವಿಧಿಸಿ ಆದೇಶಿಸಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣ, ಮಾದಕದ್ರವ್ಯ ಸಾಗಿಸುತ್ತಿದ್ದವರಿಗೆ ಕಠಿಣ ಸಜೆ: ಎಂಡಿಎಂಎ ಮಾದಕದ್ರವ್ಯ ಸಾಗಾಟ ಮಾಡುತ್ತಿದ್ದ ಐವರು ಅಪರಾಧಿಗಳಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇತ್ತೀಚೆಗೆ ಕಠಿಣ ಸಜೆ ವಿಧಿಸಿ ಆದೇಶಿಸಿತ್ತು.

ಮೂಲತಃ ರಿಪಬ್ಲಿಕ್ ಆಫ್ ಸೌತ್ ಸೂಡಾನ್‌ನ ಜುಬ ನಿವಾಸಿ, ಸದ್ಯ ಬೆಂಗಳೂರಿನ ಗುಂಜೂರು ಪಾಳ್ಯ ವರ್ತೂರು ನಿವಾಸಿ ಲೂಯಲ್ ಡೇನಿಯಲ್ ಜಸ್ಟಿನ್ ಬೌಲೊ (25), ಕೇರಳ ರಾಜ್ಯದ ಕಾಸರಗೋಡು ಉಪ್ಪಳ ನಿವಾಸಿಗಳಾದ ಮಹಮ್ಮದ್ ರಮೀಜ್ (24), ಅಬ್ದುಲ್ ರವೂಫ್ (35), ಕೇರಳ ರಾಜ್ಯದ ಕಾಸರಗೋಡು ಶಿರಿಯಾ ನಿವಾಸಿ ಮೊಹಿದ್ದೀನ್ ರಶೀದ್ (24), ತಮಿಳುನಾಡು ರಾಜ್ಯದ ಊಟಿಯ ಕುನ್ನೂರು ಸಬಿತಾ (25) ಶಿಕ್ಷೆಗೊಳಗಾದ ಆರೋಪಿಗಳು.

ಪ್ರಕರಣದಲ್ಲಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಅವರು 1ರಿಂದ 5ನೇ ಆರೋಪಿಗಳಾದ ಲೂಯಲ್ ಡೇನಿಯಲ್ ಜಸ್ಮಿನ್ ಬೌಲೊ, ಮಹಮ್ಮದ್ ರಮೀಜ್, ಮೊಹಿದೀನ್ ರಾಶೀದ್, ಅಬ್ದುಲ್ ರವೂಫ್ ಮತ್ತು ಸಬೀತಾಗೆ ಮಾದಕದ್ರವ್ಯ ಹೊಂದಿರುವ ಮತ್ತು ಮಾದಕದ್ರವ್ಯ ಸೇವನೆ ಮಾಡಿದ ಅಪರಾಧಕ್ಕೆ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದರು.

ಮಾದಕದ್ರವ್ಯ ಸ್ವಾಧೀನ ಮತ್ತು ಸಾಗಾಟ ಮಾಡಿದ ಎನ್.ಡಿ.ಪಿ.ಎಸ್. ಕಾಯ್ದೆಯ ಕಲಂ 21(C) ರ ಅಪರಾಧಕ್ಕೆ ಪ್ರಕರಣದ 1ನೇ ಆರೋಪಿ ಲೂಯಲ್ ಡೇನಿಯಲ್ ಜಸ್ಟಿನ್ ಬೌಲೊ ಅಲಿಯಾಸ್ ಡ್ಯಾನಿ, 3ನೇ ಆರೋಪಿ ಮೊಹಿದ್ದೀನ್ ರಾಶೀದ್ ಮತ್ತು 5ನೇ ಆರೋಪಿ ಸಬಿತಾ ಅಲಿಯಾಸ್ ಚಿಂಜುಗೆ 12 ವರ್ಷ ಕಠಿಣ ಸಜೆ ಮತ್ತು ತಲಾ 1,25,000ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 4 ತಿಂಗಳ ಕಠಿಣ ಸಜೆ ವಿಧಿಸಿ ಆದೇಶಿಸಿದ್ದರು.

ಇದನ್ನೂ ಓದಿ: ಕೊಲೆ ಪ್ರಕರಣದ ಗಾಯಾಳು, ಮೃತರ ರಕ್ತದ ಮಾದರಿಗಳ ಪರೀಕ್ಷೆ ಕಡ್ಡಾಯಗೊಳಿಸಿ: ಹೈಕೋರ್ಟ್ ನಿರ್ದೇಶನ