ಬೆಂಗಳೂರಲ್ಲಿ ಒಡಿಶಾ ದಂಪತಿ ಸಾವು: ಪತ್ನಿ ಕೊಂದು ಪತಿ ಆತ್ಮಹತ್ಯೆ
ಕೆಲ ದಿನಗಳ ಹಿಂದೆ ದಂಪತಿ ಸೂರ್ಯನಗರ ಠಾಣಾ ವ್ಯಾಪ್ತಿಯ ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಬಂದಿದ್ದರು.

Published : March 1, 2026 at 11:33 AM IST
ಆನೇಕಲ್(ಬೆಂಗಳೂರು): ಪತಿ ತನ್ನ ಪತ್ನಿಯನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೂರ್ಯನಗರ ಠಾಣೆ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಒಡಿಶಾದ ದೀಪಾಂತ ಸಬರ (31) ಮತ್ತು ಪತ್ನಿ ಮಂಜುಳಾ ಸಬರ (27) ಮೃತರು. 20 ದಿನಗಳ ಹಿಂದಷ್ಟೇ ದಂಪತಿ ಬಾಡಿಗೆ ಮನೆಗೆ ಬಂದಿದ್ದರು. ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ನಡುವೆ ಜಗಳ ನಡೆದಿದ್ದು, ಕೋಪದಲ್ಲಿ ಪತ್ನಿಯನ್ನು ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಮನೆ ಮಾಲೀಕ ಶಿವಕುಮಾರ್ ಇಪ್ಪತ್ತು ದಿನಗಳ ಹಿಂದೆ ದಂಪತಿಗೆ ಮನೆ ಕೊಟ್ಟಿದ್ದರು. ಗುರುವಾರ ರಾತ್ರಿ ಮನೆ ಮಾಲೀಕರ ತಾಯಿ ಚೌಡಮ್ಮ ಮನೆ ಬಳಿ ನೋಡಿದಾಗ ಮಂಚದ ಮೇಲೆ ಮಹಿಳೆಯ ಶವ ಕಾಣಿಸಿದೆ. ಕೂಡಲೇ ಸೂರ್ಯ ನಗರ ಪೊಲೀಸರಿಗೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಪತ್ನಿಯ ಶವದ ಮುಂದೆ ಪತಿ ಅಳುತ್ತಲೇ ಸೆಲ್ಫಿ ವಿಡಿಯೋ ಮಾಡಿ ಆ ನಂತರ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರಿಗೆ ಸಿಕ್ಕ ಮೊಬೈಲ್ನಲ್ಲಿ ಬೆಳಕಿಗೆ ಬಂದಿದೆ.

ಪತಿ ಒಡಿಶಾ ಭಾಷೆಯಲ್ಲಿ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಬಂದ ಸೂರ್ಯನಗರ ಪೊಲೀಸರು ಮನೆ ಬಾಗಿಲು ಮುರಿದು ನೋಡಿದಾಗ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತು ಮಂಚದ ಮೇಲೆ ಪತ್ನಿ ಕೊಲೆಯಾಗಿರುವುದು ಗೊತ್ತಾಗಿದೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನದ ಹಿಂದೆ ಘಟನೆ ನಡೆದಿರುವ ಸಾಧ್ಯತೆ ಇದ್ದು, ಮೃತದೇಹಗಳು ಕೊಳೆಯುವ ಸ್ಥಿತಿಗೆ ಬಂದಿದ್ದವು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ.
ಡಿವೈಎಸ್‌ಪಿ ಮಲ್ಲೇಶ್ ಗೌಡ, ಸೂರ್ಯ ನಗರ ಠಾಣೆಯ ಇನ್‌ಸ್ಪೆಕ್ಟರ್ ಸಂಜೀವ್ ಮಹಾಜನ್ ಅವರು ಸ್ಥಳ ಪರಿಶೀಲನೆ ನಡೆಸಿದರು.
ಆತ್ಮಹತ್ಯೆ ಪರಿಹಾರವಲ್ಲ: ನಿಮಗೆ ಆತ್ಮಹತ್ಯಾ ಆಲೋಚನೆಗಳು ಬರುತ್ತಿದ್ದರೆ ಅಥವಾ ನೀವು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದರೆ, ಇಲ್ಲವೇ ನಿಮಗೆ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ಸಲಹೆ ನೀಡಲು ಯಾವಾಗಲೂ, ಯಾರಾದರೂ ಇದ್ದೇ ಇರುತ್ತಾರೆ. ಸ್ನೇಹ ಫೌಂಡೇಶನ್ - 04424640050 (24x7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ ಐಕಾಲ್ ನಂಬರ್ 9152987821 (ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿದೆ)ಗೆ ಕರೆ ಮಾಡಬಹುದು.
ಇದನ್ನೂ ಓದಿ: ಬೆಂಗಳೂರು: ಇಂಗು ಗುಂಡಿ ಶುಚಿಗೊಳಿಸುವಾಗ ಮೂರ್ಛೆ ತಪ್ಪಿ ಮೂವರು ಸಾವು

