ಮುಂದುವರಿದ ಮಳೆ ಆರ್ಭಟ: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಣೆ
ಅಂಗನವಾಡಿ ಕೇಂದ್ರಗಳು/ಪ್ರಾಥಮಿಕ/ಪ್ರೌಢಶಾಲೆಗಳು ಹಾಗೂ ಪಿಯುಸಿ (12ನೇ ತರಗತಿಯವರೆಗಿನ) ಕಾಲೇಜುಗಳಿಗೆ ಮಂಗಳವಾರ (ಜುಲೈ 7) ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶ ಹೊರಡಿಸಿದ್ದಾರೆ.

Published : July 6, 2026 at 10:24 PM IST
|Updated : July 7, 2026 at 6:44 AM IST
ಬೆಳಗಾವಿ: ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ, ಬೆಳಗಾವಿ ತಾಲೂಕು ಮತ್ತು ಖಾನಾಪುರ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿನ ಅಂಗನವಾಡಿ ಕೇಂದ್ರಗಳು/ಪ್ರಾಥಮಿಕ/ಪ್ರೌಢಶಾಲೆಗಳು ಹಾಗೂ ಪಿಯುಸಿ (12ನೇ ತರಗತಿಯವರೆಗಿನ) ಕಾಲೇಜುಗಳಿಗೆ ಮಂಗಳವಾರ (ಜುಲೈ 7) ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶ ಹೊರಡಿಸಿದ್ದಾರೆ.
ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಡಿ ತಾಲೂಕುಗಳಾದ ಚಿಕ್ಕೋಡಿ ಹಾಗೂ ನಿಪ್ಪಾಣಿಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹಲವು ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿವೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬರೋಬ್ಬರಿ 60 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದರ ಜೊತೆಗೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದಲೂ ಸುಮಾರು 40 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ.
ಪಶ್ಚಿಮ ಘಟ್ಟ ಮತ್ತು ಖಾನಾಪುರದ ಕಣಕುಂಬಿ ಅರಣ್ಯಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಲಪ್ರಭಾ ನದಿಗೆ ಜೀವಕಳೆ ಬಂದಿದೆ. ನದಿ ತುಂಬಿ ಹರಿಯುತ್ತಿರುವ ಪರಿಣಾಮ, ನದಿ ತಟದಲ್ಲಿರುವ ಇಲ್ಲಿನ ಹಬ್ಬಾನಟ್ಟಿ ಗ್ರಾಮದ ಹೊರವಲಯದಲ್ಲಿರುವ ಪುರಾತನ ಮಾರುತಿ ಮಂದಿರ ಭಾಗಶಃ ಜಲಾವೃತಗೊಂಡಿದೆ.
ಮಾರುತಿ ಮಂದಿರದ ಗರ್ಭಗುಡಿ ಸೇರಿದಂತೆ ರಾಮ, ಲಕ್ಷ್ಮಣ, ಸೀತಾ ಮೂರ್ತಿಗಳ ಕತ್ತಿನವರೆಗೆ ನೀರು ಬಂದಿದೆ. ಅಲ್ಲದೇ ಇಲ್ಲೇ ಇರುವ ಶಿವನ ಮಂದಿರ ಕೂಡ ಈಗಾಗಲೇ ನೀರಿನಲ್ಲಿ ಮುಳುಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ದೇವಾಲಯವು ಮುಳುಗಡೆಯಾಗುವುದು ಸಾಮಾನ್ಯವಾಗಿದ್ದು, ಕೆಲವೊಮ್ಮೆ ನಾಲ್ಕು ತಿಂಗಳ ಕಾಲ ನೀರು ಖಾಲಿ ಆಗುವುದಿಲ್ಲ. ನಿರಂತರ ಮಳೆ ಆಗುತ್ತಿರುವುದರಿಂದ ದೇವಾಲಯ ಸಂಪೂರ್ಣವಾಗಿ ಮುಳುಗಡೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಪರ್ಯಾಯ ದ್ವೀಪದಲ್ಲಿ ಮುಂದುವರೆಯುವ ಮಳೆ: ಕೇರಳ, ಕರಾವಳಿ ಕರ್ನಾಟಕ, ಆಂಧ್ರಪ್ರದೇಶದ ಕರಾವಳಿ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಧಾರಾಕಾರ ಮಳೆ ಆಗುವ ಸಾಧ್ಯತೆಗಳಿವೆ. ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.
ಇದನ್ನು ಓದಿ:
ಬೆಳಗಾವಿಯಲ್ಲಿ ಬಿರುಗಾಳಿಗೆ ಧರೆಗುರುಳಿದ ಬೃಹತ್ ಹುಣಸೆಮರ: ನಾಲ್ಕು ಮನೆಗಳಿಗೆ ಹಾನಿ, ಸಂಕಷ್ಟದಲ್ಲಿ ಬಡ ಕುಟುಂಬಗಳು

