ETV Bharat / state

ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ: ಕಾಂಗ್ರೆಸ್​ ಕಾರ್ಯಕರ್ತರ ಸಂಭ್ರಮ

ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಸುಪ್ರೀಂ ಕೋರ್ಟ್​ನಿಂದ ಬಿಗ್ ರಿಲೀಫ್​ ಸಿಕ್ಕ ಹಿನ್ನೆಲೆಯಲ್ಲಿ ಬಾಗೇಪಲ್ಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

RELIEF TO MLA SN SUBBAREDDY
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಕಾಂಗ್ರೆಸ್​ ಕಾರ್ಯಕರ್ತರ ಸಂಭ್ರಮಾಚರಣೆ (ETV Bharat)
author img

By ETV Bharat Karnataka Team

Published : February 27, 2026 at 7:15 PM IST

2 Min Read
Choose ETV Bharat

ಚಿಕ್ಕಬಳ್ಳಾಪುರ: 2023ರ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಬ್ಬಾರೆಡ್ಡಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ. ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ದೇವದತ್ ಕಾಮತ್ ಅವರು ಅರ್ಜಿದಾರರ ಪರ ವಾದ ಮಂಡಿಸಿದರು.

ಕಾಂಗ್ರೆಸ್​ ಕಾರ್ಯಕರ್ತರ ಸಂಭ್ರಮ (ETV Bharat)

ಅರ್ಜಿದಾರ ಎಸ್‌.ಎನ್‌.ಸುಬ್ಬಾರೆಡ್ಡಿ ಅವರನ್ನು ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ವಿಧಾನಸಭೆಯ ಸದಸ್ಯರೆಂದು ಪರಿಗಣಿಸಬೇಕು. ಪ್ರತಿವಾದಿ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಅವರು ಪ್ರತಿಯಾಗಿ ಅಫಿಡವಿಟ್ ಸಲ್ಲಿಸಬೇಕೆಂದು ಪೀಠ ಹೇಳಿತು.

ಸುಪ್ರೀಂ ಕೋರ್ಟ್‌ನಲ್ಲಿ ಸುಬ್ಬಾರೆಡ್ಡಿ ಅವರ ಮೇಲ್ಮನವಿಯನ್ನು ವಿರೋಧಿಸಿದ ಮುನಿರಾಜು ಅವರ ವಕೀಲರು, ಅವರು ತಮ್ಮ ಮದ್ಯ ವ್ಯವಹಾರವನ್ನು ಬಹಿರಂಗಪಡಿಸಿಲ್ಲ ಎಂದು ವಾದಿಸಿದರು. ನಂತರ ಸಿಜೆಐ, "ನೀವು ಚುನಾವಣೆಯಲ್ಲಿ ಗೆಲ್ಲದಿದ್ದಾಗ, ನೀವು ಅಂತಹ ಆಧಾರಗಳನ್ನು ಹುಡುಕುತ್ತೀರಿ" ಎಂದರು.

ಸುಬ್ಬಾರೆಡ್ಡಿ ಆತಿಥ್ಯ ವ್ಯವಹಾರವನ್ನು ಬಹಿರಂಗಪಡಿಸಿದ್ದಾರೆ, ಆದರೆ ಅವರ ಮದ್ಯ ವ್ಯವಹಾರವನ್ನು ಬಹಿರಂಗಪಡಿಸಲಿಲ್ಲ ಎಂದು ವಾದಿಸಿದರು. ಇದಕ್ಕೆ ಪೀಠ, ಆದಾಯವನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆಯೇ ಹೊರತು ವ್ಯವಹಾರದ ಸ್ವರೂಪವಲ್ಲ. ನ್ಯಾಯಾಲಯಗಳು ಚಾರ್ಟರ್ಡ್ ಅಕೌಂಟೆಂಟ್ ಪಾತ್ರವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿತು. ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, 2026 ಸೆಪ್ಟೆಂಬರ್​ಗೆ ಮುಂದಿನ ವಿಚಾರಣೆಗೆ ನಿಗದಿಪಡಿಸಿದೆ.

ಆಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗಪಡಿಸದ ಕಾರಣ ಹೈಕೋರ್ಟ್ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿತ್ತು. ಇದು ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123(1)ರ ಪ್ರಕಾರ ಭ್ರಷ್ಟಾಚಾರವಾಗಿದೆ. ಆದಾಗ್ಯೂ, ಹೈಕೋರ್ಟ್ ಬಿಜೆಪಿ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಿಲ್ಲ.

ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ: ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿಗೆ ಸುಪ್ರೀಂ ಕೋರ್ಟ್​ನಿಂದ ಬಿಗ್ ರಿಲೀಫ್​ ಸಿಕ್ಕ ಹಿನ್ನೆಲೆ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬಾಗೇಪಲ್ಲಿ ಪಟ್ಟಣದ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ಕಚೇರಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸುಬ್ಬಾರೆಡ್ಡಿ ಗೃಹ ಕಚೇರಿಯಿಂದ ಗೂಳೂರು ವೃತ್ತ, ಹಳೆ ಮೈಸೂರ್ ಬ್ಯಾಂಕ್ ವೃತ್ತ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದವರೆಗೂ ಜಯ ಘೋಷಗಳೊಂದಿಗೆ ಮೆರವಣಿಗೆ ಸಾಗಿದರು.

ಪ್ರಕರಣದ ಹಿನ್ನೆಲೆ: 2023ರ ಮೇ 10ರಂದು ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟಗೊಂಡಿತ್ತು. ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್‌.ಎನ್‌. ಸುಬ್ಬಾರೆಡ್ಡಿ ಅವರು 82,128 ಮತಗಳನ್ನು ಪಡೆದು ಜಯಗಳಿಸಿದ್ದರು. ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಅಭ್ಯರ್ಥಿ ಸಿ.ಮುನಿರಾಜು ಅವರು 62,949 ಮತಗಳನ್ನು ಪಡೆದಿದ್ದರು. ಅ ಮೂಲಕ ಸುಬ್ಬಾರೆಡ್ಡಿ ಅವರ ಎದುರು ಮುನಿರಾಜು 19,179 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಬಳಿಕ ಸುಬ್ಬಾರೆಡ್ಡಿಯ ಆಯ್ಕೆ ಪ್ರಶ್ನಿಸಿ ಸಿ.ಮುನಿರಾಜು ಅವರು 2023ರ ಜೂ.24ರಂದು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಇವುಗಳನ್ನೂ ಓದಿ: