ವೈರಲ್ ಆಡಿಯೋ ಸತ್ಯಕ್ಕೆ ದೂರವಾದ ಮಾತು, ಷಡ್ಯಂತ್ರ ಮಾಡಿದ್ದಾರೆ: ಮೊಹಮ್ಮದ್ ಸಿರಾಜ್
ಸಾಮಾಜಿಕ ಜಾಲತಾಣದಲ್ಲಿ ಆಡಿಯೋವೊಂದು ಫುಲ್ ವೈರಲ್ ಆಗಿದೆ. ಇದು ಸತ್ಯಕ್ಕೆ ದೂರವಾದ ಮಾತು. ಇದರ ಬಗ್ಗೆ ನಾನು ಜಮೀರ್ ಸಾಹೇಬ್ರು ಯಾವಾಗಲು ಮಾತನಾಡಿಲ್ಲ ಎಂದು ಮೊಹಮ್ಮದ್ ಸಿರಾಜ್ ಸ್ಪಷ್ಟಪಡಿಸಿದರು.

Published : June 1, 2026 at 3:54 PM IST
ದಾವಣಗೆರೆ: ದಾವಣಗೆರೆ ದಕ್ಷಿಣ ಮತ ಕ್ಷೇತ್ರದ ಉಪಚುನಾವಣೆ ವೇಳೆ ಮಾತನಾಡಿದ್ದಾರೆ ಎನ್ನಲ್ಲಾದ ಆಡಿಯೋವೊಂದು ವೈರಲ್ ಆಗಿದೆ. ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಕೆಎಂಡಿಸಿ ಮಾಜಿ ನಿರ್ದೇಶಕ ಮೊಹಮ್ಮದ್ ಸಿರಾಜ್ ಅವರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಈ ಕುರಿತು ಕೆಎಂಡಿಸಿ ಮಾಜಿ ನಿರ್ದೇಶಕ ಮೊಹಮ್ಮದ್ ಸಿರಾಜ್ ಮಾತನಾಡಿ, "ಮಾಧ್ಯಮದಲ್ಲಿ ಬಂದ ಬಳಿಕವೇ ನನಗೆ ಗೊತ್ತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್ ಆಗಿದೆ. ಇದು ಸತ್ಯಕ್ಕೆ ದೂರವಾದ ಮಾತು. ಇದರ ಬಗ್ಗೆ ನಾನು ಜಮೀರ್ ಸಾಹೇಬ್ರು ಯಾವಾಗಲು ಮಾತನಾಡಿಲ್ಲ. ಜಮೀರ್ ಸಾಹೇಬ್ರ ಜೊತೆ ದಾವಣಗೆರೆ ದಕ್ಷಿಣ ಟಿಕೆಟ್ ಬಗ್ಗೆ ಮೂಡಿದ್ದ ಭಿನ್ನಮತವನ್ನು ಸರಿ ಮಾಡುವ ಬಗ್ಗೆ ಮಾತನಾಡಿದ್ದೆವು. ಇದರ ಹಿಂದೆ ಯಾರ ಕೈವಾಡ ಇದೆ. ಯಾರು ವೈರಲ್ ಮಾಡಿದ್ದಾರೆ ಎಂಬುದು ಇವತ್ತಿಲ್ಲ, ನಾಳೆ ತಿಳಿದು ಬರಲಿದೆ. ನಾನು ಯಾವಾಗಲೂ ಈ ರೀತಿ ಮಾತನಾಡಿಲ್ಲ, ಜಮೀರ್ ಸಾಹೇಬ್ರು ಕೂಡ ಈ ರೀತಿ ಯಾವಾಗಲೂ ನನಗೂ ಕೇಳಿಲ್ಲ. ಶೇ.100% ಸತ್ಯಕ್ಕೆ ದೂರವಾದ ಮಾತು. ಮೇಲ್ನೋಟಕ್ಕೆ ಇದರ ಹಿಂದೆ ಷಡ್ಯಂತ್ರ ಮಾಡಿದ್ದಾರೆ ಎಂದು ಗೊತ್ತಾಗುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ಜಮೀರ್ ವಿರುದ್ಧ ಏನೇ ಷಡ್ಯಂತ್ರ ಮಾಡಿದ್ರು ನಡೆಯಲ್ಲ: "ದಾವಣಗೆರೆ ದಕ್ಷಿಣ ಉಪಚುನಾವಣೆಯ ಬಳಿಕ ನಮ್ಮ ವಿರುದ್ಧ ಸಾಕಷ್ಟು ಷಡ್ಯಂತ್ರಗಳು ನಡೆದಿವೆ. ನನ್ನ ವಿರುದ್ಧ ಜಬ್ಬಾರ್ ಹಾಗೂ ನಸೀರ್ ಸಾಹೇಬ್ರು ಅವರನ್ನು ಷಡ್ಯಂತ್ರ ಮಾಡಿ ಪಕ್ಷದಿಂದ ಹೊರಹಾಕಿದ್ರು. ಅಂದಿನಿಂದ ನಮ್ಮ ವಿರುದ್ಧ ಪಿತೂರಿ ನಡೆಯುತ್ತಲೇ ಇದೆ. ಯಾರು ಇದನ್ನು ವೈರಲ್ ಮಾಡಿದ್ರು ಅನ್ನೋದನ್ನು ಬಹಿರಂಗಪಡಿಸಲಿ ಎಂದು ಅವರು ಒತ್ತಾಯಿಸಿದರು.
ಜಮೀರ್ ಅಹ್ಮದ್ ಅವರ ವಿರುದ್ಧ ಏನೇ ಷಡ್ಯಂತ್ರ ಮಾಡಿದ್ರೂ ಏನೂ ನಡೆಯಲ್ಲ. ನಮ್ಮ ಸಮಾಜ ಎಲ್ಲವನ್ನು ನೋಡುತ್ತಿದೆ. ಅವರ ವಿರುದ್ಧ ಏನ್ ಷಡ್ಯಂತ್ರ ಮಾಡಿದ್ರು ಅವರಿಗೆ ಹಿನ್ನಡೆ ಆಗಲ್ಲ. ಇನ್ನು ಆಡಿಯೋದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಬಗ್ಗೆ ಪ್ರಸ್ತಾಪ ಮಾಡಿರುವ ಬಗ್ಗೆ ಮಾತನಾಡಿ, ಅವರು ನನಗೆ ಬಹಳ ಅತ್ಯಾಪ್ತ. ನಾನಲ್ಲ ನಮ್ಮ ಮಂತ್ರಿಯಾಗಿದ್ದ ಎಸ್.ಎಸ್ ಮಲ್ಲಿಕಾರ್ಜುನ ಅವರೇ ಹೇಳಿದ್ದಾರೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಅಪ್ತರು ಎಂದು ತಿಳಿಸಿದ್ದಾರೆ. ಇನ್ನು ಇದು ಯಾರು ಷಡ್ಯಂತ್ರ ಮಾಡಿದ್ದಾರೆ ಎಂದು ಗೊತ್ತಿದ್ದರೇ ಹೆಸರು ಸಮೇತ ಹೇಳುತ್ತಿದ್ದೆ. ನಾವು ಮಾತನಾಡಿದ್ರೆ ಒಂದು ನಾನು ವೈರಲ್ ಮಾಡ್ಬೇಕು, ಇಲ್ಲ ಜಮೀರ್ ಅವರು ವೈರಲ್ ಮಾಡ್ಬೇಕು. ನಾವು ಮಾತ್ನಾಡೇ ಇಲ್ಲ, ಇದು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.
ಡಿಸಿಎಂ ಸ್ಥಾನ ಕೊಡಬಾರದು ಎಂದು ಷಡ್ಯಂತ್ರ ಮಾಡಲಾಗಿದೆ: ಇನ್ನು ಅವರು ಆಡಿಯೋದಲ್ಲಿ ಎಲ್ಲೆಲ್ಲಿ ಏನ್ ಆಯ್ತು ಎಂದು ಕೇಳ್ತಿದ್ದಾರೆ. ಅದು ಮತದಾನದ ದಿನ ಮಾತನಾಡಿರುವ ಆಡಿಯೋ. ಅಂದು ಯಾರ ಫೋನ್ ರಿಸೀವ್ ಮಾಡಿಲ್ಲ, ಯಾರ ಜೊತೆನೂ ಮಾತನಾಡಿಲ್ಲ. ಇದನ್ನು ವೈರಲ್ ಮಾಡಿದವರು ಸಿಕ್ಕ ತಕ್ಷಣ ಯಾರು ಮಾಡಿದ್ದಾರೆ ಎಂದು ತಿಳಿದುಬರಲಿದೆ. ಈ ಹಿಂದೆ ನನ್ನ ವಿಡಿಯೋ, ಆಡಿಯೋ ವೈರಲ್ ಮಾಡಿದ್ದರು. ಇದೀಗ ಹೀಗೆ ಮಾಡಿದ್ದಾರೆ. ಇದೀಗ ಜಮೀರ್ ಸಾಹೇಬ್ರ ವಿರುದ್ಧ ಮಾಡಿರುವುದು ಬಹುದೊಡ್ಡ ಷಡ್ಯಂತ್ರ. ಅವರಿಗೆ ಡಿಸಿಎಂ ಸ್ಥಾನ ಕೊಡಬಾರದು ಎಂದು ಪಿತೂರಿ ಮಾಡಿ ಆಡಿಯೋ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದರು.
ಏನೇ ಮಾಡಿದರೂ ತಾಯಿ ದುಗ್ಗಮ್ಮನೇ ನೋಡಿಕೊಳ್ಳಲಿ - ಸಮರ್ಥ ಶಾಮನೂರು: ಈ ಆಡಿಯೋ ವೈರಲ್ ಕುರಿತು ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಮಾತನಾಡಿ, "ಚುನಾವಣೆ ಸಮಯದಲ್ಲಿ ಇದೆಲ್ಲ ಓಪನ್ ಸಿಕ್ರೇಟ್ ಆಗಿತ್ತು. ಇದರ ಬಗ್ಗೆ ಪಕ್ಷ ತನಿಖೆ ಮಾಡಿ ಕ್ರಮ ಕೈಗೊಳ್ಳಲಿ. ಒಂದು ಪಕ್ಷ ಎಂದ ಮೇಲೆ ಈ ರೀತಿ ಇರಲಿದೆ. ಹೈಕಮಾಂಡ್ ಕ್ರಮ ತೆಗೆದುಕೊಳ್ಳಲಿ. ಆ ಆಡಿಯೋದಲ್ಲಿ ಬಿಜೆಪಿ ಅಭ್ಯರ್ಥಿ, ಎಸ್ಡಿಪಿಐ ಬಗ್ಗೆ ಮಾತನಾಡಿರುವುದು ಸ್ಪಷ್ಟವಾಗಿದೆ. ಷಡ್ಯಂತ್ರ ಮಾಡುವುದರಲ್ಲಿ ಬಿಜೆಪಿ, ಎಸ್ಡಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳು ಒಂದಾಗಿದ್ದಾರೆ. ಈ ರೀತಿ ಸೋಲಿಸುವ ಷಡ್ಯಂತ್ರ ಮಾತ್ರ ನಡೆಯಲ್ಲ, ದುಗ್ಗಮ್ಮ ದೇವಿ ಅದಕ್ಕೆ ಇಲ್ಲಿ ಆಸ್ಪದ ಕೊಡಲ್ಲ. ಕೆಲವರು ನಮ್ಮ ವಿರುದ್ಧ ಷಡ್ಯಂತ್ರ ಮಾಡುವುದನ್ನು ಬಿಡಲಿ. ಆಡಿಯೋ ವೆರಿಫೈ ಮಾಡಲಿ, ಫೋರೆನ್ಸಿಕ್ ಲ್ಯಾಬ್‌ನಲ್ಲಿ ಪರೀಕ್ಷೆ ಆಗಲಿ. ತನಿಖೆ ಮಾಡಿ ಹೈಕಮಾಂಡ್ ಕ್ರಮ ಕೈಗೊಳ್ಳಲಿ. ಈ ಸಂಬಂಧ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ. ನಮ್ಮ ಪಕ್ಷದ ನಾಯಕರು ಆಂತರಿಕವಾಗಿ ಬಿಜೆಪಿ ಅಭ್ಯರ್ಥಿಗೆ ಸಪೋರ್ಟ್ ಮಾಡಿದ್ರು. ಮೇಲೆ ಒಬ್ಬ ದೇವರು ನೋಡುತ್ತಿದ್ದಾನೆ. ಅವರು ಷಡ್ಯಂತ್ರ ಮಾಡುವುದನ್ನು ಬಿಡಲಿ ಎಂದು ಹೇಳಿದರು.
ಇವುಗಳನ್ನೂ ಓದಿ:

