ಅಣು ವಿದ್ಯುತ್ ಕ್ಷೇತ್ರದಲ್ಲಿ ಭಾರತದ 'ಆತ್ಮನಿರ್ಭರ' ಜಿಗಿತ: ಕೈಗಾದಲ್ಲಿ 5 ಮತ್ತು 6ನೇ ಘಟಕಕ್ಕೆ ಚಾಲನೆ
ನಿನ್ನೆ ಕಾರವಾರದ ಕೈಗಾ ಅಣು ಸ್ಥಾವರದ 5 ಮತ್ತು 6ನೇ ಘಟಕದ ಕಾಂಕ್ರಿಟೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

Published : March 2, 2026 at 7:28 PM IST
ಕಾರವಾರ: "ದೇಶದಲ್ಲಿ ಅಣು ವಿದ್ಯುತ್ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತವು ಇಂದು ಅಣು ಶಕ್ತಿ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿದೆ" ಎಂದು ಅಣು ಶಕ್ತಿ ಆಯೋಗದ ಅಧ್ಯಕ್ಷ ಹಾಗೂ ಕೇಂದ್ರ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಡಾ. ಅಜಿತ್ ಕುಮಾರ್ ಮೊಹಂತಿ ತಿಳಿಸಿದರು.
ಕಾರವಾರದ ಕೈಗಾದಲ್ಲಿ ನಡೆದ 5 ಮತ್ತು 6ನೇ ಘಟಕಗಳ ಪ್ರಥಮ ಕಾಂಕ್ರಿಟೀಕರಣ ಕಾರ್ಯಕ್ಕೆ (FPC) ಚಾಲನೆ ನೀಡಿ, ಅವರು ಮಾತನಾಡಿದರು.
2047ಕ್ಕೆ 100 ಗಿಗಾವ್ಯಾಟ್ ಗುರಿ: ದೇಶವು 2047ರ ವೇಳೆಗೆ 100 ಗಿಗಾವ್ಯಾಟ್ ಅಣು ವಿದ್ಯುತ್ ಉತ್ಪಾದಿಸುವ ಬೃಹತ್ ಗುರಿ ಹೊಂದಿದ್ದು, ಈ ಪೈಕಿ ಎನ್.ಪಿ.ಸಿ.ಐ.ಎಲ್ ಒಂದೇ 54 ಗಿಗಾವ್ಯಾಟ್ ಉತ್ಪಾದನೆಯ ಜವಾಬ್ದಾರಿ ಹೊತ್ತಿದೆ. ಕೈಗಾದಲ್ಲಿ ಈಗ ನಿರ್ಮಾಣವಾಗುತ್ತಿರುವ 5 ಮತ್ತು 6ನೇ ಘಟಕಗಳು ಅತ್ಯಾಧುನಿಕ 700 ಮೆಗಾವ್ಯಾಟ್ ಸಾಮರ್ಥ್ಯದ 'ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್' ಮಾದರಿಯಾಗಿದ್ದು, ಇವು ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಸ್ಥಾವರಗಳ ಸಾಲಿಗೆ ಸೇರಿವೆ. ಈ ಹೊಸ ಘಟಕಗಳು ಪೂರ್ಣಗೊಂಡ ನಂತರ ಕೈಗಾದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಈಗಿನ 880 ಮೆಗಾ ವ್ಯಾಟ್‌ನಿಂದ 2,280 ಮೆಗಾ ವ್ಯಾಟ್‌ಗೆ ಏರಿಕೆಯಾಗಲಿದೆ.
ರಾಜ್ಯಕ್ಕೆ ಶೇ. 50 ರಷ್ಟು ವಿದ್ಯುತ್ ಲಭ್ಯ: ಹೊಸ ಘಟಕಗಳಿಂದ ಉತ್ಪಾದನೆಯಾಗುವ ಒಟ್ಟು ವಿದ್ಯುತ್ನಲ್ಲಿ ಶೇಕಡಾ 50ರಷ್ಟನ್ನು ಕರ್ನಾಟಕ ರಾಜ್ಯಕ್ಕೆ ನೀಡಲಾಗುವುದು ಎಂದು ಡಾ. ಮೊಹಂತಿ ಭರವಸೆ ನೀಡಿದರು. ಅಲ್ಲದೆ, ಕೇವಲ 100-200 ಎಕರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸಬಲ್ಲ 55 ಮೆಗಾವ್ಯಾಟ್ ಸಾಮರ್ಥ್ಯದ 'ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್' (SMR) ಸ್ಥಾಪನೆಗೂ ಚಿಂತನೆ ನಡೆದಿದೆ. ಪರಿಸರ ಸ್ನೇಹಿ ಇಂಧನಕ್ಕೆ ಒತ್ತು ನೀಡುತ್ತಿರುವ ಸರ್ಕಾರವು, ಇದುವರೆಗೆ 1,33,876 ದಶಲಕ್ಷ ಯೂನಿಟ್ ಹಸಿರು ವಿದ್ಯುತ್ ಉತ್ಪಾದಿಸುವ ಮೂಲಕ 1,080 ಲಕ್ಷ ಟನ್ ಕಾರ್ಬನ್ ಹೊರಸೂಸುವಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.

ಸ್ಥಳೀಯರಿಗೆ ಉದ್ಯೋಗ - ಅಂಕಿಅಂಶಗಳ ಸ್ಪಷ್ಟನೆ: ಸ್ಥಳೀಯರಿಗೆ ಉದ್ಯೋಗ ನೀಡುವ ಕುರಿತಾದ ಚರ್ಚೆಗಳಿಗೆ ಸ್ಪಷ್ಟನೆ ನೀಡಿದ ಅಧಿಕಾರಿಗಳು, ಕೈಗಾದ ಒಟ್ಟು 1,298 ನಿಯಮಿತ ಸಿಬ್ಬಂದಿಗಳಲ್ಲಿ 805 ಮಂದಿ ಕನ್ನಡಿಗರೇ ಇದ್ದಾರೆ. ಇದರಲ್ಲಿ 407 ಜನ ಉತ್ತರ ಕನ್ನಡ ಜಿಲ್ಲೆಯವರೇ ಆಗಿರುವುದು ವಿಶೇಷ. ಇತ್ತೀಚೆಗೆ ನೇಮಕಾತಿ ಪರೀಕ್ಷೆಯ ಉಚಿತ ತರಬೇತಿಗಾಗಿ 3,000 ಮಂದಿ ಅರ್ಜಿ ಸಲ್ಲಿಸಿದ್ದರೂ, ಕೇವಲ 130 ರಿಂದ 180 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು. ಜಿಲ್ಲೆಯಲ್ಲಿ ಹೈಟೆಕ್ ಪರೀಕ್ಷಾ ಕೇಂದ್ರಗಳ ಕೊರತೆಯೂ ನೇಮಕಾತಿ ಪ್ರಕ್ರಿಯೆಗೆ ಸವಾಲಾಗಿದೆ ಎಂದು ಅವರು ತಿಳಿಸಿದರು.
ಸಿಎಸ್‌ಆರ್ ಮೂಲಕ ಅಭಿವೃದ್ಧಿ ಕಾರ್ಯ: ಕೈಗಾ ಸ್ಥಾವರವು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ವಾರ್ಷಿಕ 12 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಿನಿಯೋಗಿಸುತ್ತಿದೆ. ಈವರೆಗೆ 30 ಶಾಲೆಗಳು, 15 ಸಮುದಾಯ ಭವನಗಳು ಮತ್ತು 2 ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ಸುತ್ತಮುತ್ತಲಿನ ಶಾಲಾ-ಕಾಲೇಜುಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ಒದಗಿಸಲಾಗುತ್ತಿದೆ. ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಲು 'ಶಾಂತಿ' (SHANTI) ಮಸೂದೆಯನ್ನು ಜಾರಿಗೆ ತರಲಾಗಿದ್ದು, ಇದು ಭಾರತದ ಇಂಧನ ಭದ್ರತೆಗೆ ಹೊಸ ವೇಗ ನೀಡಲಿದೆ.
ಕಾರ್ಯಕ್ರಮದಲ್ಲಿ NPCIL ಅಧ್ಯಕ್ಷ ಭುವನ್ ಚಂದ್ರ ಪಾಠಕ್, ಸ್ಥಳ ನಿರ್ದೇಶಕ ಬಿ. ವಿನೋದ್ ಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

