ETV Bharat / state

ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳಲ್ಲಿ ಕೆಲ ವಾಹನಗಳ ಸಂಚಾರ ಸಂಪೂರ್ಣ ನಿಷೇಧ

ಬೆಂಗಳೂರಿನಲ್ಲಿ ಫ್ಲೈಓವರ್‌ಗಳಲ್ಲಿ ಹೊಸ ಸಂಚಾರ ನಿಯಮ ಜಾರಿಯಾಗುತ್ತಿದೆ. ನಗರದ ಪ್ರಮುಖ ಮೇಲ್ಸೇತುವೆಗಳಲ್ಲಿ ಕೆಲವು ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.

Complete ban on some vehicles on major flyovers in Bengaluru
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : August 31, 2026 at 7:29 AM IST

2 Min Read
Choose ETV Bharat

​ಬೆಂಗಳೂರು: ನಗರದ ಪ್ರಮುಖ ಫ್ಲೈಓವರ್‌ಗಳ ಮೇಲೆ ಕೆಲ ನಿರ್ದಿಷ್ಟ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಆದೇಶಿಸಿದೆ.

ರಾಜಧಾನಿಯ ರಸ್ತೆಗಳಲ್ಲಿ ಸುರಕ್ಷತೆ ಹೆಚ್ಚಳ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಮಾರಣಾಂತಿಕ ಅಪಘಾತಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟಂಬರ್ 4ರಿಂದಲೇ ಕೆಲವೆಡೆ ಈ ನೂತನ ನಿಯಮ ಜಾರಿಯಾಗಲಿದೆ ಎಂದು ಸಂಚಾರ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್‌ ಮೇಲೆ ಭಾರಿ ಸರಕು ಸಾಗಣೆ ವಾಹನಗಳಿಗೆ ದಿನದ 24 ಗಂಟೆಯೂ ನಿಷೇಧ ಹೇರಲಾಗಿದೆ. ಇತರೆ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11 ಮತ್ತು ಸಂಜೆ 4ರಿಂದ ರಾತ್ರಿ 10 ಗಂಟೆಯವರೆಗೆ ಸಂಚಾರ ನಿರ್ಬಂಧ ವಿಧಿಸಲಾಗಿದೆ.

ಪೀಣ್ಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಆಟೋ ರಿಕ್ಷಾಗಳು ಮತ್ತು ತ್ರಿಚಕ್ರದ ಗೂಡ್ಸ್ ಆಟೋಗಳಿಗೆ 24 ಗಂಟೆಯೂ ನಿಷೇಧಿಸಲಾಗಿದೆ. ಭಾರಿ ಹಾಗೂ ಮಧ್ಯಮ ಸರಕು ವಾಹನಗಳಿಗೆ ಬೆಳಗ್ಗೆ 7ರಿಂದ 11 ಮತ್ತು ಸಂಜೆ 4 ರಿಂದ ರಾತ್ರಿ 10ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ.

ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡವರೆಗಿನ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ದಿನದ 24 ಗಂಟೆಯೂ ನಿಷೇಧಿಸಲಾಗಿದೆ. ​ಸಂಜೀವ ನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳಿಗೆ ದಿನದ 24 ಗಂಟೆಯೂ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಹಾಗೂ ಎಲ್ಲಾ ವಿಧದ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ನಿರ್ಬಂಧವಿರಲಿದೆ.

ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲಿ ದ್ವಿಚಕ್ರ ವಾಹನಗಳು, ಪ್ರಯಾಣಿಕರ ಆಟೋ ಹಾಗೂ ಗೂಡ್ಸ್ ಆಟೋಗಳಿಗೆ ದಿನದ 24 ಗಂಟೆಯೂ ನಿಷೇಧ ಹೇರಲಾಗಿದ್ದು, ಎಲ್ಲಾ ಮಾದರಿಯ ಸರಕು ಸಾಗಾಣಿಕೆ ವಾಹನಗಳಿಗೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ನಿರ್ಬಂಧ ವಿಧಿಸಲಾಗಿದೆ.

​ಈ ನೂತನ ನಿಯಮಗಳು ಬಿಜಿಎಸ್ ಫ್ಲೈಓವರ್, ಪೀಣ್ಯ ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್ ಫ್ಲೈಓವರ್ ಹಾಗೂ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಸೆಪ್ಟಂಬರ್ 4ರಿಂದ ಜಾರಿಗೆ ಬರಲಿವೆ. ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸೆಪ್ಟಂಬರ್ 11ರಿಂದ ಈ ನಿಯಮ ಅನ್ವಯವಾಗಲಿದೆ. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಬಗೆಹರಿದ 14 ವರ್ಷಗಳ ತೆರಿಗೆ ವಿವಾದ: 700 ಕೋಟಿ ರೂ.ಗೂ ಹೆಚ್ಚು ಹಣ ವಸೂಲಿ ಮಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ