ದುನಿಯಾ ವಿಜಯ್ ಪುತ್ರನಿಂದ ಹಲ್ಲೆ ಆರೋಪ: ಸ್ನೇಹಿತನಿಂದ ಪೊಲೀಸರಿಗೆ ದೂರು
ಕಾರು ಓವರ್ ಟೇಕ್ ಮಾಡಿದ್ದಕ್ಕೆ ನಟ ದುನಿಯಾ ವಿಜಯ್ ಪುತ್ರ ತನ್ನ ಸ್ನೇಹಿತನ ಮೇಲೆಯೇ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

Published : September 2, 2026 at 7:31 AM IST
ಬೆಂಗಳೂರು: ಐ20 ಕಾರಿನಿಂದ ಐಷಾರಾಮಿ ಜಿಪ್ಸಿ ಕಾರನ್ನು ಓವರ್ ಟೇಕ್ ಮಾಡಿದ್ದಕ್ಕೆ ಕೋಪಗೊಂಡ ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್, ತನ್ನ ಸ್ನೇಹಿತನನ್ನೇ ಅಪಹರಿಸಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.
ಸೋಮವಾರ ಸಂಜೆ ವಿಜಯ್ ಪುತ್ರ ಸಾಮ್ರಾಟ್ ತನ್ನ ಸ್ನೇಹಿತರೊಂದಿಗೆ ಜಿಪ್ಸಿ ಕಾರಲ್ಲಿ ಹೊರಟಿದ್ದ. ಆಗ ಆತನ ಮತ್ತೊಬ್ಬ ಸ್ನೇಹಿತ ಆರ್.ಆರ್. ನಗರದ ಮನೀಶ್ ಐ20 ಕಾರಲ್ಲಿ ಅತೀ ವೇಗವಾಗಿ ಕಾರು ಚಾಲನೆ ಮಾಡಿ ಇವರನ್ನು ಓವರ್ ಟೇಕ್ ಮಾಡಿದ್ದ. ಇದೇ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗಿದ್ದು, ನೂಕಾಟ ತಳ್ಳಾಟ ಆಗಿದೆ. ಈ ವೇಳೆ ಮನೀಶ್, ಸಾಮ್ರಾಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ‘ನನ್ನನ್ನು ಕಾರಲ್ಲಿ ಅಪಹರಿಸಿಕೊಂಡು ಹಲ್ಲೆ ಮಾಡಿದ್ದಾರೆ’ ಎಂದು ಕೆಂಗೇರಿ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಕೃತ್ಯ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮರಾಗಳಿಲ್ಲ. ಈವರೆಗೂ ಯಾವುದೇ ಎಫ್ಐಆರ್ ಮಾಡಿಕೊಂಡಿಲ್ಲ. ಎರಡೂ ಕಡೆಯವರೂ ದೂರು ಸಲ್ಲಿಸಲು ಬಂದಿದ್ದಾರೆ. ಕೃತ್ಯದ ಸತ್ಯಾಸತ್ಯತೆ ತಿಳಿದು ದೂರು ದಾಖಲಿಸಿಕೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮ್ರಾಟ್ ಹಾಗೂ ಮನೀಶ್ ಆರ್.ವಿ. ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕ ಕಾರಣಕ್ಕೆ ಮುನಿಸುಕೊಂಡು ಠಾಣೆ ಮೆಟ್ಟಿಲೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಮ್ರಾಟ್ ವಿಜಯ್ನಿಂದ ಹಲ್ಲೆಯಾಗಿದೆ ಎಂದು ಆರೋಪಿಸಿರುವ ಸ್ನೇಹಿತ ಮನೀಶ್ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ''ನಾನು ಕಾಲೇಜಿನ ಹತ್ತಿರ ಹೋಗಿದ್ದೆ. ದುನಿಯಾ ವಿಜಯ್ ಅವರ ಮಗ ಬಂದು ನನ್ನನ್ನು ಕರೆದುಕೊಂಡು ಹೋಗಿ ಹೊಡೆದು ಕಳಿಸಿದ್ದಾರೆ. ಆತ ನನಗೆ ಮ್ಯೂಚ್ಯೂಲ್ ಫ್ರೆಂಡ್ ಆಗಿದ್ದ, ಕಾರು ಓವರ್ ಟೇಕ್ ವಿಚಾರಕ್ಕೆ ಗಲಾಟೆಯಾಗಿತ್ತು. ಇಂದು ಕಾಲೇಜಿನ ಹಿಂಭಾಗದಿಂದ ಕರೆದುಕೊಂಡು ಹೋಗಿ 6 ಜನ ಸೇರಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಎಲ್ಲರ ವಿರುದ್ಧ ದೂರು ನೀಡಿದ್ದೇನೆ'' ಎಂದು ಹೇಳಿದ್ದಾನೆ.
ಇದನ್ನೂ ಓದಿ: ಮದ್ಯ ಸೇವಿಸಿ ರಾದ್ಧಾಂತ ಮಾಡಿದ್ದ ವ್ಯಕ್ತಿಗೆ 50 ಗಿಡ ನೆಡುವ ಶಿಕ್ಷೆ: ಚಿಕ್ಕೋಡಿ ಕೋರ್ಟ್‌ನಿಂದ ಪರಿಸರ ಸ್ನೇಹಿ ತೀರ್ಪು!

