ಅಬ್ಬಾ ಕೆ.ಜಿಗೆ ₹600! ದಾಖಲೆ ಬೆಲೆ ತಲುಪಿದ ತೆಂಗಿನೆಣ್ಣೆ: ಇಷ್ಟೊಂದು ದುಬಾರಿಯಾಗಲು ಕಾರಣವಾದ ಅಂಶಗಳಿವು
ಒಣ ಕೊಬ್ಬರಿ ದರ ಸತತ ಏರಿಕೆ ಹಾಗೂ ತೆಂಗಿನ ಕೃಷಿ ಪ್ರಮಾಣ ಕಡಿಮೆಯಾಗಿರುವುದೂ ಸೇರಿದಂತೆ ಇತರೆ ಕಾರಣಗಳಿಗಾಗಿ ಕೊಬ್ಬರಿ ಎಣ್ಣೆ ಬೆಲೆ ಗಗನಮುಖಿಯಾಗಿದೆ.

Published : February 16, 2026 at 4:24 PM IST
ವಿಶೇಷ ವರದಿ- ನೂರುಲ್ಲಾ ಡಿ, ವಿನೋದ್ ಪುದು
ದಾವಣಗೆರೆ/ಮಂಗಳೂರು: ಒಣ ಕೊಬ್ಬರಿ ದರ ಏರಿಕೆ, ಇಳುವರಿ ಕುಂಠಿತ ಹಾಗೂ ತೆಂಗಿನ ಕೃಷಿ ಪ್ರಮಾಣ ಕುಸಿತದಿಂದ ಕೊಬ್ಬರಿ ಎಣ್ಣೆ (ತೆಂಗಿನೆಣ್ಣೆ) ದುಬಾರಿಯಾಗಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುವ ಪರಿಸ್ಥಿತಿ ಉದ್ಘವಿಸಿದೆ. ಒಣ ಕೊಬ್ಬರಿ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದ್ದು, ಮಾರಾಟಗಾರರಲ್ಲಿ ಸಂತಸ ತರಿಸಿದೆ. ಆದರೆ, ಕೊಬ್ಬರಿ ಎಣ್ಣೆ ದರ ದಾಖಲೆ ಮಟ್ಟ ತಲುಪಿ ಗ್ರಾಹಕರಿಗೆ ಸಂಕಟ ತಂದಿದೆ.
- ಕಳೆದ ನಾಲ್ಕು ತಿಂಗಳ ಹಿಂದಷ್ಟೇ 1 ಕೆ.ಜಿ ಕೊಬ್ಬರಿ ಎಣ್ಣೆ ದರ ಕೇವಲ 320 ರೂ. ಇತ್ತು. ಇದೀಗ 550 ರಿಂದ 600 ರೂ. ತಲುಪಿದೆ.
- ಒಣ ಕೊಬ್ಬರಿ ದರ ಸತತ ಏರಿಕೆಯಾಗುತ್ತಿರುವುದೇ ಕೊಬ್ಬರಿ ಎಣ್ಣೆಯ ಬೆಲೆ ಹೆಚ್ಚಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
- ಸದ್ಯ ಒಣ ಕೊಬ್ಬರಿ ಸಗಟು ದರ ಕ್ವಿಂಟಲ್ಗೆ ₹30ರಿಂದ 31 ಸಾವಿರಕ್ಕೆ ತಲುಪಿದೆ.
- ಎಣ್ಣೆ ತೆಗೆಯುವ ಗಾಣಗಳಲ್ಲಿ ದೊರೆಯುವ ಕೊಬ್ಬರಿ ಎಣ್ಣೆ ದರ ಕೂಡ ಗಗನಮುಖಿಯಾಗಿ, ಗ್ರಾಹಕರ ಜೇಬು ಸುಡುತ್ತಿದೆ.
ದರ ಏರಿಕೆಗೆ ಕಾರಣಗಳಿವು:
- ಕರಾವಳಿ ಭಾಗದಲ್ಲಿ ಕೊಬ್ಬರಿ ಎಣ್ಣೆಯೇ ಪ್ರಮುಖ ಖಾದ್ಯ ತೈಲವಾಗಿ ಮಾರ್ಪಟ್ಟಿದೆ. ಆರೋಗ್ಯದ ದೃಷ್ಟಿಯಿಂದ ದಾವಣಗೆರೆಯ ಜನ ಕೂಡ ಅಡುಗೆಗೆ ಕೊಬ್ಬರಿ ಎಣ್ಣೆಯನ್ನೇ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಇದರಿಂದ ಕೊಬ್ಬರಿ ಎಣ್ಣೆ ಬೇಡಿಕೆ ಹಂತ ಹಂತವಾಗಿ ಹೆಚ್ಚಾಗಿದೆ.
- ತೆಂಗಿನ ತೋಟಗಳಿಗೆ ನುಸಿ ರೋಗ ಬಂದಿದ್ದು, ವಾತಾವರಣದಲ್ಲಿನ ಏರುಪೇರಿನಿಂದ ತೆಂಗಿನ ಕಾಯಿಯ ಇಳುವರಿ ಕುಂಠಿತವಾಗಿದೆ. ಇದರಿಂದ ಮಾರುಕಟ್ಟೆಗೆ ಬರುವಂತಹ ಕೊಬ್ಬರಿ ಕಡಿಮೆ ಆಗಿದೆ. ಹಾಗಾಗಿ, ಕೊಬ್ಬರಿ ಎಣ್ಣೆ ದರ ಏರಿಕೆ ಆಗಿದೆ ಎಂಬುದು ಗಾಣದ ಮಾಲೀಕರ ಮಾತು.

ಹಿಂದಿನ ವರ್ಷಗಳಲ್ಲಿ ಬೆಲೆ ಹೇಗಿತ್ತು?: 2025ರ ಮೇ ಮತ್ತು ಜೂನ್ ವೇಳೆ ಕ್ವಿಂಟಲ್ 17 ಸಾವಿರ ರೂ. ಇದ್ದ ಒಣ ಕೊಬ್ಬರಿ ದರ, ಆಗಸ್ಟ್ ವೇಳೆಗೆ 28 ಸಾವಿರಕ್ಕೆ ಏರಿಕೆ ಕಂಡಿತ್ತು. ಫೆ.2ರಂದು ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿ ಬೆಲೆ 30,488 ರೂ. ತಲುಪಿ ದಾಖಲೆ ಬರೆದಿತ್ತು.
1 ಕೆ.ಜಿ ಕೊಬ್ಬರಿ ಹಾಕಿದರೆ 600ರಿಂದ 650 ಗ್ರಾಂ ಎಣ್ಣೆ: 1 ಕೆ.ಜಿ ಗುಣಮಟ್ಟದ ಒಣ ಕೊಬ್ಬರಿಯನ್ನು ಗಾಣಕ್ಕೆ ಹಾಕಿದರೆ ಕೇವಲ 600 ರಿಂದ 650 ಗ್ರಾಂ ಕೊಬ್ಬರಿ ಎಣ್ಣೆ ಸಿಗುತ್ತದೆ. ಸರಾಸರಿ 1 ಕೆ.ಜಿ 750 ಗ್ರಾಂ ಕೊಬ್ಬರಿಯನ್ನು ಗಾಣಕ್ಕೆ ಹಾಕಿದರೆ ಮಾತ್ರ 1 ಕೆ.ಜಿ ಎಣ್ಣೆ ದೊರೆಯುತ್ತದೆ.
ಈಗ 1 ಕೆ.ಜಿ ಕೊಬ್ಬರಿಯ ಬೆಲೆ 290-300 ರೂ. ಇದ್ದು, ಉತ್ಪಾದನೆ ವೆಚ್ಚ, ಕಾರ್ಮಿಕರ ಕೂಲಿ ಹಾಗೂ ಇತರೆ ವೆಚ್ಚಗಳನ್ನು ಸೇರಿಸಿ 1 ಕೆ.ಜಿ ಕೊಬ್ಬರಿ ಎಣ್ಣೆಯನ್ನು 550 ರಿಂದ 600 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.
ದಾವಣಗೆರೆಯ ಕೆಲವು ಗಾಣದವರು 700 ರೂ. ದರ ನಿಗದಿ ಮಾಡಿದ್ದಾರೆ. ಅಡುಗೆ ಎಣ್ಣೆ ದರ ಪಟ್ಟಿ ನೋಡುವುದಾದರೆ ಎಣ್ಣೆ ದರ (ಕೆಜಿ) ಕೊಬ್ಬರಿ - 600, ಶೇಂಗಾ ಎಣ್ಣೆ - 320, ಕುಸುಬೆ ಎಣ್ಣೆ- 400 ರೂ.ಗೆ ಏರಿದೆ.
ಇನ್ನು ಕೊಬ್ಬರಿ ದರ ಪಟ್ಟಿ ಗಮನಿಸಿದರೆ, 2025 ಮೇ ತಿಂಗಳಲ್ಲಿ ಕ್ವಿಂಟಲ್ಗೆ 17,900, ಜುಲೈನಲ್ಲಿ 26,800, ನವೆಂಬರ್ನಲ್ಲಿ 28,500, ಡಿಸೆಂಬರ್ನಲ್ಲಿ 28,100. ಇತ್ತು. 2026 ಜನವರಿಯಲ್ಲಿ ಕ್ವಿಂಟಲ್ಗೆ 30,188, ಫೆಬ್ರವರಿಯಲ್ಲಿ 30,488ಗೆ ತಲುಪಿದೆ.

ಶೇಂಗಾ, ಕುಸುಬೆ ಎಣ್ಣೆ ಬೆಲೆಯೂ ಗಗನಕ್ಕೆ: ಕೊಬ್ಬರಿ ಎಣ್ಣೆ ಅಲ್ಲದೆ ಗಾಣಗಳಲ್ಲಿ ತಯಾರಾಗುವ ಶೇಂಗಾ ಹಾಗೂ ಕುಸುಬೆ ಎಣ್ಣೆ ಬೆಲೆಗಳೂ ಸಹ ಗಗನಕ್ಕೇರಿವೆ. ಮಾರುಕಟ್ಟೆಯಲ್ಲಿ ರಿಫೈನ್ಡ್ ಸೂರ್ಯಕಾಂತಿ ಎಣ್ಣೆ ಹಾಗೂ ಶೇಂಗಾ ಎಣ್ಣೆ ದರ ಸ್ಥಿರವಾಗಿದೆ.
- ನಾನಾ ಬ್ರ್ಯಾಂಡ್ಗಳ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆ ಸರಾಸರಿ ದರ 155 ರೂಪಾಯಿ ಇದ್ದು, ಶೇಂಗಾ ಎಣ್ಣೆ ಬೆಲೆ 190 ರೂಪಾಯಿ ಇದೆ.
- ಶೇಂಗಾ ಹಾಗೂ ಸೂರ್ಯಕಾಂತಿ ಬೆಲೆಯಲ್ಲಿ ಏರಿಕೆಯಾದರೂ ಪ್ಯಾಕೇಜ್ ರಿಫೈನ್ಸ್ ಎಣ್ಣೆಗಳ ಬೆಲೆಯಲ್ಲಿ ಏರಿಕೆ ಆಗಿಲ್ಲ. ಆದರೆ, ಶೇಂಗಾ ಬೆಲೆ ದಿಢೀರ್ ಏರಿಕೆಯಾದ ಹಿನ್ನೆಲೆಯಲ್ಲಿ ಗಾಣಗಳಲ್ಲಿ ಸಿಗುವ 1 ಕೆ.ಜಿ ಶೇಂಗಾ ಎಣ್ಣೆ ಬೆಲೆ 320 ರಿಂದ 360 ರೂ. ತಲುಪಿದೆ.
- ತಿಂಗಳ ಹಿಂದೆ ಕೆ.ಜಿಗೆ ಕುಸುಬೆ ಬೀಜದ ದರ 55-60 ರೂ. ಇತ್ತು. ಪ್ರಸ್ತುತ 85-90 ರೂ. ತಲುಪಿದೆ. ಪರಿಣಾಮ ಕುಸುಬೆ ಎಣ್ಣೆ ದರ ಕೆ.ಜಿಗೆ 400 ರೂ. ಆಗಿದೆ.
- ಸೂರ್ಯಕಾಂತಿ ಅಲಭ್ಯತೆ ಹಾಗೂ ಕೆಲಸ ಹೆಚ್ಚೆನ್ನುವ ಕಾರಣಕ್ಕೆ ಬಹುತೇಕ ಗಾಣದವರು ಸೂರ್ಯಕಾಂತಿ ಎಣ್ಣೆ ತಯಾರಿಸದಿರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ದರ ಏರಿಕೆ ಆಗಿರುವುದು ಸಮಸ್ಯೆಯೇ. ಆದರೆ, ಒಳ್ಳೆಯದ್ದು ಬೇಕೆಂದರೆ ಬೆಲೆ ತೆರಬೇಕು. ನಾವು ರಿಫೈಂಡ್ ಆಯಿಲ್ ಬಿಟ್ಟು ಗಾಣದ ಎಣ್ಣೆ ಕಡೆ ಮುಖ ಮಾಡಿದ್ದೇವೆ. ಕೊಬ್ಬರಿ ಎಣ್ಣೆ ಅಡುಗೆಗೆ ಬಳಕೆ ಮಾಡ್ತಿದ್ದೇವೆ. ಈ ಮೊದಲು ರೂಢಿ ಇರಲಿಲ್ಲ. ಇದೀಗ ಕೊಬ್ಬರಿ ಎಣ್ಣೆ ಬಿಟ್ಟು ಅಡುಗೆ ಮಾಡಲು ಆಗ್ತಿಲ್ಲ. ಅಷ್ಟು ರುಚಿ ಈ ಕೊಬ್ಬರಿ ಎಣ್ಣೆ. ಇದರ ಬಳಕೆಯಿಂದ ಆರೋಗ್ಯ ಸಮಸ್ಯೆಗಳು ಕಡಿಮೆ ಅಂತ ತಜ್ಞರು ಹೇಳುತ್ತಾರೆ. 1 ಕೆ.ಜಿ ಕೊಬ್ಬರಿ ಎಣ್ಣೆಗೆ 550 - 600 ರೂ. ಇದೆ. ಕೊಬ್ಬರಿ ದರ 1 ಕ್ವಿಂಟಲ್ಗೆ 30 ಸಾವಿರ ದಾಟಿದೆ. ಇದರಿಂದ ಕಾಳಿನ ದರ, ಎಣ್ಣೆ ದರ ಕೂಡ ಏರಿಕೆ ಆಗಿದೆ. ಆದರೂ, ಗಾಣದ ಎಣ್ಣೆ ತೆಗೆಯುವವರ ಮೇಲೆ ವಿಶ್ವಾಸವಿದೆ. ಅಮೃತ ಕಟ್ಟಿಗೆ ಗಾಣದ ಎಣ್ಣೆ ಅಂಗಡಿಯಲ್ಲಿ ಕ್ವಾಲಿಟಿ ಎಣ್ಣೆ ದೊರೆಯುತ್ತಿದೆ"- ಶೇಷಮೂರ್ತಿ, ಗ್ರಾಹಕ
ಶೇಂಗಾ ಎಣ್ಣೆಯನ್ನು 290 ರೂ. ನೀಡಿ 1 ಕೆ.ಜಿ ತೆಗೆದುಕೊಳ್ಳುತ್ತಿದ್ದೆವು. ಈಗಂತೂ ಪ್ರತಿಯೊಂದು ವಸ್ತುವಿನ ದರ ಗಗನಕ್ಕೇರಿದೆ. ನಾನು ಮೂರು ಲೀಟರ್ ಶೇಂಗಾ ಎಣ್ಣೆಗೆ 960 ರೂ ಕೊಟ್ಟಿದ್ದೇನೆ. ಮೊದಲು 870 ಕೊಡುತ್ತಿದ್ದೆ. ಸರ್ಕಾರ ಬೆಲೆ ನಿಯಂತ್ರಣ ಮಾಡ್ಬೇಕು. ಇನ್ನು ಕೊಬ್ಬರಿ ಎಣ್ಣೆ 550 ರೂಪಾಯಿ ಏರಿಕೆಯಾಗಿದೆ.- ಜಗದೀಶ್, ಗ್ರಾಹಕ
ಕಳೆದ ಬಾರಿ ನಮಗೆ ಕ್ವಿಂಟಲ್ ಕೊಬ್ಬರಿ ₹11-12 ಸಾವಿರಕ್ಕೆ ಸಿಗುತ್ತಿತ್ತು. ಈ ವರ್ಷ ಕ್ವಿಂಟಲ್ ಕೊಬ್ಬರಿಗೆ 30 ಸಾವಿರ ದಾಟಿದ್ದು, ನಾವು ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಗಿದೆ. ಅಲ್ಲದೆ ಶೇಂಗಾ ಕಾಳು ಕೂಡ ಕೆ.ಜಿಗೆ 110 ಇದ್ದದ್ದು 150-160 ದರ ಏರಿಕೆ ಆಗಿದೆ. ಕುಸುಬೆ 50-60 ಇದ್ದದ್ದು 80-90 ಆಗಿದೆ. ಶೇಂಗಾ ಎಣ್ಣೆ 1 ಕೆಜಿಗೆ 320 ರೂಪಾಯಿ, ಕೊಬ್ಬರಿ ಎಣ್ಣೆ 550, ಇನ್ನು ಕುಸುಬೆ ಎಣ್ಣೆ 400 ರೂಪಾಯಿ ದರ ಇದೆ. ನಾವು ದಿನಕ್ಕೆ ಶೇಂಗಾ ಎಣ್ಣೆ 100 ಲೀಟರ್ ಉತ್ಪಾದನೆ ಮಾಡಲಿದ್ದೇವೆ. ಕೊಬ್ಬರಿ ಎಣ್ಣೆ 40-50 ಲೀಟರ್ ಉತ್ಪಾದನೆ ಮಾಡಲಿದ್ದೇವೆ. ಕೊಬ್ಬರಿ ಎಣ್ಣೆ ಬಳಸುವ ಜನರ ಸಂಖ್ಯೆ ಏರಿಕೆ ಆಗ್ತಿದೆ. ಕಳೆದ ಬಾರಿ ಕೊಬ್ಬರಿ ಎಣ್ಣೆಯ ದರ 320 ಲೀಟರ್ ಇತ್ತು. ತೆಂಗಿನ ತೋಟಗಳಿಗೆ ನುಸಿ ರೋಗ ಬಂದಿದ್ದು, ವಾತಾವರಣದಲ್ಲಿನ ಏರುಪೇರಿನಿಂದ ಇಳುವರಿ ಕುಂಟಿತವಾಗಿದೆ. ಇದರಿಂದ ಮಾರುಕಟ್ಟೆಗೆ ಬರುವಂತಹ ಕೊಬ್ಬರಿ ಕಡಿಮೆ ಆಗಿದೆ. ಹಾಗಾಗಿ ಕೊಬ್ಬರಿ ಎಣ್ಣೆ ದರ ಏರಿಕೆ ಆಗಿದೆ. ಕೊಬ್ಬರಿ ಹಾಗೂ ಶೇಂಗಾಕ್ಕೆ 5%ರಷ್ಟು ತೆರೆಗೆ ಹೇರಲಾಗುತ್ತಿದೆ. - ಮಂಜುನಾಥ್, ಅಮೃತ ಕಟ್ಟಿಗೆ ಗಾಣದ ಮಾಲೀಕ
ಕರಾವಳಿ ಭಾಗ(ಮಂಗಳೂರು)ದಲ್ಲಿ ಕೊಬ್ಬರಿ ಎಣ್ಣೆಯ ದರವು ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಮಾರುಕಟ್ಟೆ ಮೂಲಗಳ ಪ್ರಕಾರ, ತೆಂಗಿನಕಾಯಿ ಉತ್ಪಾದನೆಯಲ್ಲಿ ಕುಸಿತ, ಕಚ್ಚಾ ಕೊಬ್ಬರಿ ಕೊರತೆ ಮತ್ತು ರಫ್ತು ಪ್ರಮಾಣ ಹೆಚ್ಚಳವೇ ಈ ಏರಿಕೆಗೆ ಪ್ರಮುಖ ಕಾರಣಗಳಾಗಿ ಪರಿಣಮಿಸಿವೆ. ಪರಿಣಾಮ ಚಿಲ್ಲರೆ ಮಾರುಕಟ್ಟೆಯಲ್ಲಿ ಎಣ್ಣೆಯ ದರಗಳು ಹಂತ ಹಂತವಾಗಿ ಏರಿಕೆಯಾಗುತ್ತಿವೆ.
ಸ್ಥಳೀಯ ಮಿಲ್ ಮಾಲಕರ ಮಾಹಿತಿ ಪ್ರಕಾರ, ಮೂರು ವರ್ಷಗಳ ಹಿಂದೆ ಒಂದು ಕೆಜಿ ಕೊಬ್ಬರಿ ಸುಮಾರು ರೂ. 90 ರಷ್ಟಿದ್ದರೆ, ಈಗ ಅದರ ದರ ರೂ. 190 ಆಗಿದೆ. ಅದೇ ರೀತಿಯಾಗಿ, ಕೊಬ್ಬರಿ ಎಣ್ಣೆಯ ಲೀಟರ್ ದರವು ಮುಂಚೆ ರೂ. 190 ರಷ್ಟಿದ್ದರೆ, ಕೆಲವು ಕಡೆಗಳಲ್ಲಿ ಅದು ರೂ. 530 ವರೆಗೆ ಏರಿಕೆಯಾಗಿದೆ. ಇದೀಗ ಕರಾವಳಿಯಲ್ಲಿ ತೆಂಗಿನ ಎಣ್ಣೆ ದರ 370 ರಿಂದ 420ರ ಆಸುಪಾಸಿನಲ್ಲಿದೆ.

ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯದಲ್ಲಿ, ತೆಂಗಿನ ಕೃಷಿ ಪ್ರಮಾಣ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕೆಲವು ರೈತರು ತೆಂಗಿನ ತೋಟಗಳನ್ನು ಕಡಿಮೆ ಮಾಡಿದ್ದು, ಉತ್ಪಾದನೆ ಇಳಿಕೆಯಾಗಿರುವುದರಿಂದ ಮಿಲ್ಲುಗಳಿಗೆ ಬೇಕಾದಷ್ಟು ಕಚ್ಚಾ ಕೊಬ್ಬರಿ ಲಭ್ಯವಾಗುತ್ತಿಲ್ಲ. ಇದರಿಂದ ಮಿಲ್ಲುಗಳ ಉತ್ಪಾದನಾ ವೆಚ್ಚವೂ ಏರಿಕೆಯಾಗಿದೆ. ಜೊತೆಗೆ, ಕೆಲವು ವ್ಯಾಪಾರಿಗಳು ಹೊರರಾಜ್ಯಗಳಿಗೆ ಮತ್ತು ವಿದೇಶಗಳಿಗೆ ರಫ್ತು ಮಾಡುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಸರಬರಾಜು ತಗ್ಗುತ್ತಿದೆ ಎನ್ನಲಾಗುತ್ತಿದೆ.
ನಾನು ಮೂರು ವರ್ಷಗಳಿಂದ ಈ ಅಂಗಡಿ ನಡೆಸುತ್ತಿದ್ದೇನೆ. ಮೂರು ವರ್ಷಗಳ ಹಿಂದೆ ಒಂದು ಕೆ.ಜಿ ಕೊಬ್ಬರಿ ರೂ. 90 ಇತ್ತು. ಆಗ ಕೊಬ್ಬರಿ ಎಣ್ಣೆ ಲೀಟರ್‌ಗೆ ರೂ. 190ಕ್ಕೆ ಮಾರುತ್ತಿದ್ದೆವು. ಈ ದರವು ಕೆಲವು ದಿನಗಳ ಹಿಂದೆ ಕೆಲವು ಕಡೆಗಳಲ್ಲಿ ರೂ. 530ರವರೆಗೆ ಏರಿಕೆಯಾಗಿದೆ. ಈಗ 370ರ ಆಸುಪಾಸಿನಲ್ಲಿದೆ. ಕಳೆದ ವರ್ಷದ ಹೋಲಿಕೆಯಲ್ಲಿ ಈ ವರ್ಷ ಮತ್ತೆ ದರ ಹೆಚ್ಚಾಗಿದೆ. ತೆಂಗಿನ ಕೃಷಿ ಕಡಿಮೆಯಾಗಿದೆ. ಜೊತೆಗೆ ಕೆಲವರು ಹೊರರಾಜ್ಯಗಳಿಗೆ ಮತ್ತು ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಈಗ ನಾವು 370ರವರೆಗೆ ಮಾರುತ್ತಿದ್ದೇವೆ, ಆದರೆ ಕೆಲವು ಕಡೆಗಳಲ್ಲಿ ಇನ್ನೂ ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ. ಮೊದಲು 10 ಲೀಟರ್ ತೆಗೆದುಕೊಳ್ಳುತ್ತಿದ್ದ ಗ್ರಾಹಕರು ಈಗ 5 ಲೀಟರ್‌ಗೆ ಇಳಿಸಿದ್ದಾರೆ. 5 ಲೀಟರ್ ತೆಗೆದುಕೊಳ್ಳುತ್ತಿದ್ದವರು ಕೆಲವರು 3 ಅಥವಾ 2 ಲೀಟರ್ ಮಾತ್ರ ಖರೀದಿಸುತ್ತಿದ್ದಾರೆ. ವ್ಯಾಪಾರಕ್ಕೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ. - ಬಾಲಕೃಷ್ಣ, ಜೆಪ್ಪಿನಮೊಗರು ಮಿಲ್ಲಿನ ಮಾಲೀಕ

ಬೆಲೆ ಏರಿಕೆಯ ಪರಿಣಾಮವೇನು?:
- ದರ ಏರಿಕೆಯಿಂದ ಗ್ರಾಹಕರ ಖರೀದಿ ಸಾಮರ್ಥ್ಯ ಕುಂದಿದೆ.
- ಮನೆಗಳಲ್ಲಿ ಬಳಸುವ ಪ್ರಮಾಣ ಕಡಿಮೆಯಾಗಿದ್ದು, ಕೆಲವರು ಪರ್ಯಾಯ ಎಣ್ಣೆಗಳತ್ತ ಮುಖ ಮಾಡುತ್ತಿದ್ದಾರೆ.
- ವ್ಯಾಪಾರಿಗಳ ಪ್ರಕಾರ, ಹಳೆಯದಂತೆ ಬಲ್ಕ್ ಖರೀದಿ ಮಾಡುವ ಗ್ರಾಹಕರು ಈಗ ಕಡಿಮೆ ಪ್ರಮಾಣದಲ್ಲಿ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ.
- ಇನ್ನೊಂದೆಡೆ, ಉತ್ಪಾದನಾ ವೆಚ್ಚದಲ್ಲಿ ವಿದ್ಯುತ್, ಕಾರ್ಮಿಕ ಹಾಗೂ ಸಾಗಾಟ ವೆಚ್ಚಗಳ ಏರಿಕೆಯೂ ಮಿಲ್ಲುಗಳ ಮೇಲೆ ಪರಿಣಾಮ ಬೀರುತ್ತಿದೆ.
ಇದನ್ನೂ ಓದಿ: ಕೆ.ಜಿಗೆ ₹500ಕ್ಕೂ ಹೆಚ್ಚು! ಬೆಳಗಾವಿಯಲ್ಲಿ ಒಣ ಮೆಣಸಿನಕಾಯಿ ರೇಟು ಡಬಲ್; ಗ್ರಾಹಕರಿಗೆ ಟ್ರಬಲ್

