ETV Bharat / state

ಅಂಧರ ಪಾಲಿನ ಕ್ರೀಡಾ ಜ್ಯೋತಿ 'ಸುರೇಶ್': ವಿದ್ಯಾರ್ಥಿಗಳ ಸಾಧನೆ ಬೆನ್ನಿಗೆ ನಿಲ್ಲುವ ಗುರು

ಕೋಚ್​ ಸುರೇಶ್​ ಅವರ ಗರಡಿಯಲ್ಲಿ ಬೆಳೆದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

Coach with blind students
ಅಂಧ ವಿದ್ಯಾರ್ಥಿಗಳ ಜೊತೆ ಕೋಚ್​ (ETV Bharat)
author img

By ETV Bharat Karnataka Team

Published : January 7, 2026 at 11:06 AM IST

4 Min Read
Choose ETV Bharat

ವಿಶೇಷ ವರದಿ: ಕಿರಣ್ ಕುಮಾರ್. ಎಸ್.ಈ.

ಶಿವಮೊಗ್ಗ: ಶಿವಮೊಗ್ಗದ ಶಾರದಾ ದೇವಿ ಅಂಧರ ವಿಕಾಸ ಕೇಂದ್ರವು ಬಡ ಮತ್ತು ಮಧ್ಯಮ ವರ್ಗದ ಅಂಧರ ಪಾಲಿನ ದೇವಾಲಯ ಎಂದೇ ಹೇಳಬಹುದು. ಈ ಶಾಲೆಯ ಕ್ರೀಡಾ ತರಬೇತುದಾರ ಸುರೇಶ್ ಅವರು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ.‌ ಇವರು ಶಾಲೆಯ ಎಲ್ಲ ಕ್ರೀಡೆಗಳ ತರಬೇತುದಾರ. ಇವರು ಈ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೂಲತಃ ಹೊಸನಗರದ ನಿವಾಸಿಯಾದ ಸುರೇಶ್, ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಸುರೇಶ್ ಬಳಿ ಕ್ರಿಕೆಟ್ ಕೋಚಿಂಗ್ ಪಡೆದುಕೊಂಡಿದ್ದ ಶೇಖರ್ ನಾಯ್ಕ್, ವಿರೇಶ್, ರವಿ ಹಾಗೂ ಕಾವ್ಯ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಆಡಿದ್ದಾರೆ. ಶೇಖರ್ ನಾಯ್ಕ್ ಅವರು ಭಾರತ ಕ್ರಿಕೆಟ್ ತಂಡ ನಾಯಕರಾಗಿದ್ದವರು. ಅದೇ ರೀತಿ ಕಾವ್ಯ ಸಹ ಭಾರತ ತಂಡಕ್ಕೆ ಉತ್ತಮ ಆಸ್ತಿಯಾಗಿದ್ದಾರೆ.‌

ಅಂಧರ ಪಾಲಿನ ಕ್ರೀಡಾ ಜ್ಯೋತಿ 'ಸುರೇಶ್' (ETV Bharat)

ಗಿಲಿ ಗಿಲಿ ಬಾಲ್​ನಿಂದ ಕ್ರಿಕೆಟ್ ಜಗತ್ತು: ಅಂಧರ ಕ್ರಿಕೆಟ್​ನಲ್ಲಿ ಚೆಂಡು ವಿಭಿನ್ನವಾಗಿರುತ್ತದೆ. ಈ ಚೆಂಡು ಶಬ್ದ ಮಾಡುತ್ತಿರುತ್ತದೆ. ಅಂದರೆ ಚೆಂಡಿನ ಒಳಗೆ ಗೆಜ್ಜೆ ಹಾಕಲಾಗಿರುತ್ತದೆ. ಈ ಶಬ್ದದ ಮೇಲೆಯೇ ಅವರು ಬೌಲ್ ಮಾಡುತ್ತಾರೆ. ಈ ಶಬ್ದಕ್ಕೆ‌ ಬ್ಯಾಟ್ ಬೀಸುತ್ತಾರೆ.‌ ಫೀಲ್ಡರ್ಸ್​ಗಳೂ ಸಹ ಶಬ್ದದ ಮೇಲೆಯೇ ಚೆಂಡು ಹಿಡಿದುಕೊಳ್ಳುತ್ತಾರೆ.‌ ದೃಷ್ಟಿದೋಷ‌ ಇರುವವರಿಗಾಗಿಯೇ ಈ‌ ಚೆಂಡು ತಯಾರು‌ ಮಾಡಿದ್ದಾರೆ.‌ ಸುರೇಶ್ ಕ್ರಿಕೆಟ್ ಜೊತೆ, ಫುಟ್​ಬಾಲ್, ಚೆಸ್, ಅಥ್ಲೆಟಿಕ್ಸ್ ಕೂಡ ಹೇಳಿ‌ಕೊಡುತ್ತಾರೆ.‌ ಸುರೇಶ್ ಅವರು 1-10 ನೇ ತರಗತಿ ತನಕದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತಿ‌ನಿತ್ಯ ಸಂಜೆ ಪ್ರಾಕ್ಟಿಸ್ ಮಾಡಿಸುತ್ತಾರೆ. ಇಲ್ಲಿ ಯಾವ ಕ್ರೀಡೆಯ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಾರೋ ಅವರು ಅದಕ್ಕೆ ಪ್ರತ್ಯೇಕ ಕೋಚಿಂಗ್ ನೀಡುತ್ತಾರೆ.

ಕ್ರೀಡೆ ಜೊತೆ ಪರ್ಸನಲ್​ ಡೆವಲಪ್​ಮೆಂಟ್​: ಶಾಲೆಯ ಕಾರ್ಯದರ್ಶಿ ಎ.ಕೆ.ಪರಮೇಶ್ವರ ಭಟ್‌ ಮಾತನಾಡಿ, "ಶಾರದಾ ದೇವಿ ಅಂಧರ ವಿಕಾಸ ಕೇಂದ್ರ 1986ರಲ್ಲಿ ಪ್ರಾರಂಭವಾಯಿತು. ಮುಖ್ಯವಾಗಿ ಬಡ ಕುಟುಂಬದ ಅಂಧ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಇದೆ. ಇಲ್ಲಿ ಮಕ್ಕಳಿಗೆ ವಸತಿ ಇದೆ. ಮಕ್ಕಳಿಗೆ ಅನುಕಂಪ ನೀಡದೆ, ಅವರ ಕಾಲ ಮೇಲೆ ಅವರು ನಿಂತು ಜೀವಿಸುವ ವಾತಾವರಣವನ್ನು ಕಲ್ಪಿಸಬೇಕೆಂಬ ಉದ್ದೇಶದಿಂದ ವಿದ್ಯಾಭ್ಯಾಸ ನೀಡುತ್ತಿದ್ದೇವೆ. ಶಿಕ್ಷಣದ ಜೊತೆಗೆ ಯೋಗ, ಕ್ರೀಡೆ, ಧ್ಯಾನ ತರಗತಿ ಇದೆ. ಸಂಗೀತ ಕಲಿಸಿಕೊಡಲಾಗುತ್ತದೆ. ಒಟ್ಟಾರೆ, ಪರ್ಸನಲ್ ಡೆವಲಪ್ಮೆಂಟ್ ಮಾಡುತ್ತೇವೆ. ಹಲವಾರು ಸ್ಪೋರ್ಟ್ಸ್​ಗಳಲ್ಲಿ ಭಾಗವಹಿಸುತ್ತಿದ್ದಾರೆ. ಚೆಸ್, ಕ್ರಿಕೆಟ್ ಸೇರಿದಂತೆ ಬೇರೆ ಬೇರೆ ಕ್ರೀಡಾಕೂಟದಲ್ಲಿ ಭಾಗವಹಿಸಿ, ಸಾಧನೆ‌ ಮಾಡುತ್ತಿದ್ದಾರೆ. ಇಲ್ಲಿಗೆ ಬಂದ ಮಕ್ಕಳು ತುಂಬಾ ಸಂತೋಷವಾಗಿದ್ದಾರೆ. ಇಲ್ಲಿ ಕಲಿತವರು ಒಳ್ಳೆಯ ಹುದ್ದೆಯಲ್ಲಿದ್ದಾರೆ" ಎಂದು ಹೇಳಿದರು.‌

Coach with blind students
ಅಂಧ ವಿದ್ಯಾರ್ಥಿಗಳ ಜೊತೆ ಕೋಚ್​ (ETV Bharat)

ತರಬೇತುದಾರ ಸುರೇಶ್ ಅವರು ಮಾತನಾಡಿ, "ನಮ್ಮ ಕ್ರಿಕೆಟ್​ನಲ್ಲಿ ಮೂರು ಕೆಟಗರಿ ಇರುತ್ತದೆ. ಬಿ1 ಅಂದ್ರೆ, ಸಂಪೂರ್ಣ ಅಂಧತ್ವ, ಬಿ2 ಅಂದ್ರೆ, ಕೇವಲ ಒಂದು ಮೀಟರ್ ಮಾತ್ರ ಕಾಣಿಸುತ್ತದೆ. ಬಿ3 ಅಂದ್ರೆ, ಮೂರು ಮೀಟರ್​ವರೆಗೂ ಕಾಣಿಸುತ್ತದೆ. ಅದು ಬ್ಲರ್ ಆಗಿ ಕಾಣಿಸುತ್ತದೆ.‌ ಇದನ್ನು ವೈದ್ಯರು ಗುರುತಿಸುತ್ತಾರೆ. ಎಲ್ಲ ಕ್ರೀಡೆಯಲ್ಲೂ ಸಹ ವಿದ್ಯಾರ್ಥಿಗಳು ಪದಕಗಳನ್ನು ಗೆದ್ದುಕೊಂಡು ಬಂದಿದ್ದಾರೆ. ಅದೇ ರೀತಿ ಕ್ರಿಕೆಟ್​ನಲ್ಲಿ ನಮ್ಮ ಶಾಲೆಯ ನಾಲ್ಕು ಮಕ್ಕಳು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ" ಎಂದರು.

ಭಾರತವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳು: "ಶೇಖರ್ ನಾಯ್ಕ್ ಅವರು 2017ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿದ್ದಾರೆ. ಇತ್ತೀಚೆಗೆ ಕಾವ್ಯಾ ಅವರು ಭಾರತ ತಂಡವನ್ನು ಪ್ರತಿನಿಧಿಸಿ, ಭಾರತಕ್ಕೆ ವಿಶ್ವಕಪ್ ತಂದರು. ಶೇಖರ್ ನಾಯ್ಕ್, ವಿರೇಶ್, ರವಿ ಒಟ್ಟು ನಾಲ್ಕು ಜನ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ನಮ್ಮ‌ ಶಾಲೆಯ ಏಳು ಮಕ್ಕಳು ಇಂಟರ್​ನ್ಯಾಶನಲ್​ಗೆ ಆಯ್ಕೆಯಾಗಿದ್ದರೂ ಸಹ ಹಣಕಾಸಿನ ವಿಚಾರದಿಂದ ಅವರು ಹೋಗಲು ಆಗಲಿಲ್ಲ. ಅವರ ಫಿಟ್​ನೆಸ್​ಗಾಗಿ ನಾವು ಪ್ರಾಕ್ಟಿಸ್ ಮಾಡಿಸುತ್ತಿರುತ್ತೇವೆ. ನಮ್ಮ ಮಕ್ಕಳು ಸಹ ಕ್ರೀಡೆಯಲ್ಲಿ ಗೆದ್ದಾಗ ಹಣಕಾಸಿನ ಸಹಾಯ ಮಾಡಬೇಕು" ಎಂದು ವಿನಂತಿಸಿ‌ಕೊಂಡರು.‌

Coach with blind students
ಅಂಧ ವಿದ್ಯಾರ್ಥಿಗಳ ಜೊತೆ ಕೋಚ್​ (ETV Bharat)

"ನಮ್ಮ‌ ಮಕ್ಕಳಿಗೆ ಕಣ್ಣು ಕಾಣಿಸದೆ ಹೋದರೂ ಚೆನ್ನಾಗಿ ಆಲಿಸುವ ಶಕ್ತಿ ಇದೆ.‌ ಇದರಿಂದ ನಾವು ಅವರ ಕೈ ಕಾಲು ಹಿಡಿದು ಕ್ರಿಕೆಟ್ ಹೇಳಿ ಕೊಡುತ್ತೇವೆ. ಅದೇ ರೀತಿ ಅಥ್ಲೆಟಿಕ್ಸ್​ನಲ್ಲೂ ನಮ್ಮ ಮಕ್ಕಳು ಉತ್ತಮ‌ ಪ್ರದರ್ಶನ ನೀಡುತ್ತಿದ್ದಾರೆ.‌ ಇಲ್ಲಿಗೆ ಬರುವವರು ತುಂಬಾ ಬಡತನದಲ್ಲಿ‌ ಇರುವವರೆ, ಕಾವ್ಯಾ ಅವರು ಮೊದಲು ಅಥ್ಲೆಟಿಕ್ಸ್​​ನಲ್ಲಿ ಇದ್ದವರು. ನಾಲ್ಕೈದು ಬಾರಿ ದೆಹಲಿಗೆ ಹೋಗಿ ಚಿನ್ನದ‌ ಪದಕ ಗೆದ್ದು ತಂದಿದ್ದಾರೆ. ಇವರಿಗೆ ಚಿನ್ನದ ಹುಡುಗಿ ಎಂದೇ ಕರೆಯುತ್ತಿದ್ದರು" ಎಂದು ಹೆಮ್ಮೆ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ಶೋಭಾ ಅವರು ಮಾತನಾಡಿ, "ಭಜನೆ, ಶಿಕ್ಷಣದ ಜೊತೆ, ಚೆಸ್, ಕ್ರಿಕೆಟ್ ಸೇರಿದಂತೆ ಇತರೆ ಕ್ರೀಡೆಯನ್ನು ಕಲಿಸುತ್ತಾರೆ. ಪ್ರತಿ ನಿತ್ಯ ನಮ್ಮ ಸರ್ ನಮಗೆ ಕ್ರಿಕೆಟ್ ಪ್ರಾಕ್ಟಿಸ್ ಮಾಡಿಸುತ್ತಾರೆ. ಅಲ್ಲದೆ ನಮ್ಮ ಶಾಲೆಯವರು ನಾವು ಎಲ್ಲಿಗಾದರೂ ಕ್ರಿಕೆಟ್ ಹಾಗೂ ಚೆಸ್​ ಆಡಲು ಹೋಗುತ್ತೇವೆ ಎಂದರೂ ಕಳುಹಿಸಿಕೊಡುತ್ತಾರೆ. ಇಲ್ಲಿ ನಮಗೆ ಉತ್ತಮವಾದ ಶಿಕ್ಷಣ ನೀಡುತ್ತಿದ್ದಾರೆ.‌ ನಮಗಾಗಿ ಕ್ರಿಕೆಟ್​ಗೆ ವಿಶೇಷವಾದ ಬಾಲ್ ಇರುತ್ತದೆ. ಈ ಬಾಲ್​ನಲ್ಲಿ ಗೆಜ್ಜೆ ಇರುತ್ತದೆ. ಇದು ನಮಗೆ ಬಾಲ್ ಎಲ್ಲಿ ಬರುತ್ತದೆ ಎಂದು ಗುರುತಿಸಲು ಸಹಾಯಕವಾಗುತ್ತದೆ. ಇದರಿಂದ ನಮಗೆ ಬಾಲ್ ಹಿಡಿಯಲು ಸಹಾಯಕವಾಗುತ್ತದೆ" ಎಂದರು.

Blind student playing cricket
ಅಂಧ ವಿದ್ಯಾರ್ಥಿ ಕ್ರಿಕೆಟ್​ ಆಡುತ್ತಿರುವುದು (ETV Bharat)

ವಿದ್ಯಾರ್ಥಿಗಳ ಮೆಚ್ಚಿನ ಗುರುಗಳು: 10ನೇ ತರಗತಿಯ ತೀಪ್ಪೆಸ್ವಾಮಿ ಮಾತನಾಡಿ, "ಕಳೆದ ಹತ್ತು ವರ್ಷಗಳಲ್ಲಿ ಮೊದಲು ಮೂರು ವರ್ಷ ನಾನು ನಮ್ಮ ಹಿರಿಯರು ಆಟ ಆಡುವುದನ್ನು ನೋಡುತ್ತಿದ್ದೆ.‌ ಅಥ್ಲೆಟಿಕ್ಸ್​ನಲ್ಲಿ ಭಾಗಿಯಾಗುತ್ತಿದ್ದೆ‌. ಇಲ್ಲಿ ಮೊದಲು ಯಾವ ರೀತಿ ಶಾಟ್ ಪುಟ್, ಜಾವೆ​ಲಿನ್ ಹಿಡಿದುಕೊಳ್ಳಬೇಕು, ಎಸೆಯಬೇಕು ಎಂಬುದನ್ನು ಹೇಳಿಕೊಡುತ್ತಿದ್ದಾರೆ.‌ ನಮ್ಮ ಸುರೇಶ್ ಸರ್ ನಮ್ಮ‌ಕೈ ಕಾಲು ಹಿಡಿದು ಟಚ್ ಮಾಡಿ ಆಟ ಆಡುವುದನ್ನು ಹೇಳಿಕೊಡುತ್ತಿದ್ದರು.‌ ನಾವು ಏನೇ ತಪ್ಪು ಮಾಡಿದ್ರು ಸಹ ಸರಿ ಮಾಡಿ ಹೇಳಿ‌‌ ಕೊಡುತ್ತಿದ್ದರು.‌ ನಾವು ಕ್ರಿಕೆಟ್ ಆಡುವಾಗ ತಪ್ಪು‌ ಮಾಡಿದಾಗ ಅವರು ಕೋಪ‌ ಮಾಡಿಕೊಳ್ಳದೆ ತಾಳ್ಮೆಯಿಂದ ಹೇಳಿ‌ಕೊಡುತ್ತಿದ್ದರು.‌ ನಾವು ಅವರು ಹೇಳಿ‌ಕೊಟ್ಟ ರೀತಿ ಕಲಿಯುತ್ತಿದ್ದೇವೆ.‌ ಅಲ್ಲದೆ ಬಾಲ್ ಯಾವ ಕಡೆ ಬರುತ್ತದೆಯೋ ಆ ಕಡೆ ಬ್ಯಾಟ್ ಬೀಸಬೇಕೆಂದು ನಮ್ಮ‌ ಕೈ ಹಿಡಿದು ಹೇಳಿ‌ ಕೊಡುತ್ತಾರೆ. ನಾನು ಕ್ರಿಕೆಟ್ ಜೊತೆ ಫುಟ್​ಬಾಲ್ ಸಹ ಆಡುತ್ತೇನೆ. ಕರ್ನಾಟಕ ತಂಡ ಕ್ಯಾಪ್ಟನ್ ಆಗಿ ಆಯ್ಕೆಯಾದೆ. ನಾನು ಕ್ರಿಕೆಟ್​ನಲ್ಲಿ ನಮ್ಮ ಶಾಲೆಯ ನಾಯಕನಾಗಿದ್ದೇನೆ. ನಮ್ಮ ಶಾಲೆಯ ಸುರೇಶ್ ಸರ್​ ನಮಗೆ ತುಂಬಾ ಹೇಳಿ‌ಕೊಡುತ್ತಿದ್ದಾರೆ‌‌. ನನಗೆ ಕ್ರಿಕೆಟ್​ನಲ್ಲಿ ಕಾವ್ಯ ಅವರ ರೀತಿ ರಾಷ್ಟ್ರೀಯ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್​ನಲ್ಲಿ ಭಾಗವಹಿಸಬೇಕೆಂಬ ಆಸೆ ಇದೆ" ಎಂದು ಕನಸು ಹಂಚಿಕೊಂಡರು.

ಶಿಕ್ಷಕ ಸುರೇಶ್ ಅವರ ಕಿರುಪರಿಚಯ: ಸುರೇಶ್ ಮೂಲತಃ ಹೊಸನಗರ ಪಟ್ಟಣದವರು. 1999 ರಲ್ಲಿ ಈ ಶಾಲೆಗೆ ಸೇರ್ಪಡೆಗೊಂಡರು. ಸಾಮಾನ್ಯ ದೈಹಿಕ ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿಕೊಂಡವರು. ಮೊದಲು ಕಡಿಮೆ ಸಂಬಳ ಇತ್ತು. ಈಗ ಸುಖ ಜೀವನ ನಡೆಸುವಷ್ಟು ಸಂಬಳ ಬರುತ್ತಿದೆ.‌ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ತಮ್ಮ ಎಲ್ಲಾ ಸೇವೆಗೆ ಶಾಲೆಯ ಆಡಳಿತ ಮಂಡಳಿ ಪೂರಕವಾಗಿ ಬೆಂಬಲ‌ ನೀಡುತ್ತಿದೆ ಎನ್ನುತ್ತಾರೆ ಸುರೇಶ್​.

ಇದನ್ನೂ ಓದಿ: ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಸಿಎಂ ಶುಭ ಹಾರೈಕೆ; ಸರ್ಕಾರಿ ಉದ್ಯೋಗ ಘೋಷಣೆ