ETV Bharat / state

ಯುದ್ದಪೀಡಿತ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕೋರಿ ಪ್ರಧಾನಿಗೆ ಸಿಎಂ ಪತ್ರ

ನಾಗರಿಕ ವಿಮಾನಯಾನ ಸಚಿವಾಲಯಕ್ಕೂ ಪತ್ರ ಬರೆದು ಸಮನ್ವಯತೆ ಸಾಧಿಸಿ, ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಅಗತ್ಯ ಸಹಕಾರ, ದಂಡ ವಿನಾಯಿತಿ, ಮಧ್ಯಂತರ ನೆರವು ನೀಡುವಂತೆ ಕೋರಲಾಗಿದೆ.

Etv Bharat
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ (IANS)
author img

By ETV Bharat Karnataka Team

Published : March 2, 2026 at 7:51 PM IST

2 Min Read
Choose ETV Bharat

ಬೆಂಗಳೂರು: ಮಧ್ಯಪ್ರಾಚ್ಯ ಯುದ್ದಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿನ ಪ್ರಚಲಿತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಹಲವಾರು ರಾಷ್ಟ್ರಗಳು NOTAM - ವೈಮಾನಿಕ ಸಂಚಾರ ಬಂದ್ ಘೋಷಿಸಿವೆ. ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳಲ್ಲಿ ಅಡಚಣೆಯಾಗಿದೆ. ವಿಮಾನ ಪ್ರಯಾಣದ ವ್ಯತ್ಯಯದಿಂದಾಗಿ ಕರ್ನಾಟಕ ಸೇರಿದಂತೆ ದೇಶದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ, ವಿಶೇಷವಾಗಿ ಯುಎಇನಲ್ಲಿ ಸಿಲುಕಿಕೊಂಡಿದ್ದಾರೆ.

ಯುದ್ಧದ ಪರಿಸ್ಥಿತಿ ಉಂಟಾಗಿರುವುದರಿಂದ ಸಿಲುಕಿರುವ ಕನ್ನಡಿಗರು ಹಾಗೂ ಅವರ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ. ಈ ಸಂಬಂಧ ಸಮನ್ವಯತೆ ಸಾಧಿಸಿ, ಕನ್ನಡಿಗರ ರಕ್ಷಣೆ ಹಾಗೂ ಅವರ ವಾಪಸಾತಿಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿ ಮುಖ್ಯ ಕಾರ್ಯದರ್ಶಿ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯಕ್ಕೂ ಪತ್ರ ಬರೆದು ಸಮನ್ವಯತೆ ಸಾಧಿಸಿ, ಸಿಲುಕಿರುವ ಪ್ರಯಾಣಿಕರಿಗೆ ಅಗತ್ಯ ಸಹಕಾರ, ದಂಡ ವಿನಾಯಿತಿ, ಮಧ್ಯಂತರ ನೆರವು ನೀಡುವಂತೆ ಕೋರಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಬಿಗಡಾಯಿಸಿರುವ ಪರಿಸ್ಥಿತಿ ಹಿನ್ನೆಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರುತ್ತೇನೆ. ರಾಜತಾಂತ್ರಿಕ ಸಂಪರ್ಕವನ್ನು ಬಲಪಡಿಸಬೇಕು.‌ ಭಾರತೀಯ ರಾಯಭಾರಿ ಕಚೇರಿ ಮೂಲಕ ನಿರಂತರ ನಿಗಾ, ಸುರಕ್ಷತೆ ಮತ್ತು ಕನ್ನಡಿಗರಿಗೆ ಮಾರ್ಗದರ್ಶನ ನೀಡುವಂತೆ ಕೋರಿದ್ದಾರೆ. ಅದೇ ರೀತಿ ಸಿಲುಕಿರುವವರನ್ನು ವಾಪಸ್​ ಕರೆತರಲು ವಾಪಸಾತಿ ವಿಮಾನಗಳ ವ್ಯವಸ್ಥೆ ಸಿದ್ಧಪಡಿಸಬೇಕು. ವಿದೇಶಾಂಗ ಸಚಿವಾಲಯ, ನಾಗರಿಕ ಸಚಿವಾಲಯ, ರಾಜ್ಯ ಸರ್ಕಾರಗಳು ಹಾಗೂ ವಿಮಾನ ನಿರ್ವಾಹಕರ ಜೊತೆ ಸಮರ್ಪಕ ಸಂಪರ್ಕ ಸಾಧಿಸಲು ಅಂತರ ಸಚಿವಾಲಯ ಕಾರ್ಯಪಡೆ ಸ್ಥಾಪಿಸುವಂತೆ ಪತ್ರದಲ್ಲಿ ಕೋರಿದ್ದಾರೆ.

ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ದೇಶದ ಜನರು ಹಾಗೂ ಕನ್ನಡಿಗರ ಕುಟುಂಬಸ್ಥರಿಗಾಗಿ ನೋಂದಣಿ, ಟ್ರಾಕಿಂಗ್ ಮತ್ತು ರಿಯಲ್ ಟೈಂ ಸಲಹೆ ಸೂಚನೆ ಹಂಚಲು ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆ ಆರಂಭಿಸುವಂತೆ ಕೋರಿದ್ದಾರೆ. ಪ್ರಯಾಣಿಕರ ಸಂರಕ್ಷಣೆ ಶಿಷ್ಟಾಚಾರ ಪಾಲಿಸವೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕ ಸರ್ಕಾರ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮತ್ತು ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು (DEOCs) ಪೂರ್ಣ ಪ್ರಮಾಣದಲ್ಲಿ ಸಕ್ರಿಯಗೊಳಿಸಿದೆ. ಇವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯ ನೆರವು ನೀಡಲು 24x7 ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ. ಕೇಂದ್ರ ಅಧಿಕಾರಿಗಳ ಜೊತೆ ಸಮನ್ವಯತೆ ಸಾಧಿಸಲು ಹಿರಿಯ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಸಾವಿರಾರು ಕನ್ನಡಿಗರು ನೆಲೆಸಿದ್ದು, ರಾಷ್ಟ್ರದ ಆರ್ಥಿಕ ಬಲವರ್ಧನೆಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ತುರ್ತು, ಸಮನ್ವಯತೆಯ ಮತ್ತು ಮಾನವೀಯತೆಯ ರಾಷ್ಟ್ರೀಯ ಸ್ಪಂದನೆಯ ಅಗತ್ಯ ಇದೆ. ಭಾರತ ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ, ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ. ಕರ್ನಾಟಕ ಸರ್ಕಾರ ಈ ಸಂಬಂಧ ತನ್ನ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದು ಪತ್ರ ಮುಖೇನ ಸಿಎಂ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಈ ಗ್ರಾಮದಲ್ಲಿದೆ 'ಖಮೇನಿ' ಆಸ್ಪತ್ರೆ: ಹರಳು ವ್ಯಾಪಾರ ತಾಣಕ್ಕೂ ಇರಾನ್​ಗೂ ಅವಿನಾಭಾವ ಸಂಬಂಧ