ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಮಾತನಾಡಿದ ಸಿಎಂ; ನೆರವಿಗೆ ಮುಂದಾದ ಶಾಸಕ ನಾಗೇಂದ್ರ
ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ ಧೈರ್ಯ ತುಂಬಿದ್ದಾರೆ.

Published : March 1, 2026 at 4:56 PM IST
ಬೆಂಗಳೂರು/ಬಳ್ಳಾರಿ : ಇಸ್ರೇಲ್ - ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ ಧೈರ್ಯ ತುಂಬಿದ್ದಾರೆ.
ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ಇಸ್ರೇಲ್ - ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಮಾತನಾಡಿ, ಧೈರ್ಯ ತುಂಬಿದ್ದೇನೆ. ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ದುಬೈ ಸೇರಿದಂತೆ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ಸದ್ಯದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದು, ಬಳಿಕ ಅವರನ್ನು ತವರಿಗೆ ವಾಪಸ್ ಕರೆ ತರುವ ಸಂಬಂಧ ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಇರುವ ಕನ್ನಡಿಗರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿರುವುದು ತುಸು ಸಮಾಧಾನಕರ ವಿಚಾರ. ಯಾರೊಬ್ಬರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿದೆ ಎಂದು ಅಭಯ ನೀಡಿದ್ದಾರೆ.
ನೆರವಿಗೆ ಮುಂದಾದ ಶಾಸಕ ಬಿ. ನಾಗೇಂದ್ರ (ಬಳ್ಳಾರಿ) : ದುಬೈನಲ್ಲಿ ಬಳ್ಳಾರಿ ಜಿಲ್ಲೆಯ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿ ಪರದಾಟ ನಡೆಸುತ್ತಿರುವುದರಿಂದಾಗಿ ಅವರ ನೆರವಿಗೆ ಶಾಸಕ ಬಿ. ನಾಗೇಂದ್ರ ಅವರು ಮುಂದಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ 50ಕ್ಕೂ ಹೆಚ್ಚು ಜನರು ಹಣಕಾಸು ತೊಂದರೆಗೆ ಸಿಲುಕಿ ಪರದಾಟ ನಡೆಸುತ್ತಿರುವುದರಿಂದಾಗಿ ದುಬೈನಲ್ಲಿರುವ ಸ್ನೇಹಿತ ನಜೀಬ್ ಮೂಲಕ ನಾಗೇಂದ್ರ ಅವರು ನೆರವಿಗೆ ಮುಂದಾಗಿದ್ದಾರೆ.
ದುಬೈನಲ್ಲಿ ಸಿಲುಕಿದ ಜಿಲ್ಲೆಯ ಜನರಿಗೆ ಸ್ನೇಹಿತನ ಸಹಾಯದಿಂದ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಇದೀಗ ವಿಡಿಯೋ ಕಾಲ್ ಮೂಲಕ ಬಳ್ಳಾರಿ ಜನರೊಂದಿಗೆ ಅವರು ಮಾತನಾಡಿದ್ದಾರೆ.
ದುಬೈನಲ್ಲಿ ಸಿಲುಕಿದ ಬಳ್ಳಾರಿ ಶಾಸಕ, 50 ಜನರ ತಂಡ : ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧದಿಂದಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ವೈಮಾನಿಕ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ದುಬೈನಿಂದ ಭಾರತಕ್ಕೆ ಬರಬೇಕಿದ್ದ ವಿಮಾನಗಳನ್ನು ರದ್ದು ಮಾಡಲಾಗಿದೆ. ಇದರ ಪರಿಣಾಮ ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಪ್ರವಾಸಕ್ಕೆ ತೆರಳಿದ್ದ ಕರ್ನಾಟಕದ 50 ಜನ ಅಲ್ಲೇ ಸಿಲುಕಿಕೊಂಡಿದ್ದಾರೆ.
ದುಬೈನಲ್ಲಿ ಸಿಲುಕಿದ ಬಳ್ಳಾರಿ ಮೂಲದವರು : ವಯೋವೃದ್ಧರು ಸೇರಿ ಬಳ್ಳಾರಿ, ಚಿತ್ರದುರ್ಗ ಮತ್ತು ದಾವಣಗೆರೆಯ 50 ಜನರು ದುಬೈ ಪ್ರವಾಸ ಕೈಗೊಂಡಿದ್ದರು. ಪ್ರವಾಸ ಮುಗಿಸಿದ ತಂಡ ಶನಿವಾರ ದುಬೈನಿಂದ 9 ಗಂಟೆಯ ವಿಮಾನಕ್ಕೆ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಅಮೆರಿಕ, ಇಸ್ರೇಲ್ ಮತ್ತು ಇರಾನ್ ಮಧ್ಯೆ ಯುದ್ಧ ಆರಂಭವಾಗಿರುವುದರಿಂದ ವಿಮಾನಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ, ಕನ್ನಡಿಗರು ಅಲ್ಲೇ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ : ಮಧ್ಯಪ್ರಾಚ್ಯ ಉದ್ವಿಗ್ನ: ವಿಮಾನ ರದ್ದು, ದುಬೈನಲ್ಲಿ ಸಿಲುಕಿದ ಬಳ್ಳಾರಿ ಶಾಸಕ, 50 ಜನರ ತಂಡ

