ETV Bharat / state

ಮರ್ಯಾದೆಗೇಡು ಹತ್ಯೆ ನಿಯಂತ್ರಣಕ್ಕೆ ವಿಶೇಷ ಕಾನೂನು ರಚನೆ: ಸಿಎಂ ಸಿದ್ದರಾಮಯ್ಯ

ಮರ್ಯಾದೆಗೇಡು ಹತ್ಯೆ ನಿಯಂತ್ರಣಕ್ಕೆ ವಿಶೇಷ ಕಾನೂನು ರೂಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

CM SIDDARAMAIAH X POST  BENGALURU  ಮಾನ್ಯ ಹತ್ಯೆ  ಮರ್ಯಾದೆಗೇಡು ಹತ್ಯೆ ಕಾನೂನು
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : January 5, 2026 at 9:21 AM IST

2 Min Read
Choose ETV Bharat

ಬೆಂಗಳೂರು: ಮರ್ಯಾದೆಗೇಡು ಹತ್ಯೆ ಪ್ರಕರಣಗಳ ನಿಯಂತ್ರಣಕ್ಕಾಗಿ ವಿಶೇಷ ಕಾನೂನು ರೂಪಿಸುವುದಾಗಿ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಿಳಿಸಿದ್ದಾರೆ.

"ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದ ಮಾನ್ಯ ಎಂಬ ಯುವತಿಯ ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣದ ತ್ವರಿತ ವಿಚಾರಣೆ ನಡೆದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಪ್ರಮುಖ ಆದ್ಯತೆ. ಈ ಹಿನ್ನೆಲೆಯಲ್ಲಿ ತ್ವರಿತಗತಿ ನ್ಯಾಯಾಲಯ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ" ಎಂದು ಬರೆದುಕೊಂಡಿದ್ದಾರೆ.

"ಇಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಇದು ಅಟ್ರಾಸಿಟಿ ಪ್ರಕರಣವಾಗಿರುವುದರಿಂದ 60 ದಿನಗಳ ಒಳಗಾಗಿ ದೋಷರೋಪಪಟ್ಟಿ ಸಲ್ಲಿಸಬೇಕಾಗಿದೆ. ಹೀಗಾಗಿ ಖಾಸಗಿ ಪ್ರಾಸಿಕ್ಯೂಟರ್‌ ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ" ಎಂದು ತಿಳಿಸಿದ್ದಾರೆ.

"ಹೆಣ್ಣುಮಗಳೊಬ್ಬಳ ನಿಲುವಿಗೆ ವಿರುದ್ಧವಾಗಿ ಮದುವೆಗೆ ಬಲವಂತಪಡಿಸುವುದು ಅಥವಾ ಮದುವೆ ನಿರಾಕರಿಸುವುದು, ಜಾತಿಯಾಧಾರಿತ ಹಿಂಸೆ-ಹಲ್ಲೆ, ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಹೀನ ಕೃತ್ಯಗಳು. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ" ಎಂದಿದ್ದಾರೆ.

"ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಕಾನೂನು ರಚಿಸಲಾಗುವುದು. ಈ ಬಗ್ಗೆ ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ

ವಿಪಕ್ಷ ವಿರೋಧ: ಇತ್ತ ವಿಪಕ್ಷ ಬಿಜೆಪಿ ಮರ್ಯಾದೆ ಹೆಸರಿನಲ್ಲಿ ದೌರ್ಜನ್ಯ ತಡೆಯಲು ಪ್ರತ್ಯೇಕ ಮಸೂದೆ ಜಾರಿಗೆ ತರುವ ಅವಶ್ಯಕತೆ ಇಲ್ಲ ಎನ್ನುತ್ತಿವೆ. ಮೃತಪಟ್ಟ ಮಹಿಳೆ ಮಾನ್ಯ ದೊಡ್ಡಮನಿ ಅವರ ಗ್ರಾಮವಾದ ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು, "ದಲಿತರ ದೌರ್ಜನ್ಯ ತಡೆಗೆ ಅನೇಕ ಕಾನೂನುಗಳಿವೆ. ಜನರಿಗೆ ರಕ್ಷಣೆ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಹೊಸ ಮಸೂದೆ ತಂದರೆ‌ ನೂರಾ ಎಂಟರಲ್ಲಿ ಇದೊಂದು ಕಾನೂನು ಆಗಲಿದೆಯೇ ಹೊರತು, ಅದರಿಂದ ಏನೂ ಪ್ರಯೋಜನವಾಗಲ್ಲ. ಈ ಕೃತ್ಯಕ್ಕೆ ಕಠಿಣ ಶಿಕ್ಷೆ ಆಗಬೇಕು. ಇದರಲ್ಲಿ ಸರ್ಕಾರದ ನಿರ್ಲಕ್ಷ್ಯವಿದೆ. ಕಾನೂನು ತಂದು ಮನೆಯಲ್ಲಿ ಕುಳಿತರೆ ಆಗಲ್ಲ ಎಂದಿದ್ದರು.

ಇದೇ ವೇಳೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, "ಹೊಸ ಕಾನೂನಿನ ಅವಶ್ಯಕತೆ ಇಲ್ಲ.‌ ಇದ್ದ ಕಾನೂನು‌ಗಳು ಪರಿಣಾಮಕಾರಿಯಾಗಿ ಜಾರಿಯಾಗಲಿ" ಎಂದು ಹೇಳಿದ್ದರು.

ಇದನ್ನೂ ಓದಿ: ಮರ್ಯಾದೆ ಗೇಡು ಹತ್ಯೆ ತಡೆಗೆ ಮಾನ್ಯ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರುವ ಬಗ್ಗೆ ಚಿಂತನೆ: ಸಚಿವ ಹೆಚ್.ಸಿ. ಮಹದೇವಪ್ಪ