ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಬೇಡ, ಜಿಲ್ಲಾ ಉಸ್ತುವಾರಿ ಸಚಿವರು ಪ್ರಗತಿ ಪರಿಶೀಲಿಸಿ: ಸಿಎಂ ಸೂಚನೆ
ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ರೈಲ್ವೆ ಯೋಜನೆಗಳ ಭೂ ಸ್ವಾಧೀನ ಕುರಿತಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

Published : December 29, 2025 at 3:33 PM IST
ಬೆಂಗಳೂರು: ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ರೈಲ್ವೇ ಯೋಜನೆಗಳ ಭೂ ಸ್ವಾಧೀನ ಕುರಿತು ಸಿಎಂ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. 2023-24ರಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಲಾ 25 ಕೋಟಿ ರೂ.ಗಳಂತೆ ಒಟ್ಟು 3,510 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ ಈಗಾಗಲೇ 2,040 ರೂ. ಕೋಟಿ ಮೊತ್ತದಲ್ಲಿ ಶೇ.58ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, 920 ಕೋಟಿ ರೂ. ವೆಚ್ಚ ಭರಿಸಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.
ಇಂದು ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ರೈಲ್ವೆ ಯೋಜನೆಗಳ ಭೂಸ್ವಾಧೀನ ಕುರಿತು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾನು ನೀಡಿದ ಸೂಚನೆಗಳು:
— Siddaramaiah (@siddaramaiah) December 29, 2025
- 2023-24 ರಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಲಾ ರೂ.25 ಕೋಟಿಯಂತೆ ಒಟ್ಟು ರೂ. 3,510 ಕೋಟಿ… pic.twitter.com/e0AscNMiLR
ರಸ್ತೆ ದುರಸ್ತಿಗಾಗಿ ₹1,890 ಕೋಟಿ ಅನುಮೋದನೆ: 1,205 ಕೋಟಿ ರೂ. ಬಿಡುಗಡೆ ಮಾಡಲು ಬೆಳಗಾವಿ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಆದೇಶ ನೀಡಲಾಗಿದೆ. ಅನುಷ್ಠಾನ ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್ಲುಗಳನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. 2024-25ರಲ್ಲಿ ಮಳೆ ಹಾನಿಯಿಂದ ಉಂಟಾದ ರಸ್ತೆ ದುರಸ್ತಿಗಾಗಿ 1,890 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಲಾಗಿದ್ದು, 250 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 2025-26ನೇ ಸಾಲಿನಲ್ಲಿ 8,666.50 ಕೋಟಿ ರೂ. ಅನುಮೋದನೆ ನೀಡಲಾಗಿದ್ದು, ಈಗಾಗಲೇ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಟೆಂಡರ್ ಪ್ರಕ್ರಿಯೆ ಜ.10ರೊಳಗೆ ಪೂರ್ಣಗೊಳಿಸಿ: ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಿ, ಅನುದಾನ ಪಾವತಿಸುವುದು ಆಯಾ ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ. ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಮಾಡಬೇಕು. 2024-25ನೇ ಸಾಲಿನಲ್ಲಿ 205 ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ ಒಟ್ಟು 8,666.50 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇನ್ನೂ ಬಾಕಿಯಿರುವ 19 ಕ್ಷೇತ್ರಗಳಿಂದ ಪ್ರಸ್ತಾವನೆಗಳನ್ನು ಪಡೆದ ಬಳಿಕ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನು ಜನವರಿ 10ರೊಳಗೆ ಪೂರ್ಣಗೊಳಿಸಲು ಸಿಎಂ ಸೂಚನೆ ನೀಡಿದರು.
ರೈಲ್ವೆ ಕಾಮಗಾರಿಗಳಿಗೆ ಬಾಕಿಯಿರುವ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಕುಡಚಿ-ಬಾಗಲಕೋಟೆ, ತುಮಕೂರು-ದಾವಣಗೆರೆ, ಬೇಲೂರು-ಹಾಸನ, ಶಿವಮೊಗ್ಗ-ರಾಣೆಬೆನ್ನೂರು, ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗಗಳ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯೊಳಗೆ ಕೈಗೊಳ್ಳಲು ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಇದನ್ನೂ ಓದಿ: ಕರಾವಳಿಗೆ ಹೊಸ ಪ್ರವಾಸೋದ್ಯಮ ನೀತಿ, ಜ.10ರಂದು ಮಂಗಳೂರಿನಲ್ಲಿ ಬೃಹತ್ ಹೂಡಿಕೆದಾರರ ಸಮಾವೇಶ: ಡಿಕೆಶಿ

