ETV Bharat / state

ಸಿದ್ದರಾಮಯ್ಯ ವಿದಾಯದ ಭಾಷಣ; ಸಿಎಂರಿಂದ ಸಚಿವರುಗಳಿಗೆ ಆರ್ಥಿಕ ಪಾಠ, ಡಿಕೆಶಿಗೆ ಸಹಕರಿಸುವಂತೆ ಮನವಿ

ಸಿಎಂ ಸಿದ್ದರಾಮಯ್ಯ ಅವರಿಂದು ಕಾವೇರಿ ನಿವಾಸದಲ್ಲಿ ವಿದಾಯದ ಭಾಷಣ ಮಾಡಿದ್ದಾರೆ.

DCM D. K. Shivakumar, CM Siddaramaiah, G. Parameshwar
ಡಿಸಿಎಂ ಡಿ. ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಜಿ. ಪರಮೇಶ್ವರ್ (ETV Bharat)
author img

By ETV Bharat Karnataka Team

Published : May 28, 2026 at 1:50 PM IST

2 Min Read
Choose ETV Bharat

ಬೆಂಗಳೂರು : ಕಾವೇರಿ ನಿವಾಸದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಸೇರಿ ಸಚಿವರುಗಳಿಗೆ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಸಿಎಂ ಸಿದ್ದರಾಮಯ್ಯ ವಿದಾಯದ ಭಾಷಣ ಮಾಡಿದರು.

ಎರಡೂವರೆ ತಾಸು ನಡೆದ ಉಪಹಾರ ಕೂಟದಲ್ಲಿ ಎಲ್ಲಾ ಸಚಿವರು ಪಾಲ್ಗೊಂಡಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಸಚಿವರುಗಳನ್ನು ಉದ್ದೇಶಿಸಿ ವಿದಾಯದ ಭಾಷಣ ಮಾಡಿದರು. ಮಧ್ಯಾಹ್ನ 2:30 ಗಂಟೆಗೆ ಸಿಎಂ ಸಿದ್ದರಾಮಯ್ಯ ಲೋಕಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಪತ್ರ ನೀಡಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಉಪಹಾರ ಕೂಟ ಆಯೋಜಿಸಿದ್ದರು (ETV Bharat)

ಬ್ರೇಕ್ ಫಾಸ್ಟ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದು, ನಾನು ಮಧ್ಯಾಹ್ನ ಲೋಕಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತೇನೆ. ಕಳೆದ ಮೂರು ವರ್ಷ ನನ್ನ ನೇತೃತ್ವದಲ್ಲಿ ನಡೆಸಿದ ಆಡಳಿತಕ್ಕೆ ನೀವೆಲ್ಲರೂ ಸಹಕಾರ ನೀಡಿದ್ದೀರಿ‌‌. ಸಹಕಾರ ನೀಡಿದ್ದಕ್ಕೆ ನಿಮಗೆ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

ನಾನು ಎರಡು ವರ್ಷ ಶಾಸಕನಾಗಿ ನಿಮ್ಮ ಜೊತೆಗೇ ಇರುತ್ತೇನೆ. ಹೈಕಮಾಂಡ್ ಡಿ. ಕೆ. ಶಿವಕುಮಾರ್ ಮುಂದಿನ ಸಿಎಂ ಅಂತ ಹೇಳಿದೆ. ಅದನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ. ನಾನು ಇನ್ನೂ ರಾಜಕೀಯದಲ್ಲಿ ಸಕ್ರಿಯವಾಗಿಯೇ ಇರುತ್ತೇನೆ. 2028ರಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರೋಣ. ನಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಸಿಎಂರಿಂದ ಸಚಿವರುಗಳಿಗೆ ಆರ್ಥಿಕ ಪಾಠ : ನಾನು ರಾಜಕಾರಣದಲ್ಲಿ ಇರೋದಿಲ್ಲ ಅಂತಾ ಭಾವಿಸಬೇಡಿ. ನಾನು ನಿಮ್ಮೊಂದಿಗೆ ಇರುತ್ತೇನೆ. ಒಟ್ಟಾಗಿ ಹೋಗೋಣ. ಮೂರು ವರ್ಷದ ಸರ್ಕಾರದ ಉತ್ತಮ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಿ ಎಂದು ಮನವಿ ಮಾಡಿದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಸಚಿವರುಗಳಿಗೆ ಆರ್ಥಿಕ ಪಾಠ ಹೇಳಿದರು. ರಾಜ್ಯ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಸಾಲ, ಹಣಕಾಸು ಹೊಣೆಗಾರಿಕೆ ಕಾಯ್ದೆ ಮಿತಿಯೊಳಗೇ ಇದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಪರಿಷ್ಕರಣೆ ಇಲ್ಲದೆ ಮುಂದುವರಿಸಿಕೊಂಡು ಹೋಗಿ.‌ ಹಣಕಾಸು ಇಲಾಖೆ ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ತಾಕೀತು ಮಾಡುತ್ತಿರುತ್ತದೆ. ಆದರೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಜನ‌ಕಲ್ಯಾಣ ಯೋಜನೆಗಳಾದ ಪಂಚ ಗ್ಯಾರಂಟಿಯನ್ನು ಮುಂದುವರಿಸಿಕೊಂಡು ಹೋಗಿ. ಆಡಳಿತವನ್ನು ಚೆನ್ನಾಗಿ ನಡೆಸಿ ಎಂದು ಡಿಕೆಶಿಗೆ ಸಲಹೆ ನೀಡಿದರು.

ನಾನು ರಾಜೀನಾಮೆಯನ್ನು ಕೊಡ್ತಿದ್ದೇನೆ. ಡಿಕೆಶಿ ಮುಖ್ಯಮಂತ್ರಿ ಅಂತ ಹೈಕಮಾಂಡ್​ ಹೇಳಿ ಕಳಿಸಿದ್ದಾರೆ. ಹಾಗಾಗಿ ಎಲ್ಲರೂ ಡಿಕೆಶಿಗೆ ಸಹಕಾರ ನೀಡಿ. ಇನ್ನೂ ಎರಡು ವರ್ಷ ಸರ್ಕಾರ ಇರಲಿದೆ. ಎಲ್ಲರ ಸಹಕಾರದಿಂದ ಮತ್ತೆ ಅಧಿಕಾರಕ್ಕೆ ತರೋಣ. ಯಾರು ಅನ್ಯತಾ ಭಾವಿಸಬೇಡಿ. ನಾನು ನನ್ನ ನಿರ್ಧಾರವನ್ನು ತಿಳಿಸಿದ್ದೇನೆ. ಹೈಕಮಾಂಡ್ ಹೇಳಿದ್ದಕ್ಕೆ ನಾನು ಬದ್ಧನಾಗಿದ್ದೇನೆ. ಅವರ ಸೂಚನೆ ಮೇರೆಗೆ ನಾನು ರಾಜೀನಾಮೆ ನೀಡ್ತಿದ್ದೇನೆ. ಯಾರು ಬೇರೆ ರೀತಿ ಅಪಾರ್ಥ ಮಾಡುವುದು ಬೇಡವೆಂದು ಸಿದ್ದರಾಮಯ್ಯ ಹೇಳಿದರು.

ಪಕ್ಷಕ್ಕಾಗಿ ಎಲ್ಲರ ಸಹಕಾರವೂ ಇರಲಿ. ಡಿಕೆಶಿಗೆ ಸಹಕರಿಸಿ ಎಂದು ಮನವಿ ಮಾಡಿದರು. ಸಿಎಂ ಘೋಷಣೆಯಿಂದ ಕೆಲ ಸಚಿವರು ಕಣ್ಣೀರು ಹಾಕಿದರು.

ಇದೇ ವೇಳೆ ಕೆಲ ಸಚಿವರು ಮಾತನಾಡಿ, ನಿಮ್ಮ ಆಡಳಿತದಲ್ಲಿ ರಾಜ್ಯ ಸಾಕಷ್ಟು ಅಭಿವೃದ್ಧಿ ಕಂಡಿದೆ. ಉತ್ತಮ ಆಡಳಿತ ನಡೆಸಿದ್ದೀರಿ. ನಮಗೆ ಎಲ್ಲಾ ರೀತಿಯ ಸಲಹೆ, ಸಹಕಾರಗಳನ್ನು ನೀಡಿದ್ದೀರಿ ಎಂದು ಭಾವುಕರಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ : ಅಧಿಕಾರ ಹಸ್ತಾಂತರ ಗೊಂದಲಕ್ಕೆ ಕೊನೆಗೂ ತೆರೆ: ಸಿಎಂ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ಸಿದ್ದರಾಮಯ್ಯ