ದೇವರಾಜ ಅರಸು ಅವರೊಂದಿಗೆ ಸಿದ್ದರಾಮಯ್ಯ ಅವರನ್ನು ಹೋಲಿಸಲಾಗದು: ಬಿ.ಎಸ್. ಯಡಿಯೂರಪ್ಪ
ದೇವರಾಜ ಅರಸು ಅವರ ಆಡಳಿತ ವೈಖರಿಯೇ ಬೇರೆ, ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯೇ ಬೇರೆ. ಅವರ ಜೊತೆ ಇವರನ್ನು ಹೋಲಿಸಲಾಗದು ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

Published : January 7, 2026 at 8:50 PM IST
ಬೆಂಗಳೂರು: ಅತಿ ಹೆಚ್ಚು ದಿನಗಳ ಕಾಲ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿರುವ ಸಿದ್ದರಾಮಯ್ಯ ಅವರ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಿ.ದೇವರಾಜ ಅರಸು ಅವರೊಂದಿಗೆ ಹಾಲಿ ಸಿಎಂ ಅವರನ್ನು ಹೋಲಿಸಲಾಗದು ಎಂದಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ, "ಸಿದ್ದರಾಮಯ್ಯ ಅವರು ಅತಿ ಹೆಚ್ಚು ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಸರಿ. ಆದರೆ ದೇವರಾಜ ಅರಸು ಅವರ ಆಡಳಿತ ವೈಖರಿಯೇ ಬೇರೆ, ಇವರ ಆಡಳಿತ ವೈಖರಿಯೇ ಬೇರೆ. ಅವರ ಜೊತೆ ಇವರನ್ನು ಹೋಲಿಸಲಾಗದು" ಎಂದು ವ್ಯಾಖ್ಯಾನಿಸಿದರು.
"ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆ ಬಿಜೆಪಿ ವಿಶೇಷವಾದ ಗಮನ ಕೊಡಲಿದೆ. ಸಂಘಟನೆ ಬಲಪಡಿಸುವ ದೃಷ್ಟಿಯಿಂದ ಇಂದಿನಿಂದ ರಾಜ್ಯಾಧ್ಯಕ್ಷರು ಮತ್ತು ಎಲ್ಲ ಪ್ರಮುಖರು ಸೇರಿ ಪ್ರತಿ ಜಿಲ್ಲಾ ಪ್ರಮುಖರ ಸಮಾವೇಶವನ್ನು ಮಾಡುತ್ತಿದ್ದೇವೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆಯೂ ಚರ್ಚಿಸುತ್ತಿದ್ದೇವೆ. ಈ ಸರ್ಕಾರದ ದುರಾಡಳಿತವನ್ನು ಜನರ ಗಮನಕ್ಕೆ ತರುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆ ವಿಶೇಷವಾದ ಗಮನ ಕೊಡಲು ತೀರ್ಮಾಸಲಾಗಿದೆ" ಎಂದರು.
"ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಈ ಸಂದರ್ಭದಲ್ಲಿ ಸಮಾವೇಶದ ಮೂಲಕ ಸಾಧನೆ ಮಾಡುವುದಾಗಿ ಹೊರಟಿರುವುದನ್ನು ಜನರು ಮೆಚ್ಚುವುದಿಲ್ಲ. ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಪಡೆಯುತ್ತಿದೆ. ಮುಂದಿನ ಚುನಾವಣೆಯಲ್ಲೂ ನಾವು ನಿಶ್ಚಿತವಾಗಿ ದೊಡ್ಡ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಬೇಕು ಎಂಬ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಕಾರ್ಯಕರ್ತರೂ ತುಂಬ ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದನ್ನು ತಾವು ಗಮನಿಸಲಿದ್ದೀರಿ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಮಗೆ ಗೊತ್ತೇ ದಾಖಲೆ ಬರೆದ ಇಬ್ಬರೂ ಸಿಎಂ ಮೈಸೂರಿನವರು: ಹೌದು ದೇವರಾಜು ಅರಸು ಅವರು ಈವರೆಗೆ ಕರ್ನಾಟಕದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆ ಪಡೆದಿದ್ದರು. ಈಗ ಸಿಎಂ ಸಿದ್ದರಾಮಯ್ಯ ಅವರು ಆ ಮೈಲಿಗಲ್ಲನ್ನು ದಾಟುತ್ತಿದ್ದಾರೆ. ಈ ಇಬ್ಬರು ನಾಯಕರು ಮೈಸೂರಿನವರೇ ಆಗಿರುವುದು ವಿಶೇಷ. ದೇವರಾಜು ಅರಸು ಅವರು ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದ ಶಾಸಕರಾಗಿ ಸಿಎಂ ಪಟ್ಟ ಅಲಂಕರಿಸಿದ್ದರೆ, ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಶಾಸಕರಾಗಿ ದೀರ್ಘಕಾಲೀನ ಮುಖ್ಯಮಂತ್ರಿಯಾದ ಹಿರಿಮೆಯನ್ನು ಪಡೆದುಕೊಂಡಿದ್ದಾರೆ.

