ETV Bharat / state

ಕೈಗಾರಿಕಾ ಅಭಿವೃದ್ಧಿಗೆ ಬೆಂಗಳೂರು ಹೊರತುಪಡಿಸಿ 5 ನಗರ ಗುರುತಿಸಲು ಸಿಎಂ ಸೂಚನೆ

ಕೈಗಾರಿಕಾ ಅಭಿವೃದ್ಧಿಗೆ ಬೆಂಗಳೂರು ಹೊರತುಪಡಿಸಿ ಐದು ನಗರ ಗುರುತಿಸಲು ಸಿಎಂ ಡಿಕೆಶಿ ಸೂಚನೆ ನೀಡಿದ್ದಾರೆ.

CM INSTRUCTS TO IDENTIFY FIVE CITIES OTHER THAN BENGALURU FOR INDUSTRIAL DEVELOPMENT
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ (ETV Bharat)
author img

By ETV Bharat Karnataka Team

Published : August 28, 2026 at 7:46 PM IST

2 Min Read
Choose ETV Bharat

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕಾ ಅಭಿವೃದ್ಧಿಯ ಉದ್ದೇಶದಿಂದ ಬೆಂಗಳೂರನ್ನು ಹೊರತುಪಡಿಸಿ ಬೇರೆ ಐದು ನಗರಗಳನ್ನು ಗುರುತಿಸುವಂತೆ ಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ನಗರಗಳಲ್ಲಿ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಹೂಡಿಕೆದಾರರಿಗೆ ವಿಶೇಷ ರಿಯಾಯಿತಿ ಸೌಲಭ್ಯಗಳನ್ನು ನೀಡುವ ಮೂಲಕ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ. ಇದಕ್ಕೆ ವಿಮಾನ ನಿಲ್ದಾಣ ಮತ್ತಿತರ ಮೂಲಸೌಕರ್ಯ ಹೊಂದಿರುವ ಸೂಕ್ತ ಐದು ನಗರಗಳನ್ನು ಗುರುತಿಸುವಂತೆ ತಿಳಿಸಿದರು.

ಏಕಗವಾಕ್ಷಿ ಅನುಮೋದನೆ ಬಲಪಡಿಸಿ: ಕೈಗಾರಿಕೋದ್ಯಮಗಳ ಸ್ಥಾಪನೆಗೆ ಏಕಗವಾಕ್ಷಿ ಅನುಮೋದನೆಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ನಿಗದಿತ ಕಾಲ ಮಿತಿಯೊಳಗೆ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ನೀಡಿದರು. ಈ ಕುರಿತು ಆಯಾ ಇಲಾಖಾ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಈ ವ್ಯವಸ್ಥೆಯಲ್ಲಿ 22 ಇಲಾಖೆಗಳು ಹಾಗೂ 119 ಸೇವೆಗಳನ್ನು ಸಂಯೋಜಿಸಲಾಗಿದ್ದು, ಡಿಜಿಟಲ್ ಹಾಗೂ ಸಮಯೋಚಿತ ಅನುಮೋದನೆಗೆ ಒತ್ತು ನೀಡಲಾಗಿದೆ. ನೀತಿ ಆಯೋಗದ ಹೂಡಿಕೆದಾರ ಸ್ನೇಹಿ ಸೂಚ್ಯಂಕದಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ಇದನ್ನು ಇನ್ನಷ್ಟು ಉತ್ತಮ ಪಡಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಆಂಧ್ರ ಪ್ರದೇಶ, ಉತ್ತರ ಪ್ರದೇಶ, ತಮಿಳು ನಾಡು ಹಾಗೂ ಮಧ್ಯಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಹೂಡಿಕೆ ಆಕರ್ಷಿಸಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಸಹ ಚರ್ಚಿಸಲಾಯಿತು. ಹೂಡಿಕೆದಾರರು ರಾಜ್ಯದಿಂದ ಅಪೇಕ್ಷಿಸುವ ಸುಧಾರಣೆಗಳ ಕುರಿತು ಸಮಾಲೋಚಿಸಲಾಯಿತು.

ಉತ್ಪಾದನಾ ವಲಯ ಹೂಡಿಕೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ: ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ತಯಾರಿಕಾ ವಲಯದಲ್ಲಿ 5.58 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ. ಸೆಮಿಕಂಡಕ್ಟರ್ಸ್, ಏರೋಸ್ಪೇಸ್ & ಡಿಫೆನ್ಸ್, ಕ್ಲೀನ್ ಮೊಬಿಲಿಟಿ/ ಸೆಲ್ ಉತ್ಪಾದನೆ, ಇತರ ಉದಯೋನ್ಮುಖ ವಲಯಗಳಲ್ಲಿ ಹೂಡಿಕೆಗೆ ವಿಶೇಷ ಉತ್ತೇಜನ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

ರಾಜ್ಯದಲ್ಲಿ ಉತ್ಪಾದನಾ ವಲಯವನ್ನು ಇನ್ನಷ್ಟು ಸುಧಾರಿಸಲು “ಉತ್ಪಾದನಾ ಮಂಥನ” ಎಂಬ ಸಮಾಲೋಚನಾ ಸಭೆಯಲ್ಲಿ 80 ಸಿಇಒಗಳೊಂದಿಗೆ ಚರ್ಚಿಸಲಾಯಿತು. ಸಭೆಯಲ್ಲಿ ಸ್ವೀಕರಿಸಲಾದ 55 ಸಲಹೆಗಳಲ್ಲಿ 35 ಸಲಹೆಗಳನ್ನು ಈಗಾಗಲೇ ಬಗೆಹರಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ರೈಲ್ವೆ ಚತುಷ್ಪಥ ಯೋಜನೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ತೀವ್ರ ಅನ್ಯಾಯ: ಸಚಿವ ಎಂ.ಬಿ.ಪಾಟೀಲ್