ಬೆಳಗಾವಿ ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆ; ಜನರ ಬಳಿ ಸರ್ಕಾರ ಇರಬೇಕು: ಸಿಎಂ ಡಿ.ಕೆ. ಶಿವಕುಮಾರ್
ಜನರನ್ನು ಕಚೇರಿಗೆ ಅಲೆಸುವುದು ನಿಲ್ಲಬೇಕು. ಅಧಿಕಾರಿಗಳು ಘನತೆಯಿಂದ ಇರಬೇಕು ಎಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಸೂಚಿಸಿದ್ದಾರೆ.

Published : July 9, 2026 at 5:07 PM IST
ಬೆಳಗಾವಿ: "ಸರ್ಕಾರವನ್ನು ಜನರು ಹುಡುಕಬಾರದು. ಜನರ ಬಳಿ ಸರ್ಕಾರ ಇರಬೇಕು ಎಂಬುದು ನನ್ನ ಮೊದಲ ಆದ್ಯತೆ. ಜನರನ್ನು ಕಚೇರಿಗೆ ಅಲೆಸುವುದು ನಿಲ್ಲಬೇಕು. ಅಧಿಕಾರಿಗಳು ಘನತೆಯಿಂದ ಇರಬೇಕು" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಚಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ, ತಾಲೂಕುಮಟ್ಟದ ಪ್ರತಿ ಅಧಿಕಾರಿಯು ಕೇಂದ್ರಸ್ಥಾನದಲ್ಲಿರುವ ಬಗ್ಗೆ ಡಿಸಿ, ಸಿಇಒಗಳು ಖಚಿತಪಡಿಸಿಕೊಳ್ಳಬೇಕು. ಚಲನವಲನದ ಮೇಲೆಯೂ ನಿರಂತರ ನಿಗಾವಹಿಸಬೇಕು ಎಂದರು.
ಜನರ ಅಹವಾಲು ಪರಿಹರಿಸಲು ಪ್ರಜಾಸೇವಾ ಇಲಾಖೆ ಆರಂಭಿಸಲಾಗಿದ್ದು, ಈ ಇಲಾಖೆಗೆ ಒಬ್ಬ ಪ್ರತ್ಯೇಕ ಮಂತ್ರಿಯೊಬ್ಬರನ್ನು ನಿಯೋಜಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ಮೊದಲ ಹಾಗೂ ಮೂರನೇ ಶನಿವಾರ ತಿಂಗಳಲ್ಲಿ ಎರಡು ದಿನ ಆಯ್ದ ತಾಲೂಕುಗಳಲ್ಲಿ ಪ್ರಜಾಸೇವಾ ಇಲಾಖೆಯಿಂದ ಜನಸಂಪರ್ಕ ಸಭೆಗಳನ್ನು ನಡೆಸಿ ಜನರ ಸಮಸ್ಯೆ ಬಗೆಹರಿಸಬೇಕು ಎಂದು ಡಿ.ಕೆ. ಶಿವಕುಮಾರ ನಿರ್ದೇಶನ ನೀಡಿದರು.
ಜನಸಂಪರ್ಕ ಸಭೆಯಲ್ಲಿ ಅರ್ಜಿಗಳ ಸ್ವೀಕಾರ, ವಿಲೇವಾರಿ ಸೇರಿದಂತೆ ಪ್ರತಿಯೊಂದರ ನಿಗದಿತ ವಿನ್ಯಾಸವನ್ನು ನೀಡಲಾಗುವುದು. ಕಾನೂನು ಚೌಕಟ್ಟಿನೊಳಗೆ ಜನರ ಸಮಸ್ಯೆ ಬಗೆಹರಿಸಬೇಕು ಎಂದರು.
ಜನರು ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗ ಅರಸಿ ಪಟ್ಟಣಗಳಿಗೆ ಬರುತ್ತಾರೆ. ಇದನ್ನು ತಡೆಯಲು ಸಿ.ಎಸ್.ಆರ್. ನೀತಿಯಡಿ 8 ಸಾವಿರ ಕೋಟಿ ರೂ., ಮೂರು ಪಂಚಾಯತ್ ಸೇರಿಸಿ 10-15 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಸರ್ಕಾರಿ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು. ಈ ರೀತಿ ಕನಿಷ್ಠ 2 ಸಾವಿರ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದಲ್ಲದೇ ಆಯಾ ಜಿಲ್ಲೆಯ ದೊಡ್ಡ ಶಿಕ್ಷಣ ಸಂಸ್ಥೆಗಳು ಮೂರು ಶಾಲೆಗಳನ್ನು ದತ್ತು ಪಡೆದುಕೊಳ್ಳುವಂತೆ ಕ್ರಮ ವಹಿಸಲಾಗುವುದು. ಎಲ್ಲರಿಗೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಒದಗಿಸಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ ಮತದಾನ ಹಕ್ಕು ನೀಡಬೇಕು ಎಂಬುದು ನಮ್ಮ ಉದ್ಧೇಶವಾಗಿದೆ. ಯಾವುದೇ ಪಕ್ಷದ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೇ ಎಲ್ಲ ಬಿ.ಎಲ್.ಒ.ಗಳು ನಿಯಮಾನುಸಾರ ಮನೆಮನೆಗೆ ಹೋಗಿ ಗಣತಿ ನಮೂನೆಗಳನ್ನು ವಿತರಿಸಬೇಕು.
ಜಾತಿ, ವಾಸಸ್ಥಳ ದೃಢೀಕರಣ ಪ್ರಮಾಣಪತ್ರ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕೂಡ ಕಲ್ಪಿಸಲಾಗಿದೆ. ಮತದಾನದ ಹಕ್ಕು ಪಡೆದುಕೊಳ್ಳಲು ಪ್ರತಿಯೊಬ್ಬರು ಅಗತ್ಯ ಕ್ರಮ ವಹಿಸಬೇಕು ಎಂದರು. ಯಾರೂ ಮತದಾನ ಹಕ್ಕುಗಳಿಂದ ವಂಚಿತರಾಗಬಾರದು ಎಂದು ಹೇಳಿದರು.
ದೇಶದ ಸಮಗ್ರತೆ, ಐಕ್ಯತೆ ಕಾಪಾಡಲು ಭಾರತ ಜೋಡೋ ಯುವಕ ಸಂಘ ಸ್ಥಾಪಿಸಿ ಪ್ರತಿ ಪಂಚಾಯತ್ಗೆ 10 ಲಕ್ಷ ರೂಪಾಯಿ ನೀಡಲಾಗುವುದು. ರಾಜ್ಯದಲ್ಲಿ ಹತ್ತು ಸಾವಿರ ಯುವಕರ ಸಂಘಗಳನ್ನು ಸ್ಥಾಪಿಸಲಾಗುವುದು. ಭಾರತ ಜೋಡೋ ಯುವ ಸಂಘಗಳ ಸ್ಥಾಪನೆಗೆ ಒಂದು ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದರು.
ಪ್ರತಿ ಕ್ಷೇತ್ರದಲ್ಲಿ ಬಡವರಿಗೆ ಐದರಿಂದ 10 ಸಾವಿರ ನಿವೇಶನಗಳನ್ನು ನೀಡಲು ಕ್ರಮ ವಹಿಸಲಾಗುವುದು. ಪ್ರತಿ ತಾಲೂಕಿನಲ್ಲೂ ಕೈಗಾರಿಕಾ ಪಾರ್ಕ್ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ ಹೇಳಿದರು.
ಸಭೆಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು, ಹೊಸ ಆಲೋಚನೆ ಹೊಂದಿರುವ ಮುಖ್ಯಮಂತ್ರಿಗಳ ಆಶಯದಂತೆ ತ್ವರಿತವಾಗಿ ಕೆಲಸಗಳಾಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಎಲ್ಲ ಜಿಲ್ಲೆಗಳ ಡಿಸಿ, ಸಿಇಒ, ಎಸ್.ಪಿ. ಅವರು ಅಭಿವೃದ್ಧಿಯ ಜತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಜನರ ಬಳಿ ತೆರಳಿ ಅವರ ಸಮಸ್ಯೆಗಳನ್ನು ಆಲಿಸಬೇಕು.
ಗ್ಯಾರಂಟಿ ಅಭಿವೃದ್ಧಿಗೆ ಪೂರಕವಾಗಿವೆ. ಗ್ಯಾರಂಟಿ ಅನುಷ್ಠಾನದಿಂದ ಅಭಿವೃದ್ಧಿ ಕುಂಠಿತ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದರು.
ಈ ಬಾರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣದಲ್ಲಿ ಕುಂಠಿತವಾಗಿರುವುದು ಕಂಡುಬಂದಿದೆ. ಒಟ್ಟಾರೆ ಶೇ.17 ಮಳೆಯ ಪ್ರಮಾಣ ಕಡಿಮೆಯಾಗಿದೆ. ಹಿಂದಿನ ಒಂದೆರಡು ದಿನಗಳಲ್ಲಿ ಸ್ವಲ್ಪ ಮಳೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ-ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ಗಳು ನಿಯಮಿತವಾಗಿ ಸಭೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಜಲಮೂಲಗಳಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಡಾ.ಜಿ. ಪರಮೇಶ್ವರ್ ಹೇಳಿದರು.
ಮೇವಿನ ಕೊರತೆ ಆಧರಿಸಿ ಮೇವಿನ ಕಿಟ್ಗಳನ್ನು ನೀಡಬೇಕು. ಮಳೆ ಪ್ರಮಾಣ ನಿಖರವಾಗಿ ತಿಳಿಯಲು ಮಳೆ ಮಾಪನಾ ಕೇಂದ್ರಗಳನ್ನು ಆಧುನಿಕರಣಗೊಳಿಸಬೇಕು. ಕೇಂದ್ರ ಸರ್ಕಾರ ಇದಯವರೆಗೆ ಕೇವಲ ಶೇ.50 ರಷ್ಟು ಗೊಬ್ಬರವನ್ನು ಪೂರೈಕೆ ಮಾಡಿರುತ್ತದೆ. ಉಳಿದ ಪ್ರಮಾಣವನ್ನು ಒದಗಿಸುವಂತೆ ಪತ್ರ ಬರೆಯಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
ಮನೆ ಮನೆಗೆ ತೆರಳಿ ಹಕ್ಕುಪತ್ರ ನೀಡುವ ಕೆಲಸವನ್ನು ಕಂದಾಯ ಇಲಾಖೆ ಆರಂಭಿಸಿದೆ. ಜಮೀನು ದಾಖಲೆಗಳ 140 ಕೋಟಿ ಪುಟಗಳನ್ನು ಡಿಜಿಟಲೀಕರಣ ಮಾಡುವ ಕೆಲಸವನ್ನು ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ಕಂದಾಯ ಇಲಾಖೆ ಕೈಗೆತ್ತಿಕೊಂಡಿದೆ. ಮುಂಬರುವ ದಿನಗಳಲ್ಲಿ ದೇಶಕ್ಕೆ ಮಾದರಿಯಾಗಲಿದೆ ಎಂದು ಪರಮೇಶ್ವರ್ ಹೇಳಿದರು.
ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಸಚಿವರಾದ ಎಂ.ಬಿ. ಪಾಟೀಲ, ಸತೀಶ್ ಜಾರಕಿಹೊಳಿ, ಯು.ಟಿ. ಖಾದರ್, ಈಶ್ವರ್ ಖಂಡ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕೇಂದ್ರದ ಆಯೋಗವೇ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ: ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹರ್ಷ

