ETV Bharat / state

ಸಚಿವರ ರಾಜೀನಾಮೆ ಬಗ್ಗೆ ಸಿಎಂ ಹೇಳಿದ್ದೇನು? ಪಕ್ಷಕ್ಕೆ ಮುಜುಗರ ಆದ್ರೆ ರಾಜೀನಾಮೆ ಎಂದು ಸಚಿವ ನಾಗೇಂದ್ರ

ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಚರ್ಚೆ ಮಧ್ಯೆ ಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

BENGALURU  CM DK SHIVAKUMAR  PROTEST AGAINST NAGENDRA  ಸಚಿವ ನಾಗೇಂದ್ರ
ಸಚಿವ ನಾಗೇಂದ್ರ, ಸಿಎಂ ಡಿ.ಕೆ.ಶಿವಕುಮಾರ್ (ETV Bharat)
author img

By ETV Bharat Karnataka Team

Published : August 28, 2026 at 3:56 PM IST

2 Min Read
Choose ETV Bharat

ಬೆಂಗಳೂರು: ಪಕ್ಷಕ್ಕೆ ಮುಜುಗರ ಆದ್ರೆ ರಾಜೀನಾಮೆ ನೀಡುವುದಾಗಿ ದೆಹಲಿಯಿಂದ ವಾಪಸ್ ಆದ ಬಳಿಕ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಸಚಿವ ನಾಗೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಭೇಟಿಗೆ ತೆರಳುತ್ತಿದ್ದೇನೆ. ನನ್ನಿಂದ ಪಕ್ಷಕ್ಕೆ ಮುಜುಗರ ಆಗಬಾರದು. ಈ ಬಗ್ಗೆ ಸಿಎಂ ಜೊತೆ ಕುಲಂಕುಷವಾಗಿ ಚರ್ಚೆ ಮಾಡ್ತೇನೆ ಎಂದು ನಾಗೇಂದ್ರ ತಿಳಿಸಿದರು.

ಬಿಜೆಪಿಯ ಗೊಡ್ಡು ಬೆದರಿಕೆಗಳಿಗೆ ಹೆದರುವವನು ಅಲ್ಲ. ಈ ಕುರಿತು ಸುದ್ದಿಗೋಷ್ಡಿಯನ್ನ ಕರೆಯುತ್ತೇನೆ ಎಂದು ನಾಗೇಂದ್ರ ಹೇಳಿದರು.

ನಾಗೇಂದ್ರ ಅವರೇ ಮಾತಾಡ್ತಾರೆ ಎಂದ ಸಿಎಂ: ಇದಕ್ಕೂ ಮುನ್ನ ಬೆಂಗಳೂರಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ನಾಗೇಂದ್ರ ಅವರೇ ನಿಮ್ಮೊಂದಿಗೆ ಮಾತನಾಡುತ್ತಾರೆ ಎಂದರು.

ಸಿಎಂ ಡಿ.ಕೆ.ಶಿವಕುಮಾರ್, ಸಚಿವ ನಾಗೇಂದ್ರ (ETV Bharat)

ಇವತ್ತು ದೆಹಲಿಯಿಂದ ಬಿ.ನಾಗೇಂದ್ರ ಬರ್ತಾರೆ‌. ಅವರು ನಿಮ್ಮ ಜೊತೆ ಮಾತಾಡ್ತಾರೆ. ಇಂದು ಬೆಳಗ್ಗೆ ನನ್ನ ಜೊತೆ ಮಾತನಾಡುತ್ತಾ, ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷಕ್ಕಾಗಿ ಎಲ್ಲದಕ್ಕೂ ಸಿದ್ದ ಎಂದರು. ನಾನು ಈ ವಿಚಾರವನ್ನು ಅವರಿಗೆ ಬಿಟ್ಟಿದ್ದೇನೆ ಎಂದು ಸೂಚ್ಯವಾಗಿ ತಿಳಿಸಿದರು.

ಬಿ.ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳಿಂದ ಒತ್ತಡ, ಪ್ರತಿಭಟನೆ ಹೆಚ್ಚುತ್ತಿರುವ ಮಧ್ಯೆ ಸಿಎಂ‌ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಇತ್ತ ಬಿ.ನಾಗೇಂದ್ರ ಕೂಡ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿದ್ದಾರೆ.

ಬಿಜೆಪಿಯಿಂದ ಪ್ರತಿಭಟನೆ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದಲ್ಲಿ ಆರೋಪಿಯಾಗಿರುವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಮುಂಗಾರು ಅಧಿವೇಶನದಲ್ಲೂ ನಾಗೇಂದ್ರ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಇದರಿಂದ ಕಲಾಪಗಳು ನಡೆದಿರಲಿಲ್ಲ.

ಬಿ. ನಾಗೇಂದ್ರ ಸಚಿವರಾಗಿರುವವರೆಗೂ ಅಧಿವೇಶನ ನಡೆಯಲು ಅವಕಾಶ ನೀಡುವುದಿಲ್ಲ. ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪಡೆಯಲೇಬೇಕು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್​ ಆಗ್ರಹಿಸಿದ್ದರು.

ವಾಲ್ಮೀಕಿ ನಿಗಮದ ಪ್ರಕರಣದಲ್ಲಿ 187 ಕೋಟಿ ರೂ. ಹಗರಣದಲ್ಲಿ 89 ಕೋಟಿ ರೂ. ಅಕ್ರಮ ನಡೆದಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದರು. ಇದನ್ನು ಚುನಾವಣೆಗೆ ಬಳಸಿಕೊಂಡಿರುವುದು ಜಗಜ್ಜಾಹೀರಾಗಿತ್ತು. ದಲಿತರ ಈ ಹಣವನ್ನು ತಿಂದವರನ್ನು ಸಂಪುಟದಲ್ಲಿ ಇಟ್ಟುಕೊಂಡರೆ ಇಡೀ ಸಂಪುಟ ಕಳಂಕಿತ ಎಂದಾಗುತ್ತದೆ. ಬಹುಶಃ ನಾಗೇಂದ್ರ ಅವರು ಮುಖ್ಯಮಂತ್ರಿ, ಹೈಕಮಾಂಡ್‌ ಅನ್ನು ಬ್ಲ್ಯಾಕ್​ಮೇಲ್‌ ಮಾಡಿರಬಹುದು ಎಂದು ಅಶೋಕ್ ಆರೋಪಿಸಿದ್ದರು.

ಬಿಜೆಪಿಯವರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ್ದ ನಾಗೇಂದ್ರ ಅವರು, ನಾನೊಬ್ಬ ದಲಿತ, ಆದಿವಾಸಿ ವ್ಯಕ್ತಿ ಎಂದು ಬಿಜೆಪಿ ನನ್ನ ರಾಜೀನಾಮೆ ಕೇಳುತ್ತಿದೆ ಎಂದು ದೂರಿದ್ದರು.

ವಾಲ್ಮೀಕಿ ನಿಗಮ ಹಗರಣದಲ್ಲಿ ನನ್ನ ಖಾತೆಗೆ ನಯಾ ಪೈಸೆ ಹಣ ಬಂದಿಲ್ಲ. ಇ.ಡಿ ಬಂದು ನನ್ನನ್ನು ಜೈಲಿಗೆ ಹಾಕಿತು. ಇ.ಡಿ ಅವರು ಯಾರ, ಯಾರ ಹೆಸರು ಹೇಳಬೇಕು ಎಂದು ನನ್ನ ಮೇಲೆ ಒತ್ತಡ ಹಾಕಿದ್ದರು. ಈ ಎಲ್ಲಾ ವಿಚಾರಗಳನ್ನು ಸದನದಲ್ಲಿ ಹೇಳಬೇಕು. ಒಬ್ಬ ದಲಿತ, ಆದಿವಾಸಿ ವ್ಯಕ್ತಿಯನ್ನು ಹೇಗಾದರು ಮಾಡಿ ತೆಗೆಯಬೇಕು ಎಂದು ಹುನ್ನಾರ ಮಾಡುತ್ತಿದ್ದಾರೆ ಎಂದು ನಾಗೇಂದ್ರ ಆರೋಪಿಸಿದ್ದರು.

ಇದನ್ನೂ ಓದಿ: 3 ದಿನ ಮುನ್ನವೇ ಮುಂಗಾರು ಅಧಿವೇಶನ ಮೊಟಕು: ನಾಗೇಂದ್ರ ರಾಜೀನಾಮೆಗೆ ಪಟ್ಟು, ಮೇಲ್ಮನೆಯಲ್ಲಿ ಚರ್ಚೆಯಿಲ್ಲದೇ 13 ವಿಧೇಯಕಗಳಿಗೆ ಅನುಮೋದನೆ