ಗಗನಚುಂಬಿ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣ ಸಂಬಂಧ ಸೇನೆಯೊಂದಿಗೆ ಒಪ್ಪಂದಕ್ಕೆ ಮಾತುಕತೆ: ಸಿಎಂ ಡಿಕೆಶಿ
ನಗರದ ಗಗನಚುಂಬಿ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣ ಸಂಬಂಧ ಸೇನೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

Published : August 28, 2026 at 7:26 PM IST
ಬೆಂಗಳೂರು: "ರಾಜಧಾನಿಯಲ್ಲಿ ನಿರ್ಮಾಣವಾಗಿರುವ ಗಗನಚುಂಬಿ ಕಟ್ಟಡಗಳಲ್ಲಿ ಬೆಂಕಿ ಅನಾಹುತ, ಭಯೋತ್ಪಾದನೆ ದಾಳಿಗಳು ಸಂಭವಿಸಿದರೆ ನಾಗರಿಕ ರಕ್ಷಣೆ ನಮ್ಮ ಕರ್ತವ್ಯ. ಇಂಥ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ಹೆಲಿಪ್ಯಾಡ್ಗಳನ್ನು ಬಳಸಿಕೊಳ್ಳುವ ವಿಚಾರವಾಗಿ ನಮ್ಮ ಸರ್ಕಾರ ವಾಯು ಸೇನಾ ಅಧಿಕಾರಿಗಳೊಂದಿಗೆ ಒಪ್ಪಂದಕ್ಕೆ ಮಾತುಕತೆ ನಡೆಸಲಾಗುವುದು" ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕರ್ನಾಟಕ ರಾಜ್ಯ ಪೊಲೀಸರಿಗಾಗಿ ಸಮಗ್ರ ಸಾಮರ್ಥ್ಯ ವೃದ್ದಿ ತರಬೇತಿಗೆ ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
"ಬೆಂಗಳೂರು ವಿಶ್ವಮಾನ್ಯ ನಗರ. ನಗರದಲ್ಲಿರುವ ಗಗನಚುಂಬಿ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣಕ್ಕೆ ಅಗತ್ಯ ಸ್ಥಳ ಒದಗಿಸಬೇಕು. ಕಾನೂನು ಚೌಕಟ್ಟಿನಲ್ಲಿ ಅನುಮತಿಯನ್ನು ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಬಿಲ್ಡರ್ಗಳು, ಡೆವಲಪರ್ಗಳಿಗೆ ಮನವಿ ಮಾಡುತ್ತೇನೆ" ಎಂದರು.
"ಡಿಜಿಟಲ್ ಕ್ರೈಂಗಳು ಹೆಚ್ಚುತ್ತಿವೆ. ನಾವುಗಳು ಅಡ್ಡೇಟ್ ಆಗಬೇಕು. ರಾಜ್ಯದ ಜನಸಂಖ್ಯೆ 7 ಕೋಟಿಯಾಗಿದೆ. 2 ಲಕ್ಷ ವಿದೇಶಿಗರು ನಮ್ಮನ್ನು ನಂಬಿ ಇಲ್ಲಿದ್ದಾರೆ. ವಿಶ್ವದ ಅತ್ಯುತ್ತಮ ಕಂಪನಿಗಳು ಇಲ್ಲೇ ಕಾರ್ಯನಿರ್ವಹಿಸುತ್ತಿವೆ. ಎಲ್ಲದಕ್ಕೂ ಕಾರಣ ನಂಬಿಕೆ, ವಿಶ್ವಾಸ. ನಮ್ಮನ್ನು ನಂಬಿ ಇಲ್ಲಿಗೆ ಬಂದಿದ್ದಾರೆ. ಅವರಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ಗೃಹ ಇಲಾಖೆ, ಪೊಲೀಸ್ ಇಲಾಖೆ ಒಟ್ಟಿಗೆ ಆ ಕೆಲಸವನ್ನು ಈಗಾಗಲೇ ಸಮರ್ಥವಾಗಿ ಮಾಡುತ್ತಿದೆ" ಎಂದು ಹೇಳಿದರು.
"ನಾಡಿನ ಜನರ ರಕ್ಷಣೆ ಮಾಡುವ ಪೊಲೀಸರೂ ಉತ್ತಮ ಬದುಕನ್ನು ನಡೆಸಬೇಕು. ಆದ ಕಾರಣ ಅವರ ಸಂಕಷ್ಟ ಭತ್ಯೆಯ ಪ್ರಮಾಣವನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ ಶೇ.50ರಷ್ಟು ಹೆಚ್ಚಳ ಮಾಡಲಾಗುವುದು" ಎಂದು ಸಿಎಂ ಘೋಷಿಸಿದರು.
ಪೊಲೀಸರ ಆರ್ಥಿಕ ಅಗತ್ಯಗಳಿಗೆ ಮೊದಲು ಪ್ರಾಶಸ್ತ್ಯ ನೀಡಲಾಗುವುದು. ಗೃಹ ಇಲಾಖೆಯು ಪೊಲೀಸರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ" ಎಂದು ಭರವಸೆ ನೀಡಿದರು.
"ನಮ್ಮನ್ನು ರಕ್ಷಿಸಲು ನಮ್ಮ ಆರಕ್ಷಕರನ್ನು ಸಜ್ಜುಗೊಳಿಸುವ ಎನ್ಎಸ್ಜಿಗೆ ಧನ್ಯವಾದಗಳು. ಸಜ್ಜನರನ್ನು ರಕ್ಷಿಸುವುದು, ದುರ್ಜನರನ್ನು ಶಿಕ್ಷಿಸುವುದೂ ಕೂಡ ಧರ್ಮ. ನೀವೆಲ್ಲರೂ ಧರ್ಮದ ಕಾರ್ಯವನ್ನು ಬಹಳ ನಿಷ್ಠೆಯಿಂದ ಮಾಡುತ್ತಿದ್ದೀರಿ. ಸಮಾಜದಲ್ಲಿ ಅಶಾಂತಿ, ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ನೀವು ಶಿಷ್ಟರ ರಕ್ಷಣೆಗೆ ಬರುತ್ತೀರಿ. ರಾಷ್ಟ್ರೀಯ ಭದ್ರತಾ ಪಡೆ ತಮ್ಮ ಶಕ್ತಿಯನ್ನು ನಮ್ಮ ರಾಜ್ಯ ಪೊಲೀಸರಿಗೆ ಧಾರೆ ಎರೆಯುತ್ತಿದೆ. ಎನ್ಎಸ್ಜಿಯಿಂದ ಪಡೆದ ತರಬೇತಿ ಸಾರ್ಥಕವಾಗಬೇಕು. ಅದನ್ನು ನಾಡಿನ, ಜನರ ರಕ್ಷಣೆಗೆ ಬಳಸಬೇಕು. ಎನ್ಎಸ್ಜಿ ತರಬೇತಿ ನಮ್ಮ ಪೊಲೀಸರ ಸಾಮರ್ಥ್ಯ ಹೆಚ್ಚಿಸುತ್ತದೆ, ಕೌಶಲ್ಯವಂತರನ್ನಾಗಿ ಮಾಡುತ್ತದೆ" ಎಂದರು.
"ಕರ್ನಾಟಕ ಪೊಲೀಸ್ ದೇಶದ ಹೆಮ್ಮೆ. ನಮ್ಮ ಪೊಲೀಸರು ದಕ್ಷತೆಗೆ, ಕಾರ್ಯಪರತೆಗೆ, ಕರ್ತವ್ಯ ನಿಷ್ಠೆಗೆ ಹೆಸರಾದವರು. ನಾವು ಹುಟ್ಟಿದ ಈ ಸಮಾಜಕ್ಕೆ ಋಣ ತೀರಿಸುವುದೇ ನಿಜವಾದ ಸೇವೆ. ಆ ಕೆಲಸವನ್ನು ನೀವು ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ಕಷ್ಟದ ಸಂದರ್ಭದಲ್ಲಿ ನೀವು ನಿಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿ ನಾಡನ್ನು ರಕ್ಷಣೆ ಮಾಡುತ್ತಿದ್ದೀರಿ. ನಮ್ಮ ಆರಕ್ಷಕರು, ಕಾನೂನಿನ ಪಾಲಕರು, ಕಾನೂನಿನ ರಕ್ಷಕರು" ಎಂದು ಸಿಎಂ ಶ್ಲಾಘಿಸಿದರು.
"ನಾನು 35 ವರ್ಷಗಳ ಹಿಂದೆ ಗೃಹ ಇಲಾಖೆಗೆ ಸಂಬಂಧಿಸಿದ ಬಂಧಿಖಾನೆ ಸಚಿವನಾಗಿದ್ದಾಗ ಸಾಕಷ್ಟು ಮಾಹಿತಿ ಪಡೆದಿದ್ದೆ. ಹಗಲು ರಾತ್ರಿ ನೀವು ಶ್ರಮಿಸುತ್ತೀರಿ. ಕೆಲವು ದುರ್ಘಟನೆ ಸಂದರ್ಭದಲ್ಲಿ ನಾವು ರಾಜಕಾರಣಿಗಳು ನಿಮ್ಮನ್ನೇ ದೂಷಿಸಿರುವ ಉದಾಹರಣೆಗಳಿವೆ. ನೀವು ನಿಮ್ಮ ನಿಷ್ಠೆ, ಪ್ರಾಮಾಣಿಕತೆಯಲ್ಲಿ ದೇಶದ ಸಮಗ್ರತೆ, ಐಕ್ಯತೆ, ಶಾಂತಿ ಕಾಪಾಡುವುದು ಮುಖ್ಯ" ಎಂದರು.
"ಸೈಬರ್ ಕ್ರೈಂ ನಿಯಂತ್ರಿಸಲು ತಂತ್ರಜ್ಞಾನ ಬಳಸುತ್ತಿದ್ದೇವೆ. ದೇಶ ರಕ್ಷಣೆಗೂ ನಾವು ಡ್ರೋನ್ ಬಳಸುತ್ತಿದ್ದೇವೆ. ಬೆಂಗಳೂರು ಜಾಗತಿಕ ನಗರ. ಇಡೀ ವಿಶ್ವ ಈ ನಗರ ನೋಡುತ್ತಿದೆ. ನಮ್ಮ ಸಿಬ್ಬಂದಿ ಸಾಮರ್ಥ್ಯ ಹೆಚ್ಚಿಸಲು ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮುಂದಾಗಿದ್ದಾರೆ" ಎಂದರು.
ಪ್ರತ್ಯೇಕ ರೌಡಿ ನಿಗ್ರಹ ಪಡೆ: "ಪೊಲೀಸರಿಗೆ ಹೆಚ್ಚಿನ ವಸತಿ ವ್ಯವಸ್ಥೆ ಹಾಗೂ ಅವರ ಮೇಲಿರುವ ಒತ್ತಡ ಕಡಿಮೆ ಮಾಡುವುದು ನಮ್ಮ ಕರ್ತವ್ಯ. ಆ ಕೆಲಸವನ್ನು ಶೀಘ್ರದಲ್ಲೇ ಮಾಡುತ್ತೇವೆ. ಬೆಂಗಳೂರು ನಗರ ಒಳಗೊಂಡಂತೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ರೌಡಿಗಳನ್ನು ನಿಗ್ರಹಕ್ಕೆ ಪ್ರತ್ಯೇಕ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ರೌಡಿ ನಿಗ್ರಹ ಪಡೆ ರಚಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದೇವೆ. ಈ ತಂಡ ಯಾವ ರಾಜಕೀಯ ಒತ್ತಡಕ್ಕೂ ಮಣಿಯದೇ ಜನರಿಗೆ ಭದ್ರತೆ, ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಲಿದೆ" ಎಂದು ಸಿಎಂ ತಿಳಿಸಿದರು.
"ಕರ್ನಾಟಕದ ಪೊಲೀಸರು ದೇಶದ ಕೀರ್ತಿಯನ್ನು ಹೆಚ್ಚಿಸುವಂತಾಗಲಿ. ಕರ್ನಾಟಕ ಬಲಗೊಂಡರೆ ದೇಶ ಬಲಗೊಂಡಂತೆ. ವಿದೇಶದಿಂದ ಭಾರತಕ್ಕೆ ಬರುವವರು ಮೊದಲು ಕರ್ನಾಟಕಕ್ಕೆ ಕಾಲಿಡುತ್ತಾರೆ. ಇಡೀ ವಿಶ್ವವು ಕರ್ನಾಟಕದ ಕಡೆ ನೋಡುತ್ತಿದೆ. ಹಾಗಾಗಿ ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಪೊಲೀಸರು ಎಚ್ಚರಿಕೆಯಿಂದ ಇರಬೇಕು" ಎಂದು ಸಿಎಂ ಡಿಕೆ ಶಿವಕುಮಾರ್ ಕೆಲವು ಸಲಹೆಗಳನ್ನು ನೀಡಿದರು.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ?: ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಇದು!

