ಸಚಿವ ಸಂಪುಟ ಸಭೆಯಲ್ಲಿ ಆರು ಮಹತ್ವದ ತೀರ್ಮಾನ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಬಿ ನಿಂದ ಎ ಖಾತಾ ಯೋಜನೆ ಸೇರಿ ಏನೆಲ್ಲಾ ಘೋಷಣೆ?
ನೂತನ ಮುಖ್ಯಮಂತ್ರಿಯಾಗಿ ಬುಧವಾರ ಸಂಜೆ ಡಿ ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಸಂಜೆ ಅವರ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಆರು ಜನಪ್ರಿಯ ಘೋಷಣೆಗಳನ್ನು ಮಾಡಲಾಗಿದೆ.

Published : June 3, 2026 at 10:13 PM IST
ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಜನರಿಗೆ ಆರು ಜನಪ್ರಿಯ ತೀರ್ಮಾನಗಳನ್ನು ಮಾಡಿ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ತಮ್ಮ ನೂತನ 13 ಸಚಿವ ಸಂಪುಟ ಸದಸ್ಯರ ಜೊತೆ ಮೊದಲ ಸಭೆ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್ ಆರು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ರಾಜ್ಯದ ಯುವ ಜನಾಂಗಕ್ಕೆ, ಬೆಂಗಳೂರಿಗೆ, ಒಸಿ ಸಿಗದ ನಿವೇಶನದಾರರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಾಂಕ್ಷಿಗಳಿಗೆ ಸಂಬಂಧಿಸಿದಂತೆ ಆರು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದಾರೆ.
ಸಂಪುಟ ಸಭೆ ನಡೆಸಿದ ಬಳಿಕ ವಿಧಾನಸೌಧದಲ್ಲಿ ಸಚಿವರ ಜೊತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿದ ಅವರು, ಕಳೆದ ಒಂದು ವರ್ಷದಿಂದ ಮಾಧ್ಯಮದವರಿಗೆ ಬಹಳ ಆಹಾರವಾಗಿದ್ದೆ. ವಿಷಯ ಇಲ್ಲದೇ ವಿಷಯ ಸೃಷ್ಟಿ ಮಾಡಿದ್ದೀರಿ. ನಮ್ಮ ಪಕ್ಷದ ವರಿಷ್ಠರು ಈಗ ಅದಕ್ಕೆ ತೆರೆ ಎಳೆದಿದ್ದಾರೆ. ಶುಭ ಘಳಿಗೆ, ಶುಭ ಮುಹೂರ್ತ ಬರುತ್ತೆ ಎಂದು ಹೇಳುತ್ತಿದ್ದೆ. ಇಂದು 4:15ಕ್ಕೆ ಆ ಶುಭ ಘಳಿಗೆ ಬಂತು. ಹಿಂದಿನ ಹೆಜ್ಜೆ ಮರೆತವನು ಮುಂದಿನ ಹೆಜ್ಜೆ ಇಡಲಾರ. ಇಂದು ಹೊಸ ದಿನ, ಹೊಸ ಕೆಲಸಗಳನ್ನು ಮಾಡಲು ಹೊಸ ಅವಕಾಶಗಳನ್ನು ಹುಡುಕುತ್ತಾ ಇದ್ದೇನೆ. ಇನ್ನು ಎರಡು ವರ್ಷದಲ್ಲಿ ಏನು ಅವಕಾಶ ಸಿಗಲಿದೆಯೋ ಅದನ್ನು ಸದ್ಬಳಕೆ ಮಾಡಲಿದ್ದೇನೆ ಎಂದರು.
ರಾಜ್ಯದ ರೈತರು ನನ್ನ ಬೆನ್ನೆಲುಬು. ಇಂದು ಆರು ಜನವರ್ಗದವರಿಗೆ ಹೊಸ ಯುಗ ಆರಂಭ ಆಗಬೇಕು ಎಂದು ಕೆಲ ತೀರ್ಮಾನಗಳನ್ನು ಮಾಡಿದ್ದೇನೆ. ರಾಜ್ಯದ ಆಡಳಿತದಲ್ಲಿ ಹೊಸ ಬೆಳಕು ಮೂಡಿಸಲಾಗುವುದು. ಅಪಾರವಾದ ಅನುಭವದ ಭಂಡಾರದಲ್ಲಿ ಮುಳುಗಿದ್ದೇನೆ. ಕಷ್ಟ ನೋಡಿದ್ದೇನೆ, ಸುಖ ನೋಡಿದ್ದೇನೆ. ತಿಹಾರ್ ಜೈಲಿಗೆ ಹೋಗುವ ಪರಿಸ್ಥಿತಿ ಬಂತು. ಆದರೆ ನಾನು ಎದೆಗುಂದಲಿಲ್ಲ, ವಿಶ್ವಾಸ ಕಳೆದುಕೊಳ್ಳಲಿಲ್ಲ. ಸಾಕ್ಷಿ ಗುಡ್ಡೆ ಬಿಟ್ಟು ಹೋಗಲು ಅವಕಾಶ ಸಿಕ್ಕಿದೆ. ಈ ಸಿಎಂ ಕುರ್ಚಿ ನನ್ನದಲ್ಲ. ಇದು ರಾಜ್ಯದ ಜನರದ್ದಾಗಿದೆ. ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಅಂತ ಅಂದಿದ್ದರು. ಅದರಂತೆ ಅವರು ಸ್ಥಾನ ತೆರವು ಮಾಡಿ ಬಳಿಕ ಶಾಸಕರು ಒಗ್ಗಟ್ಟಿನಿಂದ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಡಿಕೆಶಿ ಹೇಳಿದರು.
ಗ್ರಾಮೀಣ ಜನರ ಸಮಸ್ಯೆ, ನಗರದ ಜನರ ಸಮಸ್ಯೆಯನ್ನೂ ನಾನು ಬಲ್ಲೆ. ಉದ್ಯೋಗಕ್ಕೆ ಜನ ನಗರಕ್ಕೆ ವಲಸೆ ಬರುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಮುಂದೆ ನಾವೆಲ್ಲ ಸಚಿವರು ಒಟ್ಟಿಗೆ ಕೂತು ತಂಡವಾಗಿ ಕೆಲಸ ಮಾಡಲಿದ್ದೇವೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಮಾತು ನಮ್ಮ ಸಂಪುಟದಲ್ಲಿ ಬಿಂಬಿಸುತ್ತಿದೆ. ನನಗೆ ಜಾತಿ ಮೇಲೆ ನಂಬಿಕೆ ಇಲ್ಲ. ಮಾನವೀಯತೆ ಮೇಲೆ ನಂಬಿಕೆ ಇದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ, ಇದು ನಿಮ್ಮ ಸರ್ಕಾರ. ಜನರು ಕೊಟ್ಟ ಅಧಿಕಾರ. ಈ ಅಧಿಕಾರವನ್ನು ಎಲ್ಲಾ ವೈಯಕ್ತಿಕ ವಿಚಾರವನ್ನು ಬದಿಗಿಟ್ಟು ನಡೆಸುತ್ತೇನೆ ಎಂದು ಸಿಎಂ ತಿಳಿಸಿದರು.
ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ವಿದ್ಯಾರ್ಥಿಗಳು ಬಸ್ ಪಾಸ್ ಬಗ್ಗೆ ಮಾತನಾಡುತ್ತಿದ್ದರು. ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಉಚಿತ ಬಸ್ ನೀಡಿದ್ದೀರ. ನಮಗೂ ಉಚಿತ ಬಸ್ ಪ್ರಯಾಣ ಕಲ್ಪಸುವಂತೆ ಒತ್ತಾಯಿಸುತ್ತಿದ್ದರು. ಈ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ, ಕಾಲೇಜು, ಪಿಜಿ, ಪಿಯುಸಿ, ಎಸ್ಎಸ್ ಎಲ್ ಸಿ ಸೇರಿ ಸರ್ಕಾರಿ, ಖಾಸಗಿ ಒಳಗೊಂಡಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡಲು ತೀರ್ಮಾನಿಸಲಾಗಿದೆ. ಉಚಿತ ಬಸ್ ಪಾಸ್ಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ವಾರ್ಷಿಕ 250 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಿಎಂ ಮಾಹಿತಿ ನೀಡಿದರು.
ಖಾಸಗಿ EMPLOYMENT EXCHANGE ಕೇಂದ್ರ ರಚನೆ: ನಮ್ಮದು ಶಕ್ತಿಶೀಲ ರಾಜ್ಯವಾಗಿದೆ. ಇಡೀ ದೇಶದಲ್ಲಿ ರಾಜ್ಯದ ಮಾನವ ಸಂಪನ್ಮೂಲ ಉತ್ತಮವಾಗಿದೆ. ಯುವ ಜನಾಂಗ ಖಾಸಗಿಯಲ್ಲಿ ಉದ್ಯೋಗ ಹುಡುಕುತ್ತಾರೆ. ಅವರಿಗಾಗಿ ಈ ಹಿಂದಿದ್ದ EMPLOYMENT EXCHANGE ಮಾದರಿಯಲ್ಲಿ ಖಾಸಗಿ ಉದ್ಯೋಗ ಎಕ್ಸ್ ಚೇಂಜ್ ಕೇಂದ್ರ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಖಾಸಗಿ ಸಂಸ್ಥೆಯಲ್ಲಿ ಎಷ್ಟು ಉದ್ಯೋಗ ಇವೆ, ಅವರಿಗೆ ಎಷ್ಟು ಉದ್ಯೋಗಿಗಳು ಬೇಕು ಎಂದು ಅವರು EMPLOYMENT EXCHANGEನಲ್ಲಿ ನೋಂದಣಿ ಮಾಡಬೇಕು. ಅವರಿಗೆ ಯಾವ ರೀತಿ ನುರಿತ ಉದ್ಯೋಗಿಗಳು ಬೇಕು, ಅದರಂತೆ ಯುವಕರಿಗೆ ಸರ್ಕಾರವೇ ತರಬೇತಿ ನೀಡಿ, ಖಾಸಗಿ ಸಂಸ್ಥೆಗಳಿಗೆ ನುರಿತ ಯುವಕರನ್ನು ಪೂರೈಕೆ ಮಾಡಲಾಗುವುದು. ಆ ಮೂಲಕ ಉದ್ಯೋಗದ ಸಮಸ್ಯೆ ಬಗೆಹರಿಯಬೇಕು. ಈ ಉದ್ಯೋಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಪಾಲು ನೀಡಲು ಸೂಚನೆ ನೀಡಲಾಗುವುದು ಎಂದು ಅವರು ವಿವರಿಸಿದರು.
ಒಂದು ತಿಂಗಳೊಳಗೆ ಮೂವರು ಸಚಿವರು ಈ ಬಗ್ಗೆ ಪರಿಶೀಲಿಸಿ ವರದಿ ನೀಡಲಿದ್ದಾರೆ. ಎಲ್ಲ ಉದ್ಯಮಿಗಳ ಜೊತೆ ಈ ಸಂಬಂಧ ಚರ್ಚೆ ನಡೆಸಿ, ಯಾವ ರೀತಿ ಕ್ರಮ ಕೈಗೊಳ್ಳಬೇಕು, ರೂಪುರೇಷೆ ಹೇಗಿರಬೇಕು ಎಂಬ ವರದಿ ನೀಡಲಿದ್ದಾರೆ. ಬಳಿಕ ಅದನ್ನು ಜಾರಿಗೆ ತರಲಾಗುವುದು. ನೋಂದಣಿ ಸೇರಿ ಎಲ್ಲ ಪ್ರಕ್ರಿಯೆಗಳು ಆನ್ಲೈನ್ ನಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
10,000 ಭಾರತ ಜೋಡೋ ಯುವಕರ ಸಂಘ: ರಾಜ್ಯದಲ್ಲಿ 10,000 ಭಾರತ ಜೋಡೋ ಯುವಕರ ಸಂಘ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಇದೇ ವೇಳೆ ಸಿಎಂ ತಿಳಿಸಿದರು. ಪ್ರತಿ ಪಂಚಾಯತ್ ನಲ್ಲಿ 150 ಯುವಕರ ಸಂಘ ಮಾಡಲು ತೀರ್ಮಾನ ಮಾಡಲಾಗಿದೆ. ಪ್ರತಿ ಸಂಘಕ್ಕೆ ಸರ್ಕಾರ 10 ಲಕ್ಷ ರೂ. ಅನುದಾನ ಕೊಡಲಿದೆ. ಕ್ರೀಡಾ ಮನೋಭಾವ, ಸಾಂಸ್ಕೃತಿಕ ಕಾರ್ಯಕ್ರಮ, ಸಾಮಾಜಿಕ ಸಾಮರಸ್ಯ, ಆಟ ಪಾಠದಲ್ಲಿ ತೊಡಗಿಸಿಕೊಳ್ಳಲು, ಅವರಲ್ಲಿ ನಾಯಕತ್ವ ಬೆಳೆಸಲು, ಪ್ರತಿಭೆ ಗುರುತಿಸುವ ಉದ್ದೇಶದಿಂದ 10,000 ಭಾರತ ಜೋಡೋ ಯುವಕರ ಸಂಘ ರಚಿಸಲು ತೀರ್ಮಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
2500 ಚದರ್ ಅಡಿ ನಿವೇಶನದಾರರಿಗೆ ಒಸಿಯಿಂದ ವಿನಾಯಿತಿ: ಮತ್ತೊಂದು ಮಹತ್ವದ ಘೋಷಣೆ ಮಾಡಿರುವ ಸಿಎಂ ಡಿಕೆಶಿ, ಸದ್ಯ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದ 1200 ಚದರ್ ಅಡಿ ನಿವೇಶನಗಳಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ಒಸಿ, ಸಿಸಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಇದೀಗ ಅದನ್ನು 2500 ಚದರ್ ಅಡಿವರೆಗೆ ವಿಸ್ತರಿಸಲು ಸಂಪುಟ ಸಭೆ ತೀರ್ಮಾನಿಸಿದೆ ಎಂದರು. 20% ಆಸು ಪಾಸು ನಿಯಮ ಉಲ್ಲಂಘಿಸಿದವರಿಗೆ ಏಕ ಕಾಲಕ್ಕೆ ಅನ್ವಯವಾಗುವಂತೆ ಒಸಿ, ಸಿಸಿ ಪಡೆಯುವುದರಿಂದ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ರಾಜ್ಯಾದ್ಯಂತ ಬಿ ನಿಂದ ಎ ಖಾತಾ ಯೋಜನೆ: ಐದನೇ ಮಹತ್ವದ ಘೋಷಣೆ ಮಾಡಿರುವ ಸಿಎಂ ಡಿಕೆಶಿ, ಬಿ ನಿಂದ ಎ ಖಾತಾ ಮಾಡುವ ಅಭಿಯಾನವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ತೀರ್ಮಾನವಾಗಿದೆ. ಇನ್ನು ಈ ಯೋಜನೆಯನ್ನು ನಗರ, ಗ್ರಾಮೀಣ ಪ್ರದೇಶದಲ್ಲಿನ ನಿವೇಶನಗಳಿಗೆ ವಿಸ್ತರಿಸಲು ತೀರ್ಮಾನ ಮಾಡಲಾಗಿದೆ ಎಂದು ಇದೇ ವೇಳೆ ಘೋಷಿಸಿದರು.
ಬೆಂಗಳೂರು ರಸ್ತೆ ದುರಸ್ತಿಗೆ 2000 ಕೋಟಿ ರೂ.: ಸಚಿವ ಸಂಪುಟದಲ್ಲಿ ಆರನೇಯ ಮಹತ್ವದ ತೀರ್ಮಾನವಾಗಿ ಬೆಂಗಳೂರಿನ ರಸ್ತೆಗಳ ಡಾಂಬರೀಕರಣಕ್ಕಾಗಿ 2000 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಜಿಬಿಎ ವ್ಯಾಪ್ತಿ ಸೇರಿ ಬೆಂಗಳೂರು ನಗರದ ರಸ್ತೆ ಸಮಸ್ಯೆಗಳನ್ನು ನಿವಾರಿಸಲು 2,000 ಕೋಟಿ ರೂ. ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ನಾಲ್ವರು ಅಭ್ಯರ್ಥಿಗಳನ್ನು ಫೈನಲ್ ಮಾಡಿದ ಎಐಸಿಸಿ

