ETV Bharat / state

'ಕನ್ನಡಿಗರ ರಕ್ಷಣೆಗೆ ವಿದೇಶಾಂಗ ಸಚಿವಾಲಯದ ಜೊತೆ ನಿಕಟ ಸಮನ್ವಯ, ಜಿಲ್ಲಾವಾರು ಸಹಾಯವಾಣಿ ಆರಂಭ'

ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾದ ಭಾಗಶಃ ಪ್ರದೇಶಗಳು, ಬಹ್ರೇನ್, ಓಮನ್, ಇರಾಕ್, ಜೋರ್ಡಾನ್, ಕುವೈತ್, ಯುಎಇ ಮತ್ತು ಕತಾರ್ ಮೇಲಿನ ವಾಯುಪ್ರದೇಶ ಮಾರ್ಚ್ 2 ರವರೆಗೆ ಮುಚ್ಚಲ್ಪಟ್ಟಿದೆ.

BENGALURU  MIDDLEEAST CONFLICT  KANNADIGAS STRANDED IN UAE  MINISTER KRISHNABYREGOWDA  ISRAEL IRAN WAR
ಕಂದಾಯ ಸಚಿವ ಕೃಷ್ಣ ಬೈರೇಗೌಡ (ETV Bharat)
author img

By ETV Bharat Karnataka Team

Published : March 2, 2026 at 8:41 AM IST

3 Min Read
Choose ETV Bharat

ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ದ ಹಿನ್ನೆಲೆಯಲ್ಲಿ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಮತ್ತು ನವದೆಹಲಿಯ ಕರ್ನಾಟಕ ರೆಸಿಡೆಂಟ್ ಕಮಿಷನರ್ ಕಚೇರಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ತ್ವರಿತ ಪ್ರತಿಕ್ರಿಯೆ ಘಟಕ (Rapid Response Cell)ದೊಂದಿಗೆ ನಿಕಟ ಸಮನ್ವಯದಲ್ಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿನ ಪ್ರಚಲಿತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಹಲವಾರು ರಾಷ್ಟ್ರಗಳು NOTAM - ವೈಮಾನಿಕ ಸಂಚಾರ ಬಂದ್ ಘೋಷಿಸಿವೆ. ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳಲ್ಲಿ ಅಡಚಣೆಯಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಇತ್ತೀಚಿನ ಸಲಹೆಯಂತೆ ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾದ ಭಾಗಶಃ ಪ್ರದೇಶಗಳು, ಬಹ್ರೇನ್, ಓಮನ್, ಇರಾಕ್, ಜೋರ್ಡಾನ್, ಕುವೈತ್, ಯುಎಇ ಮತ್ತು ಕತಾರ್ ಮೇಲಿನ ವಾಯುಪ್ರದೇಶವು ಮಾರ್ಚ್ 2 ರವರೆಗೆ ಮುಚ್ಚಲ್ಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಮಾನ ಪ್ರಯಾಣದ ವ್ಯತ್ಯಯದಿಂದಾಗಿ ಕರ್ನಾಟಕ ಸೇರಿದಂತೆ ವಿವಿಧ ದೇಶಗಳ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಯುದ್ಧ ಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ, ವಿಶೇಷವಾಗಿ ಯುಎಇನಲ್ಲಿ ಸಿಲುಕಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರ ನಿರ್ದೇಶನದಂತೆ‌ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮತ್ತು ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು (DEOCs) ಪೂರ್ಣ ಪ್ರಮಾಣದಲ್ಲಿ ಸಕ್ರಿಯಗೊಳಿಸಲಾಗಿದೆ. ಇವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯ ನೆರವು ನೀಡಲು 24x7 ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಆಯಾ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳು ನೀಡುವ ಮಾರ್ಗಸೂಚಿಗಳನ್ನು SEOC ಮತ್ತು DEOC ಗಳು ನಿರಂತರವಾಗಿ ನವೀಕರಿಸುತ್ತಿವೆ. ದೆಹಲಿಯಲ್ಲಿರುವ ಕರ್ನಾಟಕ ಭವನದ ತಂಡವನ್ನು ಸಮನ್ವಯಕ್ಕಾಗಿ ಕರ್ನಾಟಕದ ರೆಸಿಡೆಂಟ್ ಕಮಿಷನರ್ ಅವರು ಸಕ್ರಿಯಗೊಳಿಸಿದ್ದಾರೆ. ರಾಯಭಾರ ಕಚೇರಿ ಮತ್ತು ದೂತಾವಾಸವಾರು ಸಹಾಯವಾಣಿ ಸಂಖ್ಯೆಗಳು ಹಾಗೂ ಮಾರ್ಗಸೂಚಿಗಳನ್ನು ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ರವಾನಿಸಲಾಗಿದೆ. ಸಾರ್ವಜನಿಕರ ಅರಿವಿಗಾಗಿ ಅಧಿಕೃತ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

BENGALURU  MIDDLEEAST CONFLICT  KANNADIGAS STRANDED IN UAE  MINISTER KRISHNABYREGOWDA  ISRAEL IRAN WAR
ಜಿಲ್ಲಾವಾರು ತುರ್ತು ಸಹಾಯವಾಣಿ (ETV Bharat)

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಮತ್ತು ನವದೆಹಲಿಯ ಕರ್ನಾಟಕ ರೆಸಿಡೆಂಟ್ ಕಮಿಷನರ್ ಕಚೇರಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದ Rapid Response Cell ನಿಕಟ ಸಮನ್ವಯದಲ್ಲಿದೆ. ರಾಜ್ಯ ಮತ್ತು ಜಿಲ್ಲಾ ತುರ್ತು ಕೇಂದ್ರಗಳಿಗೆ ಬರುವ ಸಹಾಯದ ಕೋರಿಕೆಗಳನ್ನು ಕ್ರೋಢೀಕರಿಸಿ, ಕರ್ನಾಟಕ ರೆಸಿಡೆಂಟ್ ಕಮಿಷನರ್ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಲಾಗುತ್ತಿದೆ. ಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ ನೆಲೆಸಿರುವ ಕರ್ನಾಟಕದ ಜನರು ಸ್ಥಳೀಯ ಸರ್ಕಾರಗಳು ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ಭಾರತೀಯ ರಾಯಭಾರ ಕಚೇರಿಗಳನ್ನು ಸಹಾಯವಾಣಿ ಮೂಲಕ ಸಂಪರ್ಕಿಸಲು ಮತ್ತು 'ಸಾರಥಿ ಸಹಾಯತಾ' (Sarthi Sahayata) ಪೋರ್ಟಲ್ ಹಾಗೂ ಇತರ ಅಧಿಕೃತ ಪೋರ್ಟಲ್‌ಗಳಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ ಮುಂದಿನ ಅಪ್‌ಡೇಟ್‌ಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿದೇಶಾಂಗ ಸಚಿವಾಲಯ ಕಾರ್ಯದರ್ಶಿಗೆ ಸಿಎಸ್ ಪತ್ರ: ಈ ಸಂಬಂಧ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕ್ರಂ ಮಿಸ್ರಿಗೆ ಪತ್ರ ಬರೆದಿದ್ದಾರೆ. ದುಬೈ ಮತ್ತು ಪಶ್ಚಿಮ ಏಷ್ಯಾದ ಇತರ ಪ್ರಮುಖ ಕೇಂದ್ರಗಳಲ್ಲಿ ಉದ್ಯೋಗ, ಉನ್ನತ ಶಿಕ್ಷಣ, ವ್ಯವಹಾರ, ಪ್ರವಾಸೋದ್ಯಮ ಮತ್ತು ಅಧಿಕೃತ ಕಾರ್ಯಗಳಿಗಾಗಿ ಹೆಚ್ಚಿನ ಸಂಖ್ಯೆಯ ಕನ್ನಡಿಗರು ನೆಲೆಸಿದ್ದಾರೆ. ಕನ್ನಡಿಗರ ಸುರಕ್ಷತೆ ಮತ್ತು ಯೋಗಕ್ಷೇಮ ಖಾತ್ರಿಗಾಗಿ ಸಂಬಂಧಪಟ್ಟ ಭಾರತೀಯ ರಾಯಭಾರ ಕಚೇರಿ, ದೂತಾವಾಸಗಳ ಮೂಲಕ ಅಗತ್ಯವಿರುವ ಎಲ್ಲಾ ನೆರವುಗಳನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕ ಮತ್ತು ಭಾರತದ ಇತರೆಡೆಗಳಿಂದ ಸಂಕಷ್ಟಕ್ಕೆ ಸಿಲುಕಿರುವ ವ್ಯಕ್ತಿಗಳಿಗೆ ಅಗತ್ಯವಿದ್ದಲ್ಲಿ ಆದ್ಯತೆಯ ಮೇಲೆ ಸ್ಥಳಾಂತರ ಅಥವಾ ವಿಶೇಷ ವಾಪಸಾತಿ ಕ್ರಮಗಳನ್ನು ಕೈಗೊಳ್ಳುವುದನ್ನು ಪರಿಗಣಿಸಬೇಕು. ಸಂವಹನವನ್ನು ಸುಗಮಗೊಳಿಸಲು ಮತ್ತು ವಾಪಸಾತಿ ವ್ಯವಸ್ಥೆಗಳನ್ನು ಸಮನ್ವಯಗೊಳಿಸಲು ವಿದೇಶಾಂಗ ಸಚಿವಾಲಯದೊಂದಿಗೆ ಸಹಕರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲು ಹಾಗೂ ಸಂಪೂರ್ಣ ಸಹಕಾರ ನೀಡಲು ಕರ್ನಾಟಕ ಸರ್ಕಾರ ಸಿದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ನಾಗರಿಕ ವಿಮಾನಯಾನ ಇಲಾಖೆ ಕಾರ್ಯದರ್ಶಿಗೆ ಪತ್ರ: ನಾಗರಿಕ ವಿಮಾನಯಾನ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿವಿಧ ವಿಮಾನಯಾನ ಸಂಸ್ಥೆಗಳಲ್ಲಿ ರಿಟರ್ನ್ ಟಿಕೆಟ್ ಕಾಯ್ದಿರಿಸಿದ್ದ ಅನೇಕ ಪ್ರವಾಸಿಗರು, ಅನಿರೀಕ್ಷಿತ ವಿಮಾನ ವ್ಯತ್ಯಯ ಮತ್ತು ಅನಿಶ್ಚಿತತೆಯ ಕಾರಣದಿಂದಾಗಿ ನಿಗದಿತ ಸಮಯಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ, ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಕೋರಲಾಗಿದೆ. ಪ್ರಯಾಣಿಸಲು ಸಾಧ್ಯವಾಗದ ದೃಢೀಕೃತ ರಿಟರ್ನ್ ಟಿಕೆಟ್ ಹೊಂದಿರುವ ಪ್ರವಾಸಿಗರಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಸೇರಿದಂತೆ ಅಗತ್ಯ ನೆರವು ನೀಡುವಂತೆ ಕೋರಿದ್ದಾರೆ.

ಟಿಕೆಟ್ Rescheduling ವೇಳೆ ಹೆಚ್ಚುವರಿ ಶುಲ್ಕಗಳಿಂದ ವಿನಾಯಿತಿ ನೀಡಬೇಕು. ಪರಿಸ್ಥಿತಿ ಸುಧಾರಿಸಿದ ತಕ್ಷಣ, ಬಾಧಿತ ಪ್ರಯಾಣಿಕರು ಸುರಕ್ಷಿತವಾಗಿ ಮತ್ತು ಸಕಾಲದಲ್ಲಿ ಮರಳಲು ಅನುಕೂಲವಾಗುವಂತೆ ಅಗತ್ಯ ವಿಮಾನಗಳ ವ್ಯವಸ್ಥೆ ಮಾಡಬೇಕು. ಸಿಲುಕಿಕೊಂಡಿರುವ ವ್ಯಕ್ತಿಗಳು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಆತಂಕ ಮತ್ತು ಸಂಕಷ್ಟವನ್ನು ಪರಿಗಣಿಸಿ, ಸಚಿವಾಲಯದಿಂದ ದೊರೆಯುವ ಶೀಘ್ರ ಮತ್ತು ಸಮನ್ವಯದ ಪ್ರತಿಕ್ರಿಯೆ ಅವರ ಆತಂಕವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಅಗತ್ಯವಿರುವ ಕಡೆಗಳಲ್ಲಿ ಸಮನ್ವಯವನ್ನು ಸುಲಭಗೊಳಿಸಲು ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್​ ಪ್ರತೀಕಾರದ ದಾಳಿ: ದುಬೈನಲ್ಲಿ ಸಿಲುಕಿದ ಹಾಸನದ 50ಕ್ಕೂ ಜನರು, ನೆರವಿಗಾಗಿ ಮನವಿ