ETV Bharat / state

ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ: ಸಿಐಡಿ ತಂಡ ಹುಬ್ಬಳ್ಳಿಗೆ ಆಗಮನ, ತನಿಖೆಗೆ ಚುರುಕು

ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಹುಬ್ಬಳ್ಳಿಗೆ ಆಗಮಿಸಿದೆ.

cid-team-begins-investigation-regarding-woman-undressing-case
ಸಿಐಡಿ ತಂಡದವರ ವಾಹನ (ETV Bharat)
author img

By ETV Bharat Karnataka Team

Published : January 10, 2026 at 1:44 PM IST

2 Min Read
Choose ETV Bharat

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಪ್ರಕರಣದ ತನಿಖೆಯನ್ನು ಸಿಐಡಿ ತಂಡ ಚುರುಕುಗೊಳಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸಿರುವ ಅಧಿಕಾರಿಗಳು ಮೂರು ತಂಡ ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.

ಐಪಿಎಸ್ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಆಗಮಿಸಿದ ಸಿಐಡಿ ತಂಡಕ್ಕೆ ಪ್ರಕರಣಗಳ ಕಡತಗಳನ್ನ ಪೊಲೀಸರು ಹಸ್ತಾಂತರ ಮಾಡಲಿದ್ದಾರೆ. ಎಸ್​​ಪಿ ಶಾಲೋ ನೇತೃತ್ವದಲ್ಲಿ ಕಮಿಷನರ್ ಕಚೇರಿಯಲ್ಲಿ ಎಲ್ಲಾ ಕಡತಗಳ ಪರಿಶೀಲನೆ ಮತ್ತು ಸಂಗ್ರಹ ಮಾಡಲಾಗುತ್ತಿದೆ.

ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಹುಬ್ಬಳ್ಳಿಗೆ ಆಗಮಿಸಿದೆ (ETV Bharat)

ಡಿವೈಎಸ್​ಪಿ ಸಂತೋಷ ನೇತೃತ್ವದಲ್ಲಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತಗಳನ್ನು ಸಂಗ್ರಹಿಸಲಾಗುತ್ತಿದೆ. ಜನವರಿ 2 ರಿಂದ ಇಲ್ಲಿಯವರೆಗೂ ಇದೇ ಪ್ರಕರಣದಲ್ಲಿ 6 ಎಫ್​​ಐಆರ್ ದಾಖಲು ಮಾಡಲಾಗಿದೆ. 6 ಎಫ್​​ಐಆರ್​​ ಕಡತಗಳನ್ನ ಸಂಗ್ರಹಿಸಿ ತನಿಖೆ ಮಾಡಲಾಗುತ್ತಿದೆ. ಪ್ರಕರಣದ ಸಮಗ್ರ ದಾಖಲೆಗಳನ್ನ ಸಂಗ್ರಹಿಸುತ್ತಿರುವ ಸಿಐಡಿ ಅಧಿಕಾರಿಗಳು, ಅದರ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಲಿದ್ದಾರೆ.

ಘಟನೆಯ ಹಿನ್ನೆಲೆ: ಈ‌ ಮಹಿಳೆ ಹಿಂದೆ ಕಾಂಗ್ರೆಸ್ ‌ಪಕ್ಷದಲ್ಲಿ ಇದ್ದರು. ಆದರೆ, ಇತ್ತೀಚಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಲುಕ್ಯನಗರ ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಕುಟುಂಬದವರ ಮ್ಯಾಪಿಂಗ್​ ಸಂದರ್ಭದಲ್ಲಿ ಗಲಾಟೆ ನಡೆಸಿ ಇವರು ಹಲ್ಲೆ ನಡೆಸಿದ್ದಾರೆಂದು ಆರೋಪ ಕೇಳಿಬಂದಿತ್ತು. ಇದೇ ಆರೋಪದ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವಿಚಾರವಾಗಿ ಮಹಿಳೆಯ ವಿರುದ್ದ ಕಾಂಗ್ರೆಸ್​ ಕಾರ್ಯಕರ್ತೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

ಕಾಂಗ್ರೆಸ್ ಮಹಾನಗರ ‌ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲ ಅವರು ನೀಡಿದ ದೂರಿನ ಅನ್ವಯವಾಗಿ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸುವ ವೇಳೆ ಜ.5 ರಂದು ಹೈಡ್ರಾಮಾ ನಡೆದಿತ್ತು. ಆದರೆ, ಬಿಜೆಪಿ ಕಾರ್ಯಕರ್ತೆ ಮೇಲೆ ಪೊಲೀಸರು ದಬ್ಬಾಳಿಕೆ ಮಾಡಿದ್ದಾರೆ, ಬಟ್ಟೆ ಬಿಚ್ಚಿದ್ರೂ ಬಿಡದೇ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಲಾಗಿತ್ತು.

ಈ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್​ ಕಮಿಷನರ್​ ಎನ್​. ಶಶಿಕುಮಾರ್ ಅವರು ಪ್ರತಿಕ್ರಿಯಿಸಿದ್ದು, 'ಬಿಜೆಪಿ ಕಾರ್ಯಕರ್ತೆಯೊಬ್ಬರನ್ನು ಬಂಧಿಸುವ ಸಂದರ್ಭದಲ್ಲಿ ನಮ್ಮ ಪೊಲೀಸರ ಮೇಲೆ ಅವರು ಹಲ್ಲೆ ಮಾಡಿದರು. ಬಂಧಿಸಿ ವಾಹನದಲ್ಲಿ ಕೂರಿಸಿದಾಗ ಅವರೇ ಬಟ್ಟೆ ತೆಗೆದರು' ಎಂದು ಹೇಳಿದ್ದರು.

'ಪೊಲೀಸರು ವಶಕ್ಕೆ ಪಡೆದುಕೊಂಡ ಸಂದರ್ಭದಲ್ಲಿ ಮಹಿಳೆ ಬೆತ್ತಲಾಗಿಲ್ಲ ಅಥವಾ ಬಟ್ಟೆಗಳನ್ನು ಕಳಚುವಂಥದ್ದು ಮಾಡಿಲ್ಲ. ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಬಹಳಷ್ಟು ಪ್ರತಿರೋಧ ಮಾಡಿದರು. ಹಲ್ಲೆ ಮಾಡಿದರು. ಮಹಿಳಾ ಸಿಬ್ಬಂದಿಗೆ ಮಾತ್ರವಲ್ಲ, ನಮ್ಮ ಪುರುಷ ಸಿಬ್ಬಂದಿಯನ್ನೂ ತಳ್ಳಾಡಿ, ದಬ್ಬಿ, ರಂಪಾಟ ಮಾಡಿ, ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಿದರು. ಬಹಳ ದೊಡ್ಡ ಮಟ್ಟದಲ್ಲಿ ಸೀನ್ ಕ್ರಿಯೆಟ್​ ಮಾಡಲು ಪ್ರಯತ್ನಿಸಿದರು. ಅಷ್ಟಾಗಿಯೂ ಅವರನ್ನು ನಮ್ಮ ಸಿಆರ್​ ವಾಹನಕ್ಕೆ ಹತ್ತಿಸಿಕೊಳ್ಳುವ ಸಂದರ್ಭದಲ್ಲಿ ವಿವಸ್ತ್ರ ಮಾಡಿಕೊಳ್ಳಲು ಪ್ರಯತ್ನಿಸಿದರು. ವಾಹನದೊಳಗೆ ಬಂದ ತಕ್ಷಣ ಏಕಾಏಕಿ ಬಟ್ಟೆಗಳನ್ನೆಲ್ಲ ತೆಗೆದರು. ನಂತರ ನಮ್ಮ ಸಿಬ್ಬಂದಿಯೇ ಸ್ಥಳೀಯರ ಸಹಾಯದಿಂದ ಬೇರೆ ಬಟ್ಟೆ ತರಿಸಿ ಹಾಕಿಸಿದರು' ಎಂದು ತಿಳಿಸಿದ್ದರು.

ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತೆ ವಿವಸ್ತ್ರಗೊಂಡ ಪ್ರಕರಣ: 'ಅರೆಸ್ಟ್ ಮಾಡಿದಾಗ ಪೊಲೀಸರಿಗೆ ಕಚ್ಚಿ ತಾನೇ ಬಟ್ಟೆ ಬಿಚ್ಚಿಕೊಂಡರು'- ಪೊಲೀಸ್ ಕಮಿಷನರ್