ಚಿತ್ರದುರ್ಗ ಭೀಕರ ಅಪಘಾತ: ಪವಾಡ ಸದೃಶ ರೀತಿಯಲ್ಲಿ ಮತ್ತೊಂದು ಬಸ್ನಲ್ಲಿದ್ದ 42 ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರು
ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಪವಾಡ ಸದೃಶ ರೀತಿ ಮತ್ತೊಂದು ಬಸ್ನಲ್ಲಿದ್ದ 42 ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Published : December 25, 2025 at 10:41 AM IST
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಸುಕಿನ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 42 ಶಾಲಾ ಮಕ್ಕಳು ಸೇರಿದಂತೆ ಇತರರು ಅಚ್ಚರಿಯ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿದ್ಧಾರೆ.
ಖಾಸಗಿ ಟ್ರಾವೆಲ್ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು, 9 ಮಂದಿ ಸಜೀವ ದಹನವಾಗಿದ್ದು, ಇದೇ ಟ್ರಾವೆಲ್ ಬಸ್‌ಗೆ ಸರಿಸಮವಾಗಿ ಶಾಲಾ ಮಕ್ಕಳ ಮತ್ತೊಂದು ಬಸ್ ಕೂಡ ಚಲಿಸುತ್ತಿತ್ತು. ಮಕ್ಕಳಿದ್ದ ಬಸ್ ಪವಾಡ ಸದೃಶ ರೀತಿಯಲ್ಲಿ ಅವಘಡದಿಂದ ಪಾರಾಗಿದೆ.
42 ಶಾಲಾ ಮಕ್ಕಳು ಬಚಾಚ್: "ಅಪಘಾತವಾಗಿ ಸುಟ್ಟು ಕರಕಲಾಗಿರುವ ಖಾಸಗಿ ಬಸ್‌ಗೆ ಸರಿಸಮವಾಗಿ ಚಲಿಸುತ್ತಿದ್ದ ಬೆಂಗಳೂರಿನ ಟಿ ದಾಸರಹಳ್ಳಿಯ ಖಾಸಗಿ ಶಾಲಾ ಮಕ್ಕಳ ಬಸ್, ದಾಂಡೇಲಿಗೆ ತೆರಳುತ್ತಿತ್ತು. ಈ ವೇಳೆ ದಿಢೀರನೇ ಡಿವೈಡರ್ ದಾಟಿ ಬಂದ ಕಂಟೈನರ್ ಲಾರಿ ಖಾಸಗಿ ಟ್ರಾವೆಲ್ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಖಾಸಗಿ ಬಸ್ ಶಾಲಾ ಮಕ್ಕಳಿದ್ದ ಬಸ್‌ಗೆ ತಾಗಿದೆ. ಪರಿಣಾಮ ಮಕ್ಕಳಿದ್ದ ಬಸ್ ರಾಷ್ಟ್ರೀಯ ಹೆದ್ದಾರಿ ದಾಟಿ, ಸ್ವಲ್ಪ ಮುಂದೆ ಚರಂಡಿಗೆ ಹೋಗಿ ಸೇಫ್ ಆಗಿ ನಿಂತಿದೆ. ಪವಾಡ ಸದೃಶ ರೀತಿಯಲ್ಲಿ ಆ ಬಸ್ನಲ್ಲಿದ್ದ 42 ಜನ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಮಕ್ಕಳು ಬೇರೆ ಬಸ್ ಮೂಲಕ ತಮ್ಮ ಪ್ರವಾಸವನ್ನು ಮುಂದುವರೆಸಿದ್ದಾರೆ. ಈ ದುರಂತವನ್ನು ಕಣ್ಣಾರೆ ಕಂಡ ಶಾಲಾ ಮಕ್ಕಳಿದ್ದ ಬಸ್ನ ಚಾಲಕ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಅವರಿಂದ ಹೇಳಿಕೆ ಕೂಡ ಪಡೆದಿದ್ದೇವೆ" ಎಂದು ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.
ಇಂದು ಬೆಳಗಿನಜಾವ ಎರಡು ಗಂಟೆ ಸುಮಾರಿಗೆ ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ಗೆ ಎದುರುಗಡೆಯಿಂದ ಬಂದ ಕಂಟೇನರ್ ಲಾರಿ ಅಪ್ಪಳಿಸಿದೆ. ಲಾರಿಯು ಬಸ್ನ ಡೀಸೆಲ್ ಟ್ಯಾಂಕ್ಗೆ ಹೊಡೆದಿರಬಹುದು, ಡಿಸೇಲ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಬಸ್ನ ಒಳಗಿದ್ದ ಕೆಲ ಪ್ರಯಾಣಿಕರು ಹೊರಬಂದಿದ್ದಾರೆ. ಒಳಗೆ ಇದ್ದ ಎಂಟು ಜನ ಹಾಗೂ ಲಾರಿ ಚಾಲಕ ಸೇರಿ ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. - ರವಿಕಾಂತೇಗೌಡ, ಪೂರ್ವ ವಲಯ ಐಜಿಪಿ
ಘಟನೆ ಕುರಿತಂತೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಬಿ.ಟಿ., ''ರಾತ್ರಿ ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಎದುರುಗಡೆಯಿಂದ ಲಾರಿ ಬಂದು ಈ ಖಾಸಗಿ ಬಸ್‌ಗೆ ಡಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಲಾರಿ ಚಾಲಕನೂ ಸಾವನಪ್ಪಿದ್ದು, ಮೃತದೇಹವನ್ನು ಆಸ್ಪತ್ರೆ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. 12 ಜನ ಗಾಯಗಳುಗಳು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 9 ಜನ ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 30ಕ್ಕೂ ಅಧಿಕ ಪ್ರಯಾಣಿಕರು ಬಸ್ಸಿನಲ್ಲಿದ್ದರು ಎಂಬ ಮಾಹಿತಿ ಇದೆ. ಇದು ಲಾರಿ ಚಾಲಕನ ಅಜಾಗರೂಕತೆಯಿಂದ ಆಗಿದೆ'' ಎಂದು ತಿಳಿಸಿದ್ದರು.
ಇದನ್ನೂ ಓದಿ:

