ETV Bharat / state

ಕಮರಿದ ಭಟ್ಕಳದ ಪ್ರತಿಭೆ ರಶ್ಮಿ ಕನಸು: ಪ್ರಾಣಾಪಾಯದಿಂದ ಪಾರಾಗಿ ಬಂದ ಕುಮಟಾದ ವಿಜಯ್​

ಹಿರಿಯೂರು ಬಳಿಕ ಭೀಕರ ದುರಂತವು ಭಟ್ಕಳದ ಸಾಧಕಿ ರಶ್ಮಿ ಮಹಾಲೆ (24) ಅವರನ್ನು ಬಾರದ ಲೋಕಕ್ಕೆ ಕಳುಹಿಸಿದ್ದರೆ, ಕುಮಟಾದ ವಿಜಯ ಭಂಡಾರಿ ಸಾವು ಗೆದ್ದು ಬಂದಿದ್ದಾರೆ.

Rashmi and Vijay Bhandari
ರಶ್ಮಿ ಹಾಗೂ ವಿಜಯ್​ ಭಂಡಾರಿ (ETV Bharat)
author img

By ETV Bharat Karnataka Team

Published : December 26, 2025 at 9:39 AM IST

2 Min Read
Choose ETV Bharat

ಕಾರವಾರ: ಹೊಸ ವರ್ಷದ ಸಂಭ್ರಮ ಹಾಗೂ ಕ್ರಿಸ್ಮಸ್ ರಜೆಯ ಖುಷಿಯಲ್ಲಿ ಗೋಕರ್ಣದತ್ತ ಹೆಜ್ಜೆ ಹಾಕುತ್ತಿದ್ದ ಯುವ ಮನಸ್ಸುಗಳ ಪಾಲಿಗೆ ಚಿತ್ರದುರ್ಗದ ಹಿರಿಯೂರು ಸಮೀಪದ ರಾಷ್ಟ್ರೀಯ ಹೆದ್ದಾರಿ-48 ಮಸಣವಾಯಿತು. ಸೀಬರ್ಡ್ ಬಸ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತವು ಭಟ್ಕಳದ ಸಾಧಕಿ ರಶ್ಮಿ ಮಹಾಲೆ (24) ಅವರನ್ನು ಬಾರದ ಲೋಕಕ್ಕೆ ಕಳುಹಿಸಿದ್ದರೆ, ಕುಮಟಾದ ವಿಜಯ ಭಂಡಾರಿ ಸಾವು ಗೆದ್ದು ಬಂದಿದ್ದಾರೆ.

ಡೆಲಾಯ್ಟ್ ಕಂಪೆನಿಯ ಪ್ರತಿಭೆ ರಶ್ಮಿ ಮಹಾಲೆ ಇನ್ನು ನೆನಪು ಮಾತ್ರ: ಭಟ್ಕಳದ ಶಿರಾಲಿ ಮೂಲದ ರಶ್ಮಿ ಮಹಾಲೆ ಅತ್ಯಂತ ಪ್ರತಿಭಾವಂತ ಯುವತಿ. ಪುಟ್ಟ ಪಟ್ಟಣದಲ್ಲಿ ಬೆಳೆದು, ಭಟ್ಕಳದ ಆನಂದ ಆಶ್ರಮ ಕಾನ್ವೆಂಟ್ ಹಾಗೂ ಸಿದ್ಧಾರ್ಥ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಬಳಿಕ ಶ್ರೀ ಗುರು ಸುಧೀಂಧ್ರ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಾಗಲೇ ಟಿಸಿಎಸ್ (TCS) ಕಂಪನಿಗೆ ಆಯ್ಕೆಯಾಗಿದ್ದರು.

ಪ್ರಾಣಾಪಾಯದಿಂದ ಪಾರಾಗಿ ಬಂದ ಕುಮಟಾದ ವಿಜಯ್​ (ETV Bharat)

ಯೂಟ್ಯೂಬ್ ನೋಡಿ ಪರೀಕ್ಷೆಗೆ ಸಿದ್ಧತೆ ನಡೆಸಿ ಕೆಲಸ ಗಿಟ್ಟಿಸಿಕೊಂಡಿದ್ದ ರಶ್ಮಿ, ಇತ್ತೀಚೆಗಷ್ಟೇ ಪ್ರತಿಷ್ಠಿತ 'ಡೆಲಾಯ್ಟ್' ಕಂಪನಿಯಲ್ಲಿ ಎಎಂಎಲ್ ಅನಾಲಿಸ್ಟ್ ಆಗಿ ಸೇರ್ಪಡೆಗೊಂಡಿದ್ದರು. ಗೆಳತಿಯರಾದ ಗಗನಾ ಮತ್ತು ರಕ್ಷಿತಾ ಜೊತೆಗೂಡಿ ಗೋಕರ್ಣ ಪ್ರವಾಸದ ಮೂಲಕ ಹೊಸ ವರ್ಷ ಆಚರಿಸುವ ಸಂಭ್ರಮದಲ್ಲಿದ್ದ ರಶ್ಮಿ, ಅಪಘಾತದ ಬೆಂಕಿಯಲ್ಲಿ ಗುರುತು ಸಿಗದಂತೆ ಸುಟ್ಟು ಕರಕಲಾಗಿದ್ದಾರೆ. ಸಾಧನೆಯ ಶಿಖರ ಏರಬೇಕಿದ್ದ ಮಗಳ ಈ ದುರಂತ ಸಾವು ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಸಾವು ಗೆದ್ದು ಬಂದ ಕುಮಟಾದ ವಿಜಯ್​ ಭಂಡಾರಿ: ಒಂದೆಡೆ ಸಾವಿನ ಆರ್ಭಟವಿದ್ದರೆ, ಇನ್ನೊಂದೆಡೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ರೋಚಕ ಕಥೆಯೂ ಇಲ್ಲಿದೆ. ಕುಮಟಾದ ವಿಜಯ ಭಂಡಾರಿ ಅವರು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ಸು ಅಗ್ನಿಗಾಹುತಿ ಆಗುತ್ತಿದ್ದಂತೆಯೇ ಸಮಯಪ್ರಜ್ಞೆ ಮೆರೆದ ವಿಜಯ್​, ಬಸ್ಸಿನ ಕಿಟಕಿ ಗಾಜನ್ನು ಒಡೆದು ಹೊರಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

ಬಸ್ಸಿನಲ್ಲಿದ್ದ ಅವರ ಮೊಬೈಲ್ ಸುಟ್ಟು ಹೋದ ಕಾರಣ ಕುಟುಂಬಸ್ಥರಿಗೆ ಸುಮಾರು ಸಮಯದವರೆಗೆ ಅವರ ಸಂಪರ್ಕ ಸಿಗದೆ ಆತಂಕ ಮನೆಮಾಡಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಬೇರೆಯವರ ಮೊಬೈಲ್ ಮೂಲಕ ಕುಟುಂಬಕ್ಕೆ ಕರೆ ಮಾಡಿದ ವಿಜಯ, ತಾನು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿದರು. ಪ್ರಸ್ತುತ ಅವರು ಕುಮಟಾದ ತಮ್ಮ ಮನೆಗೆ ಮರಳಿದ್ದು, ದುರಂತದ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಸಭಾಪತಿ ಹೊರಟ್ಟಿ ಕಂಬನಿ: ಈ ದುರಂತದ ಬಗ್ಗೆ ಕಾರವಾರದಲ್ಲಿ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜ ಹೊರಟ್ಟಿ, "ಎಂಟೆಕ್ ಪದವೀಧರೆ ಯುವತಿಯ ಸಾವು ಹಾಗೂ ಆಕೆಯ ತಂದೆಯ ಆಕ್ರಂದನ ಕಂಡು ಕಣ್ಣೀರು ಬಂತು. ರಾಜ್ಯದಲ್ಲಿ ಇದು ಐದನೇ ಬಸ್ ದುರಂತ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು," ಎಂದು ತಿಳಿಸಿದರು.

ಅಲ್ಲದೆ, ಬಸ್ಸುಗಳಲ್ಲಿ ಪ್ರಯಾಣಿಕರ ಜೊತೆಗೆ ಮಿತಿಮೀರಿ ಲಗೇಜ್ ತುಂಬುವ ಪ್ರವೃತ್ತಿಯೇ ಇಂತಹ ಅಗ್ನಿ ದುರಂತಗಳಿಗೆ ಕಾರಣವಾಗುತ್ತಿದ್ದು, ಈ ಬಗ್ಗೆ ಸಾರಿಗೆ ಸಚಿವರಿಗೆ ಪತ್ರ ಬರೆಯುವುದಾಗಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಚಿತ್ರದುರ್ಗ: ಬಸ್​ ಅಪಘಾತದಲ್ಲಿ ಆರು ಜನರ ಮೃತದೇಹ ಪತ್ತೆ; ಸುಟ್ಟು ಕರಕಲಾದ ಪುಟ್ಟ ಕಂದಮ್ಮ, ಗುರುತು ಪತ್ತೆಯೇ ಸವಾಲು