ETV Bharat / state

ಮೈಸೂರು: ಶಿಕ್ಷಕ ವರ್ಗಾವಣೆ; ‌ಬೇರೆ ಕಡೆ ಹೋಗದಂತೆ ಕಣ್ಣೀರು ಹಾಕಿದ ವಿದ್ಯಾರ್ಥಿಗಳು

ಇನ್ನೊಂದು ಶಾಲೆಗೆ ವರ್ಗಾವಣೆಯಾದ ಶಿಕ್ಷಕರೊಬ್ಬರನ್ನು ಇಲ್ಲಿಯೇ ಇರುವಂತೆ ಒತ್ತಾಯಿಸಿ ಮಕ್ಕಳು ಕಣ್ಣೀರಿಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

Children-cried-after-teacher-transferred-to-another-school-at-mysuru
ಶಿಕ್ಷಕರೊಬ್ಬರನ್ನು ಬೇರೆ ಶಾಲೆಗೆ ತೆರಳದಂತೆ ಕಣ್ಣೀರಿಟ್ಟ ವಿದ್ಯಾರ್ಥಿಗಳು (ETV Bharat)
author img

By ETV Bharat Karnataka Team

Published : July 4, 2026 at 1:30 PM IST

2 Min Read
Choose ETV Bharat

ಮೈಸೂರು : ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಬೇರೆ ಶಾಲೆಗೆ ವರ್ಗಾವಣೆಗೊಂಡಿರುವುದರಿಂದಾಗಿ ಅಲ್ಲಿಗೆ ತೆರಳದೇ ನಮ್ಮ ಶಾಲೆಯಲ್ಲೇ ಮುಂದುವರೆಯಿರಿ ಎಂದು ಶಾಲೆಯ ಮಕ್ಕಳು ಕಣ್ಣೀರು ಹಾಕುತ್ತಾ ಬೇಡಿಕೊಂಡಿದ್ದಾರೆ. ಮಕ್ಕಳ ಪ್ರೀತಿಯನ್ನು ಕಂಡು ಶಿಕ್ಷಕರೂ ಕೂಡ ಭಾವುಕರಾಗಿ ಕಣ್ಣೀರು ಹಾಕಿದರು. ಶುಕ್ರವಾರ ಸಂಜೆ ಟಿ. ಎಸ್. ಸುಬ್ಬಣ್ಣ ಸಾರ್ವಜನಿಕ ಬಾಲಿಕಾ ಪ್ರೌಢಶಾಲೆ ಆವರಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಭಾವುಕ ಕ್ಷಣಕ್ಕೆ ಗ್ರಾಮಸ್ಥರು ಕೂಡ ಮೌನರಾದರು.

ಮೈಸೂರಿನ ಚಾಮುಂಡಿಬೆಟ್ಟದ ಮೇಲಿರುವ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಡಿ. ಕೃಷ್ಣಮೂರ್ತಿ ಅವರು ಹಿಂದಿ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅವರನ್ನು ನಂಜನಗೂಡು ತಾಲೂಕಿನ ಹುರ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳು ಶಿಕ್ಷಕರ ಪಾಠವನ್ನು ನೆನೆದು ಕಣ್ಣೀರು ಹಾಕಿದರು.

ವರ್ಗಾವಣೆಗೊಂಡ ನೆಚ್ಚಿನ ಶಿಕ್ಷಕ, ವಿದ್ಯಾರ್ಥಿಗಳ ಕಣ್ಣೀರು (ETV Bharat)

ಮಕ್ಕಳ ಅಭಿವೃದ್ಧಿಗೆ ಪಣತೊಟ್ಟ ಶಿಕ್ಷಕ : ಇದು ಹೆಣ್ಣುಮಕ್ಕಳ ವಸತಿ ಶಾಲೆ, ಶೌಚಾಲಯಕ್ಕೆ ಸೂಕ್ತ ಭದ್ರತೆ ಇರಲಿಲ್ಲ. ಚಿರತೆ ಹಾವಳಿಯೂ ಇತ್ತು. ಕೃಷ್ಣಮೂರ್ತಿಯವರು ಶಿಕ್ಷಕರಾಗಿ ಬಂದ ಕೂಡಲೇ ಇದನ್ನು ಗಮನಿಸಿ ಟಾಯ್ಲೆಟ್ ಭದ್ರತೆಗಾಗಿ ರೋಟರಿ ಅವರ ನೆರವಿನಿಂದ ಚಾವಣಿ ಹಾಕಿಸಿದರು. ಹೆಣ್ಣುಮಕ್ಕಳು ನೆಲದಲ್ಲೇ ಮಲಗುತ್ತಿದ್ದರು. ಮಳೆಗಾಲದಲ್ಲಿ ನೆಲ ಶೀತದಿಂದ ಕೂಡಿರುತ್ತದೆ ಎಂಬುದನ್ನು ಗಮನಿಸಿ, ಮನನೊಂದ ಕೃಷ್ಣಮೂರ್ತಿ ಅವರು ಲಯನ್ಸ್ ಹೆರಿಟೇಜ್ ಸಂಸ್ಥೆಯ ನೆರವಿನಿಂದ 100 ಮಂಚಗಳನ್ನು ಕೊಡಿಸಿದರು. ಇದರಿಂದ ಮಕ್ಕಳು ಇಂದಿಗೂ ಮಂಚದ ಮೇಲೆ ನೆಮ್ಮದಿಯಿಂದ ನಿದ್ರಿಸುತ್ತಿದ್ದಾರೆ.

ಶಾಲೆಗೊಂದು ಸಭಾಂಗಣ ಇರಲಿಲ್ಲ : ದಾನಿಗಳ ಸಹಕಾರದೊಂದಿಗೆ ಸಭಾಂಗಣವನ್ನು ನಿರ್ಮಿಸಿಕೊಟ್ಟಿದ್ದಾರೆ. ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಇನ್ಫೋಸಿಸ್ ನೆರವಿನಿಂದ 9 ಕಂಪ್ಯೂಟರ್ ತಂದಿದ್ದಾರೆ. ಜತೆಗೆ ಮಕ್ಕಳು ಸ್ಮಾರ್ಟ್‌ ಕ್ಲಾಸ್‌ನಲ್ಲಿ ಕಲಿಯಬೇಕು ಎಂಬ ಆಶಯದಲ್ಲಿ ಇನ್ನರ್ ವ್ಹೀಲ್ ವತಿಯಿಂದ ಪ್ರೊಜೆಕ್ಟರ್, ಸ್ಕ್ರೀನ್ ಕೊಡಿಸಿ ಮಕ್ಕಳ ಅಭಿವೃದ್ಧಿಗೆ ಪಣ ತೊಟ್ಟಿದ್ದರು.

ಮಕ್ಕಳಿಗೆ ಮಾಧ್ಯಮಗಳ ಮೂಲಕ ಪಾಠ ಮಾಡಲು ಸಹಾಯವಾಗಲೆಂದು ಹೆಡೆನ್ ಬ್ರಿಡ್ಜ್ ಸಂಸ್ಥೆಯಿಂದ ಟಿವಿಗಳನ್ನು ತಂದಿದ್ದರು. ಕೊಠಡಿಯನ್ನು ಕಟ್ಟಿಸಿಕೊಟ್ಟಿದ್ದಾರೆ. ಶಾಲೆ ಅಂಗಳಕ್ಕೆ ಹಾವು, ಚೇಳು ಎಲ್ಲವೂ ಬರುತ್ತಿದ್ದವು. ಇದರಿಂದ ಮಕ್ಕಳಿಗೆ ರಕ್ಷಣೆ ನೀಡಬೇಕೆಂದು ಐವರಿ ಸಿಟಿಯಿಂದ 12 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಿಕೊಟ್ಟಿದ್ದಾರೆ. ಹೀಗೆ ಪ್ರತಿದಿನವೂ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಕೃಷ್ಣಮೂರ್ತಿ ಅವರು ಕೇವಲ ವಿದ್ಯಾರ್ಥಿಗಳಿಗೆ ನೆಚ್ಚಿನ ಶಿಕ್ಷಕ ಆಗಿರದೆ, ಪೋಷಕರು ಹಾಗೂ ಗ್ರಾಮಸ್ಥರ ಅಚ್ಚುಮೆಚ್ಚಿನ ಶಿಕ್ಷಕರಾಗಿ ಪ್ರಸಿದ್ಧಿ ಪಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯ ಶಿಕ್ಷಕ ಡಿ. ಕೃಷ್ಣಮೂರ್ತಿ ಅವರು, 'ಮಕ್ಕಳ ಪ್ರೀತಿಗೆ ಭಾವುಕನಾಗಿದ್ದೇನೆ, ಒಳ್ಳೆಯ ಕೆಲಸ ಮಾಡಿದರೆ ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಮಕ್ಕಳೇ ಸಾಕ್ಷಿ ಆಗಿದ್ದಾರೆ‌. ಆದರೆ, ಸರ್ಕಾರಿ ಇಲಾಖೆಯಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆ ಆಗಿದೆ, ಮಕ್ಕಳ ಪ್ರೀತಿಗೆ ನಾನು ಚಿರಋಣಿಯಾಗಿರುವೆ‌. ನಂಜನಗೂಡು ತಾಲೂಕಿನ ಹುರ ಗ್ರಾಮದಲ್ಲಿರುವ ಶಾಲೆಗೆ ವರ್ಗಾವಣೆಗೊಂಡಿರುವೆ. ಅಲ್ಲಿಯೂ ಉತ್ತಮ ಕೆಲಸ ಮಾಡಬೇಕೆಂದು ಗುರಿ ಇಟ್ಟುಕೊಂಡಿರುವೆ' ಎಂದು ಹೇಳಿದರು.

ಇದನ್ನೂ ಓದಿ : ಸ್ವಂತ ಹಣದಲ್ಲೇ ₹1,111 ಠೇವಣಿ, ಶೈಕ್ಷಣಿಕ ಪ್ರವಾಸ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಶಿಕ್ಷಕ ಮರಡೆಪ್ಪ!