ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಕಳೇಬರ ಪತ್ತೆ
ಪಶು ವೈದ್ಯಾಧಿಕಾರಿಗಳು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ಮಾದರಿ ಸಂಗ್ರಹಿಸಿದ್ದಾರೆ.

Published : January 7, 2026 at 11:53 AM IST
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ವನ್ಯಜೀವಿ ವಲಯದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಹುಲಿ ಗಣತಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಗಂಗೆಗಿರಿ ಮೀಸಲು ಅರಣ್ಯ ಪ್ರದೇಶ, ಶಿರಗೋಳ ಗ್ರಾಮದ ಭಾಗದಲ್ಲಿ ಭಾರೀ ಗಾತ್ರದ ಹುಲಿ ಒಂದು ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ.
ಎನ್‌ಟಿಸಿಎ ಮಾರ್ಗಸೂಚಿಯಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಭದ್ರಾ ಹುಲಿ ಸಂರಕ್ಷಿತ ಚಿಕ್ಕಮಗಳೂರು ಕ್ಷೇತ್ರ ನಿರ್ದೇಶಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಎಂಟರಿಂದ ಹತ್ತು ವರ್ಷದ ಹುಲಿ ಮೃತಪಟ್ಟಿರುವುದು ಗೊತ್ತಾಗಿದೆ.
ಮೇಲ್ನೋಟಕ್ಕೆ ಹುಲಿಗಳು ಹೊಡೆದಾಡಿಕೊಂಡು ಸಾವನ್ನಪ್ಪಿರುವುದಾಗಿ ಕಂಡುಬಂದಿದೆ. ಹುಲಿ ಕಳೇಬರವನ್ನು ಎನ್‌ಟಿಸಿಎ ಸದಸ್ಯರ ಸಮ್ಮುಖದಲ್ಲಿ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಮಾದರಿ ಪರೀಕ್ಷಾ ಸಂಸ್ಥೆಗಳಿಗೆ ಕಳುಹಿಸಲು ತೀರ್ಮಾನಿಸಿ ಕಳೇಬರವನ್ನು ಸುಟ್ಟು ಹಾಕಲಾಗಿದೆ.
ಹೆಬ್ಬೆ ವಲಯದ ಗಂಗೆಗಿರಿಯ ಶಿರಗುಳ ಮೀಸಲು ಅರಣ್ಯದಲ್ಲಿ ತನ್ನ ಪ್ರದೇಶಕ್ಕಾಗಿ ಎರಡು ಹುಲಿಗಳು ದೊಡ್ಡಮಟ್ಟದಲ್ಲಿ ಕಾದಾಟ ನಡೆಸಿದೆ. ಈ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪುಲ್ಕಿತ್ ಮೀನಾ ಭೇಟಿ ನೀಡಿ, ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಾನುಸಾರ ಮರಣೋತ್ತರ ಪರೀಕ್ಷೆಗೆ ಆದೇಶ ನೀಡಿದರು.
ಹುಲಿಯ ಕುತ್ತಿಗೆ ಭಾಗದಲ್ಲಿ ಇನ್ನೊಂದು ಹುಲಿ ಹೊಡೆದಿರುವ ಉಗುರಿನ ಗುರುತುಗಳು ಪತ್ತೆಯಾಗಿವೆ. ಎರಡು ಬಲಿಷ್ಟ ಹುಲಿಗಳ ಕಾದಾಟದಲ್ಲಿ ಈ ಹುಲಿ ಸತ್ತಿದೆ. ಹುಲಿಯ ಉಗುರುಗಳು ಮತ್ತು ಹಲ್ಲುಗಳು ಹಾಗೇ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶು ವೈದ್ಯಾಧಿಕಾರಿ ಸಚಿನ್ ನಾಯಕ್ ಮತ್ತು ಶಿವಕುಮಾರ್ ತಂಡ ಮರಣೋತ್ತರ ಪರೀಕ್ಷೆ ನಡೆಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೀಶ್ವರ ಸ್ವಾಮಿ, ವಲಯ ಅರಣ್ಯಾಧಿಕಾರಿ ಗೌರವ್, ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿ ವೀರೇಶ್ ಜಿ., ವೈಲ್ಡ್ ಕೇರ್ ಸಂಸ್ಥೆಯ ಅಧ್ಯಕ್ಷ ಮಧು ಮೂಗುತಿಹಳ್ಳಿ, ವನ್ ಅರ್ಥ್ ಸಂಸ್ಥೆಯ ಮುಖಂಡ ಭರತ್ ಸಿ.ವಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ 'ಆಪರೇಷನ್ 5 ಟೈಗರ್ಸ್': ಮತ್ತೊಂದು ಹುಲಿ ಸೆರೆ

