ETV Bharat / state

ಚಿಕ್ಕಮಗಳೂರು: ಹಣದಾಸೆಗೆ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಪಾಪಿ ತಂದೆ

ಸ್ವತಃ ಬಾಲಕಿಯೇ ಠಾಣೆಗೆ ಬಂದು ನೀಡಿದ ದೂರಿನ ಅನ್ವಯ, ತಂದೆ, ಅಜ್ಜಿ ಹಾಗೂ ಇತರ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Biruru Police Station
ಬಿರೂರು ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : January 7, 2026 at 2:38 PM IST

2 Min Read
Choose ETV Bharat

ಚಿಕ್ಕಮಗಳೂರು: ತಂದೆ ತಾಯಿ ತಮಗೆ ಎಷ್ಟೇ ಕಷ್ಟ, ನಷ್ಟ, ದುಃಖವಿದ್ದರೂ ತಮ್ಮ ಮಕ್ಕಳು ಸಂತೋಷವಾಗಿರಬೇಕು ಎಂದು ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಅವರ ಭವಿಷ್ಯವನ್ನು ಕಟ್ಟಿಕೊಡಲು ಗಾಣದ ಎತ್ತಿನಂತೆ ಹಗಲು, ರಾತ್ರಿ ದುಡಿಯುತ್ತಿರುತ್ತಾರೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಗಳನ್ನೇ ಹಣದಾಸೆಗಾಗಿ ಕೆಟ್ಟ ಕೆಲಸಕ್ಕೆ ನೂಕಿದ್ದಾನೆ.

ಹಣದಾಸೆಗಾಗಿ ಅಪ್ರಾಪ್ತೆಯನ್ನು ತಂದೆಯೇ ವೇಶ್ಯಾವಾಟಿಕೆಗೆ ದೂಡಿರುವ ನೀಚ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಹಳ್ಳಿಯೊಂದರಲ್ಲಿ ನಡೆದಿದೆ. ಪ್ರತಿ ದಿನ ಕೈ ತುಂಬಾ ದುಡ್ಡು ಸಿಗುತ್ತೆ ಎಂಬ ಹಣದಾಹದಿಂದ ತಂದೆ ತನ್ನ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ಒಪ್ಪಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಪ್ರಕರಣದ ಕುರಿತು ಮಾಹಿತಿ ನೀಡುತ್ತಿರುವ ಅಡಿಷನಲ್ ಎಸ್ಪಿ ಜಯಕುಮಾರ್ (ETV Bharat)

ಆರು ವರ್ಷಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿದ್ದ ಅಪ್ರಾಪ್ತೆ, ಪಿಯುಸಿವರೆಗೂ ವಿದ್ಯಾಭ್ಯಾಸ ಮುಗಿಸಿದ ನಂತರ ತಂದೆಯ ಮನೆಗೆ ಮರಳಿದ್ದಳು. ಈ ವೇಳೆ ಡಿಸೆಂಬರ್‌ನಲ್ಲಿ ತಂದೆಯೊಂದಿಗೆ ಅಜ್ಜಿಯ ಮನೆಗೆ ಹೋಗಿ ಎರಡು ದಿನ ಉಳಿದು ಬಂದಿದ್ದಳು. ಅಜ್ಜಿ ಮತ್ತೆ ಈ ಬಾಲಕಿಯನ್ನು ಮನೆಗೆ ಕರೆದಾಗ ಹೋಗಿದ್ದು, ಆ ಸಮಯದಲ್ಲಿ ಆಘಾತ ಕಾದಿತ್ತು. ಅದೇ ಸಂದರ್ಭದಲ್ಲಿ ಅಜ್ಜಿಯ ಮನೆಗೆ ಆಗಮಿಸಿದ್ದ ಭರತ್ ಶೆಟ್ಟಿ ಎಂಬಾತ, ಬಾಲಕಿ ಹಾಗೂ ತಂದೆ ಜೊತೆ ಆತ್ಮೀಯತೆಯಿಂದ ಮಾತನಾಡಿ, ಆತನ ಮಂಗಳೂರಿನ ಮನೆಗೆ ಬಂದು ಉಳಿದುಕೊಳ್ಳುವಂತೆ ಮನವಿ ಮಾಡಿದ್ದ. ಇದಕ್ಕೊಪ್ಪಿದ್ದ ತಂದೆ ಮಗಳಿಬ್ಬರೂ ಭರತ್​ ಶೆಟ್ಟಿಯೊಂದಿಗೆ ಮಂಗಳೂರಿಗೆ ತೆರಳಿದ್ದರು.

ಮಾರ್ಗ ಮಧ್ಯದಲ್ಲಿ ತಾನು ಮುಟ್ಟಾಗಿರುವುದಾಗಿ ಬಾಲಕಿ ತಂದೆಗೆ ತಿಳಿಸಿದ್ದಳು. ಆದಾಗಿಯೂ ಮರುದಿನ ಅಪ್ರಾಪ್ತೆ ಬಳಿ ಬಂದ ಭರತ್ ಶೆಟ್ಟಿ, ಮನೆಗೆ ಕೆಲ ಜನ ಬರುತ್ತಾರೆ. ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಬಾಲಕಿಗೆ ಒತ್ತಾಯಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಅವನ ಮಾತಿನಂತೆ 25ರಿಂದ ಹಿಡಿದು 48 ವರ್ಷ ವಯೋಮಿತಿಯ ನಾಲ್ವರು ಒಂದೇ ದಿನದಲ್ಲಿ ಕೆಲ ಗಂಟೆಗಳು ಬಿಟ್ಟು, ಬಿಟ್ಟು ಒಬ್ಬರಾದ ಮೇಲೊಬ್ಬರಂತೆ ಆಕೆಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಇದಾದ ಮರುದಿನವೂ ಇದೇ ಕೆಲಸಕ್ಕೆ ಒತ್ತಾಯಿಸಿದಾಗ ಹುಡುಗಿ ನಿರಾಕರಿಸಿದರೂ ಮತ್ತೊಮ್ಮೆ ಆಕೆಯ ಮೇಲೆ ಅದೇ ರೀತಿಯ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವೇಳೆ ನಾನು ಅಪ್ರಾಪ್ತೆ, ನನ್ನನ್ನು ಬಿಡಿ ಎಂದು ಎಷ್ಟೇ ಅಂಗಲಾಚಿದರೂ ಕೇಳದ ಕಾಮುಕರು, ನಾವು ಭರತ್ ಶೆಟ್ಟಿಗೆ ಹಣ ನೀಡಿದ್ದೇವೆಂದು ಹೇಳಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ನೊಂದ ಬಾಲಕಿ, ಪೊಲೀಸ್ ಠಾಣೆಗೆ ಖುದ್ದು ಭೇಟಿ ನೀಡಿ ದೂರು ನೀಡಿದ್ದಾಳೆ.

Arrested Accused
ಬಂಧಿತ ಆರೋಪಿಗಳು (ETV Bharat)

ಬಾಲಕಿ ನೀಡಿದ ದೂರಿನ ಮೇರೆಗೆ FIR ದಾಖಲಾಗಿದ್ದು, ಬಾಲಕಿಯ ತಂದೆ, ಅಜ್ಜಿ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭರತ್ ಶೆಟ್ಟಿ, ಈ ಘಟನೆಯ ಬ್ರೋಕರ್ ನಾರಾಯಣ ಸ್ವಾಮಿ, ಮಂಗಳೂರಿನಲ್ಲಿ ಘಟನೆ ನಡೆದ ಮನೆಯ ಮಾಲೀಕ ಶೇಖರ್ ಸುವರ್ಣ ಸೇರಿದಂತೆ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ. ಬಾಲಕಿಯ ಚಿಕ್ಕಪ್ಪ ಹಾಗೂ ಅತ್ತೆಯ ಸಲಹೆ ಮೇರೆಗೆ ಬಾಲಕಿ ದೂರು ದಾಖಲು ಮಾಡಿದ್ದು, ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಾಲಕಿಯೇ ನೇರವಾಗಿ ದೂರು ನೀಡಿದ್ದು, ಪ್ರಕರಣ ಸಂಬಂಧ ಈಗಾಗಲೇ 12 ಜನರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಪ್ರಕರಣ ಅತ್ಯಂತ ಗಂಭೀರವಾಗಿದ್ದು ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮುಂದುವರಿಸಲಾಗುತ್ತಿದೆ. ಬಂಧಿತ ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಡಿಷನಲ್ ಎಸ್ಪಿ ಜಯಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಪುತ್ತೂರು: ತಂದೆಯಿಂದ ಮಗಳ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೊ ಪ್ರಕರಣ ದಾಖಲು